ಅಂಕಣ ಬರಹ

ವತ್ಸಲಾ ಶ್ರೀಶ

ನಾವುಮರೆತ ಮಹಿಳಾ

ಸ್ವಾತಂತ್ರ್ಯ ಹೋರಾಟಗಾರರು

ಸ್ವಾತಂತ್ರ್ಯಕ್ಕಾಗಿ ಬೆಂಕಿಯಾದ ವೀರ ನಾರಿ ಕುಯಿಲಿ

ಮೊದಲ ಆತ್ಮಾಹುತಿ ಬಾಂಬ್

ವೇಲು‌ನಾಚಿಯಾರ್ ಎಂಬ ರಾಣಿಯ ಹೆಸರು ಕೇಳಿದ ಕೂಡಲೇ ನೆನಪಾಗುವ ಇನ್ನೊಂದು ಹೆಸರು ಕುಯಿಲಿ.
ಕುಯಿಲಿ ಎಂಬ ವೀರ ಮಹಿಳೆ ಶಿವಗಂಗೆಯ ಸಮೀಪದ ಕೂಡನ್ ಚಾವಡಿ ಎಂಬಲ್ಲಿ ಅರುಂಧತಿ ಪಂಗಡದಲ್ಲಿ ಹುಟ್ಟಿದಳು. ಅದು ಒಂದು ದಲಿತ ಕುಟುಂಬವಾಗಿತ್ತು. ಅವಳ ತಂದೆ ಪೆರಿಯ ಮುತ್ತನ್ ತಾಯಿ ರಾಕು. ಕುಯಿಲಿಯ ತಾಯಿ ರಾಕು ಎಷ್ಟು ಶೌರ್ಯವಂತೆ ಎಂದರೆ ಒಮ್ಮೆ
ಕಾಡು ಕೋಣಗಳ ಜೊತೆ ಹೋರಾಡಿ ಮಡಿದ ವೀರ ಮಹಿಳೆಯಾಗಿದ್ದಳು. ಈಗಿನ ಜಲ್ಲಿಕಟ್ಟುವಿನಲ್ಲಿ ಎತ್ತುಗಳನ್ನು ಪಳಗಿಸುವ ಕೆಲಸಗಳನ್ನು ಕೂಡಾ ಅವಳು ಮಾಡುತ್ತಿದ್ದಳು.ವೀರ ತಂದೆಗೆ ವೀರ ತಾಯಿಗೆ ಹುಟ್ಟಿದಂತಹ ವೀರಮಗಳು ಈ ಕುಯಿಲಿ. ಕುಯಿಲಿ ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ತಂದೆ ಪೆರಿಯ ಮುತ್ತನ್ ನ ಆರೈಕೆಯಲ್ಲಿ ಮಗಳು ಬೆಳೆಯುತ್ತಾಳೆ.. ಅವನು ಕುಯಿಲಿ ಗೆ ಅವಳ ತಾಯಿಯ ವೀರ ಕಥೆಗಳನ್ನು ಹೇಳುತ್ತಾ ಬೆಳೆಸುತ್ತಾನೆ.. ಅದನ್ನು ಕೇಳುತ್ತಾ ಬೆಳೆದ ಕುಯಿಲಿಯಲ್ಲಿ ವೀರತ್ವ ತುಂಬಿಕೊಳ್ಳುತ್ತದೆ.
ಪೆರಿಯ ಮುತ್ತನ್ ತನ್ನ ಮಗಳೊಂದಿಗೆ ಶಿವಗಂಗೆಗೆ ವಲಸೆ ಬರುತ್ತಾನೆ. ಹಾಗೂ ಅಲ್ಲಿ ರಾಜನ ಆಶ್ರಯ ಪಡೆದು ಅಲ್ಲಿ ಗೂಢಚರ್ಯೆ ಕೆಲಸ ಮಾಡುತ್ತಾನೆ. ಅಲ್ಲಿ ಕತ್ತಿವರಸೆ ಬಿಲ್ವಿದ್ಯೆ, ಕುದುರೆ ಸವಾರಿ ಇವುಗಳೆಲ್ಲದರ ನಡುವೆ ಬೆಳೆದ ಕುಯಿಲಿ ನೋಡು ನೋಡುತ್ತಲೇ ಅವುಗಳನ್ನು ಕಲಿತಳು. ಇದರ ನಡುವೆ ಆರ್ಕಾಟಿನ ನವಾಬ ಹಾಗೂ ಬ್ರಿಟಿಷರು ಸೇರಿ ಶಿವಗಂಗೆಯ ರಾಜನನ್ನು ಕೊಲೆ ಮಾಡುತ್ತಾರೆ. ರಾಣಿ  ವೇಲು ನಾಚಿಯಾರ್ ಹಾಗೂ ಅವಳ ಮಗಳು ವೆಲಚಿ ಬ್ರಿಟಿಷರಿಂದ ತಪ್ಪಿಸಿಕೊಂಡು ಭೂಗತರಾಗುತ್ತಾರೆ. ಆಗ ಕುಯಿಲಿ ಶಿವಗಂಗೆಯ ರಾಣಿಯಾದ ವೇಲು ನಾಚಿಯಾರ್ ನ ಸಂಪರ್ಕಕ್ಕೆ ಬರುತ್ತಾಳೆ. ಅಲ್ಲಿ ಅವಳು ಸೈನ್ಯದ ತರಬೇತಿಯನ್ನು ಪಡೆಯುತ್ತಿರುತ್ತಾಳೆ.  ರಾಣಿ ವೇಲು ನಾಚಿಯಾರ್ ಭೂಗತಗಳಾಗಿಯೇ ಅತಿ ದೊಡ್ಡ ಸೈನ್ಯವನ್ನು ಕಟ್ಟಿರುತ್ತಾಳೆ.  ಅದೊಂದು ದಿನ ಕುಯಿಲಿಗೆ ತನಗೆ ಸಮರ ಕಲೆಗಳಲ್ಲೊಂದಾದ ಸಿಲಂಬಂ ನ್ನು  ಕಲಿಸುತ್ತಿದ್ದ ಗುರು ಆರ್ಕಾಟಿನ ನವಾಬ ಹಾಗೂ ಇಂಗ್ಲಿಷರ ಜೊತೆ ಸೇರಿ ವೇಲು ನಾಚಿಯಾರ್ ನ  ಮೇಲೆ ಒಳ ಸಂಚನ್ನು ರೂಪಿಸುತ್ತಿರುವುದು  ತಿಳಿಯುತ್ತದೆ.ಕುಯಿಲಿಗೂ  ತಮ್ಮ ಸಂಚಿಗೆ ಸಹಕರಿಸಬೇಕೆಂದು  ಕೇಳಿಕೊಳ್ಳುತ್ತಾರೆ.ರಾಜದ್ರೋಹಿಯಾದ ತನ್ನ ಗುರುವನ್ನೇ ಕೊಂದು ಹಾಕಿ ಸ್ವಾಮಿ ನಿಷ್ಠೆ ತೋರಿದ ವೀರ ಮಹಿಳೆ ಕುಯಿಲಿ. ಇನ್ನೊಂದು ಮೂಲಗಳ ಪ್ರಕಾರ ವೇಲು ನಾಚಿಯಾರ್ ಮಲಗಿರುವ ವೇಳೆ ಅವಳ ಮೇಲೆ ದಾಳಿ ನಡೆಯುತ್ತದೆ. ಅಲ್ಲೇ ಇದ್ದ ಕುಯಿಲಿ ಆ ದಾಳಿಯನ್ನು ತಡೆದು ರಾಣಿಯನ್ನು ರಕ್ಷಿಸುತ್ತಾಳೆ. ಆಗ ಕುಯಿಲಿ ತೀವ್ರವಾಗಿ ಗಾಯಗೊಳ್ಳುತ್ತಾಳೆ, ಎಚ್ಚೆತ್ತ ರಾಣಿ ತನ್ನ ಸೀರೆಯ ಭಾಗವನ್ನು ಹರಿದು ಅವಳ ಗಾಯಗಳಿಗೆ ಕಟ್ಟುತ್ತಾಳೆ.ನಂತರ  ಕುಯಿಲಿ ಹಾಗೂ ವೇಲು ನಾಚಿಯಾರ್ ನ  ಬಾಂಧವ್ಯ ರಾಣಿ ಹಾಗೂ ಸೈನಿಕಳಿಗಿಂತಲೂ ಆತ್ಮೀಯವಾಗಿತ್ತು  ಎನ್ನಲಾಗುತ್ತದೆ.. ಅಂದು ಅವಳ ಶೌರ್ಯವನ್ನು ಕಣ್ಣಾರೆ ಕಂಡ ರಾಣಿ ವೇಲು ನಾಚಿಯಾರ್ 3000 ಜನ ಮಹಿಳಾ ಸೈನಿಕರಿರುವ ಸೈನ್ಯಕ್ಕೆ ಕುಯಿಲಿಯನ್ನು ಕಮಾಂಡರ್ ಆಗಿ ನೇಮಕ ಮಾಡುತ್ತಾಳೆ. ಇದು 1770 – 1780ರ ನಡುವಿನ ಕಾಲದ ಮಾತು. ಅಲ್ಲದೆ ಇಲ್ಲಿ ನಾವು ಗಮನಿಸಬೇಕಾದಂತಹ ಇನ್ನೊಂದು ವಿಷಯವೆಂದರೆ ಅಂದಿನ ಕಾಲದಲ್ಲಿ ದಲಿತರು ಅಥವಾ ಹೆಣ್ಣು ಮಕ್ಕಳು ಎಂಬ ಭೇದಭಾವ ಇರಲಿಲ್ಲ. ಅಲ್ಲಿ ಅವರ ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ಮಾತ್ರ ಬೆಲೆಯಿತ್ತು. ಮೇಲು ಕೀಳೆನ್ನದೆ ಅವರ ಸಾಮರ್ಥ್ಯಕ್ಕನುಗುಣವಾಗಿ ಅವರಿಗೆ ಅಧಿಕಾರಗಳನ್ನು ನೀಡುತ್ತಿದ್ದರು.


           ಬ್ರಿಟಿಷರಲ್ಲಿರುವ ಶಸ್ತ್ರಾಸ್ತ್ರಗಳು ನಾಶವಾಗದ ಹೊರತು ಅವರನ್ನು ಗೆಲ್ಲಲು ಸಾಧ್ಯವಿಲ್ಲವೆಂದು ವೇಲು ನಾಚಿಯಾರ್ ಹಾಗೂ ಕುಯಿಲಿ ಯೋಚಿಸುತ್ತಾರೆ. ಕುಯಿಲಿ ಒಂದು ಉಪಾಯವನ್ನು ಹೇಳುತ್ತಾಳೆ. ರಾಣಿ ವೇಲು ನಾಚಿಯಾರ್ ಅವಳ ಯೋಜನೆಯನ್ನು ಕೇಳಿ ದಂಗಾಗಿ ಹೋಗುತ್ತಾಳೆ. ಅಲ್ಲದೆ ರಾಣಿ ಅಂತಹ ಭೀಕರ ಉಪಾಯಕ್ಕೆ ಒಪ್ಪುವುದಿಲ್ಲ.. ಆದರೂ ಕುಯಿಲಿಯ ರಾಜ್ಯ ನಿಷ್ಠೆ ಹಾಗೂ ಹಠಕ್ಕೆ ಮಣಿದ ರಾಣಿ ಕೊನೆಗೂ ಒಪ್ಪಿಗೆ ನೀಡುತ್ತಾಳೆ..ಆ ತಂತ್ರವನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಯೋಚಿಸುತ್ತಾರೆ . ಬ್ರಿಟಿಷರು ದೇವಾಲಯದ ಗುಪ್ತ ಜಾಗದಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿ ಇಟ್ಟಿರುವುದು ಅವರಿಗೆ ತಿಳಿಯುತ್ತದೆ.ವಿಜಯದಶಮಿಯ ದಿನ ರಾಜರಾಜೇಶ್ವರಿ ದೇವಾಲಯಕ್ಕೆ ಪೂಜೆ ಮಾಡಲು ಹೆಣ್ಣು ಮಕ್ಕಳಿಗೆ ಪ್ರವೇಶವಿರುತ್ತದೆ…ಕುಯಿಲಿ ಕಾಳಿಕಾ ದೇವಿಯ ಪರಮ ಭಕ್ತೆಯಾಗಿದ್ದಳು. ಹಿಂದಿನ ಕಾಲದಲ್ಲಿ ದಲಿತರಿಗೆ ಹೆಣ್ಣು ಮಕ್ಕಳಿಗೆ ದೇವಾಲಯದ ಒಳಗೆ ಪ್ರವೇಶವಿರಲಿಲ್ಲ ಎಂದುಕೊಳ್ಳುತ್ತೇವೆ.ಇತಿಹಾಸಗಳ ಪುಟಗಳನ್ನು ತೆರೆದಾಗ ಸ್ತ್ರೀ ಯರ ಸ್ಥಾನ ಮಾನಗಳ ವೈಭವವನ್ನು ನಾವು ಕಾಣಬಹುದಾಗಿದೆ..ಇಲ್ಲಿಯೂ ಹಾಗೆ.. ದಲಿತರು,‌ ಅಥವಾ ಹೆಣ್ಣು ಮಕ್ಕಳು ಎಂಬ ಭೇದ ಭಾವ ಇಲ್ಲದೆ ಎಲ್ಲರಿಗೂ ದೇವಾಲಯದೊಳಗೆ ಪ್ರವೇಶವಿತ್ತು.. 1780 ನೇ ಇಸವಿ ವಿಜಯದಶಮಿಯ ದಿನ ಎಲ್ಲರಂತೆ ಕುಯಿಲಿಯೂ ಕೂಡ ದೇವರ ಅಭಿಷೇಕಕ್ಕೆ ತುಪ್ಪವನ್ನು ತೆಗೆದುಕೊಂಡು ಹೋಗುತ್ತಾಳೆ. ಅದಾಗಲೇ ತನ್ನ ಸಹಾಯಕರಿಂದ ಬ್ರಿಟಿಷರು ಶಸ್ತ್ರಾಸ್ತ್ರಗಳನ್ನು ಎಲ್ಲಿ ಬಚ್ಚಿಟ್ಟಿರುವರು ಎಂಬ ಬಗ್ಗೆ ಮಾಹಿತಿ ಪಡೆದಿರುತ್ತಾಳೆ. ದೇವಾಲಯದ ಒಂದು ಜಾಗದಲ್ಲಿ 20 ಅಡಿ ಆಳದಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುತ್ತಾರೆ.ಸಮಯ ನೋಡಿ ಕುಯಿಲಿ ತನ್ನ ಸಂಗಡಿಗರೊಂದಿಗೆ ದೇವಾಲಯದಲ್ಲಿ ಶಸ್ತ್ರಾಸ್ತ್ರ ಗಳಿರುವ ಜಾಗಕ್ಕೆ ಹೋಗುತ್ತಾಳೆ …ಕುಯಿಲಿ ತನ್ನ ಸಂಗಡಿಗರಿಗೆ ಅವರು ತಂದಿದ್ದ ತುಪ್ಪವನ್ನು ತನ್ನ ಮೇಲೆ ಸುರಿಯುವಂತೆ ಹೇಳುತ್ತಾಳೆ. ಎಲ್ಲರೂ ಅವಳ ಮೇಲೆ ತುಪ್ಪವನ್ನು ಸುರಿಯುತ್ತಾರೆ. ಆ ಅಭಿಷೇಕ ಕೊನೆಯ ಅಭಿಷೇಕದಂತೆ ಕಂಡು ಬರುತ್ತಿತ್ತು. ತುಪ್ಪದಿಂದ ತೊಯ್ದ ಕುಯಿಲಿ  ತನ್ನ ಮೈಗೆ ಬೆಂಕಿ ಹಚ್ಚಿಕೊಳ್ಳುತ್ತಾಳೆ..ಧಗಧಗನೆ  ಉರಿಯುತ್ತಿದ್ದ ಕುಯಿಲಿ 20-30 ಅಡಿ  ಆಳದಲ್ಲಿ ಶಸ್ತ್ರಾಸ್ತ್ರ ಗಳಿರುವ  ಜಾಗಕ್ಕೆ ಜಿಗಿಯುತ್ತಾಳೆ. ಬ್ರಿಟಿಷರು ಇಟ್ಟಿದ್ದ ಶಸ್ತ್ರಾಸ್ತ್ರ ಮದ್ದು ಗುಂಡುಗಳು ಒಮ್ಮೆಲೇ ಉರಿದು ಭಸ್ಮವಾಗುತ್ತದೆ.. ಆ ದೃಶ್ಯ ಸಾಕ್ಷಾತ್ ಕಾಳಿಮಾತೆಯೇ ಎದ್ದು ಬಂದು ದುಷ್ಟರನ್ನು ಸಂಹರಿಸುವ ರೀತಿಯಲ್ಲಿತ್ತು ಎನ್ನಲಾಗುತ್ತದೆ. ಆ ಕ್ಷಣದಲ್ಲಿ ಯಾರೂ ಅವಳನ್ನು ತಡೆಯಲು ಸಾಧ್ಯವಾಗಲಿಲ್ಲ.. ಇದನ್ನು ದೇಶದ ಪ್ರಥಮ ಆತ್ಮಾಹುತಿ ಬಾಂಬ್ ದಾಳಿ ಎಂದು ಕರೆಯಲಾಗಿದೆ.    ಅದೇ ಸಮಯವನ್ನು ಕಾಯುತ್ತಿದ್ದ ವೇಲು ನಾಚಿಯಾರ್ ಹಾಗೂ ಹೈದರಾಲಿಯ ಸೈನ್ಯ ಶಿವಗಂಗೆಯನ್ನು ವಶಪಡಿಸಿಕೊಳ್ಳುತ್ತದೆ. ಶಿವಗಂಗೆ ಸ್ವತಂತ್ರವಾಗುತ್ತದೆ.ಹೀಗೆ ಕುಯಿಲಿ ಹಿಂದೆ ರಾಣಿಯ ಜೀವವನ್ನೂ  ಈಗ ಅವಳ ರಾಜ್ಯವನ್ನೂ ರಕ್ಷಿಸಿ ಸ್ವಾಮಿ ನಿಷ್ಠೆಗೆ ಹೆಸರಾದಳು.ತನ್ನ ಮಣ್ಣಿಗಾಗಿ ಜೀವಕೊಟ್ಟ ವೀರ ಮಹಿಳೆ ಕುಯಿಲಿ ಬ್ರಿಟಿಷರ ವಿರುದ್ಧ ಹೋರಾಡಿದವರ ಪಟ್ಟಿಯಲ್ಲಿ ಅದೃಶ್ಯಳಾಗಿದ್ದಾಳೆ..ಸ್ವಾತಂತ್ರ್ಯ ಹೋರಾಟಕ್ಕಾಗಿ ನಡೆದ ಹಲವಾರು ಬಲಿದಾನಗಳು ಯಾರ ಅರಿವಿಗೂ ಸಿಗದೆ ಭಾರತದ ಮಣ್ಣಿನಲ್ಲಿ ಸದ್ದಿಲ್ಲದೆ ಮಲಗಿದೆ…

(ಆಧಾರ: ಟಿವಿ ಚಾನಲ್ಸ್ ,ಅಂತರ್ಜಾಲ)


ವತ್ಸಲಾ ಶ್ರೀಶ

ಶ್ರೀಮತಿ ವತ್ಸಲಾ ಶ್ರೀಶ ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲಾಜೆ ಎಂಬಲ್ಲಿ ಶ್ರೀಮತಿ ರತ್ನ ಹಾಗೂ ಶ್ರೀ ಎ. ನಾರಾಯಣ ರಾವ್ ಇವರ ಸುಪುತ್ರಿಯಾಗಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೇರಳದ ಗಡಿಭಾಗವಾದ ತಲಪಾಡಿಯ ಮರಿಯಾಶ್ರಮ ಶಾಲೆಯಲ್ಲಿ ಪಡೆದುಕೊಂಡರು.ನಂತರ ಪ್ರೌಢಶಾಲಾ ಶಿಕ್ಷಣವನ್ನು ಸುಳ್ಯ ತಾಲೂಕಿನ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಪಡೆದುಕೊಂಡು ಪದವಿಪೂರ್ವ ಶಿಕ್ಷಣವನ್ನು ಬೆಳ್ಳಾರೆಯಲ್ಲಿ ಮುಗಿಸಿದರು. ವಿರಾಜಪೇಟೆಯ ಸರ್ವೋದಯ ಶಿಕ್ಷಕರ ಶಿಕ್ಷಣ ತರಬೇತಿಯನ್ನು ಪಡೆದು ಈಗ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕೊಡಗಿನ ಶ್ರೀಶಕುಮಾರ್ ಅವರನ್ನು ವಿವಾಹವಾದ ನಂತರ ವಿರಾಜಪೇಟೆಯ ಕಡಂಗ ಮರೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ವತ್ಸಲಾ ಶ್ರೀಶರವರು ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಂಗದಲ್ಲಿ ಶಿಕ್ಷಕಿಯಾಗಿ‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಸರಕಾರಿ ಸೇವೆಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಣ್ಣ ಕತೆ ,ಕವನ, ಲೇಖನ, ಷಟ್ಪದಿಗಳು,ಇತರ ಛಂದೋಬದ್ಧ ರಚನೆಗಳು, ವಿಮರ್ಶೆ,ಹಾಯ್ಕು,ಗಝಲ್ ಮುಂತಾದವುಗಳನ್ನು ರಚಿಸುತ್ತಾರೆ. ಜಿಲ್ಲಾ ಮಟ್ಟದ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿರುತ್ತಾರೆ,೨೦೨೩ ರ ಬನವಾಸಿಯ ಕದಂಬೋತ್ಸವ ಸೇರಿ ಹೊರಜಿಲ್ಲೆಗಳ ಹಾಗೂ ಜಿಲ್ಲೆಯ ಕವಿಗೋಷ್ಟಿಗಳಲ್ಲಿ ಭಾಗವಹಿಸಿರುತ್ತಾರೆ.ಇವರು ಮಡಿಕೇರಿ ಆಕಾಶವಾಣಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿರುತ್ತಾರೆ. ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿದೆ.೨೦೨೧ ರಲ್ಲಿ ಇವರ ಕವನ ಸಂಕಲನ ಭ್ರಾಜಿತ – “ಬೆಳಕಿನಕಡೆಗೊಂದು ಪಯಣ” ಬಿಡುಗಡೆಯಾಗಿದ್ದು ಜನಮನ್ನಣೆ ಪಡೆದಿದೆ. ಸಾಹಿತ್ಯಕ್ಕೆ ಸಂಬಂಧಿಸಿದ ವಾಟ್ಸಾಪ್ ಗುಂಪುಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿ ಹಲವಾರು ಎಲೆಮರೆಯ ಕಾಯಿಯಂತೆ ಇದ್ದ ಪ್ರತಿಭೆಗಳು ಬೆಳಕಿಗೆ ಬರಲು ಕಾರಣರಾಗಿದ್ದಾರೆ. ಕೊಡಗಿನ ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿ ಸಂಸ್ಥೆಯು ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಗೌರವಿಸಿದೆ.ಇವರು ಬರೆಯುವ ನ್ಯಾನೋ ಕತೆಗಳು ಜನಪ್ರಿಯತೆ ಗಳಿಸಿವೆ.ವತ್ಸಲಾ ಶ್ರೀಶ ಇವರು ‘ವಿಶ್ರುತಾತ್ಮ’ ಅಂಕಿತನಾಮದೊಂದಿಗೆ ಮುಕ್ತಕಗಳನ್ನು ಹಾಗೂ ‘ತಪಸ್ಯಾ’ ಕಾವ್ಯನಾಮದೊಂದಿಗೆ ಗಝಲ್ ಗಳನ್ನು ರಚಿಸುತ್ತಾರೆ. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ ವತಿಯಿಂದ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಗಜ಼ಲ್ ಕೃತಿಯು ಕೊಡಗಿನ‌ ಮೊದಲ‌ ಗಜ಼ಲ್ ಕೃತಿಯಾಗಿ ಹೊರಬಂದಿದೆ.

Leave a Reply

Back To Top