ಅಂಕಣ ಸಂಗಾತಿ
ನನ್ನಿಷ್ಟದ ಪುಸ್ತಕ….
ಸುಧಾ ಪಾಟೀಲ
ಪುಸ್ತಕದ ಹೆಸರು…ಕನಸುಗಳೇ ಹೀಗೆ
ಕವಿಗಳು…ಡಾ || ಶಶಿಕಾಂತ ಪಟ್ಟಣ
ಪ್ರಕಾಶಕರು…ನಿವೇದಿತ ಪ್ರಕಾಶನ.. ಬೆಂಗಳೂರು
ಬೆಲೆ…120 ರೂ
ಪ್ರಥಮ ಮುದ್ರಣ..2019
ಡಾ || ಶಶಿಕಾಂತ ಪಟ್ಟಣ ಅವರು ಎಂ. ಫಾರ್ಮ್, ಪಿ. ಎಚ್. ಡಿ ಮಾಡಿ ಅಂತರರಾಷ್ಟ್ರೀಯ ಪ್ರಶಸ್ತಿ ಹಾಗೂ ಸನ್ಮಾನಗಳನ್ನು ಪಡೆದು ವೈದ್ಯಕೀಯ ಔಷಧಿಯ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ವೃತ್ತಿಪರ ವಿಜ್ಞಾನಿ. ಆದರೆ ಪ್ರವೃತ್ತಿಯಲ್ಲಿ ಸಜ್ಜನಶೀಲ ಕವಿ. ಡಾ|| ರಾಮ ಮನೋಹರ ಲೋಹಿಯಾರವರ ಸಿದ್ಧಾಂತದಿಂದ ಪ್ರಭಾವಿತರಾದ ಡಾ || ಶಶಿಕಾಂತ ಪಟ್ಟಣ ಅವರು ತಮ್ಮ ಸ್ವಾತಂತ್ರ್ಯ ಹೋರಾಟದ ಮನೆತನದ ಕಿಚ್ಚನ್ನು ಮೈಗೂಡಿಸಿಕೊಂಡಿದ್ದಾರೆ.
ಕ್ರಾಂತಿಯ ಕನಸುಗಳನ್ನು ಕಾಣುವ ಡಾ ||ಶಶಿಕಾಂತ ಪಟ್ಟಣ ಒಬ್ಬ ಶ್ರೇಷ್ಠ ಹೃದಯವಂತ ಕವಿ. ಬುದ್ಧ ಬಸವಣ್ಣ,ಅಂಬೇಡ್ಕರ್, ಫುಲೆ ಮುಂತಾದಭಾರತೀಯ ಪರಿವರ್ತನೆಯ ಹರಿಕಾರರ ಜೊತೆಗೆ ಪಾಶ್ಚಿಮಾತ್ಯ ಸಾಮಾಜಿಕ ಸುಧಾರಕರ ಸಿದ್ಧಾಂತಗಳನ್ನು ಓದಿಕೊಂಡವರು. ಇವರ ಸೈದ್ಧಾಂತಿಕ ಸೆಲೆಗಳನ್ನು ತಮ್ಮ ಕವನಗಳಲ್ಲಿ ವ್ಯಕ್ತಗೊಳಿಸಿದ್ದಾರೆ. ಕಾವ್ಯ ಕವಿತೆ ಇವರ ಸಹಜದತ್ತವಾದ ಗುಣವೆನ್ನಬಹುದು. ವಚನಶಾಸ್ತ್ರ ಶರಣರ ಗಂಭೀರ ಅಧ್ಯಯನ ಮಾಡಿದ ಡಾ ||ಶಶಿಕಾಂತ ಪಟ್ಟಣ ಅವರು ಒಬ್ಬ ಸಂಸ್ಕಾರವಂತ, ಸೃಜನಶೀಲ ಕವಿಎಂದು ಸಾಬೀತು ಪಡಿಸಿದ್ದಾರೆ. ವಾಗ್ಮಿ, ಚಿಂತಕ, ವಿಚಾರವಾದಿ ಹೋರಾಟಗಾರ , ವಸ್ತು ನಿಷ್ಠ ಬರಹಗಾರ.
ಡಾ || ಶಶಿಕಾಂತ ಪಟ್ಟಣ ಅವರ ” ಕನಸುಗಳೇ ಹೀಗೆ” ಇದು ಇವರ ಚೊಚ್ಚಲ ಕವನ ಸಂಕಲನ. 2019ರಲ್ಲಿ ಪ್ರಕಟಣೆಗೊಂಡಿದೆ. ಒಟ್ಟು 144 ಪುಟಗಳ ಕವನ ಸಂಕಲನವು ಸುಂದರವಾದ ಮುಖಪುಟ ಮತ್ತು ಡಾ || ಮೃತ್ಯುಂಜಯ ಶೆಟ್ಟರ ಅವರ ಬೆನ್ನುಡಿಯೊಂದಿಗೆ
ಸೊಗಸಾಗಿ ಮೂಡಿಬಂದಿದೆ.
ಇಲ್ಲಿ ಕವಿ ತಮ್ಮ ಕರ್ನಾಟಕ ಕಾಲೇಜಿನ ವಾತಾವರಣ,
ಪ್ರೊ. ಬಿ. ವಿ. ಗುಂಜೇಟ್ಟಿ, ಡಾ ||ಸಿದ್ಧಲಿಂಗಪಟ್ಟಣಶೆಟ್ಟಿ ಮತ್ತು ಪ್ರೊ. ಚಂದ್ರಶೇಖರ ಪಾಟೀಲ್ ಅವರ0ಥವರ ಸಂಪರ್ಕದಿಂದ ಅವರೊಳಗೆ ಹುದುಗಿದ್ದ ಕಾವ್ಯದ ಒಲವು ಗಟ್ಟಿಗೊಳ್ಳುತ್ತ ಹೋಯಿತು ಎಂದು ನಮ್ಮ ಜೊತೆಗೆ ಹಂಚಿಕೊಳ್ಳುತ್ತಾರೆ. ಕುವೆಂಪು, ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಮಧುರ ಚೆನ್ನರು, ಗೋಪಾಲ ಕೃಷ್ಣ ಅಡಿಗರು, ಸು. ರಂ. ಯಕ್ಕುಂಡಿ, ಚಂಪಾ
ಮುಂತಾದವರ ಕಾವ್ಯಗಳ ಅಧ್ಯಯನದ ಜೊತೆಗೆ ಅವರು ಕನ್ನಡ ಕಾವ್ಯ ಕೃಷಿಯನ್ನು ಹೇಗೆ ಶ್ರದ್ಧಾ ಪೂರ್ವಕವಾಗಿ ಮಾಡಿದರು ಎನ್ನುವುದನ್ನು ಹೇಳುತ್ತಾರೆ. ಪ್ಯಾಬ್ಲೋ ನೆರೂದ, ಪುಷ್ಕಿನ್ ತಮ್ಮ ಬಂಡಾಯ ಮನೋಧರ್ಮಕ್ಕೆ ಸ್ಫೂರ್ತಿಯಾದರೆ, ಡಬ್ಲ್ಯೂ ಬಿ ಯೀಟ್ಸ್, ಶೆಲ್ಲಿ ವರ್ಡ್ಸ್ ವರ್ತ್, ಈಲಿಯಟ್ ಅವರ
ರೊಮ್ಯಾಂಟಿಸಂಗೆ ಕಾರಣವೆಂದು ಇಲ್ಲಿ ನೆನಪಿಸಿ
ಕೊಳ್ಳುತ್ತಾರೆ.
“ಕನಸುಗಳೇ ಹೀಗೆ ” ಕವನ ಸಂಕಲನದಲ್ಲಿ ಒಟ್ಟು 82 ಕವನಗಳು ಬೇರೆ ಬೇರೆ ವಿಷಯದ ಶೀರ್ಷಿಕೆಗಳಡಿಯಲ್ಲಿ ಕವಿಯ ಕಲ್ಪನೆಯ ಲೋಕದಲ್ಲಿ ಮತ್ತು ವಾಸ್ತವದ ನೆಲೆಗಟ್ಟಿನಲ್ಲಿ ಮೂಡಿಬಂದಿವೆ. ಮೊದಲ ಕವನವೇ ಕವಿಯ ಆರಾಧ್ಯ ಬಸವಣ್ಣನವರ ಮೂಲಕ ಶುರುವಾಗುತ್ತದೆ. ಇಲ್ಲಿ ನಾವು ನಿನ್ನ ಹಾಗೆ ಶಾಂತಿ ಸಮತೆ
ಪ್ರೀತಿಕಟ್ಟಲಿಲ್ಲ, ಕಾಯಕ ದಾಸೋಹ ಗಟ್ಟಿಗೊಳಿಸಲಿಲ್ಲ
ಹಸಿದವರಿಗೆ ಅನ್ನ ಹಂಚಲಿಲ್ಲ, ನೊಂದವರಿಗೆ ಹದುಳ ನುಡಿಯಲಿಲ್ಲ, ಆದರೆ ನಿನ್ನ ಹೆಸರಲಿ ಬದುಕು ಕಂಡು ಕೊಂಡಿದ್ದೇವೆ ಎಂದು ನೊಂದು ನುಡಿಯುತ್ತಾರೆ. ಹೀಗೆ ಧನ್ಯ ನಾನು ಬಸವೇಶ, ನಿನ್ನೊಡಲಕುಡಿಯಾದೆ, ಹೆಣ್ಣು ಗಂಡಿಗೆ ಸಮತೆಯ ಹೆಜ್ಜೆ, ಮೊಳಗುತಿದೆ ನಾಡೊಳಗೆ ಅನುಭವದ ಗೆಜ್ಜೆಯು ಎನ್ನುತ್ತಾ ಬಸವಣ್ಣನಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ. ಇನ್ನೊಂದೆಡೆ
ಬಾ ಬಾರೋ ಬಸವಣ್ಣ, ಬಸವಪ್ರಿಯ ಶಶಿಕಾಂತ ಎನ್ನುತ್ತಾ ಬಸವಣ್ಣನ ಬಗೆಗೆ ತಮ್ಮ ಅದಮ್ಯ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಮತ್ತೊಂದೆಡೆ ಜೈ ಬಸವೇಶ ಎನ್ನುವ ವೇದಘೋಷವನ್ನೇ ಮೊಳಗಿಸಿದ್ದಾರೆ. ಮರೆತು ಮನದಲ್ಲಿ ಬಸವನ, ವನವ ಸುತ್ತಿದರೇನು, ಬಸವ ಶಕ್ತಿಯ ಪರುಷ, ಬಸವ ಬಾಳಿನ ಹರುಷ…ಎನ್ನುತ್ತಾ ಜನರನ್ನು ಎಚ್ಚರಿಸುವುದನ್ನು ಮರೆಯುವುದಿಲ್ಲ. ಹೀಗೆ
ಇನ್ನಷ್ಟು ಕವನಗಳಲ್ಲಿ ಬಸವಗಾಥೆ ಮುಂದುವರೆಯುತ್ತದೆ.
ಬಸವ ಚೇತನ
ನಿತ್ಯಗೊಂಡಿತು
ಶರಣ ಜೀವನ
ಬಸವಾಕ್ಷರ ಮಂತ್ರವಾಯಿತು
ಅನುಭಾವವೇ ಕಾರಣ
ರಾಜಕಾರಣದ ಬಗೆಗಿನ ವಿಡಂಬನೆಯ ಕವನಗಳೂ ಸಹ ಇಲ್ಲಿ ಕಾಣಸಿಗುತ್ತವೆ. ಮಂತ್ರಿ ಬೇಕು ಮಂತ್ರಿ, ಸಂಪುಟ ಕಸರತ್ತು, ಮಾಡಿ ಮುಗಿಸಿದ್ದೇವೆ ನಾವು ಐದು ವರ್ಷದ ಪ್ರಜಾತ0ತ್ರದ ನಾಟಕ ಎನ್ನುತ್ತಾ ಎಲೆಕ್ಷನ್ನ ಬಗೆಯೂ ಹೇಳಲು ಮರೆಯುವುದಿಲ್ಲ. ಮಾರಿಕೊಂಡೆವು ನಾವು ಜಾತಿ ಮತದ ನೆರಳಲ್ಲಿ ಎಂದು ನೋವಿನಿಂದ ಹೇಳುತ್ತಾರೆ. ಗುರುತಿಸಿಕೊಳ್ಳುತ್ತೇವೆ ನಾವು ನಮ್ಮನ್ನು ಮಂತ್ರಿ ಜೊತೆ, ಕಂತ್ರಿ ತಂತ್ರಿಗಳ ಜೊತೆ ಎಂದು ಖೇದದಿಂದ ಇನ್ನೊಂದು ಕವನದಲ್ಲಿ ತಮ್ಮ ಮನದ ಅಳಲನ್ನು
ತೋಡಿಕೊಳ್ಳುತ್ತಾರೆ. ಮರೆಯದಿರು ಎಂಬ ಕವನದಲ್ಲಿ
ಖಾದಿಗಳ ಹಿಂದೆ ಬೀಳದಿರು
ಕಾವಿ ಲಾಂಛನಗಳ ಸುತ್ತ ಸುಳಿಯದಿರು
ಕೋಮುವಾದಿಗಳಿಗೆ ಜಗ್ಗದಿರು
ಅಧಿಕಾರಿ ಶೋಷಣೆಗೆ ಕುಗ್ಗದಿರು
ಮೋಸ ವಂಚನೆಗೆ ಸೊರಗದಿರು
ಶರಣರ ಅನುಭಾವದ ವಚನಗಳ ಹಿಡಿದು
ಮಹಾ ಮಾನವನಾಗುವುದನು ಮರೆಯದಿರು
ಬಸವ ಪ್ರಿಯ ಶಶಿಕಾಂತ
ಎನ್ನುತ್ತಾ ವಾಸ್ತವದ ಇಂಥ ಸನ್ನಿವೇಶಗಳಲ್ಲಿ ಸಿಲುಕದೆ ಶರಣರ ತತ್ವವನ್ನು ಅಳವಡಿಸಿಕೊಂಡು ಅದನ್ನು ಪ್ರತಿ ನಿತ್ಯ ನಿಮ್ಮ ಜೀವನದಲ್ಲಿ ಆಚರಣೆ ಮಾಡಿ ಮಹಾ ಮಾನವತಾವಾದಿಯಾಗಿ ಮೆರೆಯಿರಿ ಎಂದು ಕಳಕಳಿಯಿಂದ ಹೇಳುತ್ತಾರೆ. ಹೀಗೆ ಹತ್ತು ಹಲವುಕವನಗಳು ಪ್ರಸ್ತುತ ದೇಶದಲ್ಲಿ ನಡೆಯುವ ರಾಜಕಾರಣಿಗಳ ಮತ್ತು ಮಠಾಧೀಶರ ಬಗೆಗಿನ ನಿಲುವನ್ನು ಎತ್ತಿ
ತೋರಿಸುತ್ತವೆ. ಗೌರಿ ಲಂಕೇಶ್ ಅವರ ಹತ್ಯೆಯನ್ನೂ ಸಹ ಬಹಳ ವ್ಯಥೆಯಿಂದ ನೆನೆಸಿಕೊಳ್ಳುತ್ತಾರೆ ತಮ್ಮ ಕವನದಲ್ಲಿ. ಈಗಿನ ವ್ಯವಸ್ಥೆಯ ವಿರುದ್ದ ರೊಚ್ಚಿಗೆದ್ದು ತಮ್ಮ ಮನದ ಆತಂಕವನ್ನು ನಮ್ಮ ಜೊತೆಗೆ ಹಂಚಿ ಕೊಳ್ಳುತ್ತಾರೆ. ಸತ್ಯ ನಿತ್ಯ ಸಾಯುತ್ತಿದೆ ಎನ್ನುತ್ತಾ ಕವಿ ತತ್ವ ಶಿಲುಬೆಗೇರುತ್ತಿದೆ, ನೆಲ ಕಚ್ಚುತ್ತಿದೆ ವೈಚಾರಿಕತೆ, ಎಂದು ಈಗ ನಡೆಯುವ ವಿದ್ಯಮಾನಗಳನ್ನು ಹೇಳುವ ತವಕದಲ್ಲಿದ್ದಾರೆ.ಗಾಂಧಿಜಿಯ ಬಗೆಗೂ ಕವಿಗೆ ಬಹಳ ಗೌರವ ಮತ್ತು ಅಭಿಮಾನ.. ತಮ್ಮ ಒಂದು ಕವನದಲ್ಲಿ ಬಾ ಬಾಪು ಬಾ…ಸತ್ಯ ಶಾಂತಿ ಸಹ ಬಾಳ್ವೆಗೆ ಮುನ್ನುಡಿ ಬರೆಯಲು…ಬಾಪು ನೀನು ಇನ್ನೊಮ್ಮೆ ಮತ್ತೊಮ್ಮೆ ಹುಟ್ಟಿ ಬಾ.. ಎನ್ನುತ್ತಾ ಬಾಪುವಿನ ಬಗೆಗೆ ತಮಗೆ ಇರುವ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಮಧ್ಯದಲ್ಲಿ ಶಿರಸಂಗಿ ಲಿಂಗರಾಜರನ್ನು ನೆನೆಯುವ ಕವನವೂ ಸಹ ಇಲ್ಲಿ ಕಾಣಸಿಗುತ್ತದೆ.
ದಾನ ಮಾಡಿದಿರಿ ಸಂಸ್ಥಾನ
ಲಿಂಗಾಯತ ಮಕ್ಕಳಿಗೆ
ಬಸವ ಹಚ್ಚಿದ ದೀಪಕ್ಕೆ
ತೈಲವಾದಿರಿ ನೀವು
ಎನ್ನುತ್ತಾ ಅತ್ಯಂತ ಅಭಿಮಾನದಿಂದ ಲಿಂಗರಾಜರನ್ನು ನೆನೆಯುತ್ತಾ ಶಿವಯೋಗಿಯ ವಾಣಿಯಂತೆ ಶಿಕ್ಷಣಕೆ ದಾನ ಮಾಡಿದುದನ್ನು ಸ್ಮರಿಸುತ್ತಾರೆ.
ಜೈನ ಮುನಿಗಳ ಸಮಷ್ಟಿ ಬೆಳೆಯಲೆ0ಬ ಭಾವವೂ ಸಹ ಇನ್ನೊಂದು ಕವನದಲ್ಲಿ ಮೂಡಿ ನಿಂತಿದೆ. ಅವರು ಎಲ್ಲವನ್ನೂ ಗೆದ್ದು ಬೆತ್ತಲಾಗುತ್ತಾರೆ.. ಮೌಲ್ಯ ಉಳಿಸಿ ಬದುಕುತ್ತಾರೆ.. ಧನ ಕನಕ ಹಂಚುತ್ತಾರೆ.. ಮುನಿಯಾಗುವ ಮುನ್ನ ಎನ್ನುತ್ತಾ ಜೈನ ಸಮುದಾಯದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾರೆ.
ಇನ್ನು ಕೊನೆಯಲ್ಲಿ ಪ್ರೀತಿ-ಪ್ರೇಮಗಳ ಕವನಗಳ ಸುರಿಮಳೆ. “ಕನಸುಗಳೇ ಹೀಗೆ ” ಶೀರ್ಷಿಕೆಯ ಅಡಿಯಲ್ಲಿ ಬಂದ ಈ ಕವನ ಸಂಕಲನದಲ್ಲಿ ಪ್ರೀತಿಗೂ ಹೆಚ್ಚಿನ ಮಹತ್ವವಿದೆ. ಕಾಯುತ್ತಿರುವೆ ಗೆಳತಿ.. ನಿನ್ನ ಆಗಮನಕ್ಕೆ.. ವಸಂತದ ಚಿಗುರೆಲೆ ಹಸುರಿಗೆ. ಹಾಡುವ ಕೋಗಿಲೆಯಂತೆ ಎನ್ನುತ್ತಾ ಗೆಳತಿಯ ಆಗಮನಕ್ಕಾಗಿ
ಎಷ್ಟೊಂದು ಆತುರತೆಯಿಂದ ಕವಿ ಕಾಯುತ್ತಿರುವುದು ಗೊತ್ತಾಗುತ್ತದೆ. ಇನ್ನೊಂದು ಕವನದಲ್ಲಿ ಯಾರಿವಳು. ಸದ್ದಿಲ್ಲದೇ ಬಂದು.. ಕದವ ತಟ್ಟಿದಳು.. ಮನದ0ಗಳದಲ್ಲಿ…ಬಣ್ಣದ ಕನಸಿನ ಚಿತ್ತಾರ ಬಿಡಿಸಿದವಳು.. ಮೆಲ್ಲ ಮೆಲ್ಲನೆ ಬಂದು…ನನ್ನ ಕೂಡಿಕೊಂಡವಳು.. ನನ್ನವಳು ನನ್ನವಳು.. ಬದುಕಿಗೆ ಭಾಷೆ ಬರೆದವಳು.. ಎನ್ನುವಲ್ಲಿ ಕವಿಯ ಪ್ರೇಮದ ಉತ್ಕಟತೆ ಇಲ್ಲಿ ಕಾಣಸಿಗುತ್ತದೆ.
ಎರಡಕ್ಷರದ ನೀನು ನಾನು
ಸ್ನೇಹ ಪ್ರೀತಿ ಆನು ತಾನು
ಇದರಲ್ಲೇ ಇಡೀ ಕವನದ ಸಾರವು ಅಡಗಿದೆ. ಪ್ರೀತಿ
ಪ್ರೇಮಕ್ಕೆ ಅವನು ಮತ್ತು ಅವಳು ಅಷ್ಟೇ ಸಾಕಲ್ಲವೆ.. ಮತ್ತೇನೂ ಬೇಡ ಎನ್ನುವ ಅಭಿವ್ಯಕ್ತಿ. ಇನ್ನೊಂದು ಕವನದಲ್ಲಿ ನೀ ಬಂದೆ.. ಎನ್ನಮನದಂಗಳಕೆ.. ಸೂರ್ಯನುದಿಸುವ ಮುನ್ನ…ಉಷೆಯ ಕಿರಣಗಳ ರಶ್ಮಿಯಾಗಿ.. ಎಷ್ಟು ಅಗಾಧವಾದ ಪ್ರೀತಿ.
ಗೆಳೆಯರೇ
ಕನಸುಗಳೇ ಹೀಗೆ
ಮುಗ್ಧ ಭಾವಕ್ಕೆ
ಧೈರ್ಯ ತುಂಬುತ್ತವೆ
ಅವನ ಅವಳ ಪಿಸು ಮಾತಿಗೆ
ಬೆಸುಗೆ ಕೊಂಡಿಯಾಗುತ್ತವೆ
ಮನದ ತುಡಿತಕ್ಕೆ
ಶಬ್ದವಾಗುತ್ತವೆ
ಗುರಿ ತೋರುತ್ತವೆ…
ಹೀಗೆ ಕನಸುಗಳ ಬಗೆಗೆ ಹೇಳುತ್ತಾ ಹೇಳುತ್ತಾ
ಸೂರ್ಯನ ಆಗಮನಕ್ಕೆ
ಚೆಲ್ಲಾಪಿಲ್ಲಿಯಾಗಿ ಚದುರುತ್ತವೆ
ಸಂಜೆಯಾದರೆ ಸಾಕು
ಮತ್ತೆ ಕನಸುಗಳು
ಕನಸುಗಳ ಕಟ್ಟುತ್ತವೆ…
ಎನ್ನುತ್ತಾ ಗೆಳೆಯರೇ ಕನಸುಗಳೇ ಹೀಗೆ ಎಂದು ಕನಸುಗಳನ್ನು ಎಲ್ಲರೂ ಕಾಣಬೇಕು ಮತ್ತು ಕನಸುಗಳೇ ನಮ್ಮನ್ನು ಜೀವಂತ
ವಿಡುತ್ತವೆ…ಉತ್ಸಾಹಿಗಳನ್ನಾಗಿ ಮಾಡುತ್ತವೆ…ಆಶಾವಾದಿಗಳನ್ನಾಗಿ ಮಾಡುತ್ತವೆ.. ಎನ್ನುವುದು ಕವಿಯ
ಅಭಿಪ್ರಾಯ ಇರಬಹುದು. ಹೀಗೆ ಬಹಳಷ್ಟು ಪ್ರೀತಿ ತುಂಬಿದ ಕವನಗಳು ಇದರಲ್ಲಿ ನದಿಯಂತೆ ಹರಿದು ಮನ ಮುಟ್ಟುತ್ತವೆ. ಹೊರಗೆ ತುಂತುರು ಮಳೆ.. ಒಳಗೆ ತಡಕಾಡುವ ಭಾವಗಳು.. ಹುಡುಕುತ್ತಿರುವೆ ಪದಗಳನು…ಕಾವ್ಯ ಹೊಸೆಯಬೇಕೆ0ದಿರುವೆ ಎನ್ನುವ ” ಕನಸುಗಳೇ ಹೀಗೆ ” ಕವನ ಸಂಕಲನವನ್ನು ನೀವೆಲ್ಲರೂ ಒಮ್ಮೆ ಓದಲೇಬೇಕು. ಇವು ಬರೀ ಕವನಗಳ ಸಾಲುಗಳಲ್ಲ .. ಇಲ್ಲಿ ಬಸವ…ಗಾಂಧಿಯ ಸಾರವೂ ಅಡಗಿ…
.. ವಾಸ್ತವದ ಕಟು ಸತ್ಯ …ರಾಜಕೀಯ..ಮಠಮಾನ್ಯ…ಪ್ರೀತಿ.. ಪ್ರೇಮ ಎಲ್ಲವೂ ಕೂಡಿಕೊಂಡು ಪುಸ್ತಕಕ್ಕೆ ಒಂದು ಕಳೆ…ವಿಶೇಷತೆ ಮೂಡಿದೆ.
ಸುಧಾಪಾಟೀಲ
ಸುಧಾ ಪಾಟೀಲ್ ಅವರು ಮೂಲತಹ ಗದಗ ಜಿಲ್ಲೆಯವರು.ಇವರ ಸಾಹಿತ್ಯದ ಪಯಣಕ್ಕೆ ಇವರ ದೀಕ್ಷಾಗುರುಗಳಾದ ಲಿ. ಡಾ. ಜ.ಚ. ನಿ ಶ್ರೀಗಳೇ ಪ್ರೇರಣೆ.
ಸುಧಾ ಪಾಟೀಲ್ ಅವರ ಲೇಖನಗಳು.. ಕವನಗಳು ವಿವಿಧ ಪತ್ರಿಕೆಯಲ್ಲಿ.. ಪುಸ್ತಕಗಳಲ್ಲಿ ಪ್ರಕಟಗೊಂಡಿವೆ. ಇವರ ಜ. ಚ.ನಿ ಶ್ರೀಗಳ ” ಬದುಕು -ಬರಹ ” ಕಿರು ಹೊತ್ತಿಗೆ ಕಿತ್ತೂರು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂaಸೇವೆಯನ್ನು ಗೈದಿದ್ದಾರೆ.
ಹಲವಾರು ಸಂಘ -ಸಂಸ್ಥೆಗಳಲ್ಲಿ ಕಾರ್ಯಕಾರಿ ಸದಸ್ಯೆಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಯಾವತ್ತೂ ಇವರದು ಅಳಿಲುಸೇವೆ ಇದ್ದೇ ಇರುತ್ತದೆ.ಸುಧಾ ಪಾಟೀಲ್ ಅವರನ್ನು ಅರಸಿ ಬಂದ ಪ್ರಶಸ್ತಿಗಳು..ಅನುಪಮ ಸೇವಾ ರತ್ನ ಪ್ರಶಸ್ತಿ (ಪೃಥ್ವಿ ಫೌಂಡೇಶನ್ )
ಮಿನರ್ವ ಅವಾರ್ಡ್ ಮತ್ತು ದತ್ತಿ ನಿಧಿ ಪ್ರಶಸ್ತಿ ( ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ )ರಾಜ್ಯೋತ್ಸವ ಪ್ರಶಸ್ತಿ ( ಚೇತನಾ ಫೌಂಡೇಶನ್ )
Excellent
ಧನ್ಯವಾದಗಳು ಸರ್ ತಮ್ಮ ಅಭಿಪ್ರಾಯಕ್ಕೆ
ಉತ್ಕೃಷ್ಟವಾದ ಪುಸ್ತಕ ಅವಲೋಕನ ಚೆನ್ನಾಗಿ ಮಾಡಿದ್ದೀರಿ ಮೇಡಂ ಧನ್ಯವಾದಗಳು