ಮೇಗರವಳ್ಳಿ ರಮೇಶ್
ಆಲ್ಖೆಮಿಸ್ಟ್
ಕಾದಂಬರಿ
ಮೂಲ:ಪೌಲೋ ಕೋಎಲ್ಹೊ(ಅರ್ಜೆಂಟೈನಾ)
ಕನ್ನಡಕ್ಕೆ: ಕಮಲ ಹೆಮ್ಮಿಗೆ
ಶ್ರೀಮತಿ ಕಮಲ ಹೆಮ್ಮಿಗೆಯವರು ಅನುವಾದಿಸಿದ ಪೌಲೋ ಕೋಎಲ್ಹೊ ನ ಕಾದಂಬರಿ “ಆಲ್ಖೆಮಿಸ್ಟ್”– ಒಂದು ಒಳ ನೋಟ
ಅರ್ಜೆಂಟೈನಾದ ಕಾದಂಬರಿ ಕಾರ ಪೌಲೋ ಕೊಎಲ್ಹೊ ಸ್ಪಾನಿಶ್ ಭಾಷೆಯಲ್ಲಿ ಬರೆದ ಕಾದಂಬರಿ “ಆಲ್ಖೆಮಿಸ್ಟ್” ಒಂದು ವಿಶಿಷ್ಠ ಕಥಾ ಹಂದರವನ್ನು ಹೊಂದಿರುವ, ಓದುಗನಲ್ಲಿ ಹೊಸ ಸಂಚಲನವನ್ನು ಉಂಟುಮಾಡುವ ಕಾದಂಬರಿ. ಕನ್ನಡದ ಶ್ರೇಷ್ಠ ಕವಯಿತ್ರಿಯರಲ್ಲಿ ಒಬ್ಬರಾದ ಡಾ! ಕಮಲ ಹೆಮ್ಮಿಗೆಯವರು ಈ ಕಾದಂಬರಿಯನ್ನು ಅದರ ಮಲಯಾಳಂ ಆವೃತ್ತಿಯಿಂದ (ಅನುವಾದಕರು ರಮಾ ಮೆನೋನ್) ಕನ್ನಡಕ್ಕೆ ತಂದಿದ್ದಾರೆ. ಅನುವಾದಕಿ ಕಮಲಾ ಹೆಮ್ಮಿಗೆಯವರು ಈ ಕಾದಂಬರಿಯ ಇಂಗ್ಲಿಶ್ ಅನುವಾದವನ್ನು ಓದಿದಾಗ ಸಪ್ಪೆಯೆನಿಸಿತಂತೆ. ಅವರ ಕಿರಿಯ ಸ್ನೇಹಿತೆಯೊಬ್ಬರ ಸಲಹೆಯ ಮೇರೆಗೆ ಶ್ರೀಮತಿ “ರಮಾ ಮೇನೋನ್” ರ ಮಲಯಾಳಂ ಅನುವಾದವನ್ನುಓದಿ, ಪ್ರಭಾವಿತರಾಗಿ ಅದರಿಂದ ಈ ಕಾದಂಬರಿಯ ಕನ್ನಡಾನುವಾದವನ್ನು ಮಾಡಿದಾರೆ. ಇದಕ್ಕೂ ಮೊದಲು ಈ ಕಾದಂಬರಿಯ ಕನ್ನಡಾನುವಾದ ಬಂದಿತ್ತೆಂದು ತಿಳಿಯಿತು. ಆದರೆ ಅದರ ಪ್ರತಿಗಳಾಗಲೀ, ಅನುವಾದಕರ ಹೆಸರಾಗಲೀ ಲಭ್ಯವಿಲ್ಲ.
ಕಮಲಾ ಅವರು ಕಾದಂಬರಿಯ ಆಶಯಕ್ಕೆ ಸ್ವಲ್ಪವೂ ಕುಂದು ಬರದ ಹಾಗೆ ಅದ್ಭುತವಾಗಿ ಅನುವಾದಿಸಿದ್ದಾರೆ. ಅನುವಾದ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂದರೆ ಓದುಗರು ಕಾದಂಬರಿಯ ನಾಯಕ ಸ್ಯಾಂಟಿಯಾಗೋನ ಅರಸುವಿಕೆಯ ಪಯಣದಲ್ಲಿ ಅವನೊಂದಿಗೆ ಹೆಜ್ಜೆ ಹಾಕುತ್ತಾ, ಆಂಡಲೂಸಿಯಾದ ಹುಲ್ಲುಗಾವಲುಗಳಲ್ಲಿ, ಆಫ್ರಿಕಾದ ಊರುಗಳಲ್ಲಿ, ಸಹಾರಾ ಮರುಭೂಮಿಯ ಮರಳಿನಲ್ಲಿ , ಪಿರಮಿಡ್ಡುಗಳ ಸನಿಹದಲ್ಲಿ ಸುತ್ತಾಡಿ ಅವನ ಅನುಭವಗಳನ್ನು ತಾವೂ ಒಳಗೊಳ್ಳುತ್ತಾ ಸಾಗುತ್ತಾರೆ. ಇದೊಂದು ಸಾರ್ಥಕ ಅನುವಾದವೆಂದರೆ ತಪ್ಪಾಗುವುದಿಲ್ಲ.
ಕಥೆ ಪ್ರಾರಂಭವಾಗುವುದಕ್ಕೂ ಮುನ್ನ ನಾಂದಿ ರೂಪದಲ್ಲಿ ಆಲ್ಖೆಮಿಸ್ಟ್ ಓದಿದ ನಾರ್ಸಿಸಸ್ ಕಥೆಯ ಪ್ರಸ್ತಾಪವಿದೆ. ಈ ಕಥೆ ಕೊನೆಯಾಗುವುದು ಅಳುತ್ತಿರುವ ಕೊಳ ವನದೇವತೆಯರಿಗೆ ತನ್ನ ಅಳುವಿನ ಕಾರಣ ತನ್ನನ್ನು ನೋಡುತ್ತಿದ್ದ ನಾರ್ಸಿಸಸ್ ನ ಕಣ್ಣುಗಳಲ್ಲಿ ಕಾಣುತ್ತಿದ್ದ ತನ್ನ ಪ್ರತಿಬಿಂಬವೇ ಹೊರತು ಅವನ ಬಾಹ್ಯ ಸೌಂದರ್ಯವಲ್ಲ ಎಂದು ಹೇಳುವಲ್ಲಿ ಮನುಷ್ಯನ ಬಾಹ್ಯ ರೂಪಕ್ಕಿಂತ ಆಂತರ್ಯದ ಸೌಂದರ್ಯಮುಖ್ಯ ಎಂಬ ಅಂಶವನ್ನುಎತ್ತಿ ಹಿಡಿಯುತ್ತದೆ. ಇದು ಆಲ್ಖೆಮಿಸ್ಟ್ ಕಾದಂಬರಿಯಲ್ಲಿ ಹಾಸು ಹೊಕ್ಕಾಗಿರುವ, ಸ್ಯಾಂಟಿಯಾಗೋ ಕೊನೆಯಲ್ಲಿ ಕಂಡುಕೊಳ್ಳುವ ದರ್ಶನಕ್ಕೆ ಬರೆದ ಮುನ್ನುಡಿಯಂತಿದೆ. ಇದರಿಂದ ಕಾದಂಬರಿಯ ಮೌಲ್ಯ ವೃದ್ಧಿಯಾಗಿದೆ.
ಮಧ್ಯಕಾಲೀನ ಯುಗದಲ್ಲಿ ಯುರೋಪ್, ಆಫ್ರಿಕಾ ಮತ್ತು ಏಷ್ಯಾದ ಕೆಲ ಭಾಗಗಳಲ್ಲಿ ಆಲ್ಖೆಮಿ ಅಂದರೆ ರಸ ವಿದ್ಯೆ ಪ್ರಚಲಿತದಲ್ಲಿದ್ದು ಕೆಲವರು ಇದನ್ನು ಅಭ್ಯಸಿಸಿ ಪ್ರಯೋಗಗಳನ್ನು ನಡೆಸುತ್ತಿದ್ದರು. ಅಂಥವರಿಗೆ ಆಲ್ಖೆಮಿಸ್ಟ್ ಗಳು (ರಸವಾದಿಗಳು) ಎಂಬ ಹೆಸರಿತ್ತು. ಈ ಆಲ್ಖೆಮಿಸ್ಟ್ ಗಳು ಸಾಧಾರಣ ಲೋಹವನ್ನುಕರಗಿಸಿ ಶುದ್ಧೀಕರಿಸಿ ಚಿನ್ನವನ್ನಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ತೊಡಗುತ್ತಿದ್ದರು. ಈ ವಿದ್ಯೆಯ ಮೂಲ ಗ್ರೀಕೋ-ರೋಮನ್ ಮತ್ತು ಈಜಿಪ್ಟ ದೇಶಗಳೆಂದು ಹೇಳುತ್ತಾರೆ.ಆಲ್ಖೆಮಿಸ್ಟ್ ಗಳು ಕೇವಲ ಸಾಧಾರಣ ಲೋಹಗಳನ್ನು ಚಿನ್ನವಾಗಿಸುವುದಲ್ಲದೇ ತತ್ವಜ್ನಾನಿಗಳೂ ಆಗಿರುತ್ತಿದ್ದರು. ಆತ್ಮ ಶುದ್ಧಿಯ ಬಗ್ಗೆ, ಜೀವಾತ್ಮಗಳ ಸಂಬಂಧದ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಅಲ್ಲದೇ ಮನುಷ್ಯನ ಆಯುಷ್ಯವನ್ನು ವೃದ್ಢಿಸುವ ಕಷಾಯವನ್ನೂ ಸಹ ತಯಾರಿಸುತ್ತಿದ್ದರು.
ಈ ಕಾದಂಬರಿಯ ಮುಖ್ಯ ವ್ಯಕ್ತಿ ಸ್ಯಾಂಟಿಯಾಗೋ ಎಂಬ ಯುವಕ. ತಮ್ಮ ಮಗ ಪಾದ್ರಿಯಾಗಬೇಕೆಂಬ ತಂದೆ ತಾಯಿಯರ ಇಚ್ಚೆಗೆ ವಿರುದ್ಧವಾಗಿ, ಪಾದ್ರಿಯಾಗಿ ನಾಲ್ಕು ಗೋಡೆಗಳ ನಡುವೆ ಕಳೆದು ಹೋಗುವುದರಲ್ಲಿ ಅರ್ಥವಿಲ್ಲವೆಂದು ಮನಗಂಡು, ದೇಶ ಸುತ್ತಿ ಅನುಭವ ಗಳಿಸುವ ಆಶಯದಿಂದ ಕುರಿಗಾಹಿಯ ವೃತ್ತಿಯಲ್ಲಿ ತೊಡಗಿಕೊಳ್ಳುತ್ತಾನೆ. ಇಲ್ಲಿಂದ ಅವನ ಸಂಚಾರೀ ಬದುಕು ಆರಂಭವಾಗುತ್ತದೆ.
ಒಮ್ಮೆ ಟರೀಫ಼ಾದಲ್ಲಿವ್ಯಾಪಾರಿಯೊಬ್ಬನಿಗೆ ಕುರಿಗಳತುಪ್ಪಳವನ್ನು ಮಾರುವ ಸಂದರ್ಭದಲಿ ಆ ವ್ಯಾಪಾರಿಯ ಮಗಳನ್ನು ಕಂಡು ಸ್ಯಾಂಟಿಯಾಗೊ ಮೋಹಗೊಳ್ಲುತ್ತಾನೆ.ಎರಡು ವರ್ಷಗಳ ನಂತರ ಅವಳನ್ನು ನೋಡುವ ಉದ್ದೇಶದಿಂದ ಹೊರಟವನಿಗೆ ಸಂಜೆ ಒಂದು ಪಾಳು ಬಿದ್ದ, ಛಾವಣಿಯಿಲ್ಲದ ಚರ್ಚ್ ಕಾಣಿಸುತ್ತದೆ. ಆ ಚರ್ಚ್ ಒಳಗೆ ಬೆಳೆದಿರುವ ಒಂದು ಸೈಕೋಮೋರ್ ಮರದ ಕೆಳಗೆ ಆ ರಾತ್ರಿ ಕಳೆಯುವುದೆಂದು ನಿರ್ಧರಿಸಿ ಮಲಗಿದವನಿಗೆ ಒಂದು ಕನಸು ಬೀಳುತ್ತದೆ. ಕನಸಿನಲ್ಲಿ ಮಗುವೊಂದು ಅವನ ಕೈ ಹಿಡಿದು ಈಜಿಪ್ಟಿನ ಪಿರಮಿಡ್ಡುಗಳ ಬಳಿಗೆ ಒಯ್ದು ಅಲ್ಲಿರುವ ನಿಧಿಯನ್ನು ತೋರಿಸುತ್ತದೆ. ಈ ರೀತಿಯ ಕನಸನ್ನು ಅವನು ಹಲವಾರು ಬಾರಿ ಕಂಡಿರುತ್ತಾನೆ.
ಟರೀಫಾದಲ್ಲಿರುವ ಜಿಪ್ಸಿ ಮುದುಕಿಯಿಂದ ಕನಸಿನ ಅರ್ಥವನ್ನು ತಿಳಿದುಕೊಳ್ಳ ಬೇಕೆಂದು ಅವಳ ಬಳಿ ಹೋಗುವ ಸ್ಯಾಂಟಿಯಾಗೋನಿಗೆ ಅವನ ಕನಸಿನ ನಿಧಿ ಈಜಿಪ್ಟಿನ ಪಿರಮಿಡ್ಡುಗಳ ಬುಡದಲ್ಲಿರುವುದಾಗಿಯೂ, ಸ್ಯಾಂಟಿಯಾಗೋ ಅದನ್ನು ಪಡೆದಾಗ ಅದರಲ್ಲಿ ಹತ್ತನೇ ಒಂದು ಭಾಗವನ್ನು ತನಗೆ ಕೊಡಬೇಕೆಂದು ತಾಕೀತು ಮಾಡುತ್ತಾಳೆ. ಮುಂದೆ ಸ್ಯಾಂಟಿಯಾಗೋ ಗೆ ಸಾಲೆಮ್ ನ ರಾಜನೆಂದು ಹೇಳಿಕೊಳ್ಳುವ ಮಿಲ್ಚಿ ಜ಼ೆಡೆಕ್ ಎಂಬ ಮುದುಕನ ಭೇಟಿಯಾಗುತ್ತದೆ. ಮಿಲ್ಚೆಜ಼ೆಡೆಕ್ ಸ್ಯಾಂಟಿಯಾಗೋಗೆ ಅನೇಕ ವಿಚಾರಗಳನ್ನು ಕುರಿತು ತಿಳಿಸುತ್ತಾನೆ. ಆತ್ಮಾನುಭವ ಮತ್ತು ಪ್ರಕೃತಿಯೊಂದಿಗಿನ ಅದರ ಸಂಬಂಧ ಗಳನ್ನು ತಿಳಿಸಿ “ಪೂರ್ಣ ಮನಸ್ಸಿನಿಂದ ಕೇಳಿಕೊಂಡರೆ ಪ್ರಕೃತಿ ನಮಗೆ ನೆರವಾಗುತ್ತದೆ ಎಂದೂ ತಿಳಿಸುತ್ತಾನೆ. ಕನಸಿನ ಸಾಕ್ಷಾತ್ಕಾರಕ್ಕಾಗಿ ಈಜಿಪ್ಟಿನ ಪಿರಮಿಡ್ಡುಗಳ ಬಳಿ ತೆರಳಲು ಪ್ರೇರೇಪಿಸುತ್ತಾನೆ. ಅವನಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭಗಳಲ್ಲಿ ಸಹಾಯವಾಗಲೆಂದು ಯೂರಿಮ್ ಮತ್ತು ತುಮಿಮ್ ಎಂಬ ಎರಡು ಕಲ್ಲುಗಳನ್ನು ನೀಡುತ್ತಾನೆ.
ಸ್ಯಾಂಟಿಯಾಗೋ ತನ್ನಲ್ಲಿದ್ದ ಕುರಿಗಳಲ್ಲಿ ಆರು ಕುರಿಗಳನ್ನು ತಾನು ಕೊಟ್ಟ ಮಾತಿನಂತೆ ಮಿಲ್ಚಿಜ಼ೆಡೆಕ್ ನಿಗೆ ಕೊಟ್ಟು ಉಳಿದ ಕುರಿಗಳನ್ನು ಮಾರಿ ಆಫ್ರಿಕಾಕ್ಕೆ ಪಯಣಿಸಿ ಆಫ್ರಿಕಾದ ಟ್ಯಾನ್ಜೀರ್ ಪಟ್ಟಣಕ್ಕೆ ಬಂದಿಳಿಯುತ್ತಾನೆ. ಅಪರಿಚಿತ ಸ್ಥಳದ ಹೋಟೆಲ್ ಒಂದರಲ್ಲಿ ಪರಿಚಯವಾಗುವ, ಸ್ಪ್ಯಾನಿಷ್ ಮಾತನಾಡುವ ಯುವಕ ಸ್ಯಾಂಟ್ಯಾಗೋನೊಂದಿಗೆ ಸ್ನೇಹ ಬೆಳೆಸಿ ಅವನಲ್ಲಿದ್ದ ಹಣವನ್ನೆಲ್ಲ ಲಪಟಾಯಿಸುತ್ತಾನೆ. ಎಲ್ಲವನ್ನೂ ಕಳೆದುಕೊಂಡ ಸ್ಯಾಂಟಿಯಾಗೋನನ್ನು ಅನಾಥಪ್ರಜ್ನೆ ಕಾಡುತ್ತದೆ. ಹೇಗಾದರೂ ಮಾಡಿ ಸ್ವಲ್ಪ ಹಣ ಸಂಪಾದಿಸಿ ಆಂಡಲೂಸಿಯಾಗೆಹಿಂದಿರುಗಬೇಕೆಂದುಕೊಳ್ಳುತ್ತಾನೆ. ಅವನಿಗೆ ಒಬ್ಬ ಹರಳು ಮತ್ತು ಗಾಜಿನ ವಸ್ತುಗಳ ವ್ಯಾಪಾರಿಯ ಅಂಗಡಿಯಲ್ಲಿ ಕೆಲಸ ಸಿಗುತ್ತದೆ. ತನ್ನ ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆ ಗಳಿಂದ ಅಂಗಡಿಯ ಯಜಮಾನನ ವಿಶ್ವಾಸ ಗಳಿಸುತ್ತಾನೆ. ಅವನ ಬಳಿ ಸಾಕಷ್ಟು ಹಣವೂ ಸಂಗ್ರಹವಾಗುತ್ತದೆ. ಅಂಗಡಿಯಲ್ಲಿ ಕೆಲವಾರು ತಿಂಗಳುಕೆಲಸ ಮಾಡಿದ
ನಂತರ ಸ್ಯಾಂಟಿಯಾಗೋನನ್ನು ಆಂಡಲೂಸಿಯಾಗೆ ಹಿಂದಿರುಗುವುದೋ ಅಥವಾ ಕನಸಿನ ನಿಧಿಯನ್ನರಸಿ ಪಿರಮಿಡ್ಡುಗಳ ಕಡೆ ಹೋಗುವುದೋ ಎಂಬ ದ್ವಂದ್ವ ಕಾಡ ತೊಡಗುತ್ತದೆ. ಅದೇ ಸಂದರ್ಭದಲ್ಲಿ ಈಜಿಪ್ಟಿಗೆ ಪಯಣ ಹೊರಟಿದ್ದ ಜನರ ಗುಂಪೊಂದು ಅಲ್ಲಿಗೆ ಬರುತ್ತದೆ.ಆ ಗುಂಪನ್ನು ಸೇರಿಕೊಂಡು ಈಜಿಪ್ಟಿನ ಕಡೆಗೆ ಪಯಣ ಬೆಳೆಸುತ್ತಾನೆ.
ಅವನಿಗೆ ಆ ಗುಂಪಿನಲ್ಲಿದ್ದ ಆಂಗ್ಲ ಮನುಷ್ಯನೊಬ್ಬನ ಪರಿಚಯವಾಗುತ್ತದೆ. ಆ ಮನುಷ್ಯ ರಸವಾದದ (ಆಲ್ಖೆಮಿ) ರಹಸ್ಯಗಳನ್ನು ಅರಿಯಲೋಸುಗ ಪಿರಮಿಡ್ಗೆ ಹೋಗುವ ದಾರಿಯಲ್ಲಿರುವ ಓಯಸಿಸ್ನಲ್ಲಿ ವಾಸಿಸುತ್ತಿರುವ ಆಲ್ಖೆಮಿಸ್ಟ್ ಒಬ್ಬನನ್ನು ಭೇಟಿಮಾದಲು ತಾನು ಇಚ್ಚಿಸುವುದಾಗಿಯೂ, ಮತ್ತು ಆ ಆಲ್ಖೆಮಿಸ್ಟ್ ಗೆ ಇನ್ನೂರು ವರ್ಷಗಳಿಗೂ ಹೆಚ್ಚು ವಯಸ್ಸಾಗಿರುವುದೆಂದೂ ಹೇಳುತ್ತಾನೆ. ಮರುಭೂಮಿಯಲ್ಲಿ ಪಯಣಿಸುತ್ತಾ ಸ್ಯಾಂಟಿಯಾಗೋ ಮರುಭೂಮಿಯ ಮಾತುಗಳನ್ನು ಆಲಿಸುವುದನ್ನೂ ಮತ್ತು ಜಗತ್ತಿನ ಆತ್ಮವನ್ನು ಶೋಧಿಸುವುದನ್ನೂ ಕಲಿಯುತ್ತಾನೆ.
ಗುಂಪು ಓಯಸಿಸ್ ಪ್ರದೇಶಕ್ಕೆ ಬರುತ್ತದೆ. ಅಲ್ಲಿ ಅವರೆಲ್ಲ ಕೆಲ ದಿನ ತಂಗುತ್ತಾರೆ. ಅಲ್ಲಿ ಸ್ಯಾಂಟಿಯಾಗೊನಿಗೆ ಫಾತಿಮಾ ಎಂಬ ಅರಬ್ ಹುಡುಗಿಯ ಭೇಟಿಯಾಗುತ್ತದೆ. ಅವಲ ಸೌಂದರ್ಯಕ್ಕೆ ಮಾರು ಹೋದ ಸ್ಯಾಂಟಿಯಾಗೋ ಅವಳಲ್ಲಿ ಅನುರಕ್ತನಾಗುತ್ತಾನೆ. ಗುಂಪಿನ ನಾಯಕ ಎಲ್ಲರನ್ನೂ ಸೇರಿಸಿ “ಮರುಭೂಮಿಯ ಬುಡಕಟ್ಟು ಜನಾಂಗದ ಬಣಗಳ ನಡುವೆ ಯುದ್ಧ ನಡೆಯುತ್ತಿರುವುದಾಗಿಯೂ, ಆದ್ದರಿಂದ ಪಯಣ ಮುಂದುವರಿಸಲು ಸಧ್ಯಕ್ಕೆ ಸಾಧ್ಯವಾಗುವುದಿಲ್ಲ” ಎಂದು ಹೇಳುತ್ತಾನೆ.
ಗುಂಪಿನೊಂದಿಗೆ ಅನಿವಾರ್ಯ ಓಯಸಿಸ್ನಲ್ಲಿ ಉಳಿಯಲೇ ಬೇಕಾದ ಸ್ಯಾಂಟಿಯಾಗೋ ಮರುಭೂಮಿಯ ಕಡೆ ನಡೆದು ಸುತ್ತಾಡುತ್ತಾನೆ. ಆಗ ಅವನಿಗೆ ಆಗಸದಲ್ಲಿ ಎರಡು ಗಿಡುಗಗಳು ಹೋರಾಡುತ್ತಿರುವ ದೃಶ್ಯ ಕಾಣುತ್ತದೆ. ಅದನ್ನು ಕಂಡ ಸ್ಯಾಂಟಿಯಾಗೊಗೆ ಸೈನ್ಯದ ತುಕುಡಿಯೊಂದು ಓಯಸಿಸ್ ಪ್ರದೇಶವನ್ನು ಆಕ್ರಮಿಸುವ ಮುನ್ಸೂಚನೆ ಸಿಗುತ್ತದೆ. ಓಯಸಿಸ್ ಗಳ ಮೇಲೆ ದಾಳಿ ಮಾಡುವುದು ಅಲ್ಲಿಯ್ ನಿಯಮಕ್ಕೆ ವಿರುದ್ಧವಾದದ್ದರಿಂದ ಈ ವಿಶಯವನ್ನು ಓಯಸಿಸ್ ಪ್ರದೇಶದ ಮುಖ್ಯಸ್ಥನೊಂದಿಗೆ ಹಂಚಿಕೊಳ್ಳುತ್ತಾನೆ. ಸ್ವಲ್ಪ ಸಮಯದ ನಂತರ ಕೈಯಲ್ಲಿ ಕತ್ತಿ ಹಿಡಿದ, ಬಿಳಿಯ ಕುದುರೆಯ ಮೇಲೆ ಕುಳಿತಿದ್ದ, ಕಣ್ಣುಗಳೆರಡನ್ನು ಬಿಟ್ಟು ದೇಹದ ಉಳಿದ ಭಾಗವನ್ನೆಲ್ಲ ಕಪ್ಪು ಬಟ್ಟೆಯಿಂದ ಮುಚ್ಚಿಕೊಂಡಿದ್ದ ವ್ಯಕ್ತಿಯೊಬ್ಬನು ಸ್ಯಾಂಟಿಯಾಗೋಗೆ ಎದುರಾಗುತ್ತಾನೆ. ಅವನೇ ಆಂಗ್ಲ ಮನುಷ್ಯ ಹೇಳಿದ ಆಲ್ಖೆಮಿಸ್ಟ್ ಆಗಿರುತ್ತಾನೆ. ಆಲ್ಖೆಮಿಸ್ಟ್ ಸ್ಯಾಂಟಿಯಾಗೋನನ್ನು ತನ್ನ ಗುಡಾರಕ್ಕೆ ಕರೆದುಕೊಂಡುಹೋಗುತ್ತಾನೆ. ಅವನಿಂದ ಸ್ಯಾಂಟಿಯಾಗೋ ಅನೇಕ ವಿಚಾರಗಳನ್ನು ತಿಳಿದುಕೊಳ್ಳುತ್ತಾನೆ. ಮುಖ್ಯವಾಗಿ ಪ್ರಕೃತಿ ಭಾಷೆಯನ್ನು ಮತ್ತು ಭೌತ ಶಕ್ತಿಗಳೊಂದಿಗೆ ಸಂಭಾಷಿಸುವುದನ್ನು ಕಲಿಯುತ್ತಾನೆ. ಆಲ್ಖೆಮಿಸ್ಟ್ ತಾನು ಮರುಭೂಮಿಯನ್ನು ದಾಟಿ ಈಜಿಪ್ಟಿನ ಪಿರಮಿಡ್ಡುಗಲ ಕಡೆ ಹೋಗುವುದಾಗಿಯೂ, ಬೇಕಾದರೆ ತನ್ನ ಜತೆ ಬರಬಹುದೆಂದು ಸ್ಯಾಂಟಿಯಾಗೊಗೆ ಹೇಳುತ್ತಾನೆ. ಸ್ಯಾಂಟಿಯಾಗೋ ಆಲ್ಖೆಮಿಸ್ಟ್ ಜತೆ ಪಯಣಿಸಲು ಒಪ್ಪುತ್ತಾನೆ. ಇಬ್ಬರೂ ಯುದ್ಧ ನಡೆಯುತ್ತಿದ್ದ ಮರುಭೂಮಿಯ ಪ್ರದೇಶವನ್ನು ಪ್ರವೇಶಿಸುತ್ತಾರೆ.
ಯುದ್ಧ ಮಾಡುತ್ತಿದ್ದ ಯೋಧರು ಇವರಿಬ್ಬರನ್ನು ಬಂಧಿಸುತ್ತಾರೆ. ಆಗ ಆಲ್ಖೆಮಿಸ್ಟ್ ಯೋಧರ ಹತ್ತಿರ ಸ್ಯಾಂಟಿಯಾಗೋ ನಿಗೆ ಬಿರುಗಾಳಿಯಾಗಿ ಮಾರ್ಪಡುವ ವಿದ್ಯೆ ಗೊತ್ತಿದೆಯೆಂದು ಹೇಳುತ್ತಾನೆ. ಆಲ್ಖೆಮಿಸ್ತ್ನನ್ನು ಅವಹೇಳನ ಮಾಡಿದ ಯೋಧರು, ಹಾಗಿದ್ದರೆ ತಮ್ಮ ಸೇನಾಧಿಪತಿಯ ಎದುರು ಸ್ಯಾಂಟಿಯಾಗೋ ಆ ವಿದ್ಯೆಯನ್ನು ಪ್ರದರ್ಷಿಸ ಬೇಕೆಂದು ತಾಕೀತು ಮಾಡುತ್ತಾರೆ. ಆಲ್ಖೆಮಿಸ್ಟ್ ಒಪ್ಪಿಕೊಳ್ಳುತ್ತಾನೆ. ಆದರೆ ಏನೂ ಅರಿಯದ ಸ್ಯಾಂಟಿಯಾಗೋನಿಗೆ ಆತಂಕ ಶುರುವಾಗುತ್ತದೆ. ಮರುದಿನ ಮುಂಜಾನೆ ಸ್ಯಾಂಟಿಯಾಗೋ ಮರುಭೂಮಿಯಲ್ಲಿದ್ದ ಒಂದು ಮರಳು ದಿಬ್ಬದ ಮೇಲೆ ಕುಳಿತು ಈ ಗಂಡಾಂತರದಿಂದ ತನ್ನನ್ನು ಪಾರುಮಾಡುವಂತೆ ದೇವರನ್ನು ಪ್ರಾರ್ಥಿಸುತ್ತಾನೆ. ಮರುಭೂಮಿ, ಸೂರ್ಯ, ಗಾಳಿಗಳೂ ಕೂಡ ಅವನೊಂದಿಗೆ ಪ್ರಾರ್ಥಿಸುತ್ತಿವೆ ಅನಿಸುತ್ತದೆ. ಅವುಗಳೊಂದಿಗೆ ಅವನು ಸಂಭಾಷಿಸುತ್ತಾನೆ, ತನ್ನ ಹೃದಯದ ಮಾತು ಕೇಳುತ್ತಾನೆ. ಗಾಳಿ ಬಿರುಗಾಳಿಯಾಗಿ ಪರಿವರ್ತಿತವಾಗುತ್ತದೆ. ಬಿರುಗಾಳಿ ನಿಂತಾಗ ಸ್ಯಾಂಟಿಯಾಗೋ ಆ ಯೋಧರ ನಡುವೆ ಇರುತ್ತಾನೆ. ಅವರು ಇವರಿಬ್ಬರನ್ನೂ ಮುಂದೆ ಹೋಗಲು ಬಿಡುತ್ತಾರೆ.
ಮಧ್ಯದಲ್ಲಿ ಆಲ್ಖೆಮಿಸ್ಟ್ ತನಗೆ ಬೇರೆ ಎನೋ ಜರೂರು ಕೆಲಸವಿದೆ ಎಂದು ಹೇಳಿ ಓಯಸಿಸ್ಗೆ ಹಿಂದಿರುಗುತ್ತಾನೆ. ಒಂಟಿಯಾದ ಸ್ಯಾಂಟಿಯಾಗೋ ಛಲ ಬಿಡದೇ ಮುಂದೆ ಸಾಗಿ ಪಿರಮಿಡ್ಡುಗಳ ಬಳಿ ಬರುತ್ತಾನೆ. ನಿಧಗಾಗಿ ಮರಳನ್ನು ಅಗೆಯುತ್ತಾನೆ, ಆದರೆ ಅವನಿಗೆ ನಿಧಿ ಸಿಗುವುದಿಲ್ಲ. ಆಗ ಅಲ್ಲಿಗ ಬಂದ ಕಳ್ಳರ ಗುಂಪೊಂದು ಅವನನ್ನು ಥಳಿಸಿ ಅವನ ಬಳಿಯಿದ್ದ, ಅವನಿಗೆ ಆಲ್ಖೆಮಿಸ್ಟ್ ಕೊಟ್ಟಿದ್ದ ,ಚಿನ್ನದ ಗಟ್ಟಿಯನ್ನು ಕಿತ್ತುಕೊಳ್ಳುತ್ತಾರೆ. ಆಗ ಸ್ಯಾಂಟಿಯಾಗೋ ತಾನು ಕಂಡ ಕನಸಿನ ನಿಧಿಯ ಬಗ್ಗೆ ಹೇಳಿದಾಗ ಆ ಕಳ್ಳರಲ್ಲೊಬ್ಬನು ತಾನು ಕಂಡ ನಿಧಿಯ ಕನಸಿನ ಬಗ್ಗೆ ಹೇಳಿ, ಅದು ಆಂಡಲೂಸಿಯಾದ ಪಾಳು ಬಿದ್ದ ಚರ್ಚಿನಲ್ಲಿ ಇರುವುದಾಗಿ ಹೇಳುತ್ತಾನೆ.
ಆಂಡಲೂಸಿಯಾಗೆ ಹಿಂದಿರುಗುವ ಸ್ಯಾಂಟಿಯಾಗೋ ಹಿಂದೆ ತಾನು ಮಲಗಿದ್ದ ಪಾಳು ಚರ್ಚಿನ ಸೈಕೊಮೋರ್ ಮರದಡಿ ಅಗೆಯುತ್ತಾನೆ. ನಿಧಿಯಿದ್ದ ಪೆಟ್ಟಿಗೆ ಸಿಗುತ್ತದೆ. ಆಗ ಈಜಿಪ್ಟಿನ ಮರುಭೂಮಿಯ ಕಡೆಯಿಂದ ಹಿತವಾದ ತಂಗಾಳಿ ಬೀಸಿ ಬರುತ್ತದೆ. ಅದರಲ್ಲಿ ಫಾತಿಮಾಳ ಪ್ರೀತಿಯ ಚುಂಬನದ ಸುಗಂಧವಿರುತ್ತದೆ. ಅವಳ ಮೊದಲ ಚುಂಬನ! ಪರವಶನಾದ ಸ್ಯಾಂಟಿಯಾಗೋ “ಫಾತಿಮಾ ಬಂಗಾರೀ ನಾ ಬರ್ತೀನಿ ಮರೀ” ಎನ್ನುವಲ್ಲಿ ಕಾದಂಬರಿ ಕೊನೆಗೊಳ್ಳುತ್ತದೆ.
ಇಡೀ ಕಾದಂಬರಿಯನ್ನು ಆವರಿಸಿಕೊಳ್ಳುವ ಆಲ್ಖೆಮಿ ( ರಸವಿದ್ಯೆ) ಒಂದು ಪ್ರತಿಮೆಯಾಗಿ ಹೊಮ್ಮಿದೆ. ಆಲ್ಖೆಮಿಯಲ್ಲಿ ಸಾಧಾರಣ ಲೋಹವೊಂದು ಚಿನ್ನವಾಗಿ ಮಾರ್ಪಡಲು ಅದು ಶುಚಿರ್ಭೂತವಾಗ ಬೇಕು. ಹೀಗೆ ಶುಚಿರ್ಭೂತವಾಗಲು ಅದು ಅನೇಕ ವಿಧಿಗಳಿಗೆ ಒಳಪಡ ಬೇಕಾಗುತ್ತದೆ. ಆಗ ಮಾತ್ರ ಅದು ಚಿನ್ನವಾಗಿ ಮಾರ್ಪಡಲು ಸಾಧ್ಯ. ಕಾದಂಬರಿಯ ನಾಯಕ ಸ್ಯಾಂಟಿಯಾಗೋ ಕೂಡ ಒಬ್ಬ ಸಾಧಾರಣ ಮನುಷ್ಯ. ಅವನು ತನ್ನನ್ನೇ ತಾನು ಶೋಧಿಸಿಕೊಳ್ಳ ಬೇಕಾದರೆ, ಆತ್ಮದ ಮಾತನ್ನು ಆಲಿಸುವ, ಪ್ರಕೃತಿ ಭಾಷೆಯನ್ನು ಅರಿಯುವ ಸಿದ್ಧಿಯನ್ನು ಪಡೆಯ ಬೇಕಾದರೆ, ನಿಧಿಗಿಂತಲೂ ಹೆಚ್ಚಾದ ಫಾತಿಮಾಳ ಪ್ರೇಮದ ಮಹತ್ವವನ್ನು ಅರಿಯ ಬೇಕಾದರೆ ಅವನೂ ಕೂಡ ತನ್ನ ಪಯಣದುದ್ದಕ್ಕೂ ಅನೇಕ ಅನುಭವಗಳ ರಸದಲ್ಲಿ ಮಿಂದೆದ್ದು ಶುಚಿರ್ಭೂತನಾಗ ಬೇಕಾಗುತ್ತದೆ. ಹೀಗೆ ಅವನು ಮಾರ್ಪಾಡಾಗುವ ಕ್ರಿಯೆಯಲ್ಲಿ, ಜಿಪ್ಸಿ ಮುದುಕಿ, ಸಲೇಮ್ ನ ರಾಜ ಮಿಲ್ಚಿ ಜೆಡೆಕ್, ಟ್ಯಾನ್ಜೀರ್ ನ ಹರಳುಗಳ ವ್ಯಾಪಾರಿ, ಪಿರಮಿಡ್ಡುಗಳ ಕಡೆಗೆ ಹೊರಟ ಗುಂಪಿನಲ್ಲಿ ಪರಿಚಯವಾಗುವ ಆಂಗ್ಲ ಮನುಷ್ಯ ಮತ್ತು ಕೊನೆಯಲ್ಲಿ ಸಿಗುವ ಆಲ್ಖೆಮಿಸ್ಟ್ ಎಲ್ಲರೂ ಅವನನ್ನು ಶುಚಿರ್ಭೂತಗೊಳಿಸುವ ಆಲ್ಖೆಮಿಸ್ಟ್ ಗಳೆ ಆಗುತ್ತಾರೆ. ಸೂಕ್ಷ್ಮವಾಗಿ ಗಮನಿಸಿದಾಗ, ಸಹರಾ ಮರುಭೂಮಿಯ ಮರಳು, ಸುಡುವ ಸೂರ್ಯ, ಮರುಭೂಮಿಯಗಾಳಿ, ಓಯಸಿಸ್, ಅಲ್ಲಿನ ಬಾವಿ, ಎಲ್ಲವೂ ರೋಪಕಗಳೇ ಆಗುತ್ತವೆ. ಇವೆಲ್ಲವೂಸ್ಯಾಂಟಿಯಾಗೋನ ಪಯಣದುದ್ದಕ್ಕೂ ಅವನನ್ನು ಶುಚಿಗೊಳಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತವೆ. ಆಲ್ಖೆಮಿಸ್ಟ್ ಹೇಳುವ ” ಭಯಕ್ಕೆ ಅಡಿಯಾಳಾದರೆ ಹೃದಯದ ಮಾತು ಕೇಳುವುದಿಲ್ಲ. ಸ್ವಂತ ಶ್ರಮದಿಂದ ಕನಸನ್ನು ಸಾಕ್ಷಾತ್ಕರಿಸಿಕೊಳ್ಳಲು ಆಗದಿದ್ದರೆ ಸಾಯೋದೇ ಗತಿ” ಎಂಬ ಮಾತುಗಳು ಸ್ಯಾಂಟಿಯಾಗೊನ ಪರಿವರ್ತನೆಗೆ ಕಾರಣವಾಗುತ್ತವೆ.
ಕೊನೆಯಲ್ಲಿ ಸ್ಯಾಂಟಿಯಾಗೋಗೆ ದೊರಕುವ ನಿಧಿ ಬರಿಯ ದ್ರವ್ಯವಾಗದೇ ಅವನೊಳಗಿನ ಅನುಭವಗಳ, ಚಿಂತನೆಯ ನಿಧಿಯಾಗುತ್ತದೆ. ಅವನು ಕಂಡುಕೊಂಡ ಪ್ರೇಮದ ಮಹತ್ವ ದ ನಿಧಿಯಾಗುತ್ತದೆ, ಆತ್ಮಶೋಧನೆಯ ನಿಧಿಯಾಗುತ್ತದೆ. ನಿಧಿಯನ್ನರಸಿ ಹೊರಟ ಅವನ ಪಯಣ ಅವನು ಮಾಡಿದ ತಪಸ್ಸಾಗುತ್ತದೆ. ಆತ್ಮಾನುಸಂಧಾನ ನಡೆಸುವ ಅವನು ಒಂದರ್ಥದಲ್ಲಿ ’ಆಲ್ಖೆಮಿಸ್ಟ್” ಆಗುತ್ತಾನೆ.
ಇಂತಹ ಅದ್ಭುತ ಕಾದಂಬರಿಯನ್ನು ಬರೆದ ಪೋಲೋ ಕೊಯಿಲ್ಹೋ ಮತ್ತು ಅದನ್ನು ಅಷ್ಟೇ ಸಮರ್ಥವಾಗಿ ಕನ್ನಡಕ್ಕೆ ತಂದ ಕಮಲಾ ಹೆಮ್ಮಿಗೆ ಇಬ್ಬರೂ ಅಭಿನಂದನಾರ್ಹರು..
***೦***