ಅಂಕಣ ಸಂಗಾತಿ.

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿ

ಡಾ ಎಂ ಅಕಬರ ಅಲಿ

ಖ್ಯಾತ – ಕವಿ – ಲೇಖಕ- ಸಂಶೋಧಕ

ಸೂಕ್ಷ್ಮ ಸಂವೇದನೆ, ಚಿಕಿತ್ಸಕ ದೃಷ್ಟಿಕೋನ, ಸತ್ಯದ ಪ್ರತಿಪಾದನೆ, ಸ್ವಸ್ಥ ಸಮಾಜ ನಿರ್ಮಾಣದ ಕಡೆಗೆ ಗಮನಿಸುವಂತೆ ತನ್ನ ಚಿಂತನೆ, ಕಾವ್ಯ, ಚುಟುಕುಗಳನ್ನು ರಚಿಸುತ್ತಿದ್ದ ಅಕಬರ್ ಅಲಿ ನವೋದಯ ಕಾಲದ ಪ್ರಮುಖ ಸಾಹಿತಿ. ಎಂ.ಅಕಬರ ಅಲಿ, ಸರ್ವಜ್ಞನ ಕುರಿತು ಪಿ.ಎಚ್ ಡಿ ಮಾಡಿದ ಮೊದಲಿಗರು. ಕನ್ನಡ ಚುಟುಕು ಸಾಹಿತ್ಯದಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದ ಅಕಬರ್ ಅಲಿಯವರು ಕಾವ್ಯ, ವಿಮರ್ಶೆ, ಕಾದಂಬರಿ ಕ್ಷೇತ್ರಗಳಲ್ಲಿ ಹದಿನೈದಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ.

ಬಾಲ್ಯ ಜೀವನ


ಡಾ| ಎಂ.ಅಕಬರ ಅಲಿ ಇವರು ೧೯೨೫ ಮಾರ್ಚ್ ೩ ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಉಳ್ಳಾಗಡ್ಡಿ ಖಾನಾಪುರದಲ್ಲಿ ಜನಿಸಿದರು. ಇವರ ತಾಯಿ ಅಮೀರಬಿ; ತಂದೆ ಅಪ್ಪಾ ಸಾಹೇಬ ಮುಲ್ಲಾ. ತಂದೆ ಸಾಮಾನ್ಯ ದರ್ಜಿ ಕೆಲಸ ಮಾಡುತ್ತಿದ್ದರು. ತಾಯಿ ಮನೆಯೊಡತಿಯಾಗಿ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿದ್ದರು.
ಡಾ ಅಕಬರ ಅಲಿ ಅವರು 1958  ರಲ್ಲಿ ಶ್ರೀಮತಿ ಬಾನೂಬಿ ಅವರೊಂದಿಗೆ ವಿವಾಹವಾದರು. ಅವರಿಗೆ ಮದುವೆ ಒಂದು ಮೋಜಾಗದೇ ಸಾಮಾಜಿಕ ವಿಧಿಯಾಗಿತ್ತು. ಅವರ ಬಡತನದ ಬದುಕಿಗೆ ಗಾಳಿ, ಬೆಳಕು, ಬಣ್ಣ ತುಂಬಿದವರು ಅವರ ಧರ್ಮ ಪತ್ನಿಯವರು.
ಅಕಬರ ಅಲಿಯವರಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದರು.  ಅವರೆಂದರೆ, ನೂರಜಹಾಂ, ಅಹಮದ್‌ ಅಲಿ, ಶಹನಾಜ ಬೇಗಂ, ಅಸಫ ಅಲಿ, ಖುರ್ಷಿದಾಬಾನು ಮತ್ತು ಮುಸ್ತಾಕ ಅಲಿ ಎಂ ಆರು ಜನ ಮಕ್ಕಳು ಎಲ್ಲರೂ ಒಳ್ಳೆ ಹುದ್ದೆಯಲ್ಲಿದ್ದಾರೆ. ಇದು ಡಾ ಅಕಬರ ಅಲಿ ಅವರ ಕೌಟುಂಬಿಕ ಜೀವನ.

ವಿದ್ಯಾಭ್ಯಾಸ ಹಾಗೂ ವೃತ್ತಿ


ಅಕಬರ ಅಲಿಯವರ ಅವರ ಪ್ರಾಥಮಿಕ ಶಿಕ್ಷಣ ಉಳ್ಳೇಗಡ್ಡಿ ಖಾನಾಪುರದಲ್ಲಿ ಉರ್ದು ಮಾಧ್ಯಮದಲ್ಲಿ ನಡೆಯಿತು. ಐದನೇಯ ತರಗತಿಯಿಂದ ಕನ್ನಡ ಮಾಧ್ಯಮದಲ್ಲಿ ಓದಿದರು. ಅದರ ಲಾಭ ಕನ್ನಡಿಗರಿಗೆ ಆಯಿತು. ದಿ. ಮ.ರಾ. ಕುಲಕರ್ಣಿ ಮಾಸ್ತರರ ಪಾಠಗಳು ಬಾಲಕನಾದ ಅಕಬರ ಅಲಿಯವರಲ್ಲಿ ಕನ್ನಡ ಭಾಷೆ ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿದವು.  5ರಿಂದ 10ನೇತರಗತಿಯವರೆಗೆ ಬೆಳಗಾವಿಯ ಜಿಎ ಪ್ರೌಢ ಶಾಲೆಯಲ್ಲಿ ನಡೆಯಿತು.  ಜಿ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಡಾ ಡಿ ಎಸ್‌ ಕರ್ಕಿ, ಕನ್ನಡದ ಡಿಂಡಿಂಮ ಬಾರಿಸಿದ ಕವಿ ಎಸ್‌ ಡಿ ಇಂಚಲ, ಬ. ಗುಂ ತುರಮರಿಯವರು ಸಾಹಿತ್ಯದ ಕೃಪೆಗೆ ಪ್ರೇರಕ ಶಕ್ತಿಯಾದರು. ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿ.ಎ.(ಆನರ್ಸ್) ಮಾಡಿ , ಪುಣೆ ವಿಶ್ವವಿದ್ಯಾಲಯದಲ್ಲಿ ಎಂ.ಎ.ಮಾಡಿದರು.  
ಪ್ರಾರಂಭಿಕ ಶಿಕ್ಷಣವನ್ನು ತಮ್ಮ ಊರಿನಲ್ಲೇ   ಉರ್ದೂ ಭಾಷೆಯಲ್ಲಿ ಪಡೆದ ಅಕಬರ ಅಲಿ ಅವರು, ಐದನೆಯ ತರಗತಿಯಿಂದ ಕನ್ನಡ ಭಾಷೆಯನ್ನು ಕಲಿಯಲು ಮೊದಲು ಮಾಡಿದರು.  ಮುಂದೆ ಅವರು ಬೆಳಗಾವಿಯ ಜಿ. ಎ. ಹೈಸ್ಕೂಲು ಸೇರಿದಾಗ, ಅವರಿಗೆ ಡಿ. ಎಸ್. ಕರ್ಕಿ ಹಾಗೂ ಡಿ. ಎಸ್. ಇಂಚಲರು ಗುರುಗಳಾಗಿದ್ದರು. ಈ ಮಹನೀಯರು, ಬಾಲಕ ಅಕಬರ ಅಲಿ ಅವರು ಬರೆದ ಕವಿತೆಯನ್ನು ಓದಿ ಪ್ರೋತ್ಸಾಹಿಸಿದರಲ್ಲದೆ, ಇವರ ಸಂಪಾದಕತ್ವದಲ್ಲೇ ಕೈ ಬರಹದ ಪತ್ರಿಕೆ ಹೊರತರುವ ವ್ಯವಸ್ಥೆ ಮಾಡಿದರು.    ಈ ಕವಿಯ ಚೊಚ್ಚಲ ಕವಿತೆ ಬೆಂಗಳೂರಿನಿಂದ ಬಸವರಾಜ ಕಟ್ಟಿಮನಿಯವರು ಸಂಪಾದಿಸುತ್ತಿದ್ದ “ಉಷಾ” ಮಾಸಿಕದಲ್ಲಿ ಪ್ರಕಟವಾಯಿತು. ಆಗ ಅಲಿ ಯವರು ಹತ್ತನೇಯ ತರಗತಿಯ ವಿದ್ಯಾರ್ಥಿ ತಮ್ಮ ಕವಿತೆಯೊಂದು ಪ್ರಕಟವಾಗಿದ್ದನ್ನು  ಕಂಡು ಹೆಮ್ಮೆಯಿಂದ ಬೀಗಿ, ಆತ್ಮವಿಶ್ವಾಸವನ್ನು ಬೆಳೆಸಿಕೊಂಡರು.
ಅಲಿ ಅವರು ಬೆಳಗಾವಿಯಲ್ಲಿದ್ದಾಗ, ಈಶ್ವರ ಸಣಕಲ್ಲರು, ಪಾಟೀಲಪುಟ್ಟಪ್ಪ, ಕೋ. ಚನ್ನಬಸಪ್ಪ, ಹಿರೇಮಲ್ಲೂರು ಈಶ್ವರನ್ ಇವರುಗಳು ಸೇರಿ ಪ್ರಾರಂಭಿಸಿದ್ದ ‘ಕಿರಿಯರ ಬಳಗ’ ಸಾಹಿತ್ಯ ಸಂಸ್ಥೆಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕನ್ನಡ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಓದಿನಲ್ಲಿ ನಿರಂತರವಾಗಿ ತಮ್ಮ ಆಸಕ್ತಿಯನ್ನು ಕಾಯ್ದುಕೊಂಡ ಅಕಬರ ಅಲಿ ಅವರು 1949ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಎ. ಆನರ್ಸ್ ಪದವಿಯನ್ನು ಪಡೆದು ತಾವು ಓದಿದ್ದ ಹೈಸ್ಕೂಲಿನಲ್ಲಿಯೇ ಶಿಕ್ಷಕರಾದರು.  ಮುಂದೆ 1960ರಲ್ಲಿ ಪುಣೆಯ ವಿಲ್ಲಿಂಗ್ಡನ್ ಕಾಲೇಜಿನಿಂದ ಸ್ನಾತಕೋತ್ತರ ಪದವಿಯನ್ನು ಪಡೆದ ಅವರು ಕಾರವಾರದ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ, ಕ್ರಮೇಣದಲ್ಲಿ ಅದರ  ಮುಖ್ಯಸ್ಥರಾಗಿಯೂ ದುಡಿದರು.  ಈ ಹುದ್ದೆಯಲ್ಲಿ ಹದಿನಾಲ್ಕು ವರ್ಷಗಳ ಸೇವೆಯ ನಂತರ 1975ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇರಿ ಅಲ್ಲೇ ನಿವೃತ್ತರಾದರು. ಹೀಗೆ 35 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಪ್ರೌಢಶಾಲಾ ಮಟ್ಟದಿಂದ ಸ್ನಾತಕೋತ್ತರ ತರಗತಿಯವರೆಗೂ ಬೋಧನ ವೃತ್ತಿಯಲ್ಲಿ ಕಾರ್ಯನಿರತರಾಗಿದ್ದರು.  ಬೋಧನೆಯ ಜೊತೆಗೆ ಅಧ್ಯಯನದ ಕೆಲಸವನ್ನೂ ನಡೆಸಿ 1983ರಲ್ಲಿ ‘ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯಸತ್ವ’ ಎಂಬ ಮಹಾಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ  ಪಡೆದರು.

ಸಾಹಿತ್ಯ ಕೃಷಿ


1951ರಲ್ಲಿ ಮುಂಬಯಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ವಿಮರ್ಶಾಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ವಿ.ಕೃ. ಗೋಕಾಕರು ಬೆಳಗಾವಿಗೆ ಬಂದಿದ್ದ ಸಂದರ್ಭದಲ್ಲಿ, ಅವರ ಸನ್ಮಾನಾರ್ಥ ಟಿಳಕವಾಡಿಯಲ್ಲೊಂದು ಸಭೆ ಏರ್ಪಟ್ಟಿತ್ತು. ಆ ಸಭೆಯಲ್ಲಿ ಗೋಕಾಕರು ಮಾತನಾಡುತ್ತಾ  ಅಮೆರಿಕದಲ್ಲಿರುವ ಇಂಗ್ಲಿಷ್‌ ಮಾದರಿಯ ಚುಟುಕು ಸಾಹಿತ್ಯ ಸೃಷ್ಟಿಗೆ ಕರೆಕೊಟ್ಟಿದ್ದರು.  ಇದರಿಂದ ಪ್ರೇರಿತರಾದ ಅಕಬರ ಅಲಿ ಅವರು  ಚುಟುಕು ಕವನಗಳನ್ನು ಮತ್ತು ಅಷ್ಟಪದಿಯನ್ನು ಬರೆಯಲು ಪ್ರಾರಂಭಿಸಿದರು.  ಹೀಗೆ ಬರೆದ ಅಷ್ಟಪದಿ ಕವಿತೆಗಳು ಪತ್ರಿಕೆಗಳಲ್ಲಿ ಬೆಳಕು ಕಂಡ ನಂತರ, 1951ರಲ್ಲಿ ‘ವಿಷಸಿಂಧು’ ಎಂಬ ಸಂಕಲನವನ್ನು ಹೊರತಂದರು. 1952ರಲ್ಲಿ ಮಿತ್ರರಾದ ಶ್ರೀನಿವಾಸ ತೋಫಖಾನೆ ಅವರೊಡನೆ ‘ಅನ್ನ’ ಎಂಬ ಚುಟುಕು ಕವನ ಸಂಕಲನವನ್ನು ಹೊರತಂದರು.
ಅಕಬರ ಅಲಿ ಅವರು ನವೋದಯ ಕಾವ್ಯ ಕಾಲದಲ್ಲಿ  ಕವಿತೆಯನ್ನು ರಚಿಸಲು ಪ್ರಾರಂಭಿಸಿದರೂ, ಯಾವ ಪ್ರಭಾವಕ್ಕೂ ಒಳಗಾಗದೆ ತಮ್ಮದೇ ಆದ ಶೈಲಿಯಲ್ಲಿ ಕಾವ್ಯರಚಿಸುತ್ತಾ ಬಂದರು. ನಾಡಿನ ಪತ್ರಿಕೆಗಳಲ್ಲೆಲ್ಲಾ ಇವರ ಕವನ, ಚುಟುಕುಗಳು ಪ್ರಕಟಗೊಂಡಿವೆ.   ಹೀಗೆ ಬರೆದ ಕವನಗಳು  ನವಚೇತನ, ಸುಮನ ಸೌರಭ, ಗಂಧಕೇಶರ, ಆಯ್ದ ಕವನ ಸಂಕಲನ – ತಮಸಾನದಿ ಎಡಬಲದಿ, ಅಕಬರ ಅಲಿಯವರ ಚುಟುಕುಗಳು, ಕಸಿಗುಲಾಬಿಕಥನ, ಬೆಳಕಿನ ಆರಾಧನೆ ಮುಂತಾದ ಕವನ ಸಂಕಲನಗಳಾಗಿ ಹೊರಹೊಮ್ಮಿವೆ.  ಅಲಿಯವರ ಸಮಗ್ರ ಕವಿತೆಗಳು 2006ರಲ್ಲಿ  ಪ್ರಕಟಗೊಂಡಿದೆ.  
ಕಾವ್ಯದಷ್ಟೆ ಗದ್ಯ ಪ್ರಕಾರವನ್ನೂ ಪ್ರೀತಿಸುತ್ತಿದ್ದ ಅಲಿಯವರು  ‘ಪ್ರಬಂಧ ಪರಿಚಯ’, ‘ನಿರೀಕ್ಷೆಯಲ್ಲಿ’ ಎಂಬ ಕಾದಂಬರಿಗಳು ಹಾಗೂ ಎರಡು ವಿಮರ್ಶಾ ಕೃತಿಗಳಾದ ‘ಸಾಹಿತ್ಯ ವಿವೇಚನೆ’  ಮತ್ತು ‘ಕನ್ನಡ ಕಾವ್ಯಾಧ್ಯಯನ’ಗಳನ್ನು ಪ್ರಕಟಿಸಿದ್ದರು.   ಉತ್ತರಕನ್ನಡ ಜಿಲ್ಲಾ ಸಾಹಿತ್ಯ ಪ್ರವರ್ತಕ ಸಹಕಾರಿ ಸಂಘದ ಸಂಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾಗಿ ಜಿಲ್ಲಾ ಸಾಹಿತ್ಯ ಸಂಘಟನೆ ಮುಂತಾದವುಗಳಲ್ಲಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದ ಅಲಿಯವರು ರಾಜ್ಯ ಪಠ್ಯ ಪುಸ್ತಕ ನಿರ್ದೇಶನಾಲಯದ ಕಿರಿಯರ ವಿಶ್ವಕೋಶವಾದ ಜ್ಞಾನಗಂಗೋತ್ರಿಯ ಎಂಟನೆಯ ಸಂಪುಟದ ಸಂಪಾದಕ ಮಂಡಲಿಯ ಸದಸ್ಯರಾಗಿ, 1975ರಲ್ಲಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ರಾಷ್ಟ್ರೀಯ ಕವಿಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ, 1985ರಲ್ಲಿ ಬೀದರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿ, ರಾಜ್ಯ ಸಾಹಿತ್ಯ ಅಕಾಡಮಿ ಸದಸ್ಯರಾಗಿ (1981-83), ರಾಜ್ಯ ವಿಧಾನ ಪರಿಷತ್ತಿನ ನಾಮಕರಣ ಸದಸ್ಯರಾಗಿ (1986-92) ಮಂಡ್ಯದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಉದ್ಘಾಟಕರಾಗಿ (1994), ಮೈಸೂರಿನಲ್ಲಿ ನಡೆದ ದಸರಾ ಕವಿಗೋಷ್ಠಿಯ ಅಧ್ಯಕ್ಷರಾಗಿ (1998) ಮೈಸೂರು ಜಿಲ್ಲಾ 9ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ (2009), ಸಂಕೇಶ್ವರದಲ್ಲಿ ಜರುಗಿದ ತಾಲ್ಲೂಕು ಸಮ್ಮೇಳನದ ಅಧ್ಯಕ್ಷರಾಗಿ (2011) ಹೀಗೆ ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ಗೌರವ ಪಡೆದಿದ್ದರು.
ಅಕಬರ ಅಲಿ ಅವರಿಗೆ ‘ಸುಮನ ಸೌರಭ’ ಕೃತಿಗೆ  ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ‘ಗಂಧಕೇಶರ’ ಕೃತಿಗೆ ಕೇಂದ್ರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಮಂತ್ರಾಲಯದ ಗೌರವ, ‘ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯಸತ್ವ’ ಎಂಬ ಅವರ ಸಂಶೋಧನಾ  ಕೃತಿಗೆ  ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರು ಸಾವಿರ ಮಠ ದಿಂದ ಬಹುಮಾನ, ಕರ್ನಾಟಕ ರಾಜ್ಯೋತ್ಸವ  ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಪ್ರಕೃತಿ ಸಂಸ್ಥೆಯಿಂದ ಪ್ರಕೃತಿ ಪ್ರಶಸ್ತಿ, ಡಿ.ವಿ.ಜಿ. ಪ್ರಶಸ್ತಿ  ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಮುಂತಾದ  ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.
ಒಟ್ಟಾರೆ ಅಕ್ಬರ ಅಲಿ ಅವರ ಕೃತಿಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು


ಕವನ ಸಂಕಲನ


1. ವಿಷಸಿಂಧು (1951)
2. ಅನ್ನ
3. ನವಚೇತನ (1961)
4. ಸುಮನಸೌರಭ (1965)
5. ಗಂಧಕೇಶರ (1972)
6. ತಮಸಾ ನದಿ ಎಡಬಲದಿ (ಸಮಗ್ರ)
7. ಅಕಬರ ಅಲಿಯವರ ಚುಟುಕಗಳು (1989)
ಕಾದಂಬರಿ
1. ನಿರೀಕ್ಷೆಯಲ್ಲಿ (1942)
ಸಂಶೋಧನೆ
1. ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯಸತ್ವ (ಪಿಎಚ್.ಡಿ. ಪ್ರಬಂಧ)
ಆತ್ಮಕಥೆ
1. ಒಂದು ರೋಚಕ ಪಯಣ (ಕಿರು ಆತ್ಮವೃತ್ತಾಂತ)


ಪ್ರಶಸ್ತಿ ಗೌರವ


• ಸುಮನ ಸೌರಭ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ (1967)
• ಗಂಧಕೇಶರ ಕೃತಿಗೆ ಕೇಂದ್ರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಮಂತ್ರಾಲಯದ ಗೌರವ,
• 1975ರಲ್ಲಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
• ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯಸತ್ವ (ಪಿಎಚ್.ಡಿ. ಪ್ರಬಂಧ) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ (1984)
• ಹುಬ್ಬಳ್ಳಿಯ ಜಗದ್ಗುರು ಮೂರು ಸಾವಿರ ಮಠದಿಂದ ಬಹುಮಾನ,
• ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1984),
• ಡಿವಿಜಿ ಮುಕ್ತಕ ಪ್ರಶಸ್ತಿ
• ೧೯೮೪ ರಲ್ಲಿ ಇವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಕಿದೆ.
• 1985ರಲ್ಲಿ ಬೀದರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು.
• ೧೯೮೯‍ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು.
• 2009ರಲ್ಲಿ ನಡೆದ ಮೈಸೂರು ಜಿಲ್ಲಾ 9ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
• ಸಂಕೇಶ್ವರದಲ್ಲಿ 2011ರಲ್ಲಿ ಜರುಗಿದ ತಾಲೂಕು ಸಮ್ಮೇಳನದ ಅಧ್ಯಕ್ಷರಾಗಿದ್ದರು.


ಅಕಬರ ಅಲಿ ಚುಟುಕುಗಳ ಪಕ್ಷಿನೋಟ


ಅಕಬರ ಅಲಿ ಕನ್ನಡ ಸಾಹಿತ್ಯದ ಗಂಭೀರ ಓದುಗರಾಗಿದ್ದರು. ವಿಮರ್ಶಕರೂ ಹೌದು, ನವೋದಯ,ನವ್ಯ, ಪ್ರಗತಿಶೀಲ ದಲಿತ ಬಂಡಾಯ ಎಲ್ಲ ಪಂಥಗಳೊಂದಿಗೆ ಹಾಯ್ದು ಬಂದ ಇವರು ಈ ಪಂಥಗಳೊಂದಿಗೆ ಪ್ರತಿಕ್ರಿಯಿಸಲು ಕಾವ್ಯವನ್ನೇ ಪ್ರಧಾನ ಮಾದ್ಯಮವನ್ನಾಗಿಸಿಕೊಂಡಿದ್ದರು. ಹೀಗಾಗಿ ಅವರ ಕಾವ್ಯದಲ್ಲಿ ಈ ಎಲ್ಲ ಪಂಥಗಳ ವಿಚಾರದ ಮಾದರಿಗಳನ್ನು ಕಾಣಲು ಸಾಧ್ಯ. ಪ್ರಗತಿಶೀಲ ಪಂಥದ ಮೌಲ್ಯಗಳ ಹರಿಕಾರರಾಗಿ ಅಕಬರ ಅಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಾರೆ. ಹಾಗೆಂದು ಅವರನ್ನು ಆ ಪರಿಧಿಯಲ್ಲಿಯೇ ಇಟ್ಟು ನೋಡಬೇಕಾಗಿಲ್ಲ ಏಕೆಂದರೆ ಆ ಪರಿಧಿಯನ್ನು ಮೀರಿ ನಿಲ್ಲುವ ಸಾಹಿತ್ಯ ಕೃಷಿ ಅವರದ್ದು. ಪ್ರಗತಿಶೀಲ ಕವಿಗಳ ಪ್ರಧಾನ ಕಾವ್ಯಾಭಿವ್ಯಕ್ತಿ ಮಾರ್ಗವಾಗಿಯೇ ಇವರ ಚುಟುಕುಗಳು ಕನ್ನಡದಲ್ಲಿ ಅನಾವರಣಗೊಂಡಿವೆ. ಇವರಿಗೆ ಉಮ್ಮರ್‌ ಖಯ್ಯಾಮರ ಮುಕ್ತಕಗಳು ಪ್ರೇರಣಶಕ್ತಿಯಾಗಿದ್ದು ಕಂಡು ಬರುತ್ತದೆ.
ಚುಟುಕು ಸಾಹಿತ್ಯದಲ್ಲಿ ತಕ್ಷಣವೇ ಗಮನಕ್ಕೆ ಬರುವ ಹೆಸರು ನಾಲ್ಕು. ದಿನಕರ ದೇಸಾಯಿ, ಅಕಬರ ಅಲಿ,ವಿ ಜಿ ಭಟ್ಟ ಮತ್ತು ಡಿ.ವಿ.ಜಿ ಅವರನ್ನು ಚುಟುಕು ಬ್ರಹ್ಮ ಎಂದು ಕರೆಯಲಾಗಿದೆ. ಆದರೆ ಈ ನಾಲ್ವರೂ ಚತುರ್ಮುಖದ ನಾಲ್ಕು ಮುಖಗಳಂತೆ ಕಾಣುತ್ತಾರೆ. ನಡುವಿನ ಮುಖಗಳು ದಿನಕರ ದೇಸಾಯಿ ಮತ್ತು ಡಿ.ವಿ.ಜಿ ಅವರದ್ದಾದರೆ ಎಡಬಲದ ಮುಖಗಳು ಅಕಬರ ಅಲಿ ಹಾಗೂ ವಿ.ಜಿ ಭಟ್ಟರದು. ಡಿ ವಿ ಜಿ ಅವರು ವಚನ ಮಾದರಿಯನ್ನು ಅನುಸರಿಸಿದ್ದರಿಂದ ಎಲ್ಲರ ನಾಲಗೆಯಲ್ಲಿ ಉಳಿದರು
ಅಕಬರ ಅಲಿ ಅವರ ಚುಟುಕುಗಳಲ್ಲಿ ಸಾಮಾಜಿಕ,ರಾಜಕೀಯ, ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದವೇ ಅಧಿಕವಾಗಿವೆ. ಕ್ಷುದ್ರನಾಯಕರು, ಸ್ತ್ರೀಯರು, ಭಾರತೀಯ ಕ್ಷುದ್ರತನ, ವಿಶ್ವಶಾಂತಿಯ ಕುರಿತು ಸುಧಾರಣಾವಾದಿ ನಾಯಕರ ಕುರಿತು ಬರೆಯುತ್ತಾ ಹೋಗಿದ್ದಾರೆ.
ಜನಸಾಮಾನ್ಯರ ಜೀವನದ ದುರಂತ ಧ್ವನಿಯಾಗಿಯೇ ಇವರ ಚುಟುಕು ಮತ್ತು ಕಾವ್ಯ ಪ್ರಸ್ತುತಗೊಂಡಿವೆ. ಚುಟುಕಿನಲ್ಲಿಯೇ ಹೆಚ್ಚು ಮಾತು ಮಾಡಿದ ಈ ಕವಿ ಚುಟುಕಿಗೆ “ ವಾಮನರೂಪಿ ಕಾವ್ಯ” ಸಮಾಜದ ಪರಮೌಷಧಿ” ಎಂದು ಕರೆದಿದ್ದಾರೆ.
ಅಕಬರ ಅಲಿ ಅವರ ಕಾವ್ಯವಾಗಲೀ ಚುಟುಕಗಳಾಗಿರಲೀ ಅವುಗಳ ಪ್ರಧಾನ ಲಕ್ಷಣವೇ ಹದಹರಿತವಾದ ವಿಡಂಬನೆ ಮತ್ತು ವ್ಯಂಗ್ಯ. ಕೊನೆಯಲ್ಲಿ ವಿಷಾದದ ಧ್ವನಿಯಿಂದ ಮುಕ್ತಾಯಗೊಳ್ಳುವುದೇ ಅಧಿಕ. ಧರ್ಮಾತೀತ, ಜ್ಯಾತ್ಯಾತೀತ ವಿಚಾರಗಳನ್ನು ಹೇಳುವಾಗ ಪ್ರತಿಮಾತ್ಮಕ ಪರಿಭಾಷೆಯಲ್ಲಿ ಅಭಿವ್ಯಕ್ತಿಸಿದ್ದೇ ಅಧಿಕ. ಇವರ ಚಿಂತನೆಗಳಲ್ಲಿ ಉತ್ಪ್ರೇಕ್ಷ ಕಾಣುವುದಿಲ್ಲ.
ಅಕಬರ ಅಲಿ ಅವರು ತಮ್ಮ ಚುಟುಕುಗಳಲ್ಲಿ ಚೌಪದಿಯೆ ವಿಜೃಂಬಿಸಿದೆಯೆಂದು ಅವರೇ ಹೇಳಿಕೊಂಡುದು ಉಂಟು. ಅವರು ಚುಟುಕಕ್ಕೆ “ ಆಕಾರವಿಲ್ಲದ ಆಕಾರ ಬಂಧವಿರದ ಬಂಧುರತೆ ಎಂದು ವಿವರಿಸಿದ್ದರು. ಅಲ್ಲದೇ ಅವರು ಚುಟುಕನ್ನು ಅಮಿಬಕ್ಕೆ ಹೋಲಿಸಿದ್ದರು.
ಕನ್ನಡದಲ್ಲಿ ಚುರುಕಾದ ರಾಜಕೀಯ ಚುಟುಕುಗಳನ್ನು ಬರೆದವರಲ್ಲಿ ಅಕಬರ ಅಲಿ ಅವರೇ ಪ್ರಮುಖರು. ಮಹಾತ್ಮಾ ಗಾಂಧಿಜೀಯವರ ಇದ್ದಾಗಿನ ಭಾರತಕ್ಕೂ ಈಗ ಅದರ ನಂತರದಲ್ಲಿಯೂ ಆಗಿರುವ  ಸ್ಥಿತ್ಯಂತರಗಳನ್ನು ತೀವ್ರವಾಗಿ ಕಂಡ ಕವಿಗಳು ಅವರು.


ಗಾಳಿಯೂದುವ ಮುದುಕ ಮನೆಯಲ್ಲಿ ಇರುವತನಕ
ಝಗ್ಗ ಝಗ್ಗ ಜ್ವಲಿಸಿತ್ತು ಅಗ್ನಿ ಕುಂಡ
ಮನೆ ಹಿರಿಯ ಮರೆಯಾದ ಚಣದಿಂದ ನರಳುತ್ತಾ
ಬಿಳಿಬೂದಿಯಡಿಯಲ್ಲಿ ಬೆಂಕಿ ಕಂಡ


ಎನ್ನುತ್ತಾರೆ. “ಗಾಳಿಯೂದುವ ಮುದುಕ ಎಂದು ಗಾಂಧಿಜೀಯವರ ಅನುಪಸ್ಥಿತಿಯಲ್ಲಿ ದೇಶದಲ್ಲಿ ಎಂಥ ಸ್ಥಿತಿ ನಿರ್ಮಾಣವಾಯಿತು ಎನ್ನುವುದನ್ನು ಚುಟುಕು ದವನಿಸಿದೆ.
ಅಕಬರ ಅಲಿ ಅವರು ತಮ್ಮ ಚುಟುಕುಗಳ ಮೂಲಕ ರಾಜಕೀಯ ವೈಚಿತ್ರವನ್ನು ವಿವರಿಸಿದ್ದರು. ನಮ್ಮ ನಾಯಕರು ಚುನಾವಣೆ ಬಂದರೆ ಹಾಲಿನ ಹೊಳೆಯನ್ನೇ ಮಾತಿನಲ್ಲಿ ಸುರಿಸುವರು ಆರಿಸಿ ಹೋದರೇ, ಐದು ವರ್ಷ ಹಾಲು ಹೋಗಲೀ, ನೀರನ್ನೂ ಕೊಡದೇ ದೂರವೇ ಇರುವರು ಎಂಬುದನ್ನು

ಹಾಲು ಹೊಳೆಯನು ಹರಿಸಿ ಜೇನು ಮಳೆಯನು ಕರೆಸಿ
ಬುವಿಗೆ ಸ್ವರ್ಗವ ತರುವೆವೆಂದರಂದು
ಕೊಳೆ  ಚರಂಡಿಯ ಹರಿಸಿ ಹೊಲಸು ಜೊಲ್ಲನು ಸುರಿಸಿ
ನೊಣದ ಜಾತಿಯ ತಣಿಸುತಿರುವರು ಇಂದು


ಇಷ್ಟು ದಿಟ್ಟವಾಗಿ ರಾಜಕಾರಣ ಚಿತ್ರಣವನ್ನು ಟೀಕಿಸಿದ ಇನ್ನೊಂದು ಉದಾಹರಣೆಯಿಲ್ಲವೆನಿಸುತ್ತದೆ. ಆದರೆ ಬರೀ ತಪ್ಪನ್ನು ಅವರು ರಾಜಕಾರಣೆಗಳಲ್ಲಿ ಹುಡುಕುವುದಿಲ್ಲ. ಅವರು ಏಕೆ ಹೀಗೆ ಆಗಿದ್ದಾರೆ ಎಂದರೆ ಅದಕ್ಕೆ ಜನರೂ ಕಾರಣ ಎನ್ನುವುದನ್ನು ಹೇಳಲು ಅವರು ಮರೆಯುವುದಿಲ್ಲ. ನಮ್ಮ ಜನ ಎಂಬ ಚುಟುಕಿನಲ್ಲಿ


ಸ್ವಂತಕೆ ಸೇರಿದ ಕವಡಿಯು ಕಳೆದರು

ಸಂಕಟಪಡುವುದು ನಮ್ಮ ಜನ
ಸಾರ್ವಜನಿಕರ ಹಣ ನುಂಗಿ ನೊಣೆಯುವನ
ಕಂಡು ಕಾಣದಂತಿಹುದಣ್ಣ


ತಮ್ಮ ಮನೆಯ ಮುಂದಿನ ಒಂದು ಕಲ್ಲು ಹೋದರೂ ಅದಕ್ಕಾಗಿ ರಂಪಾಟ ಮಾಡುವ ಜನ ಸಾರ್ವಜನಿಕರ ಸ್ವತ್ತಾಗಿರುವ ದೇಶದ ಸಂಪತ್ತನ್ನೇ ರಾಜಕಾರಣ ಕೊಳ್ಳೆ ಹೊಡೆದರೂ ನಮಗೇಕೆ? ಎಂದು ಸುಮ್ಮನಿರುವದರಿಂದಲೇ ರಾಜಕಾರಣಗಳು ಹೀಗೆ ರಾಜಾರೋಷವಾಗಿ ತಮಗೆ ಬೇಕಾದುದನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಎಂಬ ಸ್ಪಷ್ಟ ನಿಲುವು ಅವರದಾಗಿದೆ. ಚುನಾವಣೆ ಬಂದಾಗ ಯಾರನ್ನಾದರೂ ವಿನಯದಿಂದ ಮಾತನಾಡಿಸುವ ನಮ್ಮ ನಾಯಕರು ಚುನಾವಣೆಯ ಮುಗಿಯಿತೋ ಎಲ್ಲರನ್ನೂ ಮರೆಯುತ್ತಾರೆ ಎನ್ನುವುದನ್ನು ಅತ್ಯಂತ ನಿರ್ಭಿಡತೆಯಿಂದ ಅಕಬರ ಅಲಿಯವರು ಚುಟುಕು ರೂಪದಲ್ಲಿ ಹೇಳಿದ್ದಾರೆ.


ಕತ್ತೆ ಕಾಲು ಬೇಕಾದರೂ ಹಿಡಿವರು
ದಾಟಲು ಚುನಾವಣೆಯ ಕುತ್ತು
ಒಮ್ಮೆ ಗೆದ್ದು ಹೊರಬಂದನೋ ಆಯಿತು


ಯಾರನು ಲೆಕ್ಕಿಸದಿಹ ಮತ್ತು
ಅವರ ಚುಟುಕುಗಳಲ್ಲಿ ಬಂದಿರುವ ರಾಜಕೀಯ ವಿಡಂಬನೆ ತೀವ್ರತರವೂ ಮತ್ತು ಸತ್ಯಕ್ಕೆ ಸಮೀಪದ್ದೂ ಆಗಿರುವುದು ಅಷ್ಟೇ ಸತ್ಯವಾಗಿದೆ.
ಅಕಬರ ಅಲಿ ಅವರು ಬದುಕಿನ ಇನ್ನಿತರ ಮುಖಗಳನ್ನೂ ತಮ್ಮ ಚುಟುಕುಗಳಲ್ಲಿ ಚಿತ್ರಿಸಿದ್ದಾರೆ. ಅಲ್ಲಿಯೂ ಅವರು ಗಾಂಭೀರ್ಯತೆಯೆ ಎದ್ದು ಕಾಣುತ್ತದೆ. ಹುಣ್ಣುಮೆಯ ಬೆಳಂದಿಗಳನ್ನು ಅವರು ಒಂದು ಚುಟುಕಿನಲ್ಲಿ ಅಂಬೆಗಾಲಿಡುವ ಮಗುವಿಗೆ ಹೋಲಿಸಿ ಆ ಬೆಳಂದಿಗಳ ಬೆಳಕನ್ನು ಮಗುವಿನ ಜೊಲ್ಲಿಗೆ ಹೋಲಿಸುತ್ತಾರೆ.
ಅಂಬೆಗಾಲಲಿ ನಡೆದು ತುಂಬುದಿಂಗಳ ಬಂದ

ಮೂಡಣದ ಹೊಸ್ತಿಲವ ದಾಟಿ ಹೊರಗೆ
ಕಲ್ಲು ಸಕ್ಕರೆ ಹರಳ ಕರಕರಗಿ ಜೊಲ್ಲಾಗಿ
ಜೊನ್ನಾಗಿ ಸುರಿದಿತ್ತು ಸುತ್ತ ಧರೆಗೆ


ಇದೊಂದು ಅಪ್ಯಮಾನ ಚಿತ್ರ ಚಂದ್ರನನ್ನು ಅಂಬೆಗಾಲಿಡುವ ಮಗುವಿಗೆ ಹೋಲಿಸಿದ್ದು ವಿನೂತನವಾಗಿದೆ.
ಎಂ ಅಕಬರ ಅಲಿ ಯವರು ತುಂಬ ಪ್ರಗತಿ ವಿಚಾರವಂತಿಕೆಯುಳ್ಳವರು. ತಮ್ಮ ಧರ್ಮದಲ್ಲಿರುವ ಘೋಷ ಪದ್ಧತಿಯನ್ನು ಕುರಿತು ಅವರು ಬರೆದ ಒಂದು ಚುಟುಕು ಅದಕ್ಕೆ ಸಾಕ್ಷಿ.


ಗಾಳಿ ಬೆಳಕು aದ್ದು ಪಾರು ಮಾಡುವ ಗುದ್ದು
ಕೋಳ ಗೂಡಿನ ಕೊಂಪೆಯಲಿ ಬದುಕು
ಘೋಷಾದ ಒಣಕಟ್ಟು ಕಟ್ಟಳೆಗೆ ಒಳಪಟ್ಟು
ಕೊಳೆವ ಕೌರವ ನರಕ ಬೇಡವೆದಕು.


ಧರ್ಮದ ಹೆಸರಿನಲ್ಲಿ ನಡೆಯುವ ಅವೈಜ್ಞಾನಿಕ ಕಟ್ಟಳೆಗಳನ್ನು ಅಕಬರ ಅಲಿಯವರು ಪ್ರತಿಭಟಿಸುವುದನ್ನು ಇಲ್ಲಿ ಕಾಣುತ್ತೇವೆ.
ಅಲಿಯವರ ವಿಡಂಬನೆಯ ಪಾರಮ್ಯಕ್ಕೆ ಹಾಲು ಮಾರುವ ಹೆಣ್ಣು ಮಗಳೊಬ್ಬಳ ಚಿತ್ರವಿರುವ ಚುಟುಕು ನೋಡಬೇಕು


ನೀರು ಹಾಲನೇ ನಿತ್ಯ ಕೊಡುವವಳಿಗೆ
ಒಂದಿನ ಕೇಳಿದೆ ಹೆಸರೇನು?
ಗಂಗಾಬಾಯಿ ಎಂದಳು ನಾಚಿ
ಸೊಗಸಾಗಿದೆ ಎಂದೆನು ನಾನು


ಕೊನೆಯ ಸಾಲಿನಲ್ಲಿ ಧ್ವನಿ ಕಾವ್ಯಕ್ಕೆ ಸತ್ವ ತುಂಬಿರುತ್ತದೆ. ಚುಟುಕು ಕಾವ್ಯದ ಮಹತ್ವವೇ ಅದು ನೀರನ್ನೇ ಹಾಲಿಗೆ ಬೆರೆಸಿ ನೀರು ಹಾಲು ಮಾರುವ ಆಕೆ ಗಂಗವ್ವನಾಗದೇ ಇನ್ನೇನಾಗಿರಲು ಸಾಧ್ಯ ಇದು ಅಕಬರ ಅಲಿಯವರ ಚುಟುಕುಗಳ ರೀತಿ.
ಎಂ ಅಕಬರ ಅಲಿ ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅಕಬರ ಅಲಿಯವರು 2016 ರ ಫೆಬ್ರವರಿ 21ರಂದು ಮೈಸೂರಿನಲ್ಲಿ ನಿಧನರಾದರು. ಚಟುಕು ಸಾಹಿತ್ಯದ ಮೇರು ಸಾಹಿತಿ ಇಹಲೋಕ ತ್ಯಜಿಸಿದರೂ ಚುಟುಕು ಸಾಹಿತ್ಯ ಲೋಕದ ಹೃದಯದಲ್ಲಿ ಎಲ್ಲರ ಮನದಲ್ಲಿ ಸದಾ ಹಸಿರಾಗಿಯೇ ಉಳಿದರು.


ಆಕರ ಗ್ರಂಥಗಳು
ಶ್ರೀ ಬಿ ಎಸ್‌ ತಲ್ವಾಡಿ ಆಧುನಿಕ ಕನ್ನಡ ಕವಿಚರಿತೆ
ಅಕಬರ ಅಲಿ ಜೀವನ ಸಾಹಿತ್ಯ, ಶ್ರೀ ವಿಷ್ಣುನಾಯ್ಕ ಪುಟ – ೫
ಬೆಳಕು – ಡಾ ಎಸ್‌ ಆರ್‌ ಗುಂ
ಜಾಳ


ಡಾ ದಾನಮ್ಮ  ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

3 thoughts on “

  1. ಖ್ಯಾತ ಸಾಹಿತಿ, ಸಂಶೋಧಕ, ಕವಿ ಎಂ.ಅಕಬರ ಅಲಿ ಅವರ ಪರಿಚಯಾತ್ಮಕ ಲೇಖನ ತುಂಬಾ ಚೆನ್ನಾಗಿದೆ.
    ಹಮೀದಾ ಬೇಗಂ. ಸಂಕೇಶ್ವರ.

  2. ಸಂಪನ್ಮೂಲ ವಿಷಯ ಕೊಟ್ಟಿದ್ದಕ್ಕೆ ಸಾರ್ಥಕವಾಯಿತು.
    ಹಮೀದಾ ಬೇಗಂ. ಸಂಕೇಶ್ವರ.

Leave a Reply

Back To Top