ಡಾ ಅನ್ನಪೂರ್ಣ ಹಿರೇಮಠ- ಗಜಲ್

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ-

ಗಜಲ್

ಉಕ್ಕಿ ಉಕ್ಕಿ ಬರುವ ಹಂಬಲಗಳ ಹತ್ತಿಕ್ಕುವ ದಾರಿ ಕಾಣೆನೋ ಸಖ
ಹೊತ್ತಿ ಉರಿಯುವ ತುಡಿತಗಳ ತಡೆಯುವ ದಾರಿ ಕಾಣೆನೋ ಸಖ

ಅತ್ತು ಅತ್ತು ಬತ್ತಿ ಹೋಗಿ ಕಣ್ಣೀರ ಕೊಳವಿಂದು ಒಣಗಿ ಹೋಗಿದೆ
ಸುತ್ತಿ ಸುಳಿವ ಅನಂತ ಆಸೆಗಳ ನಿಲ್ಲಿಸುವ ದಾರಿ ಕಾಣೆನೋ ಸಖ

ಕಾತರಿಸಿ ಕಾತರಿಸಿ ಕುಗ್ಗಿ ಹೋಗಿ ಆಂತರ್ಯವಿಂದು ಬರಡಾಗಿದೆ
ಹೊತ್ತುಗೊತ್ತಿಲ್ಲದೆ ಕಾಡುವ ಕನಸುಗಳ ಕುಗ್ಗಿಸುವ ದಾರಿ ಕಾಣೆನೋ ಸಖ

ಬೆಂದು ಬೆಂದು ಕಮರಿ ಹೋಗಿ ಜೀವವಿಂದು ತೊಳಲಾಡುತಿದೆ
ಮಿತಿಮೀರಿ ಬೇಡುವ ಬಯಕೆಗಳ ಬತ್ತಿಸುವ ದಾರಿ ಕಾಣೆನೋ ಸಖ

ನೊಂದು ನೊಂದು ನಲುಗಿ ನರಳಿಹೋಗಿ ತನುವಿಂದು ಬಳಲಿದೆ
ನಲಿಯಬೇಕೆಂದು ಮಿಡಿವ ತಂತಿಗಳ ನುಡಿಸುವ ದಾರಿ ಕಾಣೆನೋ ಸಖ

ನಿನ್ನ ಅರಸಿ ಅರಸಿ ಕಣ್ಣುಗಳು ಕುರುಡಾಗಿ ನೋಟವಿಂದು ನರಳಿದೆ
ಮನ ಬಿಚ್ಚಿ ಮಾತಾಡಬೇಕೆಂದ ಮಾತುಗಳ ಕಟ್ಟಿಹಾಕುವ ದಾರಿ ಕಾಣೆನೋ ಸಖ

ಬಡಿ ಬಡಿದು ಹರಿದು ಹೋಗಿ ಅನುಳ ಎದೆ ತಮಟೆಗಿಂದು ಗಾಯವಾಗಿದೆ
ರಭಸದಿ ಹರಿ ಹರಿದು ಬರುವ ಪ್ರೀತಿ ಅಲೆಗಳ ತಡೆಯುವ ದಾರಿ ಕಾಣೆನೋ ಸಖ


ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top