ಸುಲೋಚನಾ ಮಾಲಿಪಾಟೀಲ ಕವಿತೆ-ಸ್ನೇಹ

ಕಾವ್ಯ ಸಂಗಾತಿ

ಸುಲೋಚನಾ ಮಾಲಿಪಾಟೀಲ

ಸ್ನೇಹ

ಈಜು ಕುಣಿತ ನೆಗೆತದ ಸ್ನೇಹ ಕಡಲ
ಬಿಚ್ಚು ಮನದ ಮಾತಿನ ಮಹಲ
ಕಳೆದ ಸಂತಸ ದಿನಗಳ ಜಾಲ
ದುಂಬಿಯಂತೆ ಹಾರಾಡುವ ಬಾಲ್ಯ
ಸ್ನೇಹದ ದಿನಗಳು ಮರೆತಿರುವಿರಾ ?

ಬೆಳೆದ ದಾರಿಯ ಹಳೆ ನೆನಪುಗಳು
ಉಯ್ಯಾಲೆಯಂತೆ ಕಳೆದ ಕ್ಷಣಗಳು
ಹೊಸದಾದ ಸ್ನೇಹ ಸಂಬಂಧಗಳ ಪುಟಗಳು
ಯೌವನದ ಸ್ನೇಹದಲಿ ಮರೆತ ಮನೆ ಮಾರುಗಳು
ಅದರಲ್ಲಿ ಬೆಳೆದುನಿಂತ ಭಾಂದವ್ಯ ಏನಂತ ಬಣ್ಣಿಸಲಿ ?

ಭೇದ ಭಾವವಿಲ್ಲದ ಭಾವೈಕ್ಯತೆಯ ಪಯಣ
ಬಡತನ ಸಿರಿತನವಿಲ್ಲದ ಸಮಾನತೆಯ ಬಣ
ಒಬ್ಬರಿಗೊಬ್ಬರು ಸಹಕರಿಸಿ ನಡೆವ ಪ್ರೀತಿಕರುಣ
ಜ್ಞಾನಾರ್ಜನೆಯಲ್ಲಿ ಹಂಚಿಕೊಂಡ ಕಲಿವ ಜ್ಞಾನ
ಆ ಸಂಬಂಧಗಳ ಗೊನೆ ಹೇಗಿತ್ತೆಂದು ಹೇಳಲಿ ?

ಸಂಸಾರದ ಜಂಜಾಟದಲ್ಲಿ, ಕಾಲಿಟ್ಟರೂ ಕೂಡ
ಸುಳಿದಾಡಿ ನಗಿಸುವವು ಆಗಾಗ ಸವಿ ನೆನಪಿನ ಗೂಡ
ತುಂಟಾಟದ ಸ್ನೇಹದ ಅಲೆ ಹಾದು ಹೋದವು ನೋಡಿ
ಆನಂದದ ಆ ದಿನಗಳು ಅವಿತು ಕುಳಿತಾವ ಮನದಡಿ
ಕಳೆದು ಹೋದ ನಮ್ಮ ಆ ಸುದಿನ ಹೇಗೆ ಬಿಚ್ಚಿಡಲಿ?

ವಿಹರಿಸುತ್ತಾ ನಡೆವ ಮುದಿತನದ ಹಾದಿಯಲಿ
ಉರುಳಿ ಹೋದ ವೈಭವದ ಕನಸುಗಳು ಮನದಲಿ
ಬಾಯಿ ಚಪ್ಪರಿಸುತ ಎಲ್ಲ ಚಿತ್ತಾರವು ಕಣ್ಣಿದುರು ಹಾದಂತೆ
ಎಣಿಕೆ ಇಲ್ಲದ ನೆನಪುಗಳು ಮರುಘಳಿಗೆಗೆ ನೆನೆಪಿಸಿದಂತೆ
ಸ್ನೇಹವೆಂಬ ಸ್ವರ್ಗವದು ಎಂತಹದೆಂದು ವಿವರಿಸಲಿ?


ಸುಲೋಚನಾ ಮಾಲಿಪಾಟೀಲ.

Leave a Reply

Back To Top