ಇಂದಿರಾ ಮೋಟೆಬೆನ್ನೂರ ಸ್ನೇಹದ ಪರಿ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಸ್ನೇಹದ ಪರಿ

ಚಣ ಕಾಲ ಮೂಡಿ
ಮರೆಯಾದ ಮಳೆಬಿಲ್ಲ
ಎಳೆ ಬಣ್ಣ ತೆರದಿ..
ನಿನ್ನ ದರುಶನ…
ನಿನ್ನೊಲವ ಚೆಲುವ ಸ್ನೇಹ…

ಮೋಡದ ಮರೆಯ
ತಾರೆಗಳ ಕಂಗಳಲಿ
ಚಂದಿರ ಬೆಳದಿಂಗಳಲಿ
ಕಣ್ಣಾ ಮುಚ್ಚಾಲೆಯಂತೆ
ನಿನ್ನೊಲವ ಚೆಲುವ ಸ್ನೇಹ..

ಮತ್ತದೇ ಬೇಸರ
ಮತ್ತದೇ ದೂರ
ಪದೇ ಪದೇ ನಿರಾದರ
ಮತ್ತೆ ಮರುಕಳಿಸಿದ ನೋವಂತೆ
ನಿನ್ನೊಲವ ಚೆಲುವ ಸ್ನೇಹ…

ರಾತ್ರಿಯ ನೀರವತೆಯ
ತೇರಿನಲಿ ತೇಲಿ ಬಂದ
ಮಿನುಗು ಮಿಂಚುಳ್ಳಿ
ಬೆಳಕು ಮಾಯವಾದಂತೆ
ನಿನ್ನೊಲವ ಚೆಲುವ ಸ್ನೇಹ…

ಕಡು ಕತ್ತಲ ಹೊಳೆಯ
ಈಜಿ ಬಂದ ನಕ್ಷತ್ರದಂತೆ
ಇರುಳ ಕೊರಳಲಿ ಜೋತುಬಿದ್ದ
ಚಂದ್ರಮನ ಪ್ರೀತಿಯಂತೆ
ನಿನ್ನೊಲವ ಚೆಲುವ ಸ್ನೇಹ…

ತುಂಬಿ ಮೈದುಂಬಿ ದುಂಬಿ
ಮುತ್ತಿಟ್ಟು ಮರೆಯಾದಂತೆ..
ತೊರೆದು ಮರೆಯಾದ
ಇಬ್ಬನಿಯ ಸಿಹಿ ಬಿಂದುವಂತೆ..
ನಿನ್ನೊಲವ ಚೆಲುವ ಸ್ನೇಹ…

ಪ್ರತಿ ಕ್ಷಣ ಪ್ರತಿ ಘಳಿಗೆ
ಎಲ್ಲೆಡೆ…ಕಣ್ಣಾ ಮುಚ್ಚಾಲೆ
ಆಟದ ಪರಿಣಿತ ಆಟಗಾರ
ಮೋಡಿಗಾರ ಕನಸುಗಾರ…
ನಿನ್ನೊಲವ ಚೆಲುವ ಸ್ನೇಹ…

ಸುರಿವ ಮಳೆ ಹನಿಯ
ತೂರಿ ಬಂದ ರವಿ ಕಿರಣದಂತೆ…
ಬಿರಿವ ಮೊಗ್ಗೆ ಒಡಲ ಮಧು
ಮಕರಂದ ಹರಣದಂತೆ..
ನಿನ್ನೊಲವ ಚೆಲುವ ಸ್ನೇಹ…

ಇರುಳ ಕೈ ಬೆರಳ ಹಿಡಿದು
ನಡೆವ ಶಶಿ ಕಿರಣದಂತೆ….
ಸುರಿವ ಜಡೆ ಮಾಲೆ
ಹನಿಗವನ ವರುಣನಂತೆ..
ನಿನ್ನೊಲವ ಚೆಲುವ ಸ್ನೇಹ…


ಇಂದಿರಾ ಮೋಟೆಬೆನ್ನೂರ.

7 thoughts on “ಇಂದಿರಾ ಮೋಟೆಬೆನ್ನೂರ ಸ್ನೇಹದ ಪರಿ

  1. ಮೀನಾಕ್ಷಿ ಮೇಡಂ …ತಮ್ಮ ಸ್ಪಂದನೆಗೆ ಆತ್ಮೀಯ ಧನ್ಯವಾದಗಳು…

  2. *ಶಬ್ದಗಳಿಂದ ಅಲಂಕರಿಸಿರುವಿರಿ ಸ್ನೇಹವನ್ನು*
    ತಮ್ಮ ಈ ಸ್ಪಂದನೆಗೆ ಧನ್ಯವಾದಗಳು…
    (ತಮ್ಮ ಹೆಸರು ಇಲ್ಲ)

Leave a Reply

Back To Top