ಮಾರುಡಿಗೆಯ ನಾಚಯ್ಯನ ವಚನ ವಿಶ್ಲೇಷಣೆಪ್ರೊ. ಜಿ ಎ ತಿಗಡಿ. ಸವದತ್ತಿ.

ವಚನ ವಿಶ್ಲೇಷಣೆ

ಮಾರುಡಿಗೆಯ ನಾಚಯ್ಯನ ವಚನ ವಿಶ್ಲೇಷಣೆ

ಪ್ರೊ. ಜಿ ಎ ತಿಗಡಿ. ಸವದತ್ತಿ.

ತನು ಉಡುಗಿ ಮನ ಉಡುಗಿ ಧನ ಉಡುಗಿ ನಾಚಿ ಮಾಡಬಲ್ಲಡೆ, ನಾಚನೆಂದೆಂಬೆ. ನಾಚದೆ ಮಾಡುವ ನೀಚರು ನೀವು ಕೋಚಿಯಾಗದೆ, ಯಾಚಕತನವ ಬಿಟ್ಟು, ಆಚರಿಸಿ, ಆಗೋಚರನ ಗೋಚರಿಸಿ, ನಿಷ್ಠಾನಿಷ್ಠೆಯಿಂ ವ್ಯವಹರಿಸಬೇಡ. ಊಟವೊಂದಲ್ಲದೆ ಮಾರೂಟ ಕೋರೂಟವನುಣ್ಣೆ. ಉಡಿಗೆವೊಂದಲ್ಲದೆ ಮಾರುಡಿಗೆ ಮೀರುಡೆಗೆಯನು [ಡೆ] ಉಂಡುಟ್ಟೆನಾದಡೆ ಎನ್ನ ಹೊದ್ದಿದಾರುಸ್ಥಲದ ಧೂಳಣ್ಣಗಳು ನಗುವರು ಕಾಣಾ, ಮಾರುಡಿಗೆಯ ನಾಚೇಶ

    ತನು, ಮನ, ಧನಗಳ ಮೇಲಿನ ಮೋಹವಳಿದು, ಅಹಂಭಾವವನ್ನು ಇಲ್ಲವಾಗಿಸಿಕೊಂಡು ಸದ್ಭಾವದಿಂದ ಮಾಡುವ ಭಕ್ತಿಯೇ ಅತ್ಯಂತ ಶ್ರೇಷ್ಠವಾದದ್ದು.  ಈ ರೀತಿಯ ಭಕ್ತಿಗೆ ಮಾತ್ರ ದೇವರು ಮೆಚ್ಚುತ್ತಾನೆಂದು ಮಾರುಡಿಗೆ ನಾಚಯ್ಯನವರು ಒತ್ತಿ ಹೇಳುತ್ತಾರೆ.   ಒಂದು ವೇಳೆ, ತನು ಮನ ಧನಗಳ ಮೇಲಿನ ಮೋಹ ಅಭಿಮಾನಗಳನ್ನು ಬಿಡದೆ ಗರ್ವದಿಂದ ಪ್ರತಿಷ್ಠೆಗಾಗಿ ಭಕ್ತಿ ಮಾಡಲು ಹೊರಟರೆ ಅಪಹಾಸ್ಯಕ್ಕೆ ಗುರಿಯಾಗಿ ನಗೆಗೀಡಾಗುವುದು ನಿಶ್ಚಯ.   ಯಾರಲ್ಲಿಯೂ ಏನನ್ನೂ  ಬೇಡದೆ  ನಿರಾಕಾರನೂ, ಅಗೋಚರನೂ ಆಗಿರುವ ಆ ಭಗವಂತನಿಗೆ ಸಾಕಾರ ರೂಪ ನೀಡಿ,  ಸ್ಥಾವರ ದೇವರಿಗೆ ತನ್ನ ನಿಷ್ಠೆಯನ್ನು ತೋರಿಸಿ ವ್ಯವಹರಿಸಬಾರದು.   ಶ್ರಮವಹಿಸಿ ಮಾಡಿದ ಕಾಯಕದಿಂದ ಬಂದ ಪ್ರತಿಫಲದ ಊಟವನ್ನು ಮಾತ್ರ ಮಾಡಬೇಕೆ ಹೊರತು,  ಬೇರೆಯವರಿಂದ (ಮಾರಿಗೆಯ ) ಪಡೆದ ಊಟವನ್ನಾಗಲಿ, ಪುಕ್ಕಟೆ ಹಂಚಿದ ಊಟವನ್ನಾಗಲಿ ನಾನು ಸ್ವೀಕರಿಸಲಾರೆ.   ಅದೇ ರೀತಿ ಅವರಿವರು ಕೊಟ್ಟ ಬಟ್ಟೆಯನ್ನಾಗಲಿ, ಇನ್ನೊಬ್ಬರಿಂದ ತಂದ ವಸ್ತ್ರಗಳನ್ನಾಗಲಿ ಧರಿಸಲಾರೆ.   ಒಂದು ವೇಳೆ ಇದಕ್ಕೆ ವಿರುದ್ಧವಾಗಿ ನಾನು ನಡೆದುಕೊಂಡರೆ ನನ್ನಲ್ಲಿ ಸೇರಿರುವ ಷಟ್ಸ್ಥಲದ  ಧೂಳಣ್ಣಗಳು (ಜ್ಞಾನಿಗಳು) ನನ್ನನ್ನು ನೋಡಿ ನಕ್ಕು ಅಪಹಾಸ್ಯ ಮಾಡದೆ ಬಿಡಲಾರವು,  ಎಂಬುದಾಗಿ ತಮ್ಮನ್ನು ತಾವೇ ನಿರೀಕ್ಷಣೆ ಮಾಡಿಕೊಳ್ಳುತ್ತಾರೆ.

  ಬಹಿರಂಗ ಅಂತರಂಗಗಳ ವಿಷಯಗಳಲ್ಲಿನ ಮೋಹವನ್ನು ತ್ಯಜಿಸಿ, ಅಹಂಕಾರಗಳನ್ನು ನಿರಶನ ಮಾಡಿಕೊಂಡು, ಮಾಡುವ ಸದ್ಭಾವದ ಭಕ್ತಿಗೆ ಮಾತ್ರ ದೇವರು ಮೆಚ್ಚುವದು, ಒಲಿಯುವುದು.   ತನು ಮನದ ಮೇಲಿನ ಅಪರಿಮಿತ ಮೋಹ ಅಹಂಕಾರಕ್ಕೆ ಕಾರಣವಾಗುತ್ತದೆ.   ದೇಹಕ್ಕೆ ಸಂಬಂಧಿಸಿದ ಲೌಕಿಕ ವ್ಯವಹಾರಗಳು ಇದಕ್ಕೆ ಇನ್ನಷ್ಟು ಪೋಷಣೆ ನೀಡುತ್ತವೆ.   ದೇಹ  ಐಹಿಕ ಸುಖವನ್ನು ಬಯಸುತ್ತಿರುತ್ತದೆ.   ತನ್ನ ಭೋಗ ಭಾಗ್ಯಗಳಿಗಾಗಿ ಮಾಡಬಾರದ ಕುಕೃತ್ಯಗಳಿಗೆ ಇಳಿದು ಧನ – ಕನಕ ಸಂಗ್ರಹಕ್ಕೆ ಮುಂದಾಗುತ್ತದೆ.   ಎಷ್ಟಾದರೂ ಇದಕ್ಕೆ ತೃಪ್ತಿ ಎಂಬುದಿರುವುದಿಲ್ಲ.  ಮನವು  ಸಹವರ್ತಿಯಾದರಂತೂ ಇದಕ್ಕೆ ಕಡಿವಾಣವೇ  ಇಲ್ಲವಾದಂತಾಗುತ್ತದೆ.  ಇಂತಹ ಭಾವ ತುಂಬಿಕೊಂಡವರು ಮಾಡುವ ಭಕ್ತಿಯು ಡಾoಬಿಕತನವೆನಿಸಿ, ಅಪಹಾಸ್ಯಕ್ಕೆ ಗುರಿಯಾಗುತ್ತದೆ.   ಇವೆಲ್ಲವನ್ನೂ ತ್ಯಜಿಸಿ ಯಾರಲ್ಲಿಯೂ ಏನನ್ನು ಬೇಡದೆ, ಏಕನಿಷ್ಠೆ ಸದ್ಭಾವದಿಂದ ಪರಮಾತ್ಮನಲ್ಲಿ ಭಕ್ತಿಯಿಂದ ನಮ್ಮ ಅಹವಾಲನ್ನು ಆಪ್ತವಾಗಿ ಅರಿಕೆ ಮಾಡಿಕೊಂಡರೆ ಆತ ಏನೆಲ್ಲವನ್ನೂ ಕೊಟ್ಟಾನು.   ಅಷ್ಟೇ ಅಲ್ಲದೆ ಸತ್ಯ ಶುದ್ಧ ಕಾಯಕದಲ್ಲಿ ನಿರತನಾದರೆ ಯಾಚಿಸುವ ಪ್ರಮೇಯವೇ ಬರುವುದಿಲ್ಲ.      ನಮ್ಮ ನೆಲಮೂಲ ಸಂಸ್ಕೃತಿಯ ತತ್ವವಾದ ‘ ಶ್ರಮ ‘ ವನ್ನು   ಬಸವಣ್ಣನವರು ‘ ಕಾಯಕ ‘ ವೆಂಬ ಸಿದ್ಧಾಂತವನ್ನಾಗಿ ರೂಪಿಸಿದರು.  ಶ್ರಮಪಟ್ಟು ದುಡಿದು, ಜೀವನ ಸಾಗಿಸುವ ಕರ್ಮ ಸಿದ್ಧಾಂತವನ್ನು, ತಮ್ಮ ಅನುಭವದ ಮೂಸೆಯಲ್ಲಿ ಹಾಕಿ ರೂಪಾಂತರಿಸಿ, ಅದಕ್ಕೊಂದು ಹೊಸ ರೂಪ ನೀಡಿದರು.  ಮಾಡುವ ಕೆಲಸ ಸತ್ಯ ಶುದ್ಧ ಪ್ರಾಮಾಣಿಕತೆಯಿಂದ ಕೂಡಿದ್ದರೆ ಅದು ‘ಕಾಯಕ ‘ ವೆನಿಸುತ್ತದೆ.    ಅದರ ಪ್ರತಿಫಲವನ್ನು ಗುರು (ಅರಿವು), ಲಿಂಗ (ಆಚಾರ) ಗಳಿಗೆ ಅರ್ಪಿಸಿ ಪ್ರಸಾದವಾಗಿಸಿ, ತಾನು ಸ್ವೀಕರಿಸಿ ಮಿಕ್ಕುಳಿದುದನ್ನು,  ‘ ಇಂದಿoಗೆ ನಾಳಿಂಗೆ ಎಂದೆನಾದರೆ ನಿಮ್ಮಾಣೆ,  ನಿಮ್ಮ ಪ್ರಮಥರಾಣೆ ‘  ಎಂಬ ಶರಣರ ಆದರ್ಶದಂತೆ ಸಮಾಜಮುಖಿಯಾದ ಜಂಗಮಕ್ಕೆ ಸಮರ್ಪಿಸಿ ನಿಶ್ಚಿಂತನಾಗುವುದರಲ್ಲಿಯೇ ಪರಮಾನಂದವಿದೆ.  ಇದೆ ಷಟ್ಸ್ಥಲಗಳನ್ನು ಹೊದ್ದುವ ಪರಿ.   ಹೀಗೆ ಮಾಡಲಾರದೆ, ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡರೆ,  ನಿರಾಕಾರ ರೂಪಿಯಾದ ದೇವರಿಗೆ ಸಾಕಾರ ರೂಪ ನೀಡಿ ನಿಷ್ಠೆ, ಭಕ್ತಿ  ತೋರಿದರೆ,  ನಮ್ಮನ್ನು ಹೊದ್ದಿರುವ  ಷಟ್ಸ್ಥಲಗಳು  ಧೂಳಣ್ಣಗಳಾಗಿ ನಕ್ಕು ಅಪಹಾಸ್ಯ ಮಾಡುತ್ತಾರೆಂದು ನಾಚಯ್ಯನವರು ಅಭಿಪ್ರಾಯಪಡುತ್ತಾರೆ.
————————

ಪ್ರೊ. ಜಿ ಎ ತಿಗಡಿ. ಸವದತ್ತಿ.

Leave a Reply

Back To Top