ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಮಕ್ಕಳ ಜೀವನದಲ್ಲಿ ಶಿಕ್ಷಕರ_ಪಾತ್ರ

ಭಾರತೀಯ ಸಂಸ್ಕೃತಿಯಲ್ಲಿ ತಾಯಿ ತಂದೆಯರ ನಂತರದ ಸ್ಥಾನವನ್ನು “ಆಚಾರ್ಯ ದೇವೋ ಭವ” ಎಂದು ಗುರು ಅಥವಾ ಶಿಕ್ಷಕರಿಗೆ ಕೊಟ್ಟಿದೆ ಎಂದ ಮೇಲೆ ಆ ಸ್ಥಾನದ ಮಹತ್ವವನ್ನು ನಾವು ತಿಳಿಯಬಹುದು.  ಹುಟ್ಟಿದ ಮಗುವಿಗೆ “ಮನೆಯೇ ಮೊದಲ ಪಾಠಶಾಲೆ ಅಮ್ಮನೇ ಮೊದಲ ಗುರು”.  ಬದುಕಿನ ಅವಶ್ಯಕ ಕ್ರಿಯೆಗಳ ಪ್ರಥಮ ಪಾಠ ಕಲಿಯುವ ಮಗು ನಂತರದಲ್ಲಿ ಹೊರಪ್ರಪಂಚಕ್ಕೆ ಕಾಲಿಡುವುದೇ ನರ್ಸರಿ ಅಥವಾ ಈಗಿನ ಕಿಂಡರ್ ಗಾರ್ಡನ್ ಗಳ ಮೂಲಕ . ಅಲ್ಲಿಂದ ಶಿಕ್ಷಕರ ಒಡನಾಟ ಮಗುವಿಗೆ ಆರಂಭ.  ಹೊರಜಗತ್ತಿನ ಕೊಂಡಿಯಾಗುವ ಶಿಕ್ಷಕ/ಶಿಕ್ಷಕಿ ತಾಯಿಯ ರಕ್ಷಾಗೂಡಿನಿಂದ ಹೊರಬಂದ ಮರಿ ಹಕ್ಕಿಗೆ ಹಾರಲು ಕಲಿಸುತ್ತಾರೆ, ಅದಕ್ಕೆ ಬೇಕಾದ ಚೈತನ್ಯದ ಇಂಧನ ತುಂಬಿಸುತ್ತಾರೆ ಎಂದರೆ ತಪ್ಪಾಗಲಾರದು.  ಮಕ್ಕಳ ಮನೋಭಾವ, ಕೂರುವ ನಿಲ್ಲುವ ಶೈಲಿ, ಬೇರೆ ಮಕ್ಕಳೊಂದಿಗಿನ ಒಡನಾಟ, ಭಾವನೆಗಳನ್ನು ವ್ಯಕ್ತಪಡಿಸುವ ರೀತಿ, ಧ್ವನಿಯ ಹತೋಟಿ, ಆಲಿಸುವ ಕಲೆ, ಪರಾನುಭೂತಿ ಈ ರೀತಿಯ ಎಲ್ಲಾ ಸಾಮಾಜಿಕ ಚಟುವಟಿಕೆಗಳನ್ನು ಗಮನಿಸಿ ಪ್ರೋತ್ಸಾಹಿಸುವವರು ತಿದ್ದುವವರು ಇಲ್ಲಿನ ಶಿಕ್ಷಕರು.  ಎಷ್ಟೋ ಸಂದರ್ಭಗಳಲ್ಲಿ ಶಿಕ್ಷಕರ ಮೇಲಿನ ಇಷ್ಟ ಅನಿಷ್ಟಗಳು ಮಗು ಖುಷಿಯಾಗಿ ಶಾಲೆಗೆ ಹೋಗುವುದನ್ನು ನಿರ್ಧರಿಸುತ್ತದೆ ಎಂದರೆ ಅದು ಅತಿಶಯೋಕ್ತಿಯೇನೂ ಅಲ್ಲ.  ಅಲ್ಲಿ ಕಲಿಸಿಕೊಡುವ ಶಿಕ್ಷಣ ಒತ್ತಟ್ಟಿನದಾದರೇ ಸಾಮಾಜಿಕ ಜೀವನದ ಆರಂಭ ಮಕ್ಕಳಿಗೆ ಅಲ್ಲಿಂದಲೇ.  ಹಾಗಾಗಿ ಆ ಘಟ್ಟದಲ್ಲಿ ಮಕ್ಕಳಿಗೆ ಸಿಗುವ ಪ್ರೋತ್ಸಾಹ ಹೊಗಳಿಕೆಯ ಮಾತುಗಳು ಅವರ ಮುಂದಿನ ಜೀವನದ ಯಶಸ್ಸಿಗೆ ಮುನ್ನುಡಿ ಬರೆದಿರುತ್ತದೆ.  ಅದಕ್ಕೇ ಖ್ಯಾತ ಶಿಕ್ಷಣ ತಜ್ಞ  ಅನಾಬೋಲ್ ಫ್ರಾನ್ಸ್ ಹೇಳಿರುವುದು “ಶಿಕ್ಷಣದ ಹತ್ತರಲ್ಲಿ 9 ಭಾಗ ಪ್ರೋತ್ಸಾಹ” ಎಂದು.  ಈ ಪ್ರೋತ್ಸಾಹವನ್ನು ನೀಡುವ /ನೀಡದಿರುವ ಮೂಲಕ ಶಿಕ್ಷಕರು ಹಸಿ ಗೋಡೆಯಂತಹ ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿ ಬಿಡುತ್ತಾರೆ.

ಮುಂದೆ ಪ್ರಾಥಮಿಕ, ಮಾಧ್ಯಮಿಕ ಹಂತದಲ್ಲಿ ಮಕ್ಕಳು ತಮ್ಮ ಶಿಕ್ಷಕರನ್ನು ಗಮನಿಸುತ್ತಾ ಕಲಿಯುತ್ತಾರೆ.  ಶಿಕ್ಷಕರು ಎಂತಹ ಪ್ರಭಾವ ಬೀರುತ್ತಾರೆಂದರೆ ಅವರು ಕಲಿಸಿದ್ದು ಜೀವನವಿಡೀ ನೆನಪಿರುತ್ತದೋ ಇಲ್ಲವೋ ಆದರೆ ಅವರುಂಟು ಮಾಡಿದ ಭಾವನೆಗಳ ಪರಿಣಾಮ ಮಾತ್ರ ಜೀವಮಾನವಿಡೀ ಮರೆಯದ ಮೆಲುಕಾಗುತ್ತದೆ . ನಮ್ಮಗಳ ವಿಷಯದಲ್ಲೇ ನೋಡಿ ಪ್ರಾಥಮಿಕ ಹಂತದ ಮಿಸ್ ಗಳ ಸರ್ ಗಳ ಮುಖ ನಡೆನುಡಿ ಮತ್ತು ಅವರೊಂದಿಗಿನ ಒಡನಾಟ ಈಗ ಅರ್ಧ ಶತಮಾನ ಕಳೆದರೂ ಮನದ ತೆರೆಯ ಮೇಲೆ ಹಾಗೆ ಹಾದು ಹೋಗುವುದಿಲ್ಲವೇ?

ಇನ್ನೂ ಪ್ರೌಢಶಾಲೆಯ ಹದಿಹರೆಯದ ಘಟ್ಟದಲ್ಲಿ ಶಿಕ್ಷಕರು ತುಂಬಾ ಮುಖ್ಯ ಎನಿಸುತ್ತಾರೆ.  ಅತ್ಯಂತ ಪ್ರಭಾವ ಬೀರಿದ ಶಿಕ್ಷಕರು ಬೋಧಿಸುವ ವಿಷಯವನ್ನೇ ಮುಂದೆ ಕಾಲೇಜಿನಲ್ಲಿ ಆಯ್ಕೆ ಮಾಡಿಕೊಳ್ಳುವ ಪ್ರಸಂಗಗಳನ್ನು ಎಷ್ಟೋ ನೋಡಿದ್ದೇನೆ.  ಹಸಿ ಜೇಡಿಮಣ್ಣಿನಂಥ ಮಕ್ಕಳ ಮನಸ್ಸನ್ನು ತಿದ್ದಿ ರೂಪಕೊಡುವ ಶಿಲ್ಪಿಗಳೇ ಶಿಕ್ಷಕರು.

ಕಾಲೇಜು ಶಿಕ್ಷಣದಲ್ಲಿಯೂ ಅಷ್ಟೆ.  ಪ್ರಾಧ್ಯಾಪಕರ ಬೋಧನಾ ಶೈಲಿ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅನುಸರಿಸಿ ಯುವಜನಾಂಗ ಶಿಕ್ಷಕರ ಗುಣಮಟ್ಟಕ್ಕನುಗುಣವಾಗಿ ಉನ್ನತಿ ಸಾಧಿಸುತ್ತಾರೆ.  ನಮ್ಮ ಸ್ವಾತಂತ್ರ್ಯ ಸಂಗ್ರಾಮ ಯಶಸ್ವಿಯಾಗಲು ಯುವಜನತೆ ವಹಿಸಿದ ಪಾತ್ರ ಅಭೂತಪೂರ್ವ ಅದಕ್ಕೆ ಕಾರಣೀಭೂತರಾದವರು ಹೆಚ್ಚಿನಂಶ ಶಿಕ್ಷಣ ವರ್ಗವೇ ಎಂಬುದು ಇತಿಹಾಸ ಸುವರ್ಣ ಅಕ್ಷರಗಳಲ್ಲಿ ಬರೆದ ಸಂಗತಿ .  

ಹೀಗೆ ಶಿಕ್ಷಣದ ಪ್ರತಿಯೊಂದು ಘಟ್ಟದಲ್ಲೂ ಮಗು ಶಿಕ್ಷಕ/ಶಿಕ್ಷಕಿಯನ್ನು ತನಗರಿವಿಲ್ಲದೆ ಅನುಸರಿಸುತ್ತದೆ.  ಇಲ್ಲಿ ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವ ಪ್ರಕ್ರಿಯೆಗೆ ಹೆಚ್ಚು ಒತ್ತು ಇರುವುದರಿಂದ ಶಿಕ್ಷಕ ಮೈಯೆಲ್ಲ ಕಣ್ಣಾಗಿರಬೇಕಾದ ಅವಶ್ಯಕತೆಯಿದೆ.  ಯಾವ ೩_೪ ವಯಸ್ಸಿನ ಮಕ್ಕಳನ್ನಾದರೂ ದೊಡ್ಡವರಾದ ಮೇಲೆ ಏನಾಗ್ತೀಯಾ ಅಂತ ಕೇಳಿದರೆ ಬರುವ ಉತ್ತರ “ಶಿಕ್ಷಕ” ಎಂದೇ. ಒಂದು ಸ್ಕೇಲ್ ಕೈಯಲ್ಲಿ ಹಿಡಿದು ಅಮ್ಮನ ವೇಲಿನ ಸೆರಗು ಸಿಕ್ಕಿಸಿ ತನ್ನ “ಮಿಸ್” “ಮ್ಯಾಮ್”  “ಆಂಟಿ” ತರಹ  ಫೋಸ್ ಕೊಟ್ಟು ಮನೆಯ ಸದಸ್ಯರಿಗೆ ಪಾಠ ಬೋಧಿಸುವ ಡ್ರಾಮಾ ಪ್ರತಿ ಮನೆಯಲ್ಲಿ ಖಂಡಿತ ಆಗಿರುತ್ತೆ . ಒಬ್ಬ ಡಾಕ್ಟರ್, ವಿಜ್ಞಾನಿ’ ಎಂಜಿನಿಯ,ರ್ ಆಗಬಹುದು.  ಆದರೆ ಅವರನ್ನೆಲ್ಲ ತಯಾರು ಮಾಡುವ ಶಿಕ್ಷಕ ಆಗುವುದು ಕಷ್ಟ.  ಅಲ್ಲೇ ಶಿಕ್ಷಕನ ಹಿರಿಮೆ ಇರುವುದು.

ಅಂಬೇಡ್ಕರ್,  ಎಚ್ ನರಸಿಂಹಯ್ಯ,  ಅಬ್ದುಲ್ ಕಲಾಂ ಮುಂತಾದ ಮಹನೀಯರೆಲ್ಲರೂ ತಮ್ಮ ಶಿಕ್ಷಕರುಗಳನ್ನು ನೆನೆಸಿಕೊಂಡಿದ್ದಾರೆ ಹಾಗೂ ತಮ್ಮ ಜೀವನದಲ್ಲಿ ಅವರು ವಹಿಸಿದ ಪಾತ್ರವನ್ನು ಶ್ಲಾಘಿಸಿದ್ದಾರೆ.  “ಬೋಧನೆಯ ಕಲೆ ಅನ್ವೇಷಣೆಗೆ ಸಹಾಯ ಮಾಡುವ ಕಲೆ ” ಎನ್ನುತ್ತಾರೆ ಮಾರ್ಕ್ ವ್ಯಾನ್ ಡೊರೆನ್.  ಹೀಗೆ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತಂದು ಅಥವಾ ತಮ್ಮಲ್ಲಿ ಆ ಒಂದು ಪ್ರತಿಭೆ ಇದೆ ಎಂಬ ಅರಿವು ಅವರಿಗೆ ಮೂಡಿಸುವಲ್ಲಿ ಶಿಕ್ಷಕರು ತುಂಬಾ ಕಾರಣೀಭೂತರಾಗುತ್ತಾರೆ .  

ಎಲ್ಲಾ ಒಳ್ಳೆಯ ಅಂಶಗಳನ್ನು ಹೇಳಿದ ಮೇಲೆ ಋಣಾತ್ಮಕ ಅಂಶಗಳನ್ನು ಹೇಳದೆ ಇರಲು ಸಾಧ್ಯವಿಲ್ಲ.  ಮೊದಲೇ ಹೇಳಿದಂತೆ ಪ್ರೋತ್ಸಾಹ ಬೆಳೆಯುವ ಸಸಿಗೆ ನೀರಾದರೆ,  ಟೀಕೆ ವ್ಯಂಗ್ಯಗಳು ಆ ಮೊಳಕೆಯನ್ನೇ ಚಿವುಟಿ ಬಿಡುತ್ತವೆ.  “ನಿನಗೇನು ಅರ್ಥವಾಗತ್ತೆ ದಡ್ಡ” ಎಂಬ ಮಾತೇ ತಲೆಯಲ್ಲಿ ನಿಂತು ಶಾಲೆ ಓದು ಇವನ್ನೇ ಬಿಟ್ಟ ಉದಾಹರಣೆಗಳು ಅನೇಕ.  ಈ ನಿಟ್ಟಿನಲ್ಲಿ ತಮ್ಮ ಮಾತುಗಳನ್ನೇ “ಶಂಖದಿಂದ ಬಂದದ್ದೇ ತೀರ್ಥ” ಎಂದು ನಂಬುವ ಮುಗ್ಧ ಮನಸುಗಳ ಒಳಿತಿಗಾದರೂ ಶಿಕ್ಷಕರು ಮತ್ತೆ ಮತ್ತೆ ತಮ್ಮ ನಡೆನುಡಿಗಳ ಬಗ್ಗೆ ತುಂಬಾ ಜಾಗೃತರಾಗಿರಬೇಕು .  “ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯ್ತು” ಎನ್ನುವ ಗಾದೆ ಇವರಿಗೆ ತುಂಬಾ ಅನ್ವಯ”.  ಐನ್ ಸ್ಟೈನ್ ನ ಉದಾಹರಣೆ ತೆಗೆದುಕೊಳ್ಳುವುದಾದರೆ ಅವನಿಗೆ ಕಲಿಸಲಾಗದು ಎಂದು ಶಾಲೆಯಿಂದಲೇ ಕಳಿಸಿದರೂ,  ಆತನ ತಾಯಿಯ ಕಠಿಣ ಪರಿಶ್ರಮ ದೃಢಛಲದಿಂದ ಅವರು ದೊಡ್ಡ ವಿಜ್ಞಾನಿಯಾದರು.  ಆದರೆ ಎಲ್ಲ ಅಮ್ಮಂದಿರು ಐನ್ಸ್ಟೈನ್ನ ಅಮ್ಮನಂತೆ ಇರಕ್ಕಾಗಲ್ಲ ಅಲ್ವಾ ?

ಶಿಕ್ಷಕರು ಮಕ್ಕಳ ಜೀವನದಲ್ಲಿ ವಹಿಸುವ ಅತ್ಯಮೂಲ್ಯ ಪರಿಣಾಮಕಾರಿ ಪಾತ್ರವನ್ನು ಈ ಶ್ಲೋಕ ವಿವರಿಸುತ್ತದೆ.

ಗುರುಃ ಬ್ರಹ್ಮಾ ಗುರಃ ವಿಷ್ಣು ಗುರುಃ ದೇವೋ ಮಹೇಶ್ವರಃ
ಗುರಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ  

ತ್ರಿಮೂರ್ತಿಗಳಂತೆ ಸೃಷ್ಟಿ , ಸ್ಥಿತಿ, ಲಯ ಮಾಡುವ ಶಕ್ತಿ ಹೊಂದಿರುವವರು ಶಿಕ್ಷಕರು.  ಹಾಗಾಗಿ ಅವರಿಗೆ ವಂದನೆ ಎನ್ನುತ್ತದೆ ಶ್ಲೋಕ . ನಿಜ!  ಶಿಕ್ಷಕರು ಸ್ಫೂರ್ತಿ ತುಂಬಿ ಹೊಸದನ್ನು ಸೃಷ್ಟಿಸುತ್ತಾರೆ, ಇರುವ ಪ್ರತಿಭೆ ಬೆಳಗಿಸುತ್ತಾರೆ, ದುರದೃಷ್ಟವಶಾತ್ ಹಾಗೇ ನಾಶವನ್ನು ಮಾಡಬಲ್ಲರು.  ಇದಕ್ಕಿಂತ ಅವರ ಪಾತ್ರದ ಬಗ್ಗೆ ಹೆಚ್ಚಿನ ವಿವರಣೆ ಬೇಕೆ?


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂaಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು

Leave a Reply

Back To Top