ಹಮೀದಾ ಬೇಗಂ ದೇಸಾಯಿ-ಹನಿಗವನಗಳು

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಹನಿಗವನಗಳು

೧…

ಅಜ್ಞಾನದ ಕರಿಯ ಪರದೆ
ಸರಿಸುತಲಿ ಬೆಳಗಿಹುದು
ಜ್ಞಾನದ ಬೆಳಕಿನ ದೀವಿಗೆ
ಸುಪ್ರಭೆಯ ಕಿರಣ ಬೀರುತಲಿ…
ಅರಿವಿನ ಮೊಗ್ಗುಗಳರಳಿ
ಶಾಂತಿಯ ಪರಿಮಳವ
ಸೂಸುತಿಹವು ಮೆಲ್ಲನೆ
ದೇವನ ಕರುಣೆಗೆ ನಮಿಸುತಲಿ..!

೨….

ಗಿರಿಯ ಮುಡಿಯಿಂದ
ಭುವಿಯ ಅಡಿಗಳಿಗೆ
ಇಳಿದಿಹಳು ಜಲಗಂಗೆ
ಜೀವಿಗಳ ಜೀವಾಳವಾಗಿ…
ಹಸಿರೆಲ್ಲ ಉಸಿರಾಗಿ
ಹನಿಹನಿಯು ಮುತ್ತಾಗಿ
ಭೂತಾಯಿ ಒಡಲಿಗೆ
ತಂಪೆರೆವ ಧಾರೆಯಾಗಿ…!

೩…

ನೆಲದವ್ವನ ಒಡಲಿಂದ
ಬೀಜವೊಂದು ಮೊಳೆತು
ಚಿಗುರಿ ನಳನಳಿಸುತಿದೆ
ಎಳೆಯ ಮೃದು ಎಲೆಗಳಲಿ…
ನೋಡುತ ಹೊಸ ಜಗವ
ಸಂತಸದಿ ಸಂಭ್ರಮಿಸಿ
ತೂಗಿ ಬೀಗಿ ತಲೆಯೆತ್ತಿ
ನಲಿದಿದೆ ನಗುತ ಹಸಿರಿನಲಿ…

೪…

ಬಾಳೊಂದು ಬಿಳಿಯ ಹಾಳೆ
ಬದುಕಿನ ನೋವು ನಲಿವುಗಳು
ಅದರ ಮೇಲೆ ಬರೆದ ಅಕ್ಷರಗಳು….
ಅರಿತು ಬಾಳಬೇಕಿದೆ ಮನುಜ
ಅನುಭವದ ಪದಗಳ ಮೂಡಿಸಲು
ಸಾರ್ಥಕದ ಬದುಕಿನ ಹೊನ್ನುಡಿಗಳು…

೫…

ಬೆಳಗುತಿತ್ತು ನಗುತ
ಮುಸ್ಸಂಜೆಯ ವೇಳೆ
ಹೊತ್ತಿಸಿದಾಗ ಅಜ್ಜಿ
ಮನೆಯನೆಲ್ಲ ಅಂದು…
ಬೆಳಗದೆ ಕೊರಗಿ
ಕಣ್ಣೀರಿಡುತಿದೆ
ಮೌನವಾಗಿ ಚಿಮಣಿ
ಮನೆ ಮೂಲೆಯಲಿ ಇಂದು…

೬…

ಮುಂಗಾರಿನ ಮಳೆಹನಿ
ಮುತ್ತಿಡಲು ಇಳೆಗೆ
ತಣಿದಿದೆ ಭೂತಾಯಿ ಒಡಲಿಂದು
ನಲಿಯುತಲಿ ಉಲ್ಲಾಸದಿ….
ಗಿಡಮರ ಸಸಿಗಳು
ನಮಿಸಿವೆ ಸಂತಸದಿ
ಉಲಿಯುತ ಶುಭ ಗಾನವ
ತಲೆಬಾಗುತಲಿ ಸಂಭ್ರಮದಿ…!

೭…

ಸೃಷ್ಟಿಯಲಿಹುದು
ಹಗಲು ಬೆನ್ನಿಗೇ ಇರುಳು
ಜೀವಕುಲಕಿಹುದು
ಹುಟ್ಟಿನೊಂದಿಗೇ ಸಾವು
ಬದುಕಿನಲಿಹುದು
ನಲಿವಿನೊಂದಿಗೇ ನೋವು
ಬೇವು-ಬೆಲ್ಲದ ತೆರದಿ
ಬಾಳೋಣ ನಗುತ ನಾವು…!

೮…

ಬಾಳಲಿರಬೇಕು
ಶಾಂತಿ ಸಹನೆ
ಅದುವೆ ಇಹುದು
ನೆಮ್ಮದಿಯ ಏಣಿ…
ತ್ಯಜಿಸಲೇಬೇಕು
ಕೋಪ ಮತ್ಸರವ
ಪ್ರೀತಿ ಬಂಧುರವು
ಸೌಖ್ಯವದು ಕಾಣಿ…

೯…

ಮೋಡಗಳ ಅಪ್ಪುಗೆಯಲ್ಲಿ
ಝಳಪಿಸಿತದೋ ಮಿಂಚು
ಝಗಝಗಿಸಿ…
ನಭವೆಲ್ಲವೂ
ಕಣ್-ಕುಕ್ಕುವಂತೆ..!
ಸುರಿಯಿತದೋ ಬೆಚ್ಚಿ
ಮುಂಗಾರು ಮಳೆಯ
ಮುತ್ತು ಹನಿಗಳು…

೧೦…

ಧವಳ ದುಕೂಲದಿ
ಮಂಜು ಮುಸುಕಿದೆ
ಧಾತ್ರಿಯೊಡಲಲಿ ಚಂದದಿ…
ಅರಳಿ ನಗುತಿವೆ
ಶ್ವೇತ ಶುಭ್ರ ಗುಲಾಬಿ
ಕುಸುಮಗಳು ಆನಂದದಿ…

೧೧…

ಸೋತೆನೆಂದೆನಬೇಡ
ನಿರಾಶೆ ಹತಾಶೆ ದೂರವಿಡು
ದೃಢ ಹೆಜ್ಜೆ ನಿನದಿರಲಿ …..
ಮನದಲ್ಲಿ ಛಲಹೊಂದು
ಗೆದ್ದೇ ಗೆಲ್ಲುವೆನೆಂದು
ಯಶವಿಹುದು ಸನಿಹದಲಿ..!

೧೨…

ಭವದ ಭಯವನು
ನೀಗಿಸಲು ಬಾಳಿನಲಿ ;
ಅಜ್ಞಾನ ತೊಲಗಿಸಲು
ಜ್ಞಾನ ಜೊತೆಗಿರಬೇಕು…
ಅಂತರಂಗದ ಅರಿವು
ಮೂಡಿಸಲು ಮನದಿ
ಗುರುಕೃಪೆಯ ಹಣತೆ
ಬೆಳಗುತಿರಬೇಕು…!


ಹಮೀದಾ ಬೇಗಂ ದೇಸಾಯಿ

Leave a Reply

Back To Top