ಅಂಕಣ ಸಂಗಾತಿ

ನನ್ನಿಷ್ಟದ ಪುಸ್ತಕ….

ಸುಧಾ ಪಾಟೀಲ

ಪುಸ್ತಕದ  ಹೆಸರು…ಸೊಗವಚನ
ಸಾಹಿತಿಗಳು…ಶಿವೈಕ್ಯ ಡಾ || ಜ. ಚ. ನಿ ಶ್ರೀಗಳು /ಗೂಳೂರು  ಮಠ
ಪ್ರಕಾಶಕರು.. ಶ್ರೀ  ಸತ್ಯನಾರಾಯಣ ಪ್ರೆಸ್
ಬೆಂಗಳೂರು
ಬೆಲೆ…5  ರೂ
ಪ್ರಥಮ ಮುದ್ರಣ…1973

ಅವಲೋಕನಕ್ಕಿಂತ    ಮೊದಲು   ಡಾ ||ಶ್ರೀ ಜ. ಚ. ನಿ ಅವರ ಸಂಕ್ಷಿಪ್ತ  ಇತವೃತ್ತ


ಜನನ : 1909    ಅಶ್ವಯುಜ  ಶುದ್ಧ  ಷಷ್ಠಿಯಂದು
ಬೈಲಹೊಂಗಲ   ತಾಲೂಕು   (ಬೆಳಗಾವಿ  ಜಿಲ್ಲೆ )
ಅಂಬಡಗಟ್ಟಿ  ಗ್ರಾಮದಲ್ಲಿ ಜನನ.  ಹುಟ್ಟು  ಹೆಸರು
ರಾಚಯ್ಯ. ಅಶ್ವಯುಜ ಮೂಲಾನಕ್ಷತ್ರ ಸರಸ್ವತಿ ಹಬ್ಬ
ದಂದು ಜನನ 1919 ಎಂದೂ  ಹೇಳುವುದಿದೆ.

ತಂದೆ -ತಾಯಿ : ಶ್ರೀ ದುಂಡಯ್ಯ ಹಿರೇಮಠ, ತಾಯಿ
ಶ್ರೀಮತಿ  ತಾಯವ್ವ

ಪ್ರಾರ್ಥಮಿಕ  ಅಭ್ಯಾಸ : 1916 – 17 ರಿಂದ ಅಂಬಡ
ಗಟ್ಟಿಯ ದ್ಯಾಮವ್ವ,ದುರ್ಗಾದೇವಿ ಅಯ್ಯನ ಮಠದಲ್ಲಿ

1923 ರಲ್ಲಿ ಅಡ್ನೂರಿನ ಮಲ್ಲಿಕಾರ್ಜುನ ಗೌಡರಿಂದಾಗ ನಾಲ್ಕನೇ  ತರಗತಿಗೆ  ದಾಖಲು.

ಸಂಸ್ಕೃತಾಧ್ಯಯನ : ಮರುವರ್ಷ ಹಾನಗಲ್ ಕುಮಾರ ಶಿವಯೋಗಮಂದಿರದಲ್ಲಿ ಸಂಸ್ಕೃತಾಧ್ಯಯನ, ಚಂದ್ರ
ಶೇಖರ ದೇವರು ಎಂಬ ಹೆಸರಿನಲ್ಲಿ ಗುರುದೀಕ್ಷೆ.

ಸಾಹಿತ್ಯಕ ಹಾದಿ : ಹದಿನೇಳನೆಯ ವಯಸ್ಸಿನಲ್ಲಿ ಕವನ
ಲೇಖನ ಬರೆಯಲಾರಂಭ,ಶಿವಯೋಗ ಮಂದಿರದಲ್ಲಿ
ಭಾಮಿನಿ ಷಟ್ಪದಿಯಲ್ಲಿ ಪದ್ಯ ರಚನಾ ಪರಿಣಿತಿ.ಕಾವ್ಯ
ಶಾಸ್ತ್ರಗಳ   ಅಧ್ಯಯನ,   ವ್ಯಾಸಂಗದಲ್ಲಿ   ಮಗ್ನರಾಗಿ ಕಾಳಿದಾಸನ ” ಮಾಳವಿಕಾಗ್ನಿಮಿತ್ರ ” ದ   ಹಳೆಗನ್ನಡ
ಧಾಟಿಯಲ್ಲಿ ಅನುವಾದ.

ಸಂಸ್ಕೃತಾಭ್ಯಾಸ : ಹನ್ನೆರಡು   ವರ್ಷಗಳ   ಕಾಲ ಶಿವಯೋಗಮಂದಿರದಲ್ಲಿ ಸಂಸ್ಕೃತಾಧ್ಯಯನ ಮುಂದುವರಿಕೆ. ಹೆಚ್ಚಿನ   ಸಾಹಿತ್ಯಾಧ್ಯಯನಕ್ಕೆ  ಬೆಂಗಳೂರಿಗೆ  ಬಂದು ಸರ್ಪಭೂಷಣ   ಮಠದ ಮಹಾದೇವ   ಸ್ವಾಮಿಗಳಲ್ಲಿ ಆಶ್ರಯ.

ಪೀಠಾರೋಹಣ : ಬಾಗೇಪಲ್ಲಿ ತಾಲೂಕು ಗೂಳೂರು ಶ್ರೀಶೈಲ   ನಿಡುಮಾಮಿಡಿ   ಮಹಾಸಂಸ್ಥಾನ  ಪೀಠದ
ಜಗದ್ಗುರುವಾಗಿ   ಶ್ರೀ ಚನ್ನಬಸವರಾಜು   ದೇಶಿಕೇಂದ್ರ
ಶಿವಾಚಾರ್ಯ ಎಂಬ ಅಭಿದಾನದಲ್ಲಿ 12 / 06 /1939 ರಂದು  ಅಧಿಕಾರ ಸ್ವೀಕಾರ.

ಪೀಠಕ್ಕೆ ಏರುವ ಮುನ್ನ  ಪ್ರಕಟಿಸಿದ ಲೇಖನಗಳು

1..ಹರಿಹರದೇವನು ಚಿತ್ರಿಸಿದ ಚೆನ್ನಯ್ಯ
2.. ಶ್ರೀ ಹಾನಗಲ್  ಸ್ವಾಮಿಗಳವರು ರಚಿಸಿದ ಹಾಡು ಗಬ್ಬಗಳು ( ಸಂಗ್ರಹ )
3.. ಅನಾಯನಾರದ ಮಂತ್ರಗಾನ
4.. ಹರಿಹರನು ಹೊಗಳಿದ ದಾನವೀರ ಇಳೆಯಾಂಡ
ಗುಡಿಮಾರ
5.. ವೀರಶೈವ ಕವಿಗಳ  ವೈಶಿಷ್ಟ್ಯ
6.. ಮಹಾದೇವಿಯಕ್ಕನ  ಮದುವೆಯ ವಿವಾದ
7..ಹರಿಹರನು  ಕೀರ್ತಿಸಿದ  ಕಾರಿಕಾಲಮ್ಮೆ
8.. ಅಕ್ಕಮಹಾದೇವಿಯು ಕದಳಿ ಹೊಕ್ಕ ಹಾಡು.

ಮೊದಲ್ನುಡಿ…

ಉಂಬುವುದೊಂದೆ ಸೊಗಸಲ್ಲ, ಉತ್ತಮ ವಿಚಾರವನ್ನು ಉಗ್ಗಡಿಸುವ ವಚನ ರಚನ -ವಚನ ಶ್ರವಣ -ವಚನ ಚರಣಾದಿಗಳೂ ಸೊಗವನ್ನು   ತರಬಲ್ಲವು, ತರುತ್ತವೆ.
ಆದರ್ಶತೆಯ   ಆವಿಷ್ಕಾರಕ್ಕೆ   ಆಕರವಾದ   ಜೀವನ ಮೌಲ್ಯಸಂಪಾದನ ಸಾಧನವಾದ ವಚನ ಸುಖವಚನಸಾಹಿತ್ಯದರ್ಥವನ್ನು   ಸಾಧ್ಯವಿದ್ದಮಟ್ಟಿಗೂ  ವಂಚಿಸ
ದಿರುವುದೆ  ಸೊಗವಚನ. ಜೀವಂತ  ಬಾಳು ಬದುಕಿನ ಜೀವಾಳ  ಸೊಗವಚನ.

ಅಜ್ಞಾನ  ಅನನುಭವಗಳಿಗಿಂತ ಅಕ್ರಿಯೆ  ಆಲಸಿಕೆಗಳಿಗಿಂತ ದುಃಖ ಬೇರಿಲ್ಲ. ಜ್ಞಾನಾನುಭವ,ಕ್ರಿಯೆ, ಚಟುವಟಿಕೆಗಳಿಗಿಂತ ಸುಖ ಮತ್ತೊಂದಿಲ್ಲ. ಇವುಗಳಿಂದ ಜೀವನಕ್ಕೆ
ಮಾನವೀಯತೆಗೆ ಚಿರಂತನ ಮೌಲ್ಯ ರೂಪಿತವಾಗುತ್ತದೆ, ಜೀವನಾದರ್ಶ   ಸ್ಥಾಪಿತವಾಗುತ್ತದೆ.ಸಮಕಾಲೀನ ಸಮಸ್ಯೆಗಳಲ್ಲಿ ವಾಸ್ತವಿಕತೆಯನ್ನು ಅಭಿವ್ಯಕ್ತಿಗೊಳಿಸುವಲ್ಲಿ   ಸೊಗಸಿಲ್ಲದಿಲ್ಲ.   ನಿಚ್ಚಳವಾಗಿ   ನಿಷ್ಠುರವಾಗಿ ನಿರ್ಧಾಕ್ಷಿಣ್ಯವಾಗಿ  ನಿರೂಪಿಸುವ  ಹೊಲಬು  ಸುಲಭ
ವಲ್ಲದಿದ್ದರೂ   ಸೊಗಸು  ತಾರದಿರದು.  ಸಸಿನತೆಯ ತಾರದಿರದು.ಸವೆಯದ  ಸೊತ್ತಾಗಿ ಉಳಿಯದಿರದು.

ಹೊಸ ವೈಜ್ಞಾನಿಕ ಕ್ರಿಯಾ ಕುಸುಮಗಳಲ್ಲಿ  ಹೊಸ ವೈಜ್ಞಾನಿಕ ವಿಚಾರ ಸುಗಂಧ,   ಹೊಸ   ವೈಜ್ಞಾನಿಕ ಅನುಭವಾಮೃತಗಳಿವೆ.     ಇವುಗಳ   ಆರೋಗಣೆಗೆ ಆನಂದಕ್ಕೆ ಕಾರಣವಾಗುವುದೆ ಸೊಗವಚನದ ಕಾರ್ಯವಾಗಿದೆ. ವಚನ ಕೇವಲ ಧಾರ್ಮಿಕ ವಿಚಾರಕ್ಕೆ ಮಾತ್ರವೆ
ಸೀಮಿತವಾಗಿಲ್ಲ ; ಆಗಬಾರದು.ಈ ದೃಷ್ಟಿ ಯುಗವಚನ ಸೊಗವಚನಗಳದ್ದು.     ಯುಗಧರ್ಮ -ವಿಜ್ಞಾನಗಳ
ವಿಚಾರ   ವಿಶ್ಲೇಷಣೆಯೂ  ವಚನ   ಕಾರ್ಯವಾದಲ್ಲಿ ವಾಚಕರಿಗೆ   ಶ್ರಾವಕರಿಗೆ   ಆನಂದವುಂಟಾಗದಿರದು.
ಹೊಸ ಅರಿವು ಹೊಳೆಯದಿರದು. ಹಿಡಿಯುವವುಗಳು ಯಾವುವು;   ಬಿಡುವವುಗಳು ಯಾವುವು ?   ಎಂಬುದರ ಕಲ್ಪನೆಯುಂಟಾಗಿ   ಜೀವನಗತಿ    ಸುಲಭವಾಗುತ್ತದೆ; ಸರಳವಾಗುತ್ತದೆ. ಜೊತೆಗೆ  ಸೊಗಸು   ಸಮನಿಸುತ್ತದೆ. ಆದರೆ  ಆ  ದಿಸೆಯಲ್ಲಿ ವಿಚಾರಿಸಿ ವಿಶ್ಲೇಷಿಸಿ ನಿರ್ಣಯಿಸಿ
ವಚನಗಳ ಮೈಕಟ್ಟಿನಲ್ಲಿ ಚೆಲುವಾಗಿರಿಸಿ ರಚಿಸುವುದು ಕಷ್ಟದ ಕೆಲಸ. ಆಶಕ್ತಿ ಸಮನಿಸುವುದು ಸಾಮಾನ್ಯವಾಗಿ
ಸಾಧ್ಯವಾಗುವುದಿಲ್ಲ. ಅದಕ್ಕೆ ಬೇಕು ಆಳವಾದ ಅಭ್ಯಾಸ ಅಗಲವಾದ ಅನುಭವ ;   ಅಸದೃಶವಾದ  ಶೈಲಿಯ ಹಿಡಿತ. ಇವೆಲ್ಲವೂ ಇರಬೇಕಾದ ಮಟ್ಟದಲ್ಲಿ ನಮಗಿಲ್ಲವಾದರೂ ಇದ್ದುದರಲ್ಲಿಯೇ ಇದೊಂದು ಅಲ್ಪಪ್ರಯತ್ನ
ಎರಡನೆಯ ಕಿರಿ ಹೆಜ್ಜೆ. ” ಬಂದದ್ದೇ ಭಾಗ್ಯ ; ಬಂದಷ್ಟೆ ಬಹಳ ” ಎಂಬೀ  ಶಿವಶರಣತತ್ವಕ್ಕನುಸರಿಸಿ ಈ  ಗತಿ ;
ಈಗಿನ  ಸ್ಥಿತಿ.

ನವೋದಯಕ್ಕೆ ಸಕಾಲೀಕ ಯುಗ ಮತ್ತು ಸೊಗವಚನಗಳು. ನವಯುಗದಲ್ಲಿ   ನಡೆದು ಬರುವ ನಮ್ಮಬಾಳುಬದುಕುಗಳನ್ನು     ಬದಲಾದ ನಡೆನುಡಿಗಳನ್ನು ನಿರೂಪಿಸುವ ಸಾಹಸವೆ ಈ ವಚನ. ನವಯುಗ, ನವಜೀವನ ;  ನವಜೀವನವೇ  ಯುಗಧರ್ಮವಾಗಬೇಕೆ?ನವಧರ್ಮವೊಂದು  ನಿರೂಪಿತವಾಗಬೇಡವೆ ? ನವ
ಜೀವನ ಸುಖದ ಸಾಧನವಾಗಿದೆಯೆ ? ಶಾಂತಿಸಾಧನವಾಗಿದೆಯೆ ? ನವಜೀವನದ  ಪ್ರೇರಣೆ ಪರಿಣಾಮಗಳ
ವರ್ಣವೆಂತಹುದು ?    ಎನಿತದ್ದು ಮಾನವೀಯ ಮೌಲ್ಯಮಾಪನಕ್ಕೆ ತಕ್ಕುದಾಗಿ  ನಿಲ್ಲಬಲ್ಲುದೆ ? ಸಲ್ಲಬಲ್ಲುದೆ ?

ವಿಷಮ ವಾತಾವರಣ, ಅಸಮಜೀವನ, ಪ್ರತಿಭಟನಾತ್ಮಕ ಕ್ರಾಂತಿ, ಥಕಪಕ ಕುದಿಯುವ ಹೃದಯ,ಕುಸಿಯುವ ನೈತಿಕತೆ, ಹದವರಿಯದ ಮದ, ಮತ್ಸರ, ಸೀಮಾತೀತ ಆಸೆ  ಆಕಾಂಕ್ಷೆ  ಇವು ಯುಗಧರ್ಮಗಳೆ ? ಆದರ್ಶ ಗುಣಗಳೆ? ನಿಯಂತ್ರಣವಿಲ್ಲದ ವಚನ, ನೈಜಶಕ್ತಿಯನ್ನುಳಿಸಿದ  ಸಂವಿಧಾನ  ಮಾನವೀಯ ಪುನರುತ್ಥಾನಕ್ಕೆ    ಪ್ರಮಾಣವಾಗಬಲ್ಲವೆ ?  ಹಲವು ಹದಿನೆಂಟು
ಅನ್ಯಾಯಗಳಿಗೆಆಕರವಾದ ಅಧಿಕಾರ ನವೋದಯದ ಆಶೋತ್ತರವನ್ನು  ಉಳಿಸಬಲ್ಲುದೆ ? ನವೋದಯದ
ಆದರ್ಶಗಳನ್ನು    ನಿರ್ಮಿಸಬಲ್ಲುದೆ ?   ಅಸಮರ್ಪಕ ಮೌಲ್ಯಗಳಿಂದ ಮೆರೆಯುವ ಅಸಹನೀಯ ವಾತಾವರಣದಲ್ಲಿ  ಆತ್ಮವಿಶ್ವಾಸಕ್ಕೆ ಅವಕಾಶವಿದೆಯೆ? ಈ   ದುರ್ಭರ  ಸನ್ನಿವೇಶದಲ್ಲಿ   ಮಾನವ   ಜೀವನಕ್ಕೆಗಟ್ಟಿಯಾದ ಚಿರಂತನ ಮೌಲ್ಯಗಳನ್ನು ತರುವ ತೋರುವ
ನವ್ಯ  ವಚನ  ರಚನೆ  ತೀರ ಅಗತ್ಯವಾದರೂ ತುಂಬಾ ಹೊಣೆಗಾರಿಕೆಯಿಂದ ಕೂಡಿದುದು. ಹೊಸ ಬಾಳಿನಲ್ಲಿ ಹಸನಾದ  ಸೊಗವನ್ನು  ಬಿತ್ತುವುದು -ಬಿತ್ತರಿಸುವುದು
ಬಿಕ್ಕಟ್ಟಿನ ಬಟ್ಟೆ. ಅದರಲ್ಲಿಯೂ ಹಳತು -ಹೊಸತುಗಳ ಸಂಧಿಯಲ್ಲಿ ಸಂಧಿಗ್ಧ   ಸನ್ನಿವೇಶದಲ್ಲಿ ಮುಂಗಾಣದ ಹೊಲಬು.   ಇಂತಹದರಲ್ಲಿಯೇ  ಮುನ್ನಡೆಯುವುದು ಸಾಹಸದ ಕಾರ್ಯ.   ಮುನ್ನೆಚ್ಚರಿಕೆ    ಇನ್ನೆಷ್ಟಿದ್ದರೂ ಸಾಲದು.

ನುಡಿಯ  ಅಭಿವ್ಯಕ್ತಿ  ನಡೆಗೆ  ನಾಂದಿ.  ಪುನರುತ್ಥಾನ ಜೀವನನಿರ್ವಹಣ ಮಾಧ್ಯಮ ; ಎಂಬುದನ್ನು ಒಪ್ಪಿ ದ್ವಿತೀಯ  ಗತಿ  ಹೆಜ್ಜೆ  ಹಾಕಿದೆ.  ಯುಗವಚನ -ಸೊಗ
ವಚನಗಳು   ವಚನ   ವಾರಿಧಿಗೆ ಮಾತ್ರವಲ್ಲ  ಯುಗಜೀವನದ    ಹೊಸ    ಚಿಗುರುಗಳು.   ಸಮಕಾಲೀನ ಪರಿಸರ  ಪ್ರೇರಕಗಳು.

ಈ  ವಚನ    ಪ್ರಕಾಶನ  ವಿನೂತನ.   ಇದು   ತಂದುಕೊಟ್ಟಿದೆ ಬಾಳಿಗೊಂದು  ಹೊಸ  ಚೇತನ. ಇದೊಂದು ಹಲವಾರು  ವಿಚಾರಗಳ  ಗುಚ್ಚ.  ಅನೇಕ   ಅನುಭವಗಳ    ಕದಂಬ.   ವಚನಾನುಭೂತಿಯ  ಸೂತ್ರದಲ್ಲಿ  ಪೋಣಿಸಲಾಗಿದೆ. ಹೀಗೆ   ತಮ್ಮ   ಮೊದಲ್ನುಡಿಯಲ್ಲಿ ಡಾ || ಜ. ಚ. ನಿ  ಅವರು  ವಚನದ   ಅರ್ಥ, ಆಳ-ಅಗಲ,   ವಚನಗಳು  ಇಂದಿನ    ಸಮಾಜಕ್ಕೆ  ಎಷ್ಟು ಪ್ರಸ್ತುತ  ಎನ್ನುವುದನ್ನು ಸವಿಸ್ತಾರವಾಗಿ ನಮ್ಮ ಜೊತೆ
ಹಂಚಿಕೊಂಡಿದ್ದಾರೆ.

ಈ ಸೊಗವಚನದಲ್ಲಿ ಬಹಳಷ್ಟು ಶೀರ್ಷಿಕೆಗಳಡಿ ಬೇರೆ ಬೇರೆ ವಿಷಯಗಳ ವಚನಗಳು ವ್ಯವಸ್ಥಿತವಾಗಿಮೂಡಿ
ಬಂದಿವೆ.  ಪ್ರಕೃತಿ   ಕಲಾ ಶಕ್ತಿ, ಖನಿಜ  ವಿಜ್ಞಾನ,  ಶೈತ್ಯಶಾಸ್ತ್ರ,  ಮಾತು -ಮೌನ,   ಸಂತಸವೆ ಸಕ್ಕರೆ,   ಪಾಠ -ನೋಟ, ಜೀವನ, ಧ್ಯೇಯ- ದಾರಿ, ಆರೋಗ್ಯ ಸೂತ್ರ
ಪುಣ್ಯ ಭೂಮಿ, ಛಲ ಬೇಕು, ಬುದ್ಧಿ ಬಲ, ಸೌರಸ್ನಾನ,ಸಂಗೀತ ಕಲೆ, ಆಯುರ್ವೇದದ ಆದ್ಯತೆ,  ವಿದ್ಯಾಲಯಉದ್ದೇಶ…ಹೀಗೆ ಹಲವಾರು  ವಿಭಾಗಗಳನ್ನು ಮಾಡಿ
ಓದುಗರಿಗೆ   ಅನುಕೂಲವಾಗುವಂತೆ    ವಚನಗಳನ್ನು ಪ್ರಸ್ತುತಪಡಿಸಿದ್ದಾರೆ.

ಇದರಲ್ಲಿ ಆಯ್ದ ಒಂದಿಷ್ಟು ವಚನಗಳನ್ನು ನಿಮ್ಮೊಂದಿಗೆ
ಹಂಚಿಕೊಳ್ಳುತ್ತಿದ್ದೇನೆ..

ಸಾಮಾಜಿಕ  ವ್ಯವಸ್ಥೆ

ಇಂದಿನ  ಸಾಮಾಜಿಕ  ವ್ಯವಸ್ಥೆ
ಅದೊಂದು  ಅವ್ಯವಸ್ಥೆ  ಕಂಡಯ್ಯ
ಧರ್ಮದಿಂದ  ನೀತಿಯಿಂದ ನಡತೆಯಿಂದ
ನಂಬುಗೆಯಿಂದ  ದೂರವಾಗಿರ್ಪುದು ನೋಡಯ್ಯ
ನ್ಯಾಯ ನೀತಿಗಳ  ಕಟ್ಟು  ಕಟ್ಟಳೆಯಿಲ್ಲದೆ
ಸ್ವೇಚ್ಚಾ ಪ್ರವೃತ್ತಿ  ಪ್ರವರ್ಧಿಸುತ್ತಿದೆಯಯ್ಯ
ಶ್ರೀ  ನಿಡುಮಾಮಿಡಿ    ಶ್ರೀಗಿರಿ   ಸೂರ್ಯ
ಸಿಂಹಾಸನಾಧೀಶ್ವರ
ಜನಮನೋಧರ್ಮವ  ಜಾಗ್ರತಗೊಳಿಸಯ್ಯ

ನಾಡು -ನುಡಿ

ಕನ್ನಡಿಗರ  ಕಾಯ ಕಾಪಿಡುವುದು  ಕನ್ನಡನಾಡು
ಕನ್ನಡಿಗರ  ಮನವ  ಮಿಡಿಯುವುದು ಕನ್ನಡನುಡಿ
ಕಾಯಶಕ್ತಿ  ಕನ್ನಡ  ; ಮಂತ್ರ ಶಕ್ತಿ  ಕನ್ನಡ
ಕನ್ನಡಿಗರ  ಪ್ರಾಣ, ಕನ್ನಡಿಗರ  ಚೇತನ  ಕನ್ನಡ
ಶ್ರೀ   ನಿಡುಮಾಮಿಡಿ    ಶ್ರೀ   ಗಿರಿ    ಸೂರ್ಯ ಸಿಂಹಾಸನಾಧೀಶ್ವರ .

ಪ್ರಕೃತಿಯೆ  ಒಂದು  ಕಲೆ

ತನ್ನ  ಸುತ್ತಲು ಬೆಳಕ  ಬೀರಬಲ್ಲುದು
ಸೊಡರ  ಬತ್ತಿ  ತನ್ನ  ಸೊಟ್ಟುರುಹಿಕೊಂಡು !
ತನ್ನ  ಸುತ್ತಣವರಿಗೆ  ಸುವಾಸನೆಯ  ಸೂಸಬಲ್ಲುದು
ಧೂಪ  ತನ್ನ  ಅಗ್ಗಿಯೊಳು  ಆಹುತಿಗೊಂಡು !
ತನ್ನ  ಪೂಸಿಕೊಂಡವರಿಗೆ ತಂಪನೀಯಬಲ್ಲುದು
ಚಂದನ ತನ್ನ  ನುಣ್ಣಗೆ  ತೇಯಿಸಿಕೊಂಡು !
ತನ್ನ ತಿಂದವರಿಗೆ  ಇನಿದನು  ಕೊಡಬಲ್ಲುದು
ಸಕ್ಕರೆ  ತನ್ನತನವ  ಕಳೆದುಕೊಂಡು !
ಶ್ರೀ    ನಿಡುಮಾಮಿಡಿ    ಶ್ರೀ ಗಿರಿ  ಸೂರ್ಯ
ಸಿಂಹಾಸನಾಧೀಶ್ವರ
ಉನ್ನತ  ಜೀವಿ  ಮಾನವ  ಸಮಾಜಕ್ಕಾಗಿ
ತನ್ನ  ಸವೆಸದಿರ್ದಡೆ
ಅವುಗಳಿಗಿಂತ  ಕರಕಷ್ಟಕಾಣಾ !

ಗುರು  ಗೌರವ

ಆತನ  ಕತೃತ್ವ ಶಕ್ತಿ  ಅನನ್ಯ  ಸಾಧಾರಣ
ಆತನ  ಆ  ಸ್ಮರಣಶಕ್ತಿ  ಅಸಾಧಾರಣ
ಆತನದು  ದುರ್ದಮ್ಯ  ಚೇತನ
ಅಗಮ್ಯ  ಸ0ಯಮನ
ಅಗೋಚರ  ಧೃತಿ  ; ಅನುಪ ಮದ್ಯುತಿ
ಅಪ್ರಮಾಣ  ಪ್ರಾಮಾಣಿಕತೆ, ಅಸದೃಶ ಆದರ್ಶತೆ
ಕಾಣಿರೇ
ಶ್ರೀ  ನಿಡುಮಾಮಿಡಿ  ಶ್ರೀಗಿರಿ  ಸೂರ್ಯ
ಸಿಂಹಾಸನಾಧೀಶನಲ್ಲಿ
ಇಂತಿದೆಲ್ಲ  ಸತ್ಯಕ್ಕೆ  ಸತ್ಯ  ಕಾಣಿರೇ !

ಹೀಗೆ ಸಾಮಾಜಿಕ ವ್ಯವಸ್ಥೆಯ  ಬಗೆಗೆ  ಜನರನ್ನು ಜಾಗೃತಗೊಳಿಸುವುದು…ನಾಡು ನುಡಿಯ ಬಗೆಗೆ ಅಭಿಮಾನ  ಬೆಳೆಸುವುದು.. ಮನುಷ್ಯನಾಗಿ ಹುಟ್ಟಿದಮೇಲೆ  ಒಳ್ಳೆಯ  ಕಾರ್ಯಕ್ಕಾಗಿ  ತನ್ನ  ಜೀವವನ್ನು
ಸವೆಸಬೇಕು…ಗುರುವಿನ  ಮಹತ್ವ…ಹೀಗೆ   ಹತ್ತು ಹಲವು  ವಿಷಯಗಳನ್ನು  ಇಲ್ಲಿ ಕ್ರೋಢಿಕರಿಸಿದ್ದಾರೆ.

ನನ್ನ  ದೀಕ್ಷಾಗುರು  ಡಾ || ಜ. ಚ. ನಿ  ಅವರು 360 ಪುಸ್ತಕಗಳನ್ನು ಬರೆದು ನಡೆದಾಡುವ ವಿಶ್ವವಿದ್ಯಾಲಯವೆಂದೇ  ಪ್ರಸಿದ್ಧಿ  ಪಡೆದಿದ್ದರು. ಅವರ  ಪುಸ್ತಕಗಳನ್ನು
ಓದುತ್ತಾ  ಬೆಳೆದವರು  ನಾವು. ಈಗ  ನಿಮ್ಮ  ಜೊತೆ ಸೊಗವಚನದ  ಸಿರಿಯನ್ನು  ಹಂಚಿಕೊಂಡಿದ್ದು ನನ್ನ ಸೌಭಾಗ್ಯ.


ಸುಧಾ   ಪಾಟೀಲ್

ಸುಧಾ ಪಾಟೀಲ್ ಅವರು ಮೂಲತಹ ಗದಗ ಜಿಲ್ಲೆಯವರು.ಇವರ ಸಾಹಿತ್ಯದ ಪಯಣಕ್ಕೆ ಇವರ ದೀಕ್ಷಾಗುರುಗಳಾದ ಲಿ. ಡಾ. ಜ.ಚ. ನಿ ಶ್ರೀಗಳೇ ಪ್ರೇರಣೆ.
ಸುಧಾ ಪಾಟೀಲ್ ಅವರ ಲೇಖನಗಳು.. ಕವನಗಳು ವಿವಿಧ ಪತ್ರಿಕೆಯಲ್ಲಿ.. ಪುಸ್ತಕಗಳಲ್ಲಿ ಪ್ರಕಟಗೊಂಡಿವೆ. ಇವರ ಜ. ಚ.ನಿ ಶ್ರೀಗಳ ” ಬದುಕು -ಬರಹ ” ಕಿರು ಹೊತ್ತಿಗೆ ಕಿತ್ತೂರು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂaಸೇವೆಯನ್ನು ಗೈದಿದ್ದಾರೆ.
ಹಲವಾರು ಸಂಘ -ಸಂಸ್ಥೆಗಳಲ್ಲಿ ಕಾರ್ಯಕಾರಿ ಸದಸ್ಯೆಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಯಾವತ್ತೂ ಇವರದು ಅಳಿಲುಸೇವೆ ಇದ್ದೇ ಇರುತ್ತದೆ.ಸುಧಾ ಪಾಟೀಲ್ ಅವರನ್ನು ಅರಸಿ ಬಂದ ಪ್ರಶಸ್ತಿಗಳು..ಅನುಪಮ ಸೇವಾ ರತ್ನ ಪ್ರಶಸ್ತಿ (ಪೃಥ್ವಿ ಫೌಂಡೇಶನ್ )
ಮಿನರ್ವ ಅವಾರ್ಡ್ ಮತ್ತು ದತ್ತಿ ನಿಧಿ ಪ್ರಶಸ್ತಿ ( ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ )ರಾಜ್ಯೋತ್ಸವ ಪ್ರಶಸ್ತಿ ( ಚೇತನಾ ಫೌಂಡೇಶನ್ )

Leave a Reply

Back To Top