ಮಕ್ಕಳ ಕಥೆ
ಗರುಡನ ಆದರ್ಶ ರಾಜ್ಯ
ಮಲಿಕಜಾನ ಶೇಖ
ವಿಂದ್ಯ ಪರ್ವತಗಳ ಇಳಿಜಾರು ಭಾಗದಲ್ಲಿ ‘ಸುಂದರಬನ’ ಎಂಬ ಸುಂದರ ಕಾಡು. ಹಚ್ಚ ಹಸಿರಿನ ಸಿರಿ, ಸುತ್ತಲೂ ಪರ್ವತ ಶ್ರೇಣಿ. ಅಲ್ಲಲ್ಲಿ ನೀರಿನ ಹೊಂಡಗಳು, ಜುಳು ಜುಳು ಹರಿಯುವ ನದಿ ಇವೆಲ್ಲವುಗಳಲ್ಲಿ ಹಾರಾಡಿ, ನಲಿದು ನೆಮ್ಮದಿಯಿಂದ ಬದುಕುವ ಪಕ್ಷಿ ಸಂಕುಲ. ಪಕ್ಷಿಗಳೆಲ್ಲಾ ಹಾರಾಡಿಕೊಂಡು ಗೂಡು ಮಾಡಿಕೊಂಡು ಸಂತೋಷವಾಗಿದ್ದವು. ಕಾಲ ಕ್ರಮೇಣ ಅವುಗಳಲ್ಲಿ ಸ್ವಾರ್ಥ ಬೆಳೆದು, ತಂಡ ಕಟ್ಟಿಕೊಂಡು ಕಳ್ಳತನ, ಸುಲಿಗೆ, ಅನ್ಯಾಯ, ಅತ್ಯಾಚಾರದಲ್ಲಿ ನಿರತರಾದವು. ಅದರಲ್ಲಿ ನೆರೆಯ ಕಾಡಿನ ಬರಗಾಲದಿಂದ ಅಲ್ಲಿಯ ಪಕ್ಷಿಗೂ ವಲಸೆ ಬರುವುದು ದೊಡ್ಡ ಸಮಸ್ಯೆಯಾಯಿತು.
ಈ ಬಗ್ಗೆ ಅಲ್ಲಿಯ ಎಲ್ಲ ಪಕ್ಷಿಗಳು ಕೂಡಿಕೊಂಡು ಸಮಾಲೋಚನೆ ಮಾಡಿದವು. ನಮ್ಮ ಪಕ್ಷಿಗಳ ಬದುಕು ನೆಮ್ಮದಿ, ಸಂತೋಷಕ್ಕೆ ಮರಳಬೇಕಾದರೆ ನಮ್ಮ ಕಾಡಿಗೆ ಒಬ್ಬ ಆದರ್ಶ ರಾಜನ ಆಯ್ಕೆ ಮಾಡಬೇಕು. ಶೌರ್ಯ, ಶಕ್ತಿ ಮತ್ತು ಬುದ್ದಿಮತ್ತೆಗೆ ಹೆಸರಾದ ಗರುಡನನ್ನು ರಾಜನನ್ನಾಗಿ ಮಾಡಿದರೆ ಒಳ್ಳೆಯದೆಂದು ಬಹಳಷ್ಟು ಪಕ್ಷಿಗಳು ಹೇಳಿದವು. ಆ ತೀರ್ಮಾನ ಮಾಡುವುದಿತ್ತು, ಅಷ್ಟರಲ್ಲಿ ಕಾಗೆ ಮತ್ತು ಗೂಬೆ ನಮಗೂ ರಾಜನಾಗುವ ಅವಕಾಶ ಕೊಡಿ ಎಂದು ಬೇಡಿಕೊಂಡವು. ಸಭೆಯ ಮುಂದೆ ಹೊಸ ಪೇಚು ನಿರ್ಮಾಣವಾಯಿತು. ಆಗ ಗರುಡ, ಕಾಗೆ ಮತ್ತು ಗೂಬೆಗಳನ್ನು ಅಭ್ಯರ್ಥಿಗಳನ್ನಾಗಿ ಮಾಡಿ, ಮೂರರಲ್ಲಿ ತಮಗೆ ಇಷ್ಟವಾದ ಪಕ್ಷಿಯ ಮನೆಯ ಮುಂದೆ ಕಾಳು ಹಾಕುವಂತೆ ಹೇಳಲಾಯಿತು. ಇದಕ್ಕಾಗಿ ಎಲ್ಲ ಪಕ್ಷಿಗಳಿಗೆ ಐದು ದಿನಗಳ ಅವಕಾಶ ಕೊಡಲಾಯಿತು.
ಮೂರು ಪಕ್ಷಿ ಕಾಡಿನ ಪಕ್ಷಿಗಳನ್ನು ಒಲಿಸಿಕೊಳ್ಳುವದಕ್ಕೆ ತಮ್ಮ ತಂಡ ಕಟ್ಟಿಕೊಂಡು ಹೊರಟವು. ಗರುಡ ಶಿಸ್ತಿನ ಸಿಪಾಯಿ, ದಿಟ್ಟ ಸ್ವಭಾವ, ಕೆಲಸದ ಬಗ್ಗೆ ಮಾತಾಡಿ ಕಾಡಿನಲ್ಲಿ ಸೇರುವ ವೈರಿಗಳನ್ನು ತಡೆಯಲು ಗಗನ ಯಾತ್ರೆಗೆ ಹಾರಿತು. ಗೂಬೆ ಕನಸು ದೊಡ್ಡದು ಆದರೆ ಹಗಲಿನಲ್ಲಿಯೆ ಡುಸ್ಸೆಂದು ಮಲಗುತಿತ್ತು. ರಾತ್ರಿ ಸ್ವಲ್ಪ ಎಲ್ಲರಿಗೆ ಬಣ್ಣದ ಲೋಕ ತೋರಿಸಿ ಮತ್ತೆ ಮಲಗುತಿತ್ತು. ಆದರೆ ಯಾವ ವಿಶೇಷ ಗುಣವಿಲ್ಲದ, ಹಳಸಿದ ಅನ್ನಕ್ಕೆ ಮತ್ತು ಕೊಳೆತ ಮಾಂಸಕ್ಕೆ ಜಾರುವ ಕಾಗೆಗೆ ಮಾತ್ರ ರಾಜನಾಗುವ ಬಯಕೆ ಬಹಳ. ಎಲ್ಲ ಪಕ್ಷಿಗಳ ಮುಂದೆ ಸತತ ಕಾ.. ಕಾ.. ಮಾಡುತ್ತಾ ಇಲ್ಲ ಸಲ್ಲದ ಮಾತುಗಳನ್ನು ಹೇಳುತಿತ್ತು. ‘ನಾನು ರಾಜನಾದರೆ ಗರುಡನಿಗಿಂತ ಎತ್ತರಕ್ಕೆ ಹಾರಿ, ವರುಣ ದೇವನನ್ನು ಸೋಲಿಸಿ ಕಾಡಲ್ಲಿ ಬರಗಾಲ ಬೀಳದಂತೆ ನೋಡಿಕೊಳ್ಳುತ್ತೇನೆ’ ಎಂದು ಹೇಳುತಿತ್ತು. ಇಂತಹ ಮಾತುಗಳಿಗೆ ಮಾರು ಹೋಗಿ ಪಕ್ಷಿಗಳು ಸಾವಕಾಶ ಕಾಗೆಯತ್ತ ಜಾರಲು ಪ್ರಾರಂಭ ಮಾಡಿದವು. ಕಾಗೆ ತನ್ನ ಗುಂಪನ್ನು ಕರೆದು, ಪ್ರತಿ ಹಕ್ಕಿ ಗೂಡಿಗೆ ಕೊಳೆತ ಮಾಂಸದ ತುಣುಕು ಮತ್ತು ಹಳಸಿದ ಅನ್ನ ಹಾಕಲು ಹೇಳಿತು. ಆಗ ಮಾತ್ರ ದೊಡ್ಡ ಚಮತ್ಕಾರವೇ ಆಯಿತು. ಎಲ್ಲ ಹಕ್ಕಿಗಳು ಕಾಗೆಯೇ ನಮ್ಮ ರಾಜನೆಂದು ಹೇಳತೊಡಗಿದವು.
ಐದು ದಿನಗಳ ನಂತರ ನೋಡಿದರೆ ಕಾಗೆಯ ಮನೆಯ ಮುಂದೆ ಕಾಳಿನ ದೊಡ್ಡ ರಾಶಿಯೇ ಬಿದ್ದಿತ್ತು. ಗೂಬೆಗೆ ಸ್ವಲ್ಪ ಕಾಳು ಬಂದಿದ್ದವು ಆದರೆ ಗರುಡನಿಗೆ ಮಾತ್ರ ಒಂದು ಕಾಳೂ ಹಾಕಿರಲಿಲ್ಲ. ಅದಕ್ಕೆ ಬಹಳ ನೋವಾಯಿತು. ಹಕ್ಕಿಗಳಿಗೆ ‘ಶಿಸ್ತು, ಶೌರ್ಯ, ಶಾಂತಿ, ರಕ್ಷಣೆ’ ಬೇಕಾಗಿಲ್ಲ ಎಂದು ನೊಂದುಕೊಂಡಿತು.
ಅತ್ತ ಕಾಗೆಯ ಮನೆಯ ಮುಂದೆ ಮಾತ್ರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಾಡಿನ ತುಂಬೆಲ್ಲಾ ‘ಕಾ,, ಕಾ,,’ ಕರ್ಕಶ ಧ್ವನಿಯು ಆವರಿಸಿತು. ಮರದಲ್ಲಿ ಹೊಲಸು ಮಾಡುವದರ ಜೊತೆಗೆ ಕಾಗೆ ಕಾರುಬಾರು ಪ್ರಾರಂಭಿಸಿತು. ತನ್ನ ದರಬಾರದಲ್ಲಿ ತಿಪ್ಪೆ ಕೆದರುವ ಕೋಳಿ, ಗೂಬೆ, ಬಾವುಲಿಗಳಂತ ಪಕ್ಷಿಗಳನ್ನು ಮಂತ್ರಿಗಳನ್ನಾಗಿ ಮಾಡಿ ಸಲಹೆ ಪಡೆಯುತಿತ್ತು.
ಕಾಗೆ ರಾಜನಾದ ನಂತರ ಕಾಡಿನ ತುಂಬೆಲ್ಲಾ ಹೊಲಸುತನ ಪ್ರಾರಂಭವಾಯಿತು. ಹೊಲಸು ತಿಂದು ಹೊಲಸು ಮಾಡುವುದು ಹೆಚ್ಚಾಯಿತು. ಇಷ್ಟು ದಿನ ಗರುಡನಿಗೆ ಅಂಜಿ ಕುಳಿತ ಕಾಗೆಗಳ ಗ್ಯಾಂಗು ಸಕ್ರಿಯವಾದವು. ಎಲ್ಲ ಪಕ್ಷಿಗಳ ಮೇಲೆ ದಬ್ಬಾಳಿಕೆ ಪ್ರಾರಂಭವಾಯಿತು. ಕಾಡಿನಲ್ಲಿ ಒಂದು ರೀತಿಯ ಭಯದ ವಾತಾವರಣ. ಮೊದಲಿದ್ದ ಸ್ವಾತಂತ್ರವು ಇಲ್ಲದಂತಾಯಿತು. ಆದರ್ಶ, ಬುದ್ಧಿಮತ್ತೆ ಮಣ್ಣಾಯಿತು. ಪಕ್ಷಿಗಳಿಗೆ ಪಶ್ಚಾತಾಪ ಆಗುತ್ತಲಿತ್ತು. ಅಂತಹದರಲ್ಲಿ ನೆರೆಯ ಕಾಡಿನ ಪಕ್ಷಿಗಳು ಈ ಕಾಡಿನ ಮೇಲೆ ಯುದ್ಧ ಸಾರಿದವು. ಎಲ್ಲ ಪಕ್ಷಿಗಳಿಗೆ ಮತ್ತಷ್ಟು ಚಿಂತೆಯಾಯಿತು. ‘ಚುಗುಲಿ’ ಮಾಡುವ ಕಾಗೆಗಳೇನು ಯುದ್ಧ ಮಾಡಬೇಕು.
ಆಗ “ನಮ್ಮ ಕಾಡನ್ನು ರಕ್ಷಣೆ ಮಾಡುವದು ನನ್ನ ಧರ್ಮ” ಎಂದು ಗರುಡ ತನ್ನ ಸ್ನೇಹಿತರ ಸಹಕಾರದಿಂದ ವೀರಾವೇಶದಿಂದ ಕಾದಾಡಿ ಅವುಗಳನ್ನು ಹಿಮ್ಮೆಟ್ಟಿಸಿತು. ಎಲ್ಲ ಪಕ್ಷಿಗಳಿಗೆ ಗರುಡನ ಮೇಲೆ ಗರ್ವ ಎನಿಸಿತು. ಅವೆಲ್ಲವು ಗರುಡನ ಜಯ ಜಯಕಾರ ಹಾಕುತ್ತಾ ಬಂದು ಕ್ಷಮೆ ಕೇಳಿ, “ನೀನೆ ರಾಜನಾಗಬೇಕು ಮತ್ತು ಕಾಗೆಗಳ ಹೊಲಸು ವೃತ್ತಿಗೆ ಕಡಿವಾಣ ಹಾಕಬೇಕು” ಎಂದು ವಿನಂತಿಸಿಕೊಂಡವು. ಅಂದಿನಿಂದ ತ್ಯಾಗ, ಪ್ರಾಮಾಣಿಕ, ನಿಸ್ವಾರ್ಥಗಳಂತಹ ಆದರ್ಶ ಗುಣವುಳ್ಳ; ಶೌರ್ಯ ಮತ್ತು ಚತುರತೆಗೆ ಹೆಸರಾದ, ಪಕ್ಷಿಗಳ ಸ್ವಾತಂತ್ರ್ವವನ್ನು ರಕ್ಷಣೆ ಮಾಡಿ, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಗರುಡ ಪಕ್ಷಿಯು ರಾಜನಾಗುತ್ತದೆ. ಆಗ ಅಲ್ಲಿ ಮತ್ತೆ ಎಲ್ಲ ಪಕ್ಷಿಗಳು ನೆಮ್ಮದಿಯಿಂದ ಬದುಕುತ್ತವೆ.
*******
ನಾನು ಬಾಲ್ಯದಲ್ಲಿ ಓದಿದ ಪಂಚತಂತ್ರ ಕಥೆಗಳು ನೆನೆಪಾದವು…
ಸುಂದರ ಲೇಖನ
ಧನ್ಯವಾದಗಳು …
ನಿಮ್ಮ ಹಾರೈಕೆ ಹೀಗೆ ಇರಲಿ…
ಕಥೆಯ ಥೀಮ್ ಚೆನ್ನಾಗಿದೆ ಗುರುಗಳೇ ಅದರಂತೆ ಲಂಚದ ಆಸೆಯಂತೆ ಮತದಾನ ಪ್ರಕ್ರಿಯೆ ಯಲ್ಲಿ ತಪ್ಪು ಮಾಡಿ ಕಳಪೆ ನಾಯಕನ ಆಯ್ಕೆ ಯಿಂದ ಆಗುವ ಗಂಡಾಂತರ ಹಾಗೂ ಹೊಸ ವಿಚಾರ ಬಂದಿರುವುದು ಸೃಜನಶೀಲ ನಿಮ್ಮ ಲೇಖನ. ಧನ್ಯವಾದಗಳು ಗುರುಗಳೇ ಕಥೆಯ ನೀತಿ ಈಗಿನ ಸಭ್ಯ ನಾಗರಿಕ ಸಮಾಜ ಎಚ್ಚೆತ್ತು ಕೊಂಡು ತಮಗೆ ಸಮರ್ಥ ನಾಯಕ ಹೇಗಿರಬೇಕು ಎಂಬುದನ್ನು ಎಚ್ಚರಿಕೆ ನೀಡುವ ನೀತಿ ಧನ್ಯವಾದಗಳು ಗುರುಗಳೇ.
ಧನ್ಯವಾದಗಳು …
ನಿಮ್ಮ ಹಾರೈಕೆ ಹೀಗೆ ಇರಲಿ…