ಕಾವ್ಯ ಸಂಗಾತಿ.
ವೈ ಎಂ.ಯಾಕೊಳ್ಳಿ
ಅನಂತದ ಕಾಂತಿಯ ಬೆಳಕು.
ಅಪ್ಪ ಬಿತ್ತಿದ ಹೊಲದ
ತುಂಬೆಲ್ಲಬೆವರ ಹನಿ
ಫಸಲುಸಾಲು
ಒಕ್ಕಿಕೊಟ್ಟ ಕಾಳು
ಎದೆಯ ಹಗೆವು ತುಂಬಿ
ಜತನದಿಂದ ಕಾಯ್ದಿದ್ದೇನೆ
ಜನುಮದುದ್ದ
ಯಾವುದೋ ವಿಶ್ವವಿದ್ಯಾಲಯದ
ಪಠ್ಯ ಕ್ಕೂ ಕಡಿಮೆಯಿಲ್ಲದ ಪಾಠ
ಯಾವುದೇ ಪದಕೋಶ
ದಲಿ ಅರ್ಥ ಸಿಗದ
ಕವಡಕಂಟಿಕೆ
ಕೊರಳ ಕಂಠಿಕೆ ಹಾರ.
ಹತ್ತು ತಲೆಮಾರ
ಅನುಭವ
ಯಾವುದೆ ಶಾಲೆ ಕಟ್ಟೆ
ಹತ್ತದ
ಅಪ್ಪನ ತಿಜೋರಿಯಲಿ..
ಕಲಿಸಿದ್ದು
ಮನುಷ್ಯನಾಗು ಮಗಾ
ಎಂಬುದಷ್ಟೇ
ಥಳಕು ಬಳುಕಿನ
ವ್ಯಾಪಾರ ಕಂಡರಾಗದ
ನೇರ ವ್ಯವಹಾರಿ
ಗಳಿಸಿದ್ದಕ್ಕಿಂತ
ಹಣ ಕಳೆದದ್ದೇ ಹೆಚ್ಚು.
ಗಳಿಸಿದ್ದು ಮೌಲ್ಯ
ಕಟ್ಟದ ನೇಹದ ಸಂಪತ್ತು
ನಡೆದ ಮಾರ್ಗಕ್ಕೆ
ಯಾವ ದೈವವೂ
ಅಲ್ಕವೆನ್ನದ ಪಥ
ನೇರ ಋಜು
ಹದಗೊಂಡ ಹಾದಿ
ಬರಹ ಬಾರದ ಅಪ್ಪ.
ನೂರು ಹೊತ್ತಗೆ ಬರೆದರೂ
ಬರೆದು ಮುಗಿಸದ
ಸಾದಾ ಸೀದಾ ಮನುಷ್ಯ
ಎದ್ದು ಹೋದದ್ದೂ
ಹಾಗೆಯೆ
ಹೇಳಲಿಲ್ಲ ,ಕೇಳಲಿಲ್ಲ
ಕಟ್ಟಿಕೊಂಡವಳ
ಕೈ ತಗೆದು
ಮಕ್ಕಳ ಕೈಲಿಟ್ಟ
ಬಾರದ ದಾರಿಗೆ ನಡೆದೆ
ಬಿಟ್ಟ
ಅವನ ಆ ಸ್ಪರ್ಶದ
ಹಿತವ ,ಅದರೊಳಗಿನ
ಅರ್ಥವ
ಹುಡುಕುತ್ತಲೇ ಇದ್ದೇನೆ.
ಸಿಗದೆ ಕೈ ಜಾರುತ್ತಲೇ ಇದೆ.
————————————————–
ವೈ ಎಂ.ಯಾಕೊಳ್ಳಿ
ಯಾಕೊಳ್ಳಿ ಸರ್ ಬಹಳ ಚೆನ್ನಾಗಿ ಬರೆದಿದ್ದೀರಿ ತುಂಬಾ ಇಷ್ಟ ಆಯ್ತು..
ಅದ್ಭುತ ಸಾರ್ ನಮನಗಳು