ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಥಾ ಸಂಗಾತಿ

ವಿಮಲಾರುಣ ಪಡ್ಡoಬೈಲು

ಪಥ್ಯ

 ಆಟೋ ಚಾಲಕನಾಗಿದ್ದ ರಮೇಶ ನಿತ್ಯವೂ ಉತ್ತಮ ಸಂಪಾದನೆಯೊಂದಿಗೆ ಬದುಕುತ್ತಿದ್ದ. ಮದುವೆಯಾಗಿ ನಾಲ್ಕು ವರ್ಷವಾದರೂ ಅವನಿಗೆ ಮಕ್ಕಳಿರಲಿಲ್ಲ.‌ ಈ ಚಿಂತೆ ಅವನ ಹೆಂಡತಿ ಪೂಜಾಳಿಗೆ ಕಾಡಿದರೂ ರಮೇಶ ನಿಶ್ಚಿಂತೆಯಿಂದ ಇದ್ದ. ಅವನ ವಿಶೇಷವೆಂದರೆ ಊಟ ಮಾಡುವ ವಿಚಾರದಲ್ಲಿ ಅವನು ಎಲ್ಲರಿಗಿಂತ ವಿಭಿನ್ನನಾಗಿದ್ದ. ಮನೆಯ ಊಟದ ಹೊರತಾಗಿ ಹೋಟೆಲ್ ಊಟ ಎಂದೂ ಮಾಡುತ್ತಿರಲಿಲ್ಲ. ಬೆಳಗ್ಗೆ ಮಧ್ಯಾಹ್ನ ರಾತ್ರಿ ಮೂರು ಹೊತ್ತಿಗೂ ರುಚಿ ಕಟ್ಟಾದ ಅಡುಗೆ ಆಗಬೇಕಿತ್ತು. ಪೂಜಾಳಿಗೆ ಕಷ್ಟವಾದರೂ ಮಾತಾಡದೆ ಮೌನಿಯಾಗಿ ಅಡುಗೆ ತಯಾರಿಸುತ್ತಿದ್ದಳು. ಅವಳ ಮೌನದ ಹಿಂದೆ ಸತ್ಯವೊoದಿತ್ತು.  ಅವನ ಅದಮ್ಯ ಪ್ರೀತಿ, ನೀನೇ ನನ್ನ ಮಗು ಎಂದು ರಮಿಸಿ ಮಕ್ಕಳಿಲ್ಲದ ದುಃಖವನ್ನು ತನ್ನ ಪ್ರೀತಿಯಲ್ಲಿ ಮರೆಮಾಡಿದ್ದ. ಇದು ಅವಳಿಗೂ ಪ್ರಿಯವಾಗಿತ್ತು. ಆದ್ದರಿಂದ ಅವನ ಮನಸಿಗೆ ನೋವು ಮಾಡದೆ ಅಕ್ಕಪಕ್ಕದ ಮನೆಯವರಿಗಿಂತ  ಭಿನ್ನವಾಗಿ ಪೂಜಾ ಸುಖವಾಗಿ ಬದುಕುತ್ತಿದ್ದಳು.

ರಮೇಶನಿಗೆ ಸಂಪಾದನೆ ಇದ್ದರೂ ಹಣ ಉಳಿತಾಯದ ಬಗ್ಗೆ ಕಿಂಚಿತ್ತೂ ಆಲೋಚನೆ ಇರಲಿಲ್ಲ. ‘ಇಂದಿನ ಸಂತೋಷವೇ ಮುಖ್ಯ. ನಾಳೆ ಬಗ್ಗೆ ಚಿಂತೆ ಯಾಕೆ?’ ಎನ್ನುವ ಜಾಯಮಾನದವನು ಅವನು. ಅವನ ಜಾಲಿ ಬದುಕಿಗೆ ಪೂಜಾ ತಂಪೆರೆದಿದ್ದಳು. ತಿಂಗಳ ರೇಶನ್ ಖರ್ಚು, ಮನೆ ಬಾಡಿಗೆ, ವಾರದಲ್ಲಿ  ಒಂದೆರಡು ಫಿಲ್ಮ್, ಪಿಕ್ನಿಕ್ ಟೂರ್ ಅಂತ ತನ್ನ ಹಣವನ್ನು ಖರ್ಚು ಮಾಡಿಕೊಂಡು ಒಂದೊಂದು ಬಾರಿ ಸಾಲದ ಮೊರೆ ಹೋಗುತ್ತಿದ್ದ. ಆದರೆ ಒಂದು ತಿಂಗಳೊಳಗೆ ಮರುಪಾವತಿಸಿ ನಂಬಿಕೆಗೆ ಅರ್ಹನಾಗಿದ್ದ. ರಮೇಶ ನಂಬಿಕೆಗೆ ಇನ್ನೊಂದು ಹೆಸರು ಎಂದು ಜನ ಗುಣಗಾನ ಮಾಡುತ್ತಿದ್ದರೆ, ಕೆಲವರು ಇವನ ಸುಖ ಜೀವನ ಕಂಡು ಕರುಬುವವರಿದ್ದರು.

ಅಚಾನಕ್ಕಾಗಿ ಬಂದ ಕೊರೋನ ಎಂಬ ಮಾರಿ ನಿತ್ಯ ಸಂಪಾದಿಸುವವರ ಬದುಕನ್ನು ಅಲುಗಿಸಿ ಬಿಟ್ಟಿತು. ಈ  ವಿಷ ಗಳಿಗೆ ರಮೇಶನ ಬದುಕಿಗೂ ಮಾರಕವಾಯ್ತು. ಹೊರಗೆ ಬರುವುದಕ್ಕೇ  ಜನರು ಹೆದರುವಾಗ ಇನ್ನು ಆಟೋದವರಿಗಾದರೂ ಸಂಪಾದನೆ ಎಲ್ಲಿಂದ ? ಬೇರೆ ವಿಧಿ ಇಲ್ಲದೆ ರಮೇಶ ಮನೆ ಖಾಲಿ ಮಾಡಿ  ಪೂಜಾಳ ತವರು ಮನೆಗೆ  ಹೊರಟ. ತಂದೆ ತಾಯಿಗೆ ಪೂಜಾ ಒಬ್ಬಳೇ ಮಗಳಾದರೂ ಅಲ್ಲಿಯೂ ಬಡತನ ಆವರಿಸಿತ್ತು.  ಹುಷಾರಿಲ್ಲದ ತಂದೆ. ಅವಳ ತಾಯಿ ಕೂಲಿ ಕೆಲಸ ಮಾಡಿ ಜೀವನ ಸಂಭಾಳಿಸುತ್ತಿದ್ದಳು. ಆದರೂ ಇವರ ಆಗಮನದಿಂದ ಕಿಂಚಿತ್ತೂ ಬೇಸರವಿಲ್ಲದೆ ಸಂತಸದಿಂದ ತಾಯಿ ಅನ್ನಪೂರ್ಣ ಅವರನ್ನು ಸ್ವಾಗತಿಸಿದಳು. ಅಳಿಯನ ಊಟದ  ಬಗ್ಗೆ ಅರಿತ್ತಿದ್ದ  ಅನ್ನಪೂರ್ಣಮ್ಮ ಅವನಿಗೆ ಬೇಕಾದ ರೀತಿಯಲ್ಲಿಯೆ ರುಚಿಕಟ್ಟಾಗಿ ಅಡುಗೆ ಮಾಡಿ ಬಡಿಸುತ್ತಿದ್ದಳು.

ವಾರ ಕಳೆಯಿತು. ಒಬ್ಬಳದುಡಿತದಲ್ಲಿ  ನಾಲ್ಕು ಜನರ ಹೊಟ್ಟೆ ತುಂಬಬೇಕು. ಕೊರೋನದ ಹಾವಳಿ ಹೆಚ್ಚಾದ ಕಾರಣ ಅನ್ನಪೂರ್ಣಮ್ಮ ಕೆಲಸ ಮಾಡುವ ಕಡೆಯೂ, “ವಾರದಲ್ಲಿ ಮೂರು ದಿನ ಬಂದರೆ ಸಾಕು” ಎಂದರು. ಈಗ ಇವರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಆದರೂ ಅಳಿಯನ ಊಟಕ್ಕೆ ಏನೂ ಕುತ್ತು ಬರಲಿಲ್ಲ. ಅದೇ ಸಂಭ್ರಮ ಮುಖದಲ್ಲಿತ್ತು. ಒಂದು ರಾತ್ರಿ ನೀರು ಕುಡಿಯಲು ರಮೇಶ ಒಳ ಬಂದ. ಅವನಿಗೆ ತಾಯಿ ಮಗಳ ಗುಸು ಗುಸು ಮಾತು ಕೇಳಿಸಿತು.  “ಅಮ್ಮ, ನಿನ್ನ ಕಿವಿಯ ಓಲೆ ಏನಾಯಿತು..?” “ಅದನ್ನು ತೆಗೆದಿಟ್ಟಿದ್ದೇನೆ” ”ಇಲ್ಲ, ನೀನು ಮಾರಿದಿಯ ?’ “ಮೆಲ್ಲ ಮಾತಾಡು ಪೂಜಾ”. ಪೂಜಾಳಿಗೆ ಅರಿವಾಯಿತು. ಅದು ರಮೇಶನ ಗಮನಕ್ಕೂ ಬಂದಿತು. ಈಗ ಒಳಗೆ  ಹೋಗುವುದು ಹಿತವಲ್ಲವೆಂದು  ಹೊರಗೆ ಬಂದು, “ಪೂಜಾ, ಒಂದು ಲೋಟ ನೀರು ತಕೊಂಡ್  ಬಾ..” ಎಂದು ಕರೆದ. ‘”ಹಾ ಬಂದೆ “. ನೀರು ತಂದ ಪೂಜಾಳ ಬಳಿ “ಯಾಕೋ ಮೈಗೆ ಅಷ್ಟು ಹುಷಾರಿಲ್ಲ”ಎಂದ. ಪೂಜಾ ಗಾಬರಿಯಾದಳು. “ಹಾಗಾದ್ರೆ ಆಸ್ಪತ್ರೆಗೆ ಹೋಗೋಣ”.   ”ಈಗ ಬೇಡ. ನಾಳೆ ಹೋಗೋಣ” ಎಂದು ಮುಸುಕು ಹಾಕಿ ರಮೇಶ ಮಲಗಿದ.  ತಾಯಿ ಮಗಳಿಗೆ ನಿದ್ರೆ ಬರಲಿಲ್ಲ. ಬೆಳಗ್ಗೆ ಆಗುವುದನ್ನೆ ಕಾಯುತ್ತಿದ್ದರು. ಒಂದೆಡೆ ಪೂಜಾಳಿಗೆ ಅಮ್ಮನ ಕಿವಿ ಓಲೆಯ ಬಗ್ಗೆ ಚಿಂತೆ. ಅಮ್ಮ ಆ ಓಲೆಗಾಗಿ ಹವಣಿಸಿದ  ರೀತಿ ಕಣ್ಣ ಮುಂದೆ ಹಾಯುತ್ತಿತ್ತು. ಚಿನ್ನ ಎಂದು ಇದ್ದದ್ದೆ ಅವಳ ಬಳಿ ಒಂದು ಜೊತೆ ಓಲೆ ಮಾತ್ರ. ಆದರೆ ಈಗ….? ಕಣ್ಣೀರಿಟ್ಟಳು!

ಪೂಜಾಳಿಗೆ ಹಳೆಯ ನೆನಪುಗಳು ಮರುಕಳಿಸಿದವು. ಅಮ್ಮ ತಾನು ದುಡಿದ ಹಣದಲ್ಲಿ ಸ್ವಲ್ಪ ಸ್ವಲ್ಪ ಹಣ ಕೂಡಿಟ್ಟು  ನಾನು ಮದುವೆ ಆಗುವ ಹುಡುಗಿ ಎಂದು ನನಗೆ ಚಿನ್ನ ಕೊಳ್ಳುತ್ತಿದ್ದಳು. ಅಪ್ಪ ಆಟೋ ಚಾಲಕ. ಅವರ ದುಡಿಮೆ ಅವರ ಶುಶ್ರೂಷೆಗೆ ಸರಿಯಾಗುತ್ತಿತ್ತು. ಕೊನೆಗೂ ಆಟೋ ಚಲಾಯಿಸಲಾಗದೆ ಆಟೋ ಮೂಲೆ ಸೇರಿತು. ಆ ಸಮಯದಲ್ಲಿ ನಾನು ಟೈಲರಿಂಗ್ ಮಾಡುತ್ತಿದ್ದೆ. ತುಂಬಾ ಜನ, “ಆಟೋ ಚಲಾಯಿಸುವುದನ್ನು ಕಲಿ” ಎಂದು ಸೂಚನೆ ಇತ್ತರು. ನಾನು ಒಂದೆರೆಡು ಬಾರಿ ಪ್ರಯತ್ನಿಸಿ ಸೋತೆ. ಮತ್ತೆಂದೂ ಆ ಕಡೆ ತಲೆ ಹಾಕಲಿಲ್ಲ.

ನಾನು ಕೆಲಸ ಮಾಡುವ ಕಡೆಯೇ ರಮೇಶ ರಿಕ್ಷಾ ನಿಲ್ಲಿಸುತ್ತಿದ್ದರು. ನಿತ್ಯ ನೋಡುವ ನನಗೆ ಅವನ ಗುಣ ನಡತೆ ಆಪ್ತವಾಗುತ್ತ ಬಂತು. ಅವನೊಬ್ಬ ಉತ್ಸಾಹಿ, ವಿಚಾರವಂತ ; ಸ್ಫುರದ್ರೂಪಿ ಯುವಕ. ಹಣೆಯಲೊಂದು  ತಿಲಕ. ಕೈಯಲ್ಲೊಂದು ವಾಚು. ಯಾರ ಮನಸ್ಸನ್ನೂ ಗೆಲ್ಲುವಂತಹ ಆಕರ್ಷಕ ಕಂಗಳು. ನನಗೆ ಅರಿಯದೆ ಅವನಲ್ಲಿ ಪ್ರೇಮ ಚಿಗುರಿತು. ಒಂದೆರೆಡು ಸಾರಿ ಅವನ ಆಟೋದಲ್ಲಿಯೆ ಮನೆಗೆ ಬಂದುದು. ಆ ವೇಳೆಯಲ್ಲಿ ನಾನು ನನ್ನ ಪ್ರೇಮ ಪ್ರಸ್ತಾಪಿಸಿದೆ. ಅವನು ತನ್ನ ವಿಚಾರ ಹೇಳಿ ಸಮ್ಮತಿಸಿದಾಗ ಬರಡು ನೆಲದಲ್ಲಿ ಹಸಿರು ಚಿಗುರಿದಂತಾಯಿತು. ಅನಾಥನಾಗಿದ್ದ ಅವನೊಂದಿಗೆ ಅಪ್ಪ ಅಮ್ಮನ ಒಪ್ಪಿಗೆಯಿಂದ   ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಸರಳವಿವಾಹವಾಯ್ತು. ಅವನು ಚಲಾಯಿಸುತ್ತಿದ್ದ ರಿಕ್ಷಾ ಅವನ
ದನಿಗಳದ್ದು. ನಿತ್ಯವೂ ಬಾಡಿಗೆ ಕೊಡುತ್ತಿದ್ದ. ಈಗ ಆ ರಿಕ್ಷಾ ದಿಂದ ರಮೇಶನಿಗೆ ಮುಕ್ತಿ ಸಿಕ್ಕಿತ್ತು. ಉಡುಗೊರೆಯಾಗಿ ಅಪ್ಪನ ರಿಕ್ಷಾವನ್ನು  ಅಮ್ಮ ನನ್ನ ಗಂಡನಿಗೆ ಕೊಟ್ಟರು‌. ರಮೇಶ ಬೇಡ ಬೇಡವೆಂದರೂ ಅಮ್ಮನ ಒತ್ತಾಯಕ್ಕೆ ಸಮ್ಮತಿಸಿದರು. ಅನಾಥ ರಿಕ್ಷಾ ನಮ್ಮ ಬದುಕಿಗೆ ಆಸರೆ  ಆಯ್ತು.

ಅಪ್ಪ ಅಮ್ಮನ ನೆನಪು ಕಾಡದ ಹಾಗೆ ನನ್ನನ್ನು  ಚೆನ್ನಾಗಿ ನೋಡಿ ಕೊಂಡರು. ಆದರೆ ಹಣ ಉಳಿತಾಯ ಮಾಡುವ ಕಡೆ ಇಬ್ಬರೂ ಮನಸು ಮಾಡಲಿಲ್ಲ. ಆದರೆ  ಇಂದು? ಛೇ! ಇಂದಿನ  ಪರಿಸ್ಥಿತಿಗೆ ನಾವೇ  ಹೊಣೆಯಾದೆವು. ಅಮ್ಮ ನನಗಾಗಿ ಎಷ್ಟೆಲ್ಲಾ ಕಷ್ಟ ಬಂದಳು! ಕೊನೆಗೂ ಅವಳು  ಪ್ರಿಯವಾದ ಓಲೆಯನ್ನು ಕಳೆದುಕೊಂಡಳು….ಎಲ್ಲಾ ನೆನಪುಗಳು ಇವಳ ಮನವನ್ನು ಚುಚ್ಚಿದವು. ಅವ್ಯಕ್ತ ದುಗುಡ ಆವರಿಸಿತು. ತಾನು ಬದಲಾಗಬೇಕೆಂದು ನಿರ್ಧರಿಸಿದಳು.

ಸೂರ್ಯ ಜಗ ಬೆಳಗಿದ. ಅವನಿಗೆ ನಮನ ಮಾಡಿ ರಮೇಶನ  ಹತ್ತಿರ ಪೂಜಾ ಬರುವಾಗ ಅನ್ನಪೂರ್ಣಮ್ಮ   ಆರೋಗ್ಯವನ್ನು ವಿಚಾರಿಸಿ “ಈಗಲೆ ಆಸ್ಪತ್ರೆ ಗೆ ಹೋಗೋಣ”ಎನ್ನುತ್ತಿದ್ದರು. “ಅತ್ತೆ, ನಾನೇ ಹೋಗ್ತೇನೆ. ಹಾಗೇನೂ ದೊಡ್ಡ ಸಮಸ್ಯೆ  ಇಲ್ಲ”  “ನಾನು ಬರ್ತೇನೆ ನಿಮ್ಮ ಜೊತೆ”. ”ಬೇಡ ಪೂಜಾ. ಎಲ್ಲಾ ಕಡೆ ಜ್ವರ ಇದೆ. ಇನ್ನು ನಿನಗೆ ತೊಂದರೆ ಆಗಬಾರದು”  ಎಂದು ಹೇಳಿ ಅವರ ಉತ್ತರಕ್ಕೂ ಕಾಯದೆ  ರಮೇಶ ಹೊರಟ.
ರಿಕ್ಷಾ  ನೇರವಾಗಿ ದೇವಸ್ಥಾನದ ಕಡೆ ಹೊರಟಿತು. ಕೊರೋನದಿಂದ  ದೇವಸ್ಥಾನಕ್ಕೆ ಬೀಗ ಜಡಿದಿತ್ತು. ಹೊರಗಡೆಯಿಂದ ದೇವರಿಗೆ  ಕೈ ಮುಗಿದು  ತನ್ನ ನೋವನ್ನು ಹೊರಗರುಹಿ  ಕಣ್ಣೀರಿಟ್ಟನು.. ಯಾವುದೋ ಅನೂಹ್ಯ ಲೋಕದಿಂದ ವಾಸ್ತವ ಪ್ರಪಂಚಕ್ಕೆ ಬಂದತೆ ಅವನಿಗೆ ಭಾಸವಾಯಿತು.

ಒಂದೆರಡು ಗಂಟೆ ಕಳೆದು ರಮೇಶ ಮನೆಗೆ ಬಂದ. ಕೈಲಿ ಹಸಿರು ಕೆಂಪಿನ ಮಾತ್ರೆಗಳು ಇದ್ದವು. ತಾಯಿ ಮಗಳು ಅವನು ಬರುವ ದಾರಿಯನ್ನೇ ಕಾಯುತ್ತಿದ್ದರು.”ಏನು ಹೇಳಿದ್ರು ಡಾಕ್ಟ್ರು?” “ಏನೂ ಇಲ್ಲ”. ‘ಮಸಾಲೆ ಪದಾರ್ಥ ಕಡಿಮೆ ಮಾಡಿ ಒಂದು ತಿಂಗಳು ಗಂಜಿ ಉಪ್ಪಿನಕಾಯಿಯಲ್ಲಿ ಊಟ ಮಾಡಿ’ ಎಂದಿದ್ದಾರೆ. “ಬೇರೆ ಏನು ಸಮಸ್ಯೆ  ಇಲ್ವಲ್ಲ?”   ‘”ಏನೂ ಇಲ್ಲ. ಒಂದು ವಾರದಲ್ಲಿ ಸರಿಯಾಗುತ್ತದೆ ಅಂತ ಹೇಳಿದ್ದಾರೆ”. ಎಲ್ಲರು ಇವನ ಪಥ್ಯವನ್ನೆ ಅನುಸರಿಸಿದರು. ಸಂತಸವೆಂದರೆ  ಆ ಊಟ ಎಲ್ಲರ ಮನವನ್ನು ತಣಿಸಿತು.  ಈಗ ಅವನ ಮನಸ್ಸು ನಿರಾಳವಾಗಿ ಸಾರ್ಥಕ ಭಾವನೆ ಮೂಡಿತು.

ಒಂದು ತಿಂಗಳ ಬಳಿಕ ಆಟೋ ರಸ್ತೆಯ ಮುಖ ನೋಡಿತು. ಈಗಾಗಲೇ ಬದುಕನ್ನು ಹೇಗೆ ಸಂಭಾಳಿಸಬೇಕೆಂಬ ಅರಿವು ರಮೇಶನಿಗಾಗಿತ್ತು.

ಮೊದಲಿದ್ದ ಮನೆಯನ್ನೆ  ಬಾಡಿಗೆ ಪಡೆದು ಹೊಸ ಬದುಕನ್ನು ಪ್ರಾರಂಭಿಸಿದರು. “ರೀ, ನನಗಂತೂ ಗಂಜಿ ಉಪ್ಪಿನಕಾಯಿ ತಿಂದು ಸಾಕಾಯ್ತು. ಇನ್ನು ಎಷ್ಟು ದಿವಸ ಪಥ್ಯ?” “ಪೂಜಾ, ಅದು ಇವತ್ತಿಗೆ ಕೊನೆ. ಹೆಚ್ಚೇನು ಮಾಡುವುದು ಬೇಡ. ದಿನದಲ್ಲಿ ಒಂದು ಸಾರು, ಪಲ್ಯ.. ಆದರೆ ಸಾಕು ಅವಳಿಗೆ ಖುಷಿಯಾಯಿತು. ಕಂಗಳು ಅರಳಿ ಹೊಲಿಗೆ ಮಷೀನ್   ನನ್ನು ದಿಟ್ಟಿಸಿದಳು. ಸೋಮಾರಿಯಾಗಿ ಕಾಲ ಕಳೆಯುವುದು ಬೇಡವೆಂದು ಅದನ್ನು ಸ್ವಚ್ಛಗೊಳಿಸಿ ಬಟ್ಟೆ ಹೊಲಿಯಲು ಶುರುಮಾಡಿ ಹಣ ಸಂಪಾದನೆಯಲ್ಲಿ ತೊಡಗಿದಳು. ಈಗ ಇವರ ಸಂಸಾರದಲ್ಲಿ ಕುಡಿಯೊಂದು ಬೆಳೆಯುತ್ತಿತ್ತು ರಮೇಶ ಚಿನ್ನದ ಓಲೆಯನ್ನು ಖರೀದಿಸಿ ಅತ್ತೆಗೆ ಕೊಟ್ಟು ಅವರಿಬ್ಬರನ್ನು ತನ್ನ ಮನೆಗೆ ಕರೆದುಕೊಂಡು ಬಂದನು. ಅತ್ತೆಯ ಕಷ್ಟ ಅವನೆದೆಯನ್ನು ಜ್ವಲಿಸಿತು.ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯು ಅವಳ ಪ್ರೀತಿ ಕಣ್ಣಿಗೆ ರಾಚುತ್ತಿತ್ತು. ಹಾಗಾಗಿ ರಮೇಶ ಹುಷಾರಿಲ್ಲವೆಂದು ತಾನೇ  ಒಂದು ಸುಳ್ಳು ಹೆಣೆದು ಆಸ್ಪತ್ರೆಗೆ ಹೋಗದೆ ಅವನ ಮನಕೆ ಅವನೇ ವೈದ್ಯನಾದ. ಇದು ಅವನ ಭವಿಷ್ಯವನ್ನೆ ಬದಲಾಯಿಸಿತು. ಪಥ್ಯದ  ವಿಚಾರವನ್ನು ಎಂದೂ ಬಾಯಿ ಬಿಡದೆ ಗೌಪ್ಯವಾಗಿ ಇಟ್ಟನು.


ವಿಮಲಾರುಣ ಪಡ್ಡoಬೈಲು

About The Author

Leave a Reply

You cannot copy content of this page

Scroll to Top