ಡಾ.ವೈ.ಎಂ.ಯಾಕೊಳ್ಳಿ-ಶರಣೆ ಲಿಂಗಮ್ಮನವರ ಒಂದು ವಚನ ಚಿಂತನೆ

ವಚನ ಸಂಗಾತಿ

ಲಿಂಗಮ್ಮನವರ ಒಂದು ವಚನ ಚಿಂತನೆ

ಡಾ.ವೈ.ಎಂ.ಯಾಕೊಳ್ಳಿ

ಹಡಪದ ಅಪ್ಪಣ್ಣನವರ ಪುಣ್ಯಸ್ತ್ರೀ ಲಿಂಗಮ್ಮನವರು ಶರಣ ಅಪ್ಪಣ್ಣನವರೊಂದಿಗೆ ಶರಣ ಸಮೂಹದಲ್ಲಿದ್ದ ಶರಣೆ.ಪತಿ ಪತ್ನಿ ಇಬ್ಬರೂ ಶರಣೆಯರಾಗಿದ್ದವರಲ್ಲಿ ಇವರದು ಮುಖ್ಯ ಹೆಸರು.ಅಪ್ಪಣ್ಣನವರು ಬಸವಣ್ಣ ನವರ ಆಪ್ತ ಸಹಾಯಕರಂತೆ ಇದ್ದು ಬಸವಣ್ಣನವರ ಕುಟುಂಬಕ್ಕೆ ತುಂಬ ಪ್ರಿಯರಾಗಿದ್ದ ಕಾರಣ ಲಿಂಗಮ್ಮ ನವರೂ ಬಸವಣ್ಣನವರ ಕುಟುಂಬಕ್ಕೆ ಪ್ರಿಯರಾಗಿದ್ದಿ ರಬೇಕು . ಲಿಂಗಮ್ಮನವರು “ನಿಜಮುಕ್ತೆ” ಯಾಗಿದ್ದರು.ಅವರು ” ಅಪಪ್ಪಣ್ಣಪ್ರಿಯ ಚೆನ್ನಬಸವಣ್ಣ ಅಂಕಿತದಿಂದ ವಚನಗಳನ್ಬು ಬರೆದಿದ್ದಾರೆ.

ಮನವನ್ನು ನಿಲ್ಲಿಸುವದರ ಬಗೆಗೆ ಒಂದು ಸುಂದರ ಚಿತ್ರವನ್ನು ಒಂದು ವಚನದಲ್ಲಿ ಚಿತ್ರಿಸಿದ್ದಾರೆ.

ಮನವ ನಿಲಿಸಿಹೆನೆಂದು ,ಆ ಮನದ ನೆಲೆಯ‌ಕಾಣದೆ,
ಅರುಹು ಮರವೆಗೊಳಗಾಗಿ,ಕಳವಳವ ಮುಂದು ಮಾಡಿ
ಚಿಂತೆ ಸಂತೋಷವನೊಡಲು ಮಾಡಿ,
ಬ್ರಾಂತುಗೊಂಡು ತಿರುಗುವ ಮನುಜರಿರಾ,ನೀವು ಕೇಳಿರೋ,
ಮನವ ನಿಲಿಸುವದಕ್ಕೆ ಶರಣರ ಸಂಗ ಬೇಕು ಜನನ ಮರಣವ ಗೆಲ್ಲಬೇಕು
ಗುರುಲಿಂಗಜಂಗಮದಲ್ಲಿ ವಂಚನೆಯಿಲ್ಲದೆ,ಮನದ ಸಂಚಲವ ಹರಿದು,
ನಿಶ್ಚಿಂತವಾಗಿ ನಿಜವ ನಂಬಿ ಚಿತ್ತ ಸುಯಿದಾನವಾದಲ್ಲದೆ ,ಮನದೊಳಗೆ ಲಿಂಗವು ಅಚ್ಚೊತ್ತಿದಂತಿರದೆಂದರು ಬಸವಣ್ಣನ ಶರಣರು,ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ

ಮನದ ಗುಣವೇ ಚಂಚಲತೆ .ಅದನ್ನು ಹಿಡಿದು ನಿಲ್ಲಿಸುವುದು ಸರಳವಲ್ಲ.ನಿಲ್ಲಿಸಿರುವೆವು ಎಂದು ಸುಳ್ಳೇ ತಿರುಗುವ ಮನಜರಿಗೆ ಅದು ಸಾಧ್ಯವಾದುದಲ್ಲ.ಅವರು ಮನದ ನೆಲೆಯ ಕಾಣದೇ ಅರುಹು ಮರಹು ಓಳಗಾಗಿ ಕಳವಳವ ಮುಂದುಮಾಡಿ ಸುಮ್ಮನೆ ಬ್ರಾಂತುಗೊಂಡು ತಿರುಗುವ ಮನುಜರು ಎಂದು ಲಿಂಗಮ್ಮ ಇಲ್ಲಿ ಟೀಕಿಸುತ್ತಿದ್ದಾಳೆ.
ಹಾಗಾದರೆ ಚಂಚಲವಾದ ಮನವ ನಿಲ್ಲಿಸುವದು ಸಾಧ್ಯವೇ ಇಲ್ಲವೇ? ಎಂದರೆ ಸಾಧ್ಯವಿದೆ ಎನ್ನುತ್ತಾಳೆ ಲಿಂಗಮ್ಮ ಹಾಗಾದರೆ ಹೇಗೆ ಸಾಧ್ಯ? ಎಂದರೆ ಅದಕ್ಕೆ ನಾಲ್ಕು ಮಹತ್ವದ ಸಾಧನಗಳನ್ನು ಲಿಂಗಮ್ಮ ಹೇಳುತ್ತಾರೆ.ಮನವ ನಿಲಿಸಬೇಕು ಎನ್ನುವವರು ಮೊದಲನೆಯದಾಗಿ ಶರಣರ ಸಂಗ ಮಾಡಬೇಕು.ಶರಣರ ಸಂಗದ ಮಹತ್ವ ಬಹಳವಿದೆ.ಈ ಶರಣರ ಸಂಗ ಮಾಡುವುದೆ ಮನವ ನಿಲ್ಲಿಸುವ ದಕ್ಕೆ ಮೊದಲ‌ವ ಮೆಟ್ಟಿಲು.ಎರಡನೆಯದಾಗಿ ಅವರು ಜನನ ಮರಣಗಳ ಸಂಕೋಲೆಯನ್ನ ಹರಿದು ಹಾಕಬೇಕು.ಅಂದರೆ ಲೌಕಿಕದ ಆಶೆ ಆಮಿಷಗಳನ್ನು ಹರಿದೊಗೆಯಬೇಕು. ಮೂರನೆಯದಾಗಿ ಗುರುಲಿಂಗ ಜಂಗಮಕ್ಕೆ ತೋರಿಸುವ ಭಕ್ತಿ ತೋರಿಕೆಯದಾಗ ಬಾರದು. ಮೋಸದಿಂದ ಕೂಡಿರ ಬಾರದು. .ಇದನ್ನು ಗುರುಲಿಂಗಮಕ್ಕೆ ವಂಚನೆಯಿ ಲ್ಲದಿರುವ ದು ಎನ್ನುತ್ತಾಳೆ ಲಿಂಗಮ್ಮ. ನಾಲ್ಕನೆಯದು ಮನದ ಚಂಚಲತೆಯ ಹರಿಯಬೇಕು.ಅಂದರೆ ಅತ್ತಲಿತ್ತ ಹರಿಯುವ ಮನಕ್ಕೆ ಏಕಾಗ್ರತೆಯ ಕಡಿವಾಣ ಹಾಕಬೇಕು. ಮನದ ಏಕಾಗ್ರತೆ ಬಹಳ ಮುಖ್ಯವಾದುದು.

ಹೀಗೆ ನಿಶ್ಚಿಂತವಾಗಿ ನಂಬಿ ಚಿತ್ತ (ಮನ)ಸುಯಿದಾನವಾದಲ್ಲದೆ, ಅಂದರೆ ಮನಸ್ಸು ಸದಾ ನಿಶ್ಚಿಂತವಾಗದೆ ಮನದಲ್ಲಿ ಲಿಂಗವು ಅಚ್ಚೊತ್ತಿದಂತೆ ಶಾಸ್ವತವಾಗಿ ನೆಲೆಸಲಾರದು.ಹೀಗೆ ಲಿಂಗ ಶಾಸ್ವತವಾಗಿ ನೆಲೆಸದಿದ್ದರೆ ಭಕ್ತಿ ಅಳವಡದು.ಮನವು ನೆಲೆ ನಿಲ್ಲದು..ಎನ್ನುವದು ಲಿಂಗಮ್ಮನವರ ವಚನದ ಸಾರವಾಗಿದೆ.

ಇಷ್ಟೆಲ್ಲ ಚಿಂತನೆ ಮಾಡಿದ ಲಿಂಗಮ್ಮ ವಚನದ ಕೊನೆಯಲ್ಕಿ ಶರಣರ ಮುಖ್ಯ ಗುಣವಾದ ವಿನಯ ವನ್ನು ಮೆರೆಯುತ್ತಾಳೆ.”ಇದನ್ನೆಲ್ಲ ಹೇಳಿದವರು ಬಸವಣ್ಣನ ಶರಣರು” ಎನ್ನುವ ವಚನದ ಕೊನೆಯ ನುಡಿ ವಚನಕಾರ್ತಿಯ ವಿನಯವನ್ನು ಸಾರುತ್ತದೆ.

ಒಟ್ಟಾರೆ ” ಸುತ್ತಿ ಸುಳಿದಾಡುವ ಮನಸ್ಸನ್ನು ನಿಲ್ಲಿಸದೆ ಶಿವ ಸಾಧನೆ ಸಾಧ್ಯವಿಲ್ಲ.ಮನಸ್ಸನ್ಬು ನಿಶ್ಚಲಗೊಳಿಸುವದಕ್ಕೆ ಶರಣರ ಸಂಗ ಬೇಕು.ಗುರುಲಿಂಗಜಂ ಗಮದಲ್ಲಿ ವಂಚನೆಯಿಲ್ಲದೆ,ಮನವನ್ನು ನಿಶ್ಚಿಂತವನ್ನಾಗಿರಿಸಿ ಅದೇ ಮನದಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಬೇಕು .ಎಂದು ಲಿಂಗಮ್ಮನವರು ಶರಣರ ಸಂಗದ ಮಹತ್ವವನ್ನು ಒತದತಿ ಹೇಳಿದರು.” ( ಡಾ ದಯಾನಂದ ನೂಲಿ.ಮರುಳಶಂಕರದೇವರು ಪು-೩೦೯)
ಇಲ್ಲಿ ಭಕ್ತನಾದವನು ಮಾಡುವ ಸಂಗ,ಮಾಡುವ ಭಕ್ತಿ,ಮತ್ತು ಅವನ ನಡೆನುಡಿ ಇವುಗಳ ಶುದ್ಧಿ ಗಳಿಂದ ಮಾತ್ರ ಮನಸ್ಸು ಶುದ್ಧವಾಗಿರಲು ಸಾಧ್ಯ ಎಂಬುದನ್ನು ವಚನ ಸಾರುತ್ತದೆ.ಎಲ್ಲದಕ್ಜೂ ಮುಖ್ಯವಾದದ್ದು ಶರಣರ ಸಂಗ.ಅದೇ ಚಿಂತನೆಯಲ್ಲಿರುವವರ ಸಂಗ ದಿಂದ ಅದೇ ದಾರಿಯಲ್ಕಿ ಸಾಗುವದು ಸಾಧ್ಯ.ಇದು ಇಂದಿನ ಆಧುನಿಕ ಯುಗಕ್ಕೂ ಅತ್ಯಂತ‌ ಮಹತ್ವದ ವಿಚಾರವಾಗಿದೆ.ಮನಸ್ಸಿನ ಏಕಾಗ್ರತೆ ಗಳಿಸುವದೇ ಎಲ್ಲಸಾಧನೆಯ ಮೂಲ ಎನ್ನುವದನ್ನು ವಚನಸಾರುವದರಿಂದ ವಚನವ ಸಮಕಾಲೀನವಾಗಿಯೂ ಮುಖ್ಯವೆನಿಸುತ್ತದೆ.


ಡಾ.ವೈ.ಎಂ.ಯಾಕೊಳ್ಳಿ

One thought on “ಡಾ.ವೈ.ಎಂ.ಯಾಕೊಳ್ಳಿ-ಶರಣೆ ಲಿಂಗಮ್ಮನವರ ಒಂದು ವಚನ ಚಿಂತನೆ

  1. ವಚನ ವಿಶ್ಲೇಷಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್. ಅನುಭವ ವಿದ್ದಡೆ ಅಮೃತ ವಿದ್ದಂತೆ.

Leave a Reply

Back To Top