ಕಾವ್ಯ ಸಂಗಾತಿ
ನಂಬಿಕೆ
ಆಶಾ ಯಮಕನಮರಡಿ
ನಂಬಿಕೆ ಎಂದರೇನು ಗೊತ್ತೆ ನಿಮಗೆ
ಹಗಲು ಕಂಡ ಬಾವಿಗೆ ಇರುಳಿನಲಿ
ಬಿದ್ದಂತೆ
ಬೆಂಕಿಯ ಬೆಳಕಿನಾಸೆಗೆ ಮೈಸುಟ್ಟುಕೊಳ್ಳುವ ಪತಂಗದಂತೆ
ಬೇಲಿ ಮುಳ್ಳಿನದೆಂದು ಗೊತ್ತಿದ್ದರು
ಹಾರಿದಂತೆ
ಎಲ್ಲವು ನಿತ್ಯ ಸತ್ಯ ಎಂಬುದು ಗೊತ್ತಿದೆ ಮನಕೆ
ಹರಿತ ಖಡ್ಗದ ಅಲುಗಿನ ಹೊಳಪಿಗೆ ಮನಸೋತು
ಮೃದುವಾಗಿ ಮೈಸವರಿ ಎದೆಗವಚಿಕೊಂಡಂತೆ
ಎದೆ ಸೀಳಿದರೆ ಪರಿವೆ ಇಲ್ಲದೆ ಎಲ್ಲ ಮರೆತಿರುವಂತೆ
ಹಬ್ಬದಡುಗೆಯಲಿ ಬಿದ್ದದ್ದು ನಂಜಿನಾ ಹನಿಎಂದು ಗೊತ್ತು
ಹಸಿವ ತಣಿಸಲು ಒಂದೊಂದೆ ತುತ್ತು ಸವಿದ ಹೊತ್ತದು
ಬದುಕಿನಾ ಅವಧಿಗೆ ಯಾವ ಹೊತ್ತುಗೊತ್ತಿಲ್ಲಾ
ಕಾಲನು ಬರುವಾಗ ಹೆಜ್ಜೆ ಸದ್ದಾಗುವುದೆಇಲ್ಲಾ
ಕಣ್ಣಿದಿರು ಕಂಡುದನು ನಂಬಿದಾ ಕುರುಡು ಮನ
ಸತ್ಯೆವೆಂದರೆ ಇದುವೆ ಎಂದು ಕಣ್ಣುಮುಚ್ಚಿಕೊಂಡಿತ್ತು
ಗೊತ್ತಾಗಲೆ ಇಲ್ಲಾ ಬೆನ್ನಿಗೆ ಬಿದ್ದ ಭರ್ಚಿಯ
ಮೊನಚು
ತೊಟ್ಟ ಬಿಳಿಉಡಿಗೆ ಕೆಂಪಾದಾಗಲೂ
ಬದುಕು ರಂಗೇರಿತೆಂದು ನಂಬಿದ್ದೆ
ಆಶಾ ಯಮಕನಮರಡಿ