ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಮಸ್ತಕದ ಮಣಿ ಮುಕುಟ ಪುಸ್ತಕ

“ದೇಶ ಸುತ್ತು ಕೋಶ ಓದು “ಎಂಬ ಮಾತಿದೆ. ದೇಶ ಸುತ್ತಬೇಕಾದರೆ ನಮಗೆ ಮೊದಲು ಜ್ಞಾನ ಬೇಕು. ಆ ಜ್ಞಾನವನ್ನು ನೀಡುವ ಮಾಹಿತಿಯ ಮೂಲವೇ ಪುಸ್ತಕ. ಆದರೆ ಇಂದಿನ ತಾಂತ್ರಿಕ ಯುಗದಲ್ಲಿ ಬಯಸಿದ  ಮಾಹಿತಿಯನ್ನು ಒಂದು ಸೆಕೆಂಡ್ನಲ್ಲಿ ಪಡೆಯಲು ಮೊಬೈಲ್ನ ಗೂಗಲ್ ಗೆ ಹೋಗಿ ಟೈಪ್ ಅಥವಾ ಧ್ವನಿ ಸಂದೇಶ ಕಳಿಸಿದರೆ ಕ್ಷಣಾರ್ಧದಲ್ಲಿ ಆ ಮಾಹಿತಿ ಲಭ್ಯವಾಗುತ್ತದೆ. ಹೀಗಿದ್ದಾಗ ಪುಸ್ತಕ ಓದುವ ಸಂಸ್ಕೃತಿಯನ್ನು ನಮ್ಮ ಮಕ್ಕಳಲ್ಲಿ ಬೆಳೆಸಲು ಹೇಗೆ ಸಾಧ್ಯ?.

 ಶಾಲೆಯಿಂದಮನೆಗೆ ಬಂದ ಮಕ್ಕಳುತಮ್ಮ ಬಟ್ಟೆ ಬದಲಿಸಿ ತಿಂಡಿ ತಿಂದು ಮನೆಕೆಲಸ (Homework)ಮಾಡಿ ಕುಳಿತರೆಂದರೆ ಉಳಿದ ವೇಳೆಯನ್ನು ಮೊಬೈಲ್ನಲ್ಲಿ ಗೇಮ್ ಗಳನ್ನು ಆಡುವದರಲ್ಲಿ ಇಲ್ಲವೇ ಟಿ. ವಿ ಯಲ್ಲಿ ಕಾರ್ಟೂನ್ ನೋಡುವುದರಲ್ಲಿ ಮಗ್ನರಾಗಿರುತ್ತಾರೆ. ನಂತರ ಊಟ ಆಮೇಲೆ ನಿದ್ರೆ. ಇನ್ನೂ ಮರದಿನ ಬೆಳಗಾದಾಗ ಪಠ್ಯಕ್ಕೆ ಸಂಬಂಧಿಸಿದ ಪುಸ್ತಕ ಓದಬಹುದೇ ವಿನಃ ಬೇರೆ ಪುಸ್ತಕ ಮನೆಯಲ್ಲಿದ್ದರೂ ಅಪ್ಪಿ ತಪ್ಪಿಯೂ ನೋಡುವದಿಲ್ಲ.

ಇನ್ನೂ ಕೆಲವು ಮನೆಗಳಲ್ಲಿತಾಯಂದಿರು ತಾವು ಕೆಲಸ ಮಾಡುವಾಗ ಮಕ್ಕಳು ಪಿಡಿಸದಂತೆ ಆಟಿಕೆಯ ಬದಲು ಮೊಬೈಲ್ ಕೊಡುವದು ವಾಡಿಕೆಯಾಗಿದೆ. ಅದೇ ಮುಂದೆ  ಚಟವಾಗಿ, ಹಠವಾಗಿ ಪರಿಣಮಿಸುತ್ತಿದೆ. ಓದುವ ಸಂಸ್ಕೃತಿಯನ್ನು ಬೆಳೆಸುವ ಪರಿಪಾಟ ಮೊದಲ ಶಾಲೆಯಾದ ಮನೆಯಿಂದಲೇ ಪ್ರಾರಂಭವಾಗಬೇಕು.
ಆಲ್ಬರ್ಟ್ ಐನ ಸ್ಟೀನ  ಹೇಳು ವಂತೆ “ನಿಮ್ಮ ಮಕ್ಕಳು ಕಾಲ್ಪನಿಕ ಕಥೆಪುಸ್ತಕದ ಓದುಗರರಾಗಬೇಕೆಂದರೆ ಅವರಿಗೆ ಕಾಲ್ಪನಿಕ ಕಥೆ ಪುಸ್ತಕಗಳನ್ನು ನೀಡಿ, ಅವರು ಹೆಚ್ಚು ಕಾಲ್ಪನಿಕ ಕಥೆ ಪುಸ್ತಕದ ಓದುಗರಾರಾಗಬೇಕೆಂದರೆ ಹೆಚ್ಚು ಹೆಚ್ಚು ಕಾಲ್ಪನಿಕ ಕಥೆ ಪುಸ್ತಕಗಳನ್ನು ನೀಡಿ “ಪಾಲಕರಿ ಗೆ ಹೇಳಿದಪಾಲಕರ ಕರ್ತವ್ಯದ ಮಾತುಗಳು ಓದುವ ಸಂಸ್ಕಾರ ವು ಮನೆಯಿಂದ ಪ್ರಾರಂಭವಾಗಬೇಕೆನ್ನುವ ಮಾತು ಮಾರ್ಮಿಕವಾಗಿದೆ.
ನಿಜ,ಅಂಕಗಳಿಗೆ ಜೋತು ಬಿದ್ದು ಪುಸ್ತಕದ ಹುಳುಗಳನ್ನಾಗಿಸುವ ಪಾಲಕರು ಎದ್ದರೂ ಬಿದ್ದರೂ ಪಠ್ಯ ಪುಸ್ತಕಕ್ಕೆ ಮಕ್ಕಳನ್ನು ಸೀಮಿತಗೊಳಿಸುತ್ತಾರೆ. ಈ ಅಪೇಕ್ಷೆ ಸ್ಪರ್ಧಾತ್ಮಕ ಯುಗದಲ್ಲಿ ಪಾಲಕರ ಒತ್ತಾಸೆ,ತಪ್ಪಲ್ಲ ಆದರೆ  ಮಕ್ಕಳ ಬೆಳುವಣಿಗೆಯಲ್ಲಿ ಓದು ಕಲಿಕೆಯ ಜೊತೆ ಜೊತೆ ಸಾಗಬೇಕಿದೆ.

“ಪುಸ್ತಕಗಳನ್ನು ನಿಜವಾಗಿ ಪ್ರೀತಿಸುವವನಿಗೆ ಒಳ್ಳೆಯ ಸ್ನೇಹಿತರ ಅಗತ್ಯ ಕೂಡಾ ಇಲ್ಲ”ಎಂದು ಬರೋ ಎಂಬ ಆಂಗ್ಲ ಲೇಖಕ ಹೇಳಿದ್ದಾನೆ. ನಮ್ಮನ್ನು ಆಲೋಚನೆ ಮತ್ತು ಅನುಭವಗಳ ಹೊಸ ಲೋಕಕ್ಕೆ ಕೊಂಡೊಯ್ಯುವ ಪುಸ್ತಕಗಳು ನಾವು ಕುಳಿತಲ್ಲಿಯೇ ಶತಮಾನಗಳ ಬುದ್ಧಿವಂತಿಕೆ ಚಾತುರ್ಯಗಳನ್ನು ನಮ್ಮದಾಗಿಸಿಕೊಳ್ಳುವಂತೆ ನಮ್ಮ ಮಸ್ತಕದ ಮುಕುಟ ಮಣಿಯಾಗಿವೆ.


ಇಂದು ಡಿ. ವಿ. ಜಿ ನಮ್ಮಲ್ಲಿಲ್ಲ. ಆದರೆ ಅವರು ಬರೆದ ಪುಸ್ತಕಗಳಿವೆ. ಅವರ ಅಭಿವ್ಯಕ್ತಿಸಿದ ಆಲೋಚನೆಗಳು ಸರ್ವಕಾಲಿಕ ಮಾನ್ಯ. ವಾಲ್ಮೀಕಿ ಮುನಿಗಳು ವಿರಚಿತ ರಾಮಾಯಣ ಒಂದು ಕಾವ್ಯ ಶರಧಿ. ಕಡೆದಷ್ಟು ಅಲ್ಲಿ ಸುಧೆ ಲಭ್ಯ. ಹಾಗೆಯೇ ಮಹಾಭಾರತ, ಬೈಬಲ್, ಕುರಾನ್ ಸರ್ವ ಧರ್ಮಗಳ ತಿರುಳು ದೇವನೊಬ್ಬ ನಾಮ ಹಲವು ಎಂಬ ಭಾವೈಕ್ಯತೆಯ ಭಾವ ಮಾನವೀಯತೆ ನೆಲೆಯಲ್ಲಿ ಬದುಕಲು ಪ್ರೇರಣೆಯಗಿದೆ.ನೊಂದವರಿಗೆ, ಎದೆಗುಂದಿದವರಿಗೆ, ನಿರುತ್ಸಾಹಿಗಳಿಗೆ ಬದುಕುವ ಛಲವನ್ನು ಹುಟ್ಟು ಹಾಕಿ ದಾರಿ ತಪ್ಪದೆ ಬದುಕಲು ಪುಸ್ತಕಗಳು ದಾರಿದೀಪವಾಗಿವೆ.

ಮಕ್ಕಳು ಪಾಲಕರನ್ನು ಅನುಕರಣೆ ಮಾಡುತ್ತಾರೆ. ಆದ್ದರಿಂದ ನಾವು ಮಕ್ಕಳಿಗೆ ಆಚಾರ ನುಡಿಯುವ ಮೊದಲು ನಮ್ಮ ನಡೆ ಸರಿಯಾಗಿರಬೇಕು. ನಾವು ಪುಸ್ತಕ ಓದುತ್ತಿದ್ದರೆ ನಮ್ಮ ಮಕ್ಕಳು ಓದಲು ಆಸಕ್ತಿ ತೋರುತ್ತಾರೆ. ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಪುಸ್ತಕ ಓದುವದನ್ನು ಒಂದು ಹವ್ಯಾಸವಾಗಿ ಬೆಳೆಸಬೇಕು. ಅದಕ್ಕಾಗಿ ಬಣ್ಣ ಬಣ್ಣದ ಚಿತ್ರಗಳುಳ್ಳ ಕಥೆ ಪುಸ್ತಕಗಳನ್ನು ನೀಡಿ ಕಥೆ ಹೇಳಲು ರೂಢಿಸಬೇಕು. ಅದರ ಕುರಿತು ಪ್ರಶ್ನೆಗಳನ್ನು ಕಥೆಯ ನೀತಿ ಮೌಲ್ಯಗಳನ್ನು ಕೇಳಿ ಜೀವನದಲ್ಲಿ ಅಳವಡಿಸಿ ಕೊಳ್ಳಲು ಅನುವುಮಾಡಿಕೊಡಬಹುದಾಗಿದೆ. ಬಾಲ್ಯದಲ್ಲಿ ಮಕ್ಕಳು ಅವಿಭಕ್ತಕುಟುಂಬದಲ್ಲಿ ಅಜ್ಜಿಯಿಂದ ಕಥೆ, ಹಾಡುಹಸೆಗಳನ್ನು ಕಲಿಯುತ್ತಿದ್ದರು., ಇಂದಿನ ವಿಭಕ್ತ ಕುಟುಂಬಗಳಲ್ಲಿ ಅದು ಅಸಾಧ್ಯ.ಆದ್ದರಿಂದ ಸಾಧಕ, ಆದರ್ಶ ವ್ಯಕ್ತಿತ್ವದ ಮಹಾ ಪುರುಷರ, ವೀರ ಮಹಿಳೆಯರ ಕುರಿತ ಪುಸ್ತಕಗಳನ್ನುಕ್ರಮೇಣ ವೈಜ್ಞಾನಿಕ, ಐತಿಹಾಸಿಕ, ಮಾಹಿತಿಯುಳ್ಳ ಪುಸ್ತಕ, ಮ್ಯಾಗಜಿನ್, ಕಾಮಿಕ್ಸ್ ಜೊತೆಗೆ ವಚನಗಳ, ಜಾನಪದಗೀತೆ, ಭಕ್ತಿಗೀತೆಗಳ, ರಸಪ್ರಶ್ನೆಗಳ ಪುಸ್ತಕಗಳನ್ನು ತಂದು ಕೊಟ್ಟು ಓದಲು ಪ್ರೋತ್ಸಾಹಿಸಬೇಕು. ನಾವು ಚಿಕ್ಕವರಿದ್ದಾಗ ಓದುತಿದ್ದ ಚಂದಮಾಮ, ಬಾಲ ಮಂಗಳ, ಸುಧಾ, ಪ್ರಜಾಮತ, ತುಷಾರ ಹೀಗೆ ಇವೆಲ್ಲವುಗಳೊಂದಿಗೆ ಬೆಳೆದ ಕ್ಷಣಗಳನ್ನು ನೆನೆಸಿಕೊಂಡರೆ ತುಂಬಾ ಸಂತೋಷ ಎನಿಸುತ್ತದೆ, ಶಾಲೆಯ ರಜಾದಿನಗಳಲ್ಲಿ ಅಥವಾ ವಿರಾಮದವೇಳೆಯಲ್ಲಿ ಪಾಲಕರು ತಮ್ಮ ಮಕ್ಕಳೊಂದಿಗೆ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕಗಳ ಕುರಿತು ಒಲವನ್ನು ಬೆಳೆಸಿ ಆಸಕ್ತಿಯನ್ನು ಕೇರಳಿಸಬೇಕಿದೆ.

ಪುಸ್ತಕದಲ್ಲಿದ್ದುದು ಮಸ್ತಕಕ್ಕೆ ಬರಬೇಕಾದರೆ ಪಡುವ ಪರಿಶ್ರಮ ಓದುವ ಹವ್ಯಾಸ ಉಳ್ಳ ಮಕ್ಕಳಿಗೆ ಕಠಿಣವೆನಿಸದು. ಯಾಕೆಂದರೆ ಓದಿದಷ್ಟು ಗ್ರಹಿಕೆ ವೇಗವಾಗಿ ಮನಪಟಲದಲ್ಲಿ ಪರಿಕಲ್ಪನೆಗಳು ಅರ್ಥಪೂರ್ಣವಾಗಿ ಅಚ್ಚಾಗಿ  ಎದುರಿಸುವ ಕೆಚ್ಚೆದೆ ಭವ್ಯ ಭವಿತವ್ಯಕೆ ಪೂರಕವಾಗುವಲ್ಲಿ ಸಂಶಯವಿಲ್ಲ


ಭಾರತಿ ನಲವಡೆ

ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ

Leave a Reply

Back To Top