ಕಾವ್ಯ ಸಂಗಾತಿ
ಹೇಗೆ ನಗಲಿ ಹೇಳು ನೀನೇ
ಇಂದಿರಾ ಮೋಟೆಬೆನ್ನೂರ
ಎದೆ ಕದವ ತೆರೆವ
ಮುಚ್ಚುವ ತುಂಟಾಟದ
ಆಟದಿ ಉರುಳಿಸಿ
ದಾಳವಾಗಿಸಿದೆ …..
ಒಳಗೆ ಸೆಳೆದು ಹೊರಗೆ ತಳ್ಳುತ
ಹೃದಯ ಗಾಯವಾಗಿಸಿದೆ…..
ಬಿರಿದ ಭಾವ ಕುಸುಮಗಳ
ಕರುಣೆಯಿಲ್ಲದೇ ತರಿದು
ಹಾಕಿದೆ ಒಲವೇ….
ಚಿಗುರಿ ಅರಳಿದ ಕನಸುಗಳ
ಬಣ್ಣ ಅಳಿಸುತ ಬರಿದು
ಮಾಡಿದೆ ಒಲವೇ….
ಇಷ್ಟ ಅಭಿರುಚಿಯ ಮಾತಲ್ಲ
ನಮ್ಮೆದೆಯ ಮಿಡಿತವಿದು…
ನೀನೇ ಮೀಟಿದ ಹೃದಯ
ತಂತಿಯ ತುಡಿತವಿದು..
ತಾನೇ ತಾನಾಗಿ ಅರಳಿದ
ಹೃದಯದ ರಾಗವಿದು…
ಸ್ನೇಹ ಪ್ರೀತಿಯ ಸೊಗವಿದು…
ಅನ್ಯರ ಅನಿಸಿಕೆಯ ಹಂಗೇಕೆ…?
ಮೌನದಲಿ ನಿತ್ಯ ಕೊಲ್ಲುತ
ಇದೀಗ ಮಾತಿನಲಿ ಕೊಲ್ಲುತಿಹೆ..
ತುಂಬಿ ತೊನೆಯುತಿಹ ನೇಹ ತೆನೆಗಳ
ತೊರೆದು ಸಾಗಿದ ಜೀವವೇ…
ಹೂವಿನ ಆತ್ಮ ನೊಂದು ಬೆಂದಿದೆ
ಮುಳ್ಳುಗಳ ಇರಿತಕ್ಕೆ…
ನಿನ್ನೆದೆಯ ಮೇಲೆ ಕೈ
ಇಟ್ಟು ಕೇಳೊಮ್ಮೆ ಅದನು
ನನಗಾಗಿ ಮಿಡಿಯುತ್ತಿದೆಯಲ್ಲ..
ನನ್ನ ಹೆಸರೇ ಹೇಳುತಿದೆ ನಲ್ಲ.
ದಿಟ ನುಡಿಯುತಿದೆ ನೋಡೆಲ್ಲ…
ಹಟವೇಕೆ ಮರೆಮಾಚುವ ಮಾತಲ್ಲ…
ಸಾವಿರ ಸಾವಿರ ಯಾತನೆಗಳ
ಅದುಮಿಟ್ಟು ನಕ್ಕಂತೆ ನಟಿಸುವುದು
ಸುಲಭವೇ…ನೀನೇ ಹೇಳು..
ನಗು ನಗುತಿರು ಗೆಳತಿ ಎಂದರೆ
ಈಗ ನಾನು ಹೇಗೆ ನಗಲಿ
ನೀನೇ ಹೇಳು…?