ಹನಿಬಿಂದು ಕವಿತೆ ಗೆಳೆಯ ನೋವಿಗೆ

ಕಾವ್ಯ ಸಂಗಾತಿ

ಹನಿಬಿಂದು

ಗೆಳೆಯ ನೋವಿಗೆ

ನೋವೇ ನಾನೇ ನಿನ್ನ ಗೆಳೆಯನಾಗಿರುವಾಗ
ಮತ್ತೆ ಮತ್ತೆ ನನ್ನ ನೀನೇಕೆ ಪರೀಕ್ಷೆಗೊಡ್ಡುವೆ?
ಮನದ ನೋವು ಹೃದಯದ ನೋವು ಎರಡೂ
ದೇಹದ ನೋವಿಗಿಂತ ದೊಡ್ಡದು ಎಂಬ ಮಾತು
ನಾ ನಿನಗೆ ತಿಳಿಸಿ ಹೇಳಬೇಕಾದ ಅವಶ್ಯಕತೆ ಇದೆಯೇ?

ನೋವೇ ನನ್ನೊಂದಿಗೆ ನೀ ಸದಾ ಇದ್ದರೂ
ಇನ್ನೂ ನೀನೇಕೆ ನನ್ನ ಅರ್ಥ ಮಾಡಿಕೊಂಡಿಲ್ಲ?
ನನ್ನ ನೋವುಗಳಲಿ ಜೊತೆ ಆದ ನಿನಗೆ ತಿಳಿದಿಲ್ಲವೆ
ನಗು ಎಂದಿಗೂ ನನ್ನ ಬಳಿ ಇಲ್ಲ ಎಂದು!

ನಿನ್ನ ಜೊತೆಗಾರನಾಗಿ ಮಾಡಿಕೊಂಡ ನಾನು
ಬದುಕಿ ಬಾಳುತ್ತಿರುವುದು ನಿನ್ನೊಂದಿಗೆ ಎಂದ ಮೇಲೆ
ಮತ್ತೆ ನನ್ನ ಪರೀಕ್ಷೆ ಮಾಡುವುದರಲ್ಲಿ ಅದೇನಿದೆ ಹೊಸತು?
ಅದೇಕೆ ನಿನಗೆ ಆ ಹುಚ್ಚು ಸೊಗಸು?

ನನ್ನ ಪರೀಕ್ಷಿಸಿ ಇನ್ನೂ ನೋವು ಕೊಡುತ್ತಾ
ಅದಾವ ಆಟ ಆಡಲಿರುವೆ ಬಾಳಲಿ?
ನೋವುಂಡ ದೇಹಕೆ ನೋವನುಣಿಸಿ
ಅದಾವ ಪರಿಯ ಸಂತಸ ಕಾಣುವೆ?

ನೋವೇ , ನೋವುಂಡ ಮನಕೆ
ಮತ್ತೆ ಮತ್ತೆ ನೋವು ಕೊಡದಿರು
ಒಂಟಿಯಾದ ತನುವಿಗೆ ಇನ್ನೂ
ಒಂಟಿತನದ ಬಣ್ಣ ಹಚ್ಚದಿರು

ಯಾರಿರದೆ ಇದ್ದರೇನು ಬದುಕಲಿ
ದೇವನಿಹನಲ್ಲ ಒಳಿತು ಕೆಡುಕುಗಳ ಅರಿತು
ಸರಿಯಾಗಿ ಕೂಡಿ ಕಳೆದು ಲೆಕ್ಕ ಹಾಕಲು!
ನೋವಿನ ಕಾಗದವೇ ಆದ ಬದುಕಲ್ಲಿ
ನಗುವಿನ ಅಕ್ಷರಗಳ ಎಲ್ಲಿ ಹುಡುಕಲಿ?

ನೋವಿನ ಅಂಗಳದಿ ನಲಿವಿನ ಹೂವು
ಅದು ಯಾವಾಗ ಅರಳಬಹುದು ಜಗದಲಿ
ನೋವ ಅರೆದು ಕುಡಿದ ಉದರದಲಿ
ನಗೆಯ ಪರಿಮಳ ಸೂಸಬಹುದೆ!

ನೋವಿನ ಆಗಸದ ಹುಣ್ಣಿಮೆಯ ದಿನ
ನಗುವಿನ ಚಂದಿರ ಉದಯಿಸುವನೇ?
ನೋವೆಂಬ ಗಿಡದ ಕಾಯಿ ನಗುವಾದೀತೆ!
ನೋವೆಂಬ ಕತ್ತಲ ಸರಿಸಿ ನಗು ಎನುವ
ಬಿರುಸಾದ ಬೆಳಕು ಬರುವ ಕನಸು ಕಾಣಬಹುದೇ?

ಮುಳ್ಳನ್ನು ಮುಳ್ಳಿನಿಂದಲೆ ತೆಗೆವಂತೆ
ನೋವನ್ನು ನೋವಿಂದ ತೆಗೆಯಲು ಸಾಧ್ಯವೇ!
ನೋವಿನಲ್ಲೇ ಜನನ ನೋವಿನಲ್ಲೇ ಮರಣ
ನೋವಿನಲ್ಲೇ ಬದುಕು ನೋವಿನಲ್ಲೇ ಬಿರುಕು

ನೋವು ಕೊಟ್ಟವ ನೋವ ತಂದವ
ನೋವು ಬಂದಾಗ ಸ್ಪಂದಿಸದವ
ನೋವ ನೋಡಿಯೂ ನೋಡದಂತಿರುವವ
ಇದ್ದರೂ ಇಲ್ಲದಿದ್ದರೂ ನೋವೇ ಅಲ್ಲವೇ!

ನೋವಿನ ಹನಿ ಬಿಂದುವಿನಲಿ ನಗೆಯ ಕಿರಣ
ಉಕ್ಕಿ ತೂರಿ ಬಂದರೂ ನೋವಿನ
ಹನಿ ಆವಿಯಾಗುವ ಲಕ್ಷಣ ಬಾರದು
ನೋವೇ ನಲಿವಾಗಿರುವಾಗ ಆಸೆ ಇರದು!

————————–

ಹನಿಬಿಂದು

Leave a Reply

Back To Top