ಡಾ.ಅಮೀರುದ್ದೀನ್ ಖಾಜಿಯವರ ಕೃತಿ-ಭಾವಯಾನ ಅವಲೋಕನ-ಪ್ರಭಾವತಿ ಎಸ್ ದೇಸಾಯಿಯವರಿಂದ

ಕಾವ್ಯ ಸಂಗಾತಿ

ಡಾ.ಅಮೀರುದ್ದೀನ್ ಖಾಜಿಯವರ ಕೃತಿ

ಭಾವಯಾನ ಅವಲೋಕನ

ಪ್ರಭಾವತಿ ಎಸ್ ದೇಸಾಯಿಯವರಿಂದ

ಕೃತಿ ಶೀಷಿ೯ಕೆ……ಭಾವಯಾನ(ಗಜಲ್ ಸಂಕಲನ)*
ಲೇಖಕರು……..‌‌‌‌‌‌.ಡಾ.ಅಮೀರುದ್ದೀನ್ ಖಾಜಿ*
ಪ್ರಕಾಶನ……..ಭೂಮಾತಾ ಪ್ರಕಾಶನ,ದೇವರನಿಂಬರಗಿ*
ಪ್ರಕಟಿತ ವರ್ಷ…..೨೦೨೩.  ಬೆಲೆ..೧೦೦₹*
ಪುಸ್ತಕಕ್ಕೆ ಸಂಪಕಿ೯ಸ ಬೇಕಾದ ಮೊ.೯೮೮೦೭ ೮೬೪೦೧*

ಗುಮ್ಮಟನಗರಿ ಎಂದು ಖ್ಯಾತಿ ಪಡೆದ ವಿಜಯಪುರ ನಗರವಾಸಿ ಯಾದ ಡಾ.ಅಮೀರುದ್ದೀನ ಖಾಜಿ ಯವರು ವೃತ್ತಿಯಿಂದ ವೈದ್ಯರಾದರೂ ಪ್ರವೃತ್ತಿಯಿಂದ ಸಾಹಿತಿಗಳು,ಕವಿಗಳು,ಸಂಪಾದಕರು ,ಸಂಘಟನಾಕಾರರು ಹೀಗೆ ಬಹುಮುಖ ಪ್ರತಿಭೆಯನ್ನು ಹೊಂದಿದ್ದಾರೆ.೧೯೯೮ ರಲ್ಲಿ ನಾವು ಎಂಬ ಕವನ ಸಂಕಲನ ಪ್ರಕಟಿಸಿ ಪ್ರಶಸ್ತಿ ಹಾಗೂ ೫೦೦೦₹ ಗಳ ನಗದು ಬಹುಮಾನ ಗಳಿಸಿದ್ದಾರೆ.ಈ ಸಂಕಲನದಲ್ಲಿದ್ದ ಸಾಹಿತ್ಯದಿಂ ಸೌಹಾರ್ದ ಎಂಬ ಕವಿತೆ ಮಹಾರಾಷ್ಟ್ರ ರಾಜ್ಯದ ಪಠ್ಯಪುಸ್ತಕ ಸಮೀತಿಯಿಂದ ಒಂಬತ್ತನೆಯ ತರಗತಿಯ ಪಠ್ಯವಾಗಿ ಆಯ್ಕೆಯಾಗಿದೆ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಭಾವೈಕ್ಯತಾ ಪ್ರಶಸ್ತಿ, ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಪ್ರಶಸ್ತಿ ಗಳು ಇವರನ್ನು ಹುಡುಕಿಕೊಂಡು ಬಂದಿವೆ.

      ಈಗ ಡಾ.ಅಮೀರುದ್ದೀನ್ ಖಾಜಿ ಅವರು ಭಾವಯಾನ ಗಜಲ್ ಸಂಕಲನವನ್ನು ಪ್ರಕಟಿಸಿ ಓದುಗರ ಬೊಗಸೆಗೆ ತುಂಬಿದ್ದಾರೆ.ಇದರಲ್ಲಿ ಒಟ್ಟು ೬೩ ಗಜಲ್ ಗಳಿವೆ.

ಗಜಲ್ ಎಂಬುವುದು ಮೃದು ಮಧುರವಾದ ಪ್ರೇಮಕಾವ್ಯ ವಾಗಿದ್ದು ಉದು೯ ಕಾವ್ಯ ಸಾಹಿತ್ಯದ ರಾಣಿಯಾಗಿದೆ,ಇದು ಹಾಡು ಗಬ್ಬವಾಗಿದ್ದು ಗೇಯತೆ,ಲಯ,ಮಾಧೂರ್ಯದಿಂದ ಸಂಗೀತಕ್ಕೆ ಅಳವಡಿಸುವಂತಹ ಕಾವ್ಯವಾಗಿದ್ದು,ಭಾವ ತೀವ್ರತೆಯಿಂದ ಓದುಗರ ಮನ ಮಿಡಿಯುತ್ತದೆ ,ಹೃದಯ ತಟ್ಟುತ್ತದೆ.ಗಜಲ್ ಅರಬ್ಬಿ ದೇಶದಲ್ಲಿ ಹುಟ್ಟಿದರೂ ಅದು ಅಲ್ಲಿ ಕಾವ್ಯ ವಾಗಿ ಬೆಳೆಯದೆ ಇರಾನ ದೇಶದ ಫಾಸಿ೯ ಭಾಷೆಯಲ್ಲಿ ಪ್ರೇಮಕಾವ್ಯವಾಗಿ ಬೆಳೆಯಿತು,ಭಾರತ ದೇಶಕ್ಕೆ ಬಂದು ಉದು೯ ಭಾಷೆಯಲ್ಲಿ  ರಾಜಾಶ್ರಯದಲ್ಲಿ ಬೆಳೆಯಿತು.ಕಾಲಾಂತರದಲ್ಲಿ ಅದು ಜನ ಸಾಮಾನ್ಯರ ಕಾವ್ಯವಾಗಿ ದೇಶದ ತುಂಬಾ ಹರಡಿ ಇಂದು ಭಾರತದ ಎಲ್ಲಾ ಭಾಷೆಯಲ್ಲಿ ಬೆಳೆಯುತ್ತಿದೆ. ಕನ್ನಡದಲ್ಲಿಯೂ ಇಂದು ಗಜಲ್ ಸಾಹಿತ್ಯ ಸಾಕಷ್ಟು ಬೆಳೆದಿದೆ. ಕನ್ನಡ ಗಜಲ್ ರಚನೆಯ ಹರಿಕಾರರಾದ ಡಾ.ಶಾಂತರಸರು ಕನ್ನಡ  ಗಜಲ್ ರಚನೆಗೆ ಬೇಕಾಗುವ ಛಂದಸ್ಸನ್ನು ಪರಿಚಯಿಸಿದ್ದಾರೆ.  ಗಜಲ್ ಸಾಹಿತ್ಯ ಕ್ಕೆ ತನ್ನದೇ ಆದ ಛಂದಸ್ಸು ಇದೆ.

      ಡಾ. ಅಮೀರುದ್ದೀನ್ ಖಾಜಿ ಯವರ ಭಾವಯಾನ ಗಜಲ್ ಸಂಕಲನಕ್ಕೆ ಹಿರಿಯ ಸಾಹಿತಿಗಳಾದ ಶ್ರೀ. ಜಂಬುನಾಥ ಕಂಚ್ಯಾಣಿ ಅವರು ಅರ್ಥ ಪೂರ್ಣವಾದ “ಭಾವಯಾನಕ್ಕೊಂದು ನುಡಿ ಬಾನ “ವನ್ನು ಬರೆದು ಸಂಕಲನದ ಮೌಲ್ಯ ಹೆಚ್ಚಿಸಿದ್ದಾರೆ. ಸಂಕಲನದ ಮುಖ ಪುಟ ಚಿತ್ರವು ಆಕರ್ಷಣೆಯಾಗಿದ್ದು ಒಳ ಚಿತ್ರಗಳು ಗಜಲ್ ಗಳ ಭಾವಕ್ಕೆ ಹೊಂದುವಂತ್ತಿದ್ದು ಸಂಕಲನದ ಮೌಲ್ಯ ಹೆಚ್ಚಿಸಿವೆ. ಡಾ.ಅಮೀರುದ್ದೀನ್ ಖಾಜಿ ಅವರು ಗಜಲ್ ದ ಮೂಲ ದ್ರವ್ಯವಾದ ಪ್ರೀತಿ,ಪ್ರೇಮ,ವಿರಹ,ಕಾಯುವಿಕೆ,ಅನುಸಂದಾನ ,ಸಾಮಾಜಿಕ ಕಳಕಳಿಯನ್ನು ಪ್ರತಿಬಿಂಬಿಸುವ ಗಜಲ್ ಗಳನ್ನು ರಚಿಸಿದ್ದಾರೆ ಭಾವತೀವ್ರತೆ ಮತ್ತು ರೂಪಕ ಪ್ರತಿಮೆಗಳು ಓದುಗರನ್ನು ಮಾತಾಡಿಸುತ್ತವೆ.ಡಾ.ಅಮೀರುದ್ದೀನ್ ಖಾಜಿ ಅವರು ತಮ್ಮ ಭಾವಯಾನಗಜಲ್ ಸಂಕಲನವನ್ನು ತಮ್ಮ ತಾಯಿಯವರಿಗೆ ಅಪಿ೯ಸಿದ್ದಾರೆ.



ನೋವ ಮರೆಸುವ ಗಳಿಗೆಗಳು ಎಲ್ಲಿವೆ ಹುಡುಕು
ನಲಿವ ನೀಡುವ ಗುಳಿಗೆಗಳು ಎಲ್ಲಿವೆ ಹುಡುಕು

ಇಂದಿನ ಜಾಗತಿಕ ಯುಗದಲ್ಲಿ ಮನುಷ್ಯನಿಗೆ ಸುಖ ನೆಮ್ಮದಿ ಅನುಭವಿಸಲು ಸಮಯವಿಲ್ಲದಂತಾಗಿದೆ ಹಣದ ಹಿಂದೆ ಬೆನ್ನ ಹತ್ತಿದ ಮನುಷ್ಯ ತನ್ನ ಆರೋಗ್ಯವನ್ನು ಅಲಕ್ಷಿಸಿ ದುಡಿಯುತ್ತಾ ಹೊರಟಿದ್ದು ಮಾನಸಿಕ ಖಿನ್ನತೆಗೆ ಒಳಗಾಗುವುದು ದೈಹಿಕ ನೋವು ಅನುಭವಿಸುವುದು, ಸಾಮಾನ್ಯ ವಾಗಿದ್ದು ,ಇಲ್ಲಿ ಕವಿ ತಾವೇ ವೈದ್ಯರಾಗಿದ್ದರು ತಮಗಾದ ನೋವು ಮರೆಸುವ ಗಳಿಗೆಗಳನ್ನು ಹುಡುಕಬೇಕಾಗಿದೆ ಎಂದು ಮತ್ತು ಜೀವನದಲ್ಲಿ ಸುಖ ಸಂತೋಷ ಕೊಡುವ ಗುಳಿಗೆಗಳನ್ನು ಹುಡುಕಬೇಕಾಗಿದೆ ಎಂದು ಹೇಳುತ್ತಾರೆ. ಕೊನೆಗೆ ಮಕ್ತಾದಲ್ಲಿ ದೇವರನ್ನು ಸೇರುವ ದಾರಿಗಳು ಎಲ್ಲಿವೆ ಎಂದು ಹುಡುಕಬೇಕಾಗಿದೆ ಎಂದು ಲೌಕಿಕದಿಂದ ಅಲೌಕಿಕದ ಹಾದಿ ಹುಡುಕುತ್ತಾ ದೇವರನ್ನು ಸೇರಲು ಬಯಸುತ್ತಾರೆ.

ಎಂತು ಕಳೆದು ಹೋಯಿತು ಆ ಹೃದಯ ತಟ್ಟಿದ ರಾತ್ರಿ
ಒಲವಿನ ಸಡಗರ ಸಂಭ್ರಮ ಮುಗಿಲು ಮುಟ್ಟಿದ ರಾತ್ರಿ

ಯುವ ಪ್ರೇಮಿಗಳಿಗೆ ಇರುಳೆಂದರೆ ಬಹು ಇಷ್ಟ ಬೆಳದಿಂಗಳ ರಾತ್ರಿ ಜೊತೆಯಾಗಿ ಒಲವಿನ ಪಿಸು ಮಾತುಗಳನ್ನು ಆಡುತ್ತ ಸಮಯ ಕಳೆಯುವುದೆಂದರೆ ಸ್ವರ್ಗದಲ್ಲಿ ತೇಲಾಡಿದಂತೆ ,ಹೃದಯಗಳು ಒಂದಕ್ಕೊಂದು ಹತ್ತಿರವಾಗಿ ಭಾವನೆಗಳು ಹೃದಯವನ್ನು ತಟ್ಟುತ್ತವೆ.ಆ ಸುಂದರ ಗಳಿಗೆ ಸದಾ ಇರಲಿ ಎಂದು ಪ್ರೇಮಿಗಳು ಬಯಸುತ್ತಾರೆ, ಮತ್ತು ಆ ಮಧುರ ಕ್ಷಣಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಬಾಳಿನಲ್ಲಿ ಮೆಲಕು ಹಾಕುತ್ತಾರೆ .ಕವಿ ಅಂತಹ ಸುಂದರವಾದ ರಾತ್ರಿಯ ಬಗ್ಗೆ ಹೃದಯ ತಟ್ಟಿದ  ಆ ರಾತ್ರಿ ಎಲ್ಲಿ ಕಳೆದು ಹೋಯಿತೆಂದು ಮತ್ತು ಆ ಒಲವಿನ ಸಡಗರ ಸಂಭ್ರಮವನ್ನು ಮುಗಿಲು ಮುಟ್ಟಿಸಿದ ರಾತ್ರಿ ಎಲ್ಲಿ ಹೋಯಿತು ಎಂದು ಹಳಹಳಿಸುತ್ತಾ ಮೆಲಕು ಹಾಕುವುದನ್ನು ಕವಿ ಈ ಗಜಲ್ ದಲ್ಲಿ ಸುಂದರವಾಗಿ ಹೇಳಿದ್ದಾರೆ

ಕಣ್ಣಂಚೇಕೆ ಒದ್ಗೆಯಾಗಿವೆ ಓ ನನ್ನ ಜೀವವೇ
ಹೃನ್ಮನವೇಕೆ ಖಿನ್ನವಾಗಿದೆ ಓ ನನ್ನ ಜೀವವೇ

ಪ್ರಿಯಕರ ನನ್ನ ಪ್ರಿಯತಮೆಯ ಕಣ್ಣಿನಲ್ಲಿ ಕಂಡ ಕಂಬನಿಗೆ ಕಾರಣ ಕೇಳುತ್ತಾನೆ ಯಾಕೆ ನಿನ್ನ ನಯನದಲ್ಲಿ ಹನಿಗಳು ಮತ್ತು ನಿನ್ನ ಮನವೇಕೆ ಖಿನ್ನತೆಗೆ ಒಳಗಾಗಿ ಮುಖ ಬಾಡಿದೆ ಎಂದು ಕೇಳುತ್ತಾ ಬಾಳಿನಲ್ಲಿ ಎಲ್ಲರಿಗೂ ಕಷ್ಟ ನೋವುಗಳು ಬರುತ್ತವೆ ಅದಕ್ಕೆ ಹೆದರದೆ  ಸಂಸಾರ ನೌಕೆಯನ್ನು ಸಾಗಿಸಬೇಕೆಂದು ರೂಪಕದೊಂದಿಗೆ ಗಜಲ್ ದಲ್ಲಿ ಕವಿ ಸುಂದರವಾಗಿ ಹೇಳಿದ್ದಾರೆ

ಮಧುಶಾಲೆಗೆ ಜೀವ ಬರ ಬೇಕೆಂದರೆ ನೀನೂ ಬರಬೇಕು
ಮತ್ತೇರಿ ಮನಕೆ ರಂಗೇರ ಬೇಕೆಂದರೆ ನೀನೂ ಬರಬೇಕು

ಗಜಲ್ ದಲ್ಲಿ ಬಳಿಸುವ ಮಧುಶಾಲೆ ಶಬ್ದಕ್ಕೆ  ವಿಶಾಲವಾದ ಅರ್ಥ ವಿದೆ.ಜನ ಸಾಮಾನ್ಯ ರು ತಿಳಿಯುವ ಮದ ಏರಿಸುವ ಮದಿರೆ ಮಾರುವ ಸ್ಥಳ ವಲ್ಲ.ಜ್ಞಾನವನ್ನು ಹಂಚುವ ,ಚಚಿ೯ ಸುವ ಸ್ಥಳವಾಗಿರುತ್ತದೆ.ಇಲ್ಲಿ ಇರುವ ಸಾಕಿ ಸ್ಪೂತಿ೯ ಕೊಡುವ ಸಂಗಾತಿ ಆಗಿರುತ್ತಾಳೆ.ಇಂಥಹ ಮಧು ಶಾಲೆಯಲ್ಲಿ ನಡೆಯುವ ಜ್ಞಾನ ಚಚೆ೯ಗೆ ಸ್ಪೂತಿ೯ ಬರಬೇಕಾದರೆ ಸಾಕಿ ಇರಬೇಕೆಂದು ಕವಿ ಬಯಸುತ್ತಾನೆ.ಮತ್ತು ಮನ ರಂಗೇರಬೇಕೆಂದರೆ ಸಾಕಿ ಇದ್ದರೆ ಮಾತ್ರ ಸಾಧ್ಯ ವೆಂದು ಕವಿ ನಂಬಿದ್ದಾನೆ.ಏಕಾಂತದಲ್ಲಿ ಎಷ್ಟು ಮಧು ಕುಡಿದೂ ಸ್ಪೂತಿ೯ ಬರುವುದಿಲ್ಲ ನೀನು ಇದ್ದರೆ ನನ್ನ ಮನ ರಂಗೇರುತ್ತದೆಂದು ಕವಿ ಇಲ್ಲಿ ಸುಂದರವಾಗಿ ಹೇಳಿದ್ದಾರೆ.

ಈಗಿನ ಯುವ ಪೀಳಿಗೆಗೆ ಹೊಣೆಯೇ ಬೇಡವಂತೆ
ಈಗಿನ ಯುವ ಜನರಿಗೆ ಮದುವೆಯೇ ಬೇಡವಂತೆ

ಇದು ಒಂದು ಸಾಮಾಜಿಕ ಕಳಕಳಿಯ ಹಾಗೂ ವಾಸ್ತವಿಕ ವಿಷಯದ ಗಜಲಾಗಿದ್ದು ಇಂದು ನಾವು ಸಮಾಜದಲ್ಲಿ ಇಂದಿನ ಯುವ ಪೀಳಿಗೆ ಯು ಯಾವುದೇ ಕೌಟುಂಬಿಕ ಜವಾಬ್ದಾರಿಗಳನ್ನು ಹೊರಲು ತಯಾರಿಲ್ಲದನ್ನು ಕಾಣುತ್ತೇವೆ. ದೈಹಿಕ ಸುಖ ಬೇಕು ಮದುವೆ ಕುಟುಂಬ ಬೇಡ ಕೇವಲ ಸರಸ ಸಲ್ಲಾಪದಲ್ಲಿ ಜೀವನ ಸಾಗಿಸಬೇಕೆಂದು ಯುವಕ ಯುವತಿಯರು ಒಂದೇ ಮನೆಯಲ್ಲಿ ಒಟ್ಟಿಗೆ ಇರುತ್ತಾರೆ ದೇಹದ ಸುಖ ಪಡೆಯುತ್ತಾರೆ ಆದರೆ ಮದುವೆ, ಮಕ್ಕಳು,ಸಂಸಾರದ  ಜಂಜಾಟ ಬೇಡವೆಂದು ಹೇಳುತ್ತಿದ್ದಾರೆ ಮೊಬೈಲ್ ವಾಟ್ಸಪ್ ಅಂತರ್ಜಾಲಗಳಲ್ಲಿಯೇ ಸಮಯ ಕಳೆಯುತ್ತಿದ್ದಾರೆ ಜೀವನ ಹಾಳ್ ಮಾಡಿಕೊಳ್ಳುತ್ತಿದ್ದಾರೆ ಎಂದು ಕವಿ ಈ ಗಜಲದಲ್ಲಿ ಸುಂದರವಾಗಿ ಹಿಡಿದಿಟ್ಟಿದ್ದಾರೆ

ಅಯ್ಯೋ ರೇಷ್ಮೆ ಹುಳುವಿನ ತೆರದಿಲಿ ನನ್ನ ನಾ ನೆಯ್ದೆ
ನನ್ನದೇ ಕರುಳಿನ ನೂಲಿನಿಂದಲಿ ನನ್ನ ನಾ ನೆಯ್ದೆ

ಇದು ಒಂದು ತನ್ನನ್ನು ತಾನೇ ಪಾರಮಾಶಿ೯ಸಿಕೊಳ್ಳುವ ಅಧ್ಯಾತ್ಮಿಕ ಗಜಲ್ ಆಗಿದೆ ,ಶರಣರು ಸಂತರು ಸೂಫಿಗಳು ಹೇಳುವಂತೆ ಜಗದ ಜಂಜಾಟದಲ್ಲಿ ಸಿಲುಕಿ ಕೊಳಚೆಯ ಹುಳುವಾಗಿ ಹೊರಳಾಡುತ್ತಿರುವೆನೆಂದು ಹೇಳವಂತೆ ಕವಿ ರೇಷ್ಮೆ ಹುಳುವಿನಂತೆ ನನ್ನದೇ ಆದ ಆಸೆ ಆಕಾಂಕ್ಷೆ  ಕರುಳಿನ ನೂಲಿನಿಂದ ಸುತ್ತಿಕೊಂಡು ಬಂದಿಯಾಗಿ ಕೋಶವನ್ನು ತಯಾರಿಸಿಕೊಂಡಿರುವನೆಂದು ಹೇಳುತ್ತಾ ಷಡ್ ವರ್ಗಗಳ ಜಾಲದಲ್ಲಿ ಸಿಲುಕಿರುವೆ ಈ ಭವ ಸಾಗರ ದಾಟುವನೆಂಬ ಭರವಸೆ ಇಲ್ಲವೆಂದು ಕವಿ ಹೇಳುತ್ತಾನೆ.

ಡಾ. ಅಮೀರುದ್ದೀನ್ ಖಾಜಿ ಅವರ ಭಾವಯಾನ ಗಜಲ್ ಸಂಕಲನದಲ್ಲಿ ಮನ ಮಿಡಿಯುವ,ಚಿಂತನೆಗೆ ಹಚ್ಚುವ ಅನೇಕ ಗಜಲ್ ಗಳು ಇವೆ. ಸರಳವಾಗಿ ಓದಿಸಿಕೊಂಡು ಹೋಗುತ್ತವೆ.ನನ್ನ ಗಮನಕ್ಕೆ ಬಂದ ಒಂದೆರಡು ನ್ಯೂನತೆಯನ್ನು ಹೇಳ ಬಯಸುತ್ತೇವೆ.ಡಾ ಖಾಜಿ ಅವರಿಗೆ ಉದು೯ ಭಾಷೆಯ ಜ್ಞಾನವಿದೆ,ಹಾಗೂ ಅವರು ಉದು೯ ಗಜಲ್ ಗಳನ್ನು ಓದಿರ ಬಹುದೆಂದು ಭಾವಿಸುತ್ತೇನೆ. ಗಜಲ್ ದ ಮುಖ್ಯ ಅಂಗಗಳಾದ ಮತ್ಲಾ,ಕಾಫಿಯಾ,ರದೀಫ್,ಮಕ್ತಾ,ರವಿ ,ತಖಲ್ಲೂಸ್,ಇವುಗಳ ಅರ್ಥ , ಪ್ರಯೋಗ ಎಲ್ಲಾ ಗಜಲ್ ಕಾರರು ತಿಳಿದು ಕೊಂಡಿರುತ್ತಾರೆ.ಡಾ.ಖಾಜಿ ಅವರ ಭಾವಯಾನ ಗಜಲ್ ಸಂಕಲನದಲ್ಲಿ ಕೆಲವು ಗಜಲ್ ಗಳಲ್ಲಿ ಕಾಫಿಯಾ ಸರಿಯಾಗಿ ಪ್ರಯೋಗ ವಾಗಿಲ್ಲದ್ದು ಕಂಡು ಬರುತ್ತದೆ.ಕಾಫಿಯಾ ಗಜಲ್ ದ ಆತ್ಮ ವಿದ್ದಂತೆ, ಕಾಫಿಯಾ ಸರಿಇಲ್ಲದಿದ್ದರೆ ಅದು ಗಜಲ್ ಅನಿಸಿಕೊಳ್ಳುವದಿಲ್ಲ,ಡಾ ಖಾಜಿ ಅವರು ಮುಂದಿನ ತಮ್ಮ ಗಜಲ್ ಗಳ ರಚನೆಯಲ್ಲಿ ಇದನ್ನು ಸರಿ ಪಡಿಸಿಕೊಳ್ಳುತ್ತಾರೆಂದು ನಂಬುತ್ತೇನೆ. ಸಂಕಲನದ ಒಳಗೆ ಗಜಲ್ ಗಳಿಗೆ ಕ್ರಮ ಸಂಖ್ಯೆ ಹಾಕಿದ್ದರೆ ಚನ್ನಾಗಿತ್ತು,ಓದುಗರಿಗೆ ಸಂಕಲನದ ಎಷ್ಟನೇ ಗಜಲ್ ಎಂದು ನೆನಪಿಡಲು ಸುಲಭವಾಗುತ್ತಿತ್ತು.ಉಳಿದಂತೆ ಗಜಲ್ ಓದಿಸಿಕೊಂಡು ಚಿಂತನೆಗೆ ಹಚ್ಚುತ್ತವೆ. ಡಾ.ಖಾಜಿ ಅವರಿಂದ ಇನ್ನೂ ಉತ್ತಮವಾದ ಗಜಲ್ ರಚನೆಯಾಗಿ ಸಂಕಲನಗಳು ಪ್ರಕಟವಾಗಿ ಕನ್ನಡ ಗಜಲ್ ಸಾಹಿತ್ಯ ಲೋಕದಲ್ಲಿ ಬೆಳಗಲೆಂದು ಶುಭ ಹಾರೈಸುತ್ತಾ ನನ್ನ ಬರಹಕ್ಕೆ ವಿರಾಮ ಕೊಡುವೆ.


ಪ್ರಭಾವತಿ ಎಸ್ ದೇಸಾಯಿ

Leave a Reply

Back To Top