“ಕವಲೊಡೆದ ದಾರಿ” ಸಣ್ಣ ಕಥೆ -ವೀಣಾ ಹೇಮಂತ್ ಗೌಡ ಪಾಟೀಲ್

ನಿಮ್ಮನ್ನು  ಮದುವೆಯಾಗಿ ಈ ಮನೆಗೆ ಸೊಸೆಯಾಗಿ  ಬಂದ ಕಾರಣ ನಿಮ್ಮ ಅಪ್ಪ ಅಮ್ಮನನ್ನು ಪ್ರೀತಿ ಗೌರವದಿಂದ ನೋಡಿಕೊಂಡಿದ್ದೇನೆ , ಒಬ್ಬ ಗೃಹಿಣಿಯಾಗಿ ಈ ಮನೆಯನ್ನು ನಡೆಸಿದ್ದೇನೆ . ಮನೆಯ ಸಮಸ್ತ ಜವಾಬ್ದಾರಿಯನ್ನು ಹೊತ್ತು ಸಾಗಿಸಿದ್ದೇನೆ . ನಮ್ಮಿಬ್ಬರ ದಾಂಪತ್ಯದ ಕುರುಹಾಗಿ ಜನಿಸಿರುವ ಮಕ್ಕಳಿಗೆ ತಾಯಾಗಿ ನಿಮ್ಮ ಪತ್ನಿಯಾಗಿ ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ…..ಆದರೆ ಎಂದು ಸುಮಾ ಹೇಳಿದಾಗ ತನ್ನ ತಗ್ಗಿಸಿದ ತಲೆಯನ್ನು ಎತ್ತಿದ ವಿಜಯ್.

 ಆದರೆ ಇನ್ನೆಂದೂ ನಿಮ್ಮ ಪತ್ನಿಯಾಗಲಾರೆ…. ಹೊರಗಿನ ಸಮಾಜಕ್ಕೆ ಮಾತ್ರ ನಾವು ಗಂಡ ಹೆಂಡತಿ. ಆದರೆ ಮನೆಯಲ್ಲಿ ನಾವಿಬ್ಬರೂ ಅಪರಿಚಿತರು. ಈ ಅಂತರವನ್ನು ಎಂದೂ ಮೀರುವ ಪ್ರಯತ್ನ ಮಾಡಬೇಡಿ ಎಂದು ಮೆದುವಾಗಿ ಆದರೆ ಅಷ್ಟೇ ದೃಢ ಧ್ವನಿಯಲ್ಲಿ  ಅರುಹಿ ಕೋಣೆಯಿಂದ ಹೊರಹೋದಳು  ಸುಮಾ.

 ಸೀದಾ ಬಚ್ಚಲಿಗೆ ಓಡಿದವಳೇ ತನ್ನ ಸೆರಗನ್ನು ಬಾಯಿಗೆ ಇಕ್ಕಿ ತನ್ನೆಲ್ಲ ದುಃಖವನ್ನು ಹೊರ ಹಾಕಿದಳು. ಕೊಂಚ ಹೊತ್ತು ಅತ್ತು ಸಮಾಧಾನಗೊಂಡ ನಂತರ ಅಲ್ಲಿಯೇ ಬಕೆಟ್ ನಲ್ಲಿದ್ದ ನೀರನ್ನು ಮುಖಕ್ಕೆ ರಾಚಿ ಸೆರಗಿನಿಂದ ಮುಖವನ್ನು ಒರೆಸಿಕೊಂಡು  ತಲೆ ಕೂದಲನ್ನು ಒಪ್ಪವಾಗಿಸಿ ಬಚ್ಚಲಿನಿಂದ ಹೊರ ಬಂದು ನೇರವಾಗಿ ಅಡುಗೆ ಮನೆಗೆ ಬಂದು ತನ್ನ ಗೃಹ ಕೃತ್ಯದಲ್ಲಿ ತೊಡಗಿಕೊಂಡಳು.

 ಕೋಣೆಯಲ್ಲಿ ಗರಬಡಿದಂತೆ ಕುಳಿತುಕೊಂಡ ವಿಜಯ್ ಕಣ್ಣಂಚಿನಲ್ಲಿ ಪಶ್ಚಾತ್ತಾಪದ ಭಾವ.
 ಎಷ್ಟು ಚಂದವಾಗಿತ್ತು ತನ್ನ ಸಂಸಾರ….. ಇಂಜಿನಿಯರಿಂಗ್ ಪದವಿ ಮುಗಿಸಿದ ಕೂಡಲೇ ಉದ್ಯಾನ ನಗರಿ ಬೆಂಗಳೂರಿನಲ್ಲಿ ಆರಂಕಿ ಸಂಬಳದ ನೌಕರಿ ದೊರೆತು ಈಗಾಗಲೇ ನಿವೃತ್ತಿಯ ಅಂಚಿಗೆ ಬಂದಿದ್ದ ತಂದೆಗೆ
ವಾಲಂಟರಿ ರಿಟೈರ್ಮೆಂಟ್ ಕೊಡಿಸಿ ತಂದೆ ತಾಯಿ ಇಬ್ಬರನ್ನು ತನ್ನೂರಾದ ಮಂಡ್ಯದಿಂದ  ತಾನು ಕೆಲಸ ಮಾಡುವ ಬೆಂಗಳೂರಿಗೆ ಕರೆತಂದ.

  ಹಾಯಾಗಿ ಕೆಲಸ, ವೀಕೆಂಡ್ಗಳಲ್ಲಿ ಸ್ನೇಹಿತರೊಂದಿಗೆ ಸುತ್ತಾಟ, ತಂದೆ ತಾಯಿಗಳೊಂದಿಗೆ ಒಡನಾಟ, ಅಮ್ಮನ ಕೈ ರುಚಿ ಅಪ್ಪನ ಪ್ರೀತಿಯ ನಡುವೆ ದಿನಗಳು ಒಂದೆರಡು ವರ್ಷಗಳು ಉರುಳಿದ್ದು ಗೊತ್ತೇ ಆಗಿರಲಿಲ್ಲ. ತಂದೆ ತಾಯಿಯೊಂದಿಗೆ ಪರಿಚಿತರ ಮನೆಯ ಮದುವೆ ಮನೆಯಲ್ಲಿ ಓಡಾಡಿಕೊಂಡಿದ್ದ ಚಂದುಳ್ಳಿ ಚೆಲುವೆ ಸುಮಾಳನ್ನು ಕಂಡು ಮನದಲ್ಲಿ ಸಂಗಾತಿ ಬೇಕೆಂಬ ಆಸೆಯ ರೆಕ್ಕೆ ಗರಿ ಬಿಚ್ಚಿತ್ತು. ಕಾಕತಾಳೀಯವಾಗಿ ಆ ಮದುವೆಗೆ ಬಂದಿದ್ದ ಸುಮಳ ತಂದೆ-ತಾಯಿಯೊಂದಿಗೆ ವಿಜಯ್ ತಂದೆ ತಾಯಿಯರು ಭೇಟಿಯಾದಾಗ,ಇಬ್ಬರ ಅಪ್ಪಂದಿರು ಬಾಲ್ಯ ಸ್ನೇಹಿತರು ಎಂಬುದು ಅರಿವಿಗೆ ಬಂದಿತ್ತು.
 ಮುಂದೆ ಎರಡು ಮನೆಗಳವರ ಆಸೆ ಮತ್ತು ಆಶಯಗಳಂತೆ ವಿಜಯ್ ಸುಮಾಳ ಕೈಹಿಡಿದಿದ್ದ. ಇಬ್ಬರ ಪ್ರೀತಿ, ಪ್ರೇಮ, ನಸು ಮುನಿಸು, ಹುಸಿ ಜಗಳಗಳ ದಾಂಪತ್ಯ ಹಾಲು ಸಕ್ಕರೆ ಬೆರೆಸಿದಂತಿತ್ತು. ತುಸು ಹೆಚ್ಚೇ ಸ್ವಾಭಿಮಾನಿಯಾಗಿದ್ದ ಸುಮ ಗಂಡ ಮನೆ ಮಕ್ಕಳನ್ನು ಪ್ರೀತಿಸುವಷ್ಟೇ ಸಹಜವಾಗಿ ತನ್ನ ಆತ್ಮಭಿಮಾನವನ್ನು ಕೂಡ ಕಾಪಾಡಿಕೊಂಡು ಬಂದಿದ್ದಳು.  

 ಪದವೀಧರೆಯಾಗಿದ್ದ ಸುಮ ಒಳ್ಳೆಯ ಹೆಣ್ಣು ಮಗಳಾಗಿದ್ದು ಬಂದ ಕೆಲವೇ ದಿನಗಳಲ್ಲಿ ಅತ್ತೆ ಮಾವರ ಮೆಚ್ಚಿನ ಸೊಸೆಯಾಗಿದ್ದಳು. ತನ್ನ ಬಾಣಂತನದ ಸಮಯದಲ್ಲಿಯೂ ಕೂಡ ತವರು ಮನೆಯಲ್ಲಿ ಹೆಚ್ಚು ದಿನ ಕಳೆಯದೆ ಗಂಡನ ಮನೆಗೆ ಬಂದ ಸುಮಾಳ ಆತ್ಮೀಯ ಸ್ವಭಾವದಿಂದ ಪ್ರಭಾವಿತರಾದ ಅತ್ತೆ ಸುಲೋಚನಮ್ಮ ತಮ್ಮೆಲ್ಲ ಜವಾಬ್ದಾರಿಗಳನ್ನು ಸೊಸೆಯ ಮೇಲೆ ಹೊರಿಸಿ ತಾವು ನಿಶ್ಚಿಂತೆಯಾಗಿ ಇದ್ದರು. ಅತ್ತೆ ಮಾವರ ಪ್ರೀತಿ, ವಿಶ್ವಾಸ,ಕಾಳಜಿಯ ತಂಪು ನೆರಳು, ಗಂಡನ ಅಪರಿಮಿತ ಪ್ರೇಮವನ್ನು ಹೊತ್ತು ತಂದ ಮಕ್ಕಳು ಮತ್ತಿನ್ನೇನು ಬೇಕು ಸುಮಳಿಗೆ?? ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ ಆಕೆಯ ಬದುಕು.

 ಮುಂದಿನ ಕೆಲವು ವರ್ಷಗಳಲ್ಲಿ  ವಯೋ ಸಹಜವಾದ ಸಾವು ಅತ್ತೆ ಮಾವರನ್ನು ಈ ಪ್ರಪಂಚದಿಂದ ಕರೆದೊಯ್ಯಿತು.

 ಬದುಕಿನ ತಿರುವುಗಳು ಬಹಳ ವಿಚಿತ್ರ….. ಕಳೆದ ತಿಂಗಳು ತನ್ನ ಆಫೀಸಿಗೆ ಸಹೋದ್ಯೋಗಿಯಾಗಿ ಬಂದ ವಿನುತಾಳನ್ನು ಕಂಡರೆ ಅದೇನೋ ಒಂದು ಆಕರ್ಷಣೆ ಹುಟ್ಟಿದಂತಾಗಿತ್ತು ವಿಜಯನಿಗೆ. ಆಕೆಯ ಕಂಗಳ ಹೊಳಪು, ಮಾಟವಾದ ಅಂಗಸೌಷ್ಟವ, ತೊಡುತ್ತಿದ್ದ ಆಧುನಿಕ ಉಡುಪುಗಳು ಆಕೆಯನ್ನು ತಿರುಗಿ ನೋಡುವಂತೆ ಮಾಡುತ್ತಿತ್ತು. ತಾನು ಮದುವೆಯಾದವನು ಸಂಸಾರವೊಂದಿಗ.  ಹೈಸ್ಕೂಲಿನಲ್ಲಿ ಓದುತ್ತಿರುವ  ಒಂದು ಗಂಡು ಒಂದು ಹೆಣ್ಣು ಮಕ್ಕಳು ತನಗಿದ್ದಾರೆ ಎಂಬುದನ್ನು ಮರೆತು ಆಕೆಯ ಹಿಂದೆ ಬಿದ್ದನು. ಮೊದಮೊದಲು ಕೇವಲ ಗುಡ್ ಮಾರ್ನಿಂಗ್ ಗುಡ್ ನೈಟ್ಗಳೊಂದಿಗೆ ಪ್ರಾರಂಭವಾದ ಆತನ ವಾಟ್ಸಪ್ ಚಾಟ್, ಇದೀಗ ಹೆಂಡತಿ ಮಕ್ಕಳ ಅರಿವಿಗೆ ಬಾರದಂತೆ ವಿಡಿಯೋ ಕಾಲ್ ಮಾಡಿ
 ಮಾತನಾಡುವವರೆಗೆ ಬಂದಿತ್ತು. ಇಬ್ಬರು ಆಗಾಗ ಹೊರಗೆ ಸುತ್ತಾಡಲು ಹೋಗಿದ್ದು ಉಂಟು.

 ಒಂದು ದಿನ ತಾವು ವಾಸಿಸುತ್ತಿದ್ದ  ಏರಿಯಾದಲ್ಲಿಯೇ ಇದ್ದ ಚಿಕ್ಕಮ್ಮನ ಮನೆಗೆ ಮಕ್ಕಳೊಂದಿಗೆ ಸುಮಾ ಹೋಗಿದ್ದಳು. ಅತ್ಯಂತ ಪ್ರೀತಿ ಪಾತ್ರಳಾದ ಸುಮಾಳ ಬರವು ಅವರೆಲ್ಲರಿಗೂ ಖುಷಿ ತಂದು ಮಧ್ಯಾಹ್ನದ ಮ್ಯಾಟಿನಿ ಶೋ ಗೆ ತಾವೆಲ್ಲಾ ಹೋಗುತ್ತಿರುವುದಾಗಿಯೂ ಆಕೆಯೂ ತಮ್ಮೊಂದಿಗೆ ಬರಬೇಕೆಂದು ಒತ್ತಾಯಿಸಿ ಕರೆದುಕೊಂಡು ಹೋದರು.
 ಇನ್ನೇನು ಟಿಕೆಟ್ ತೆಗೆದುಕೊಂಡು ಎಲ್ಲರೂ ಒಳಗೆ ಹೋಗಬೇಕೆಂದಿರುವಾಗ ಕೊನೆಯಲ್ಲಿ ಉಳಿದ ಸುಮಾ ಮತ್ತೊಂದು ಥಿಯೇಟರಿನಿಂದ ತನ್ನ ಗಂಡ ವಿಜಯ್ ಬೇರೊಬ್ಬ ಹೆಣ್ಣು ಮಗಳ ಹೆಗಲ ಮೇಲೆ ಕೈ ಹಾಕಿ ಬರುತ್ತಿರುವುದನ್ನು ನೋಡಿದಳು. ತಾನು ನೋಡುತ್ತಿರುವುದು ನಿಜವೇ ಸುಳ್ಳೇ ಎಂಬುದು ಗೊತ್ತಾಗದೆ ತಬ್ಬಿಬ್ಬಾಗಿ ಮತ್ತೆ ಮತ್ತೆ ನಿಂತು ತಿರುಗಿ ನೋಡಿದಳು. ತನ್ನ ಜೊತೆಗಿರುವ ಯುವತಿಗೆ ಏನನ್ನೋ ಹೇಳುತ್ತಾ ಬರುತ್ತಿದ್ದ ವಿಜಯ ಪತ್ನಿಯನ್ನು ಅಲ್ಲಿ ಕಂಡು ದಿಗ್ಭ್ರಮೆಯಿಂದ ನಿಂತುಬಿಟ್ಟ. ಮುಖದ ಮೇಲಿನ ನಗೆ ಮಾಯವಾಯಿತು…. ಇತ್ತ ಹಿಂದೆ ಉಳಿದ ತಾಯಿಯನ್ನು ಮತ್ತೆ ಕರೆತರಲು ಬಂದ ಮಕ್ಕಳು ಕೂಡ ಮತ್ತೊಬ್ಬ ಹೆಣ್ಣು ಮಗಳೊಂದಿಗೆ ಸಲುಗೆಯಿಂದ ವರ್ತಿಸುತ್ತಾ ಬರುತ್ತಿದ್ದ ತಂದೆಯನ್ನು ನೋಡಿ ಮೂಕರಂತೆ ನಿಂತು ಬಿಟ್ಟರು. ಅದು ಹೇಗೆ ಮೂರು ಗಂಟೆಗಳ ಸಿನಿಮಾ ಮುಗಿಯಿತೋ ಗೊತ್ತಿಲ್ಲ…. ಮನೆಗೆ ಬಂದ ಹೆಂಡತಿ ಮಕ್ಕಳನ್ನು ಎದುರಿಸಲಾರದೆ ಕೋಣೆಯಲ್ಲಿಯೇ ಉಳಿದುಕೊಂಡ ವಿಜಯ್. ಇತ್ತ ಮಕ್ಕಳು ಕೂಡ ತಮ್ಮ ಕೋಣೆ ಸೇರಿದರು. ಸುಮಾ ಮಾತ್ರ ಮನದಲ್ಲಿ ನೂರು ತಳಮಳಗಳು ಕಾಡುತ್ತಿದ್ದರೂ ಅಡುಗೆ ಮಾಡಿ ಊಟದ ಮೇಜಿನ ಮೇಲೆ ತಂದಿಟ್ಟಳು. ಎಲ್ಲರೂ ತಮಗೆ ಸೇರಿದಷ್ಟನ್ನು ತಿಂದು ಕೋಣೆ ಸೇರಿದರು. ಒಂದು ದೊಡ್ಡ ಲೋಟ ನೀರನ್ನು ಗಟ-ಗಟನೆ  ಕುಡಿದ ಸುಮಾ ಅಡುಗೆ ಮನೆ ಸ್ವಚ್ಛ ಮಾಡಿ ಕೋಣೆ ಸೇರಿದಳು.

 ವಿಜಯ್ ಆಕೆಯನ್ನು ಮಾತನಾಡಿಸಲು ಅದೆಷ್ಟೇ ಪ್ರಯತ್ನಿಸಿದರೂ, ಅದೇನೇ ಸಮಜಾಯಿಶಿ ನೀಡಲು ಹೋದರೂ ಸುಮಾಳ ಮೌನವೇ ಅವನೆಲ್ಲ ಮಾತುಗಳಿಗೆ ಉತ್ತರವಾಯಿತು. ನಾಲ್ಕೈದು ದಿನಗಳ ಮೌನದ ನಂತರ ಮತ್ತೆ ಪತ್ನಿಯನ್ನು ಮಾತನಾಡಿಸಲು ಪ್ರಯತ್ನಿಸಿದ ವಿಜಯ್.

 ಆಗ ಸುಮಾಳ ಬಾಯಿಂದ ಅಳೆದು ತೂಗಿದಂತಹ  ಒಂದೊಂದೇ ಮಾತುಗಳು ಹೊರ ಬಿದ್ದವು…. ನೀವು ಏನೇ ಸುತ್ತಿ ಬಳಸಿ ಹೇಳಿದರೂ ವಿಷಯ ಸ್ಪಷ್ಟವಾಗಿ ಅರಿವಾಗಿದೆ. ನಿಮ್ಮ ಮನೆಯಾಚೆಗಿನ ಸಂಬಂಧ ನನ್ನ ಆತ್ಮಭಿಮಾನವನ್ನು ಕೆಣಕಿದೆ. ನನ್ನಿಡೀ ಬದುಕನ್ನು ಈ ಕುಟುಂಬಕ್ಕೆ ಮೀಸಲಿಟ್ಟ ನನಗೆ ನಿಮ್ಮ ಈ ವರ್ತನೆ ತೀರದ ನೋವನ್ನು ಉಂಟು ಮಾಡಿದೆ. ಇನ್ನು ಮುಂದೆ ನಾವಿಬ್ಬರು ಮೊದಲಿನಂತೆ ಇರಲು ಸಾಧ್ಯವಾಗುವುದಿಲ್ಲ ಎಂಬುದು ನನ್ನ ಭಾವನೆ. ನನ್ನ ಸ್ವಾಭಿಮಾನವನ್ನು ಕೊಂದುಕೊಂಡು ನಿಮ್ಮ ಜೊತೆ ಏನೂ ಆಗಿಯೇ ಇಲ್ಲವೆಂಬಂತೆ ಬಾಳಲು ನನ್ನಿಂದ ಸಾಧ್ಯವಿಲ್ಲ. ಅಕಸ್ಮಾತ್ ಇದೇ ತಪ್ಪನ್ನು ನಾನು ಮಾಡಿದ್ದರೆ ನೀವು ನನ್ನನ್ನು ಕ್ಷಮಿಸುತ್ತಿದ್ದಿರಾ?? ಖಂಡಿತವಾಗಿಯೂ  ಇಲ್ಲ…. ಮತ್ತೆ ಈಗ ನಾನು ಕ್ಷಮಿಸಲಿ ಎಂದು ಹೇಗೆ ಆಶಿಸುತ್ತೀರಿ??

 ಮಧ್ಯದಲ್ಲಿ ಮಾತನಾಡಲು ಪ್ರಯತ್ನಿಸಿದ ವಿಜಯ್ ಗೆ ಕೈ ಮಾಡಿ ಸುಮ್ಮನಾಗಿಸಿದ ಸುಮಾ…. ಇದೇ ಏರಿಯಾದಲ್ಲಿರುವ ಶಾಲೆಯಲ್ಲಿ ನಾನು ಶಿಕ್ಷಕಿಯಾಗಿ ಆಯ್ಕೆಯಾಗಿದ್ದೇನೆ ನನ್ನ ಖರ್ಚು ವೆಚ್ಚಗಳಿಗೆ ಇದು ಅನಿವಾರ್ಯ. ನನ್ನವನಲ್ಲದ ವ್ಯಕ್ತಿಯ ಹಣದಲ್ಲಿ ನಾನು ಬದುಕಲು ಸಾಧ್ಯವಿಲ್ಲ. ನಮ್ಮಿಬ್ಬರ ಮಕ್ಕಳ ತಾಯಿಯಾಗಿ ಈ ಕುಟುಂಬದ ಗೃಹಿಣಿಯಾಗಿ
 ನಾನು ಇರಬಲ್ಲೆ, ಆದರೆ ನಿಮ್ಮ ಪತ್ನಿಯಾಗಿ ನನ್ನ ತನು ಮನವನ್ನು ನಿಮಗೆ ಒಪ್ಪಿಸಲು ಸಾಧ್ಯವಿಲ್ಲ. ನಮ್ಮಿಬ್ಬರ ದಾರಿ ಎಂದೋ ಕವಲೊಡೆದಿದೆ…. ಇನ್ನು ಮುಂದೆ ನಮ್ಮಿಬ್ಬರ ಜೀವನ ರೈಲಿನ ಎರಡು ಹಳಿಗಳಿದ್ದಂತೆ…. ಕೊನೆಯವರೆಗೂ ಜೊತೆಗೆ ಸಾಗಬಹುದು ಆದರೆ ಕೂಡಲು ಸಾಧ್ಯವಿಲ್ಲ. ಇದನ್ನು ಅರ್ಥ ಮಾಡಿಕೊಂಡು ನನ್ನ ಪಾಡಿಗೆ ನನಗೆ ಇರಲು ಬಿಡಿ ಎಂದು ಸ್ಪಷ್ಟವಾಗಿ ಹೇಳಿ  ಹೊರಗೆ ಹೊರಟು ಹೋದಳು.

   ದಾಂಪತ್ಯ ಎಂಬುದು ಪ್ರೀತಿ ವಿಶ್ವಾಸ ನಂಬಿಕೆಗಳ ತಳಹದಿಯ ಮೇಲೆ ಕಟ್ಟುವ ಮನೆ. ಆದರೆ ಆದರೆ ಅಡಿಪಾಯವನ್ನೇ ಅಲುಗಿಸಿದ
 ವಿಜಯ್. ಕ್ಷಣಿಕ ಆಸೆಯ ಸುಳಿಗೆ ಬಿದ್ದು ತನ್ನ ಗುಂಡಿಯನ್ನು ತಾನೇ ತೋಡಿಕೊಂಡಿದ್ದ. ಪ್ರಾಯಶ್ಚಿತ್ತವೇ ಇಲ್ಲದ ತಪ್ಪನ್ನು ಮಾಡಿದ ಆತನಿಗೆ ಪರಿಹಾರ ಕಾಲವೇ ನೀಡಬೇಕೆನೋ??


Leave a Reply

Back To Top