ಕಾವ್ಯ ಸಂಗಾತಿ
ಬದುಕ ಅಕ್ಷರ ತಿದ್ದುತಾ…
ಭಾರತಿ ಅಶೋಕ್
ಅವಳು ಅಕ್ಷರ ಜೋಡಿಸುತ್ತಾಳೆ
ಭಾವದ ಹೊಳೆಯಲ್ಲಿ ಸಿಕ್ಕ ಮುತ್ತಿನ ಚಿಪ್ಪಂತೆ ಪದಗಳಾಗಬಹುದವು.
ಅಕ್ಷರ ಓದುವ ನಿಮಗೆ
ಯಾವುದೋ ಅರ್ಥ ತಗುಲ ಬಹುದು
ತಗುಲದಿರಬಹುದು.
ಅವಳ ಭಾವಕ್ಕೆ ಅಪಥ್ಯ
ಬದುಕಿನ ತಪ್ಪೆಜ್ಜೆ ತಿದ್ದುವ ತಾಲೀಮಿನ ಶಬ್ದ
ಮಿಡಿದಾಗಲೆಲ್ಲ
ಮತ್ತೆ ಮತ್ತೆ ಅಕ್ಷರ ಅರಳುತ್ತವೆ.
ತೊದಲುತ್ತಲೊ ಎಡವುತ್ತಲೊ
ನೆನ್ನೆ ಬರೆದ ಅಕ್ಷರ
ಇಂದು ರೂಪುಗೆಟ್ಟು
ಮತ್ತೆ ತಿದ್ದಿಸಿಕೊಂಡು ಹಲ್ಕಿರಿಯುತ್ತೆ ಹೂ ಅರಳಿದಂತೆ
ಥೇಟ್ ಅವಳ ಬದುಕಿನಂತೆ….
ತಿದ್ದಿಕೊಂಡ ಬದುಕು
ಮುನ್ನಡೆಯ ನಿರ್ಧಾರ ತೆಳೆದು
ಮತ್ತೆ ತಿದ್ದಲಾರೆ ಹಾಗೆ ಬರೆಹ ಸಾಗುತ್ತೆ.
ಆದರೆ …….
ಅದರೆ ಅವಳನ್ನು
ಓದುವವರು ಇದು ಕವಿತೆಯಲ್ಲ ಎನ್ನಿ,
ಅಕ್ಷರಗಳ ಆಡಂಬರ ಎನ್ನಿ, ಅಡ್ಡ ಸಾಲು ಮುರಿದ ಕಂಬ ಸಾಲು ಎನ್ನಿ
ಕವಿತೆ ಮಾತ್ರ ಅವಳ ಬದುಕ ಹಾಡುತ್ತದೆ.
ಉದ್ದ ಸಾಗುವ ನಿರಂತರ ನದಿಯಂತೆ.
ಎದುರಾಗುವ ಕಲ್ಲುಗಳ ಕೊಚ್ಚುತ್ತ.
ಬದುಕ ಕಟೆಯುತ್ತ.
ಭಾರತಿ ಅಶೋಕ್
ಕಾಡುತಿದೆ ನಿಮ್ಮ ಕವನ