ಆಟಿ ಹಬ್ಬ ಮತ್ತು ಮದ್ದು ಸೊಪ್ಪು ವಿಶೇಷ.

seetamma

ವಿಶೇಷ ಲೇಖನ

ಕೊಡಗ್’ರ ಕಕ್ಕಡ ಪದ್ ನೆಟ್ಟ್ ನಮ್ಮೆ ಇಞ್ಞ ಮದ್ದ್ ತೊಪ್ಪ್ ವಿಸೇಸ.


ಆಟಿ ಹಬ್ಬ ಮತ್ತು ಮದ್ದು ಸೊಪ್ಪು ವಿಶೇಷ.

ಮಾಳೇಟಿರ ಸೀತಮ್ಮ ವಿವೇಕ್‌

ಕೊಡಗಿನ ಕಕ್ಕಡ ಮಾಸವು ಕರ್ನಾಟಕ ಪಂಚಾಂಗ ಪ್ರಕಾರ ಆಷಾಡ ಮಾಸವಾಗಿದೆ, ತುಳು ಹಾಗೂ ಕೆಲ ತಮಿಳು ಮತ್ತು ಮಲಯಾಳಿಗರಿಗೆ ಆಟಿ ಮಾಸವಾಗಿದೆ. ಆದರೆ ಕಕ್ಕಡ ಮತ್ತು ಆಷಾಡ ಮಾಸವು ಮಲೆನಾಡು ಹಾಗೂ ಇತರೆ ಪ್ರದೇಶಗಳ ಭೌಗೋಳಿಕ ಪರಿಸರ ಸನ್ನಿವೇಶಗಳಿಗೆ ಪೂರಕವಾಗಿ ವರ್ಷಂಪ್ರತಿ ತಾರೀಖಿನಲ್ಲಿ ಕೊಂಚ ವ್ಯೆತ್ಯಾಸ ಹೊಂದಿರುತ್ತದೆ. ಕಕ್ಕಡ ಎಂಬ ಪದವು ಕರ್ಕಾಟಕದಿಂದ->ಕರ್ಕಾಟವಾಗಿ->ಕಕ್ಕಡವಾಗಿದೆ. ಜುಲೈ ತಿಂಗಳ ಮಧ್ಯಭಾಗದಿಂದ ಆಗಸ್ಟ್ ತಿಂಗಳ ಮಧ್ಯದವರೆಗೆ ಕಕ್ಕಡ ಮಾಸವಾಗಿದೆ.
ಬಹುಮುಖ್ಯವಾಗಿ ಕಕ್ಕಡ ತಿಂಗಳು ಇತರ ಮಲೆನಾಡಿನವರಿಗಿಂತ, ವಿಶೇಷವಾಗಿ ಕೊಡಗಿನವರಿಗೆ ಅನೇಕ ಪ್ರಕೃತಿ ವಿಸ್ಮಯಗಳನ್ನು ತೋರಿಸುವಂತಹ ಮುಂಗಾರು ಮಳೆಯ ಕಾಲವಾಗಿದೆ. ಈ ವಿಶೇಷ ತಿಂಗಳಿನಲ್ಲಿ ಕೊಡಗಿನ ಬೇರೆ ಬೇರೆ ಸಮೂದಾಯಗಳು ಪ್ರಕೃತಿ ಪ್ರೇರಕ ಅನೇಕ ನಾಡ ಪದ್ಧತಿಗಳನ್ನು ಆಚರಿಸುತ್ತ ಬಂದಿದ್ದಾರೆ. ಕಕ್ಕಡ ತಿಂಗಳು ಬಿರುಸಾದ ಮಳೆ ಬೀಳುವ ಸಮಯವಾದ್ದರಿಂದ ಹಳ್ಳ, ಕೊಳ್ಳ, ನದಿಗಳು ತುಂಬಿ ಹರಿಯುವುದಲ್ಲದೆ ಪ್ರವಾಹ, ಪ್ರಕೃತಿ ವಿಕೋಪಗಳು ಕೂಡ ಸಂಭವಿಸುತ್ತಿರುತ್ತವೆ. ಅದೇ ಕಾರಣದಿಂದಾಗಿ ಪ್ರಕೃತಿ ಪೂಜೆ, ನದಿಗೆ ಆರತಿ

ಮುಂತಾದವುಗಳನ್ನು ನಡೆಸಲಾಗುತ್ತದೆ. ಆದರೆ ಯಾವುದೇ ಮದುವೆ, ನಾಮಕರಣದಂತಹ ಶುಭಕಾರ್ಯಗಳನ್ನು ನಡೆಸುವುದಿಲ್ಲ. ಮಾತ್ರವಲ್ಲ ದೇವರ ಹಬ್ಬ, ಜಾತ್ರೆ, ತೀರ್ಥಸ್ನಾನಗಳಾವುದನ್ನೂ ಮಾಡುವುದಿಲ್ಲ. ಈ ಸಮಯದಲ್ಲಿ ಕಾವೇರಿಯು ಋತುಮತಿಯಾಗಿರುತ್ತಾಳೆಂಬ ಮಾತು ಪ್ರಚಲಿತದಲ್ಲಿದೆ. ವೈಜ್ಞಾನಿಕವಾಗಿ ಹೇಳುವುದಾದರೆ ನೆಲ ಹದಗೊಂಡು ಕೆಸರುಮಯವಾಗಿರುವುದು, ವಿಪರೀತ ಜಾರುವುದು, ಕಾಡು ಪ್ರಾಣಿ, ವಿಷಜಂತುಗಳ ಚಲನವಲನ, ಪ್ರವಾಹ ಮುಂತಾದ ಅವಘಡಗಳಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಆಗಿನ ಕಾಲದಲ್ಲಿ ಲೋಕಜ್ಞಾನ ಪಡೆದಂತವರು ಮುಖ್ಯವಾಗಿ ಅನಕ್ಷರಸ್ಥರು, ವೃದ್ಧರು, ಹೆಂಗಸರು, ಮಕ್ಕಳ ಮನಸ್ಸನ್ನು ಹಿಡಿದಿಟ್ಟು ಅಪಾಯದಿಂದ ಪಾರುಮಾಡಲು, ದೇವರ ಹೆಸರಿನಲ್ಲಿ ಅನೇಕ ಕಟ್ಟುಪಾಡುಗಳನ್ನು ಹೆಣೆದಿಟ್ಟು ನಿಯಮಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಆದರೆ ಈಗಿನ ಅಕ್ಷರಸ್ಥರಿಗೆ ಪ್ರಕೃತಿ ಜೀವಂತಿಕೆಯ ಹಿನ್ನಲೆ ತಿಳಿದಿರುವುದರಿಂದ ಕಕ್ಕಡ ವಿಶೇಷತೆಗಳನ್ನು ಅರಿವಿನಿಂದ ಪರಿಪಾಲಿಸುತ್ತಿದ್ದಾರೆ.
ಮುಖ್ಯವಾಗಿ ಕೊಡಗಿನಲ್ಲಿ ಕಕ್ಕಡ ತಿಂಗಳಿನಲ್ಲಿ ಗದ್ದೆ ನಾಟಿಕೆಲಸ ಮುಗಿಯುತ್ತಿರುತ್ತದೆ. ಧೋ ಎಂದು ಸುರಿಯುವ ಮಳೆ, ಚಳಿ, ಗಾಳಿಯನ್ನು ಲೆಕ್ಕಿಸದೆ ಮೈಮುರಿದು ದುಡಿಯುವ ಶ್ರಮಜೀವಿ ಕೃಷಿಕನಿಗೆ ಚೈತನ್ಯ ತುಂಬಲು ಈ ಹಬ್ಬವನ್ನು  ಆಚರಿಸಲಾಗುತ್ತದೆ. ಅದರಲ್ಲೂ ಮುಂಗಾರಿನಲ್ಲಿ ದೈಹಿಕವಾಗಿ ದುಡಿಯುವವರ ಆರೋಗ್ಯ ರಕ್ಷಣೆ ಇಂತಹ ಸಮಯದಲ್ಲಿ ಅತೀ ಮುಖ್ಯವಾಗಿದೆ. ಅದಕ್ಕೆಂದೇ ಪ್ರಕೃತಿಯು ವರವಾಗಿ ಅಣಬೆ, ಏಡಿ, ನಾಟಿಕೋಳಿ, ಕಣಿಲೆ, ಕೆಸುವುನಂತಹ ಉಷ್ಣ ಅಂಶ ಯಥೇಚ್ಚವಿರುವ ಆಹಾರದೊಂದಿಗೆ ಔಷಧಿಯುಕ್ತ ಗಿಡ “ಮದ್ದ್ ತೊಪ್ಪ್” ಎಂಬ ವಿಶಿಷ್ಟವಾದ ಆರೋಗ್ಯ ರಕ್ಷಾಕವಚದ ನೈಸರ್ಗಿಕ ಸಸ್ಯವನ್ನೂ ಒದಗಿಸಿದೆ. ಈ ಮದ್ದು ಸೊಪ್ಪಿನ ವೈಜ್ಞಾನಿಕ ಹೆಸರು “ಜೆಸ್ಟಿಸಿಯ ವೈನಾಡೆನ್ಸಿಸ್”. ಇದು ಎಕನ್ತಾಸೀಯೆ(1) ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ.

 ಅದರಲ್ಲೂ ಮದ್ದ್ ತೊಪ್ಪ್ , ಆಟಿಸೊಪ್ಪು ಅಥವ ಕುರುಂಜಿ ಎಂದು ಕರೆಯಲ್ಪಡುವ ಗಿಡದ ದಂಟು ಮತ್ತು ಸೊಪ್ಪಿನಿಂದ ತೆಗೆದ ರಸದಿಂದ ಮಾಡಿದ ಸಿಹಿ ಪದಾರ್ಥವನ್ನು ಕಕ್ಕಡ ಹದಿನೆಂಟನೆಯ ದಿನದಂದೇ ಉಣ್ಣಲು ಬಳಸಲಾಗುತ್ತದೆ. ಕಕ್ಕಡ ಹದಿನೆಂಟರ ಆಸುಪಾಸು ಹೊರತು ಪಡಿಸಿದರೆ ಬೇರೆ ದಿನಗಳಲ್ಲಿ ಆ ಗಿಡದಿಂದ ತೆಗೆದ ರಸಕ್ಕೆ ವಿಶೇಷವಾದ ಪರಿಮಳವಾಗಲಿ, ನೇರಳೆ ಬಣ್ಣವಾಗಲಿ ಇರುವುದಿಲ್ಲ., ಅದೇ ಈ ಗಿಡದ ವೈಶಿಷ್ಟ್ಯತೆ!. ಕಕ್ಕಡ ಆರಂಭಗೊಂಡ ಹದಿನೆಂಟನೆಯ ದಿನ ಹದಿನೆಂಟು ರೀತಿಯ ಔಷಧೀಯ ಗುಣಗಳು ಈ ಗಿಡದಲ್ಲಿ ಸೇರುತ್ತವೆ ಎಂಬುದು ಪೂರ್ವಜರಿಂದ ವರ್ಗಾಯಿಸಲ್ಪಡುತ್ತ ಬಂದಿರುವ ರಹಸ್ಯ!. ಹಾಗಾಗಿ ಯಥೇಚ್ಚವಾಗಿ ಆಗಸ್ಟ್ ೨,೩,೪ ರಂದು ಇದರ ಖಾದ್ಯ ತಯಾರಿಸಿ ಹಬ್ಬ ಮಾಡಲಾಗುತ್ತದೆ.  ಮನುಷ್ಯನ ಎತ್ತರ ಅಥವ ಫಲವತ್ತು ಪ್ರದೇಶದಲ್ಲಿ ಇನ್ನೂ ಎತ್ತರ ಬೆಳೆಯುವ, ಕಡ್ಡಿಗಳಿಂದ ಹೊರಡುವ ಚೂಪಾದ ಎಲೆಗಳನ್ನು ಕಡ್ಡಿಸಮೇತ ಹಿಂದಿನ  ದಿವಸ ನೀರನಲ್ಲಿ ಹಾಕಿಟ್ಟು ಸೋಸಿದ ಅಥವ ಆ ದಿನ ಕುದಿಸಿದ ನೀರಿನ ರಸವನ್ನು ಬಳಸಿ ತಯಾರಿಸಲಾಗುವ ಪ್ರಮುಖ ಖಾದ್ಯ, ಅಕ್ಕಿ, ಬೆಲ್ಲ, ತೆಂಗಿನ ತುರಿ ಬೆರೆಸಿ ತಯಾರಿಸಲಾದ ಪಾಯಸ.
ಅಂದು ವಿಶೇಷವಾಗಿ ಕೊಡವರ ಮನೆಯಲ್ಲಿ ನೆಲ್ಲಕ್ಕಿ ಬೊಳ್ಚ ಬೆಳಗಿಸಿ, ಗುರು ಕಾರಣರ ನೆನೆದು ಮದ್ದ್ ಪಾಯಸವನ್ನು ನೈವೇದ್ಯ ಮಾಡಲಾಗುತ್ತದೆ. ತದನಂತರ  ಕಿರಿಯರೆಲ್ಲ ಮನೆ ಹಿರಿಯರ ಕಾಲಿಗೆ ಬಾಗಿ ನಮಸ್ಕರಿಸಿ ಆ ನಂತರ,  ಮನೆಮಂದಿಗೆಲ್ಲ ನಾಡ ಜೇನು ಬೆರೆಸಿದ ನಾಟಿ ಹಸುವಿನ ತುಪ್ಪದಿಂದ ಮಾಡಿದ ಪಾಯಸ ಉಣಲು ಬಡಿಸಲಾಗುತ್ತದೆ. ಈ ಮದ್ದುಸೊಪ್ಪಿನ ಅರ್ಕದಿಂದ ತಯಾರಿಸಲ್ಪಡುವ ಹಲ್ವ, ತಟ್ಟೆಪುಟ್ಟ್, ಇತರೆ ಸಿಹಿತಿಂಡಿಗಳ ತಯಾರಿಕೆ ಮತ್ತು ಪ್ರಸ್ತುತ ಪಡಿಸುವಿಕೆಯ ಮೂಲಕ ಹೆಣ್ಣುಮಕ್ಕಳ ಅಡುಗೆ ಕೌಶಲ್ಯವೂ ಬೆಳಕಿಗೆ ಬರುತ್ತದೆ.  
ಆನಂತರದ ನಿತ್ಯ ಬೋಜನದಲ್ಲಿ ರೊಟ್ಟಿ, ಕಡುಬು ಅನ್ನ ಇದ್ದೇ ಇರುತ್ತದೆ ಅದರ ಜೊತೆ ನಿಸರ್ಗದ ಕೊಡುಗೆಗಳನ್ನು ಬಳಸಿ ತಯಾರಿಸಿದ ಆಹಾರವನ್ನು ಮನೆಮಂದಿಯೆಲ್ಲ ಜೊತೆ ಕುಳಿತು ಹರಟೆ ಹೊಡೆಯುತ್ತ ಚಪ್ಪರಿಸುವುದೇ ದೊಡ್ಡ ಹಬ್ಬವಾಗಿರುತ್ತದೆ. ಆ ದಿನ ಚೆನ್ನಾಗಿ ಊಟ ಮಾಡಿದವರಿಗೆ ಶರೀರದ ಉಷ್ಣತೆ ಏರಿದ ಅನುಭವ ಕೂಡ ಆಗುತ್ತದೆ!. ಕಕ್ಕಡ ತಿಂಗಳ ಇದೇ  ಸಂದರ್ಭದಲ್ಲಿ ನಾಟಿ ಓಟ, ಕೆಸರುಗದ್ದೆ ಆಟೋಟ ಅಲ್ಲದೆ ಒಳಾಂಗಣ ಕ್ರೀಡೆಗಳು ಕೂಡ ನಡೆಯುತ್ತವೆ.
(ಗೂಗಲ್’ನಲ್ಲಿ ಕೊಡವ ಭಾಷೆಯ “ಮದ್ದ್ ತೊಪ್ಪ್”, ಅನ್ನು ‘ಮದ್ದೆ ಟೊಪ್ಪು’ ಎಂದು ದಾಖಲು ಮಾಡಲಾಗಿದೆ. ಆಂಗ್ಲದಿಂದ ಕನ್ನಡಕ್ಕೆ ಭಾಷಾಂತರಗೊಂಡು ಆ ರೀತಿಯ ದೋಷ ಉಂಟಾಗಿರಬಹುದು, ಅದನ್ನು “ಮದ್ದ್ ತೊಪ್ಪ್” ಅಥವ “ಮದ್ದು ಸೊಪ್ಪು” ಎಂದೇ ಓದಬೇಕು).  ಕೊಡಗಿನಲ್ಲಿ ಕೊಡವರು ಮತ್ತು ಕೊಡವ ಭಾಷಿಕರೆಲ್ಲರು ಈ ಕಕ್ಕಡ ಪದ್’ನೆಟ್ಟ್  (ಆಟಿ ಹದಿನೆಂಟನೆಯ ದಿನ) ಅನ್ನು, ನಮ್ಮೆ(ಹಬ್ಬ)ಯಾಗಿ ಆಚರಿಸುತ್ತಾರೆ. ಕಕ್ಕಡ “ಮದ್ದ್ ತೊಪ್ಪುನಿಂದ ತೆಗೆದ ನೀರಿನಿಂದ” ತಯಾರಿಸಲಾದ ಖಾದ್ಯ ವಿಶೇಷವಾಗಿ ಮಕ್ಕಳಿಗೆ ಕುತೂಹಲದ ಕೇಂದ್ರ ಬಿಂದು. ಏಕೆಂದರೆ ಆಟಿ ಸೊಪ್ಪು ರಸದಿಂದ ತಯಾರಿಸಿದ ಯಾವುದೇ ಖಾದ್ಯ ಸೇವಿಸಿದ ಎಂಟು ತಾಸು ನಂತರ ಮೂತ್ರ ವಿಸರ್ಜಿಸುವಾಗ, ಮೂತ್ರ ಕೆಂಪು ಬಣ್ಣದಿಂದ ಹೊರಹೋಗುತ್ತದೆ. ಹಾಗಾಗಿ ಯಾರದ್ದು ಹೆಚ್ಚು ಬಣ್ಣ ಏರಿದೆ ಎಂದು ಪರೀಕ್ಷಿಸಿಕೊಳ್ಳುಲು ಹೋಗಿ ಎದುರಿಸುವ ಹಾಸ್ಯ ಸನ್ನಿವೇಶಗಳು ಅಂದು ಅಧಿಕ ಮತ್ತು ಸಾಮಾನ್ಯವೆಂಬಂತೆ ಇರುತ್ತವೆ. ಅಲ್ಲದೆ ಹೆಚ್ಚು ತಿಂದರೆ ಹೆಚ್ಚೆಚ್ಚು ರಂಗೇರುತ್ತದೆಂದು ಹೆಚ್ಚು ಪಾಯಸ ತಿನ್ನುವವರು ಯಾರೆಂಬ ಪೈಪೋಟಿ ನಡೆಯುವುದೂ ಕೂಡ ಇದೆ…., ತಾಯಿಯಂದಿಯರಿಗೆ ಆ ದಿನ ಮಕ್ಕಳಿಗೆ ಊಟ ಮಾಡಿಸುವ ಜಂಜಾಟದಿಂದ ಮುಕ್ತಿ ಸಿಗುವುದೂ ಉಂಟು. ಎಷ್ಟೋ ಬಾರಿ ಈ ವಿಚಾರ ತಿಳಿಯದ ಹೊಸಬರು ಕೆಂಪು ಮೂತ್ರ ನೋಡಿ ಆಸ್ಪತ್ರೆಗೆ ದೌಡಾಯಿಸಿದ್ದೂ ಉಂಟು.! ಇವೆಲ್ಲವು ಕಕ್ಕಡದ ಮುಂಗಾರನ್ನು ನೆನಪಿನಲ್ಲಿ ಇಡುವ ಪ್ರಾಕೃತಿಕ ಬಾಂಧವ್ಯದ ಹಬ್ಬವೇ ಆಗಿದೆ. ಒಟ್ಟಿನಲ್ಲಿ ಹೇಳುವುದಾದರೆ ತಂಪಾದ ಹಸಿ ಹಸಿ ಹವಾಮಾನದ ಶೀತಕಾಯಿಲೆಗಳಿಂದ ಮುಕ್ತರಾಗಲು, ದೇಹ ರಕ್ಷಣೆ ಮಾಡಿಕೊಳ್ಳುವ ನಿಸರ್ಗದತ್ತ ಆಹಾರ ಸೇವನೆಯ ಹಬ್ಬವೇ ಕಕ್ಕಡ ಪದ್’ನೆಟ್ಟ್ ನಮ್ಮೆ ಅಥವ ಆಟಿ ಹಬ್ಬ.
ತುಳು ನಾಡಿನವರು ಕೂಡ ಆಟಿ ಹದಿನೆಂಟನ್ನು ವಿಶೇಷವಾಗಿ ಆಚರಿಸುತ್ತಾರೆ. ಅವರು ಆ ದಿನವನ್ನು ಕಡಲು ಉಕ್ಕುವ ಸಮಯ ಎನ್ನುತ್ತಾರೆ. ಅಂದರೆ ಆ ದಿನ ಸಂಪೂರ್ಣವಾಗಿ ಕಡಲಿನ ಒಡಲು ತುಂಬಿರುತ್ತದೆ ಎಂದು ಅವರು ಪರಿಗಣಿಸುತ್ತಾರೆ. ಹಾಗಾಗಿ ಕಡಲಿಗೆ ಹಾಲು ಸುರಿದು ಸಮುದ್ರ ದೇವನನ್ನು ಶಾಂತಗೊಳಿಸುವ ಪದ್ಧತಿಯನ್ನು ಪಾಲಿಸುತ್ತಾರೆ. ಅವರು ಈ ಸಂದರ್ಭದಲ್ಲಿ ಪತ್ರೊಡೆಯಂತಹ ತಿನಿಸು ತಯಾರಿಸುವುದು ವಿಶೇಷವಾಗಿದೆ. ಅದರಂತೆ ಕೊಡಗಿನ ತುಳುನಾಡಿಗರು ಕಾವೇರಿಗೆ ಹಾಲು ಎರೆಯುತ್ತಾರೆ. ಇನ್ನು ತಮಿಳರು “ಆಟಿ ಪದಿನೆಟ್ಟಾಂ ಪೆರಕ್ಕುಂ” ಎಂದು ಆಚರಿಸುತ್ತಾರೆ. ಆ ದಿನ ತಮಿಳರು ಸಿಹಿಪೊಂಗಲ್, ಖಾರಪೊಂಗಲ್ ಮತ್ತು ಇತರೆ ಸಿಹಿ ತಿನಿಸುಗಳನ್ನು ತಯಾರಿಸಿ ಪ್ರಸಾದ ಹಂಚುತ್ತಾರೆ. ಕಾವೇರಿ ತೀರದ ತಮಿಳಿಗರು ಮತ್ತು ಇತರೆ ಕೆಲ ಜನಾಂಗದವರು ಆ ದಿನ ಕಾವೇರಿ ನದಿಗೆ ಆರತಿ ಮಾಡಿ ಬಾಗಿನ ಅರ್ಪಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಕ್ಕಡ ಮದ್ದು ಸೊಪ್ಪು ಸಸ್ಯವು ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ ಮತ್ತು ವೈಜ್ಞಾನಿಕವಾಗಿಯೂ ಅದು ಮಹತ್ವವನ್ನು ಪಡೆದುಕೊಂಡಿದೆ.
ಕೊಡಗಿನ ಸುಧಾ ಮೇದಪ್ಪ, ಗೀತ  ಸಿಂಗ್ ಮತ್ತು ಆರ್ ವೈಷ್ಣವಿಯವರು 2011ರಲ್ಲಿ ಕಕ್ಕಡ ಮದ್ದು ಸೊಪ್ಪಿನ ಮೇಲೆ “ಫೈಟೋಕೆಮಿಕಲ್ ಆಂಡ್ ಆಂಟಿ ಆಕ್ಸಿಡೆಂಟ್ ಸ್ಕ್ರೀನಿಂಗ್ ಆಫ್ ಜೆ. ವೈನಾಡೆನ್ಸಿಸ್” ಎಂಬ ಸಂಶೋಧನಾತ್ಮಕ ಪ್ರಬಂಧ ಬರೆದಿರುವುದು “ಆಫ್ರಿಕನ್ ಜರ್ನಲ್ ಆಫ್ ಪ್ಲಾನ್ಟ್ ಸೈನ್ಸ್” ನಲ್ಲಿ ಪ್ರಕಟವಾಗಿದೆ.
2002ರಲ್ಲಿ ಶ್ರೀಯುತ ಸುಬ್ಬಯ್ಯನವರು “ಕೊಲೆಸ್ಟ್ರಾಲ್ ಲೋವರಿಂಗ್ ಪ್ರೋಪರ್ಟೀಸ್ ಆಫ್ ಕಕ್ಕಡ ಮದ್ದು ಸೊಪ್ಪು” ಎಂಬ ವಿಷಯವಾಗಿ ಸಂಶೋದನೆ ನಡೆಸಿ ಮದ್ದ್ ತೊಪ್ಪ್, ಪೋಲಿಫೆನ್ಡ್ಸ್, ಫ್ಲೇವೊನಾಯ್ಡ್ಸ್ ಗಳನ್ನೊಳಗೊಂಡಿದ್ದು, ಶರೀರದ ಸೆಲ್ಯುಲರ್ ಕೊಲೆಸ್ಟ್ರಾಲ್ ಸಮತೋಲನ ಕಾಯ್ದುಕೊಳ್ಳಲು ಸಹಕರಿಸುತ್ತದೆ ಎಂಬುದನ್ನು ಪತ್ತೆ ಮಾಡುವುದರಲ್ಲಿ ಯಶಸ್ಸು ಪಡೆದರಲ್ಲದೆ ಇದರ ಪೇಟೆಂಟ್ ಅನ್ನು ಕೂಡ ಪಡೆದುಕೊಂಡಿದ್ದಾರೆ.
ಹೀಗೆ ಇಂದಿನ ಆಧುನಿಕ ಯುಗದಲ್ಲಿ ಅನೇಕ ಸಾಧಕರು ನಮ್ಮೂರಿನ “ಕಕ್ಕಡ ಮದ್ದ್ ತೊಪ್ಪ್” ಪರಿಮಳವನ್ನು ಮುಂಗಾರು ಸೊಗಡಿನೊಂದಿಗೆ, ವೈಜ್ಞಾನಿಕ ಸಂಶೋದನೆಗಳೊಂದಿಗೆ ಪ್ರಪಂಚದಾದ್ಯಂತ ಹರಡಿದ್ದಾರೆ ಹಾಗೂ ರೈತರಿಗೆ ಸಲ್ಲಬೇಕಾದ ಒಳಿತನ್ನು ಪ್ರಸರಿಸುತ್ತಲೂ ಬಂದಿದ್ದಾರೆ.

——————————

ಮಾಳೇಟಿರ ಸೀತಮ್ಮ ವಿವೇಕ್‌

2 thoughts on “ಆಟಿ ಹಬ್ಬ ಮತ್ತು ಮದ್ದು ಸೊಪ್ಪು ವಿಶೇಷ.

  1. ಒಳ್ಳೆ ವಿಚಾರ,ಬಯಲು ಸೀಮೆ ಜನತೆಗೆ ತಿಳಿಸಿ ಕೊಟ್ಟಿದ್ದಕ್ಕೆ,ಮದ್ದು ಗಿಡವನ್ನು ನಾವು ಸಹ ಬೆಳೆದಿದ್ದೇನೆ,ಇದ್ದನ್ನ ರಾಜ್ಯದ ವಿವಿಧ ಭಾಗಗಳಲ್ಲಿ ಬೆಳೆಯಬಹುದು

Leave a Reply

Back To Top