ವಿಶೇಷ ಲೇಖನ
ನಾಡಪ್ರಭು ಕೆಂಪೇಗೌಡನಾಡಪ್ರಭು ಕೆಂಪೇಗೌಡ
(೧೫೧೦ – ೧೫೬೯)
ಅಭಿಜ್ಞಾ ಪಿ.ಎಮ್.ಗೌಡ
ರಾಜನಂತೆ ಕನಸು ಕಂಡು
ವಿಶ್ವಾಸದೊಡನೆ ಹೆಜ್ಜೆ ಹಾಕಿ
ಅದ್ಭುತ ಚಿಂತನೆಗಳ ಸಾಲಿನಲಿ
ನವ್ಯರೂಪದ ಹಾದಿಯಲಿ
ಮ್ಲಾನ ಬಿಟ್ಟು ಧ್ಯಾನ ಮಾಡಿದ ನೋಡ
ಜ್ಞಾನದಿಂದ ಮೆರೆದ ಈ ದೊರೆ
ಅವರೆ ಬೆಂಗಳೂರು ನಿರ್ಮಾತೃ ಕೆಂಪೇಗೌಡ..!
ಸರ್ವ ಸಮುದಾಯಗಳ ಜನರನ್ನು ಒಗ್ಗೂಡಿಸಿ ಮುನ್ನಡೆಸಿದ ಕೀರ್ತಿ ಕಳಸ ಕೆಂಪೇಗೌಡರೆಂದರೆ ತಪ್ಪಾಗಲಾರದು. ಜಾತ್ಯಾತೀತ ಮನೋಭಾವ ಹಾಗು ಹೋರಾಟದ ಕಿಚ್ಚನ್ನು ತಮ್ಮ ಜೀವನದುದ್ದಕ್ಕೂ ಮೈಗೂಡಿಸಿಕೊಂಡವರಾಗಿದ್ದರು.ಹಾಗಾಗಿ ಇವರ ಯೋಜನೆಗಳು, ಯೋಚನೆಗಳೆಲ್ಲವು ಈಗಲೂ ನಮ್ಮೆಲ್ಲರಿಗೂ ಮಾದರಿಯಾಗಿವೆ.
ಕೆಂಪೇಗೌಡರು ಬೆಂಗಳೂರು ಸೇರಿದಂತೆ ವಿವಿಧೆಡೆಯಲ್ಲಿ ನಡೆಸಿದ ಆಡಳಿತ ವೈಖರಿ, ಅವರು ನೀಡಿದ ಕೊಡುಗೆಗಳು,ಅವರ ಆಲೋಚನೆಗಳೆಲ್ಲವು ಮಹೋನ್ನತ ದೂರದೃಷ್ಟಿಯನ್ನು ಹೊಂದಿವೆ.ಹಾಗೆಯೆ ಎಲ್ಲರಿಗು ಅನುಕೂಲವಾಗುವಂತೆ ಮಾಡಿದ ನಗರ ನಿರ್ಮಾಣ ಜನಪರ ಕಾಳಜಿಯುಳ್ಳ ಯೋಜನೆಗಳನ್ನು ಒಳಗೊಂಡಿದ್ದು ಇಡೀ ವಿಶ್ವಕ್ಕೆ ಮಾದರಿಯಾಗಿ ನಿಂತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ….
ನಾಡಪ್ರಭು ಕೆಂಪೇಗೌಡರು ಕೆಂಪನಂಜೇಗೌಡ ಹಾಗೂ ಲಿಂಗಾಂಬೆಯ ಮಗನಾಗಿ ೧೫೧೦ ರಲ್ಲಿ ಯಲಹಂಕದಲ್ಲಿ ಜನಿಸಿದರು.೧೫೨೮ರಲ್ಲಿ ಚೆನ್ನಾಂಬೆಯವರೊಡನೆ ಮದುವೆ ಹಾಗೂ ಇದೇ ಸಂದರ್ಭದಲ್ಲಿ ಇವರ ಪಟ್ಟಾಭಿಷೇಕವು ನಡೆಯಿತು ಈ ಕಾರ್ಯಕ್ರಮಕ್ಕೆ ಶ್ರೀಕೃಷ್ಣದೇವರಾಯರ ಪ್ರತಿನಿಧಿಗಳಾದಿಯಾಗಿ ಹಲವಾರು ದೊರೆಗಳು ಭಾಜನರಾಗಿದ್ದರು.
ನಂತರ ೧೫೨೯ರಲ್ಲಿ ವಿಜಯನಗರದ ಅರಸು ನಿಧನರಾದಾಗ ಕೆಂಪೆಗೌಡರು ತಾವು ಸ್ವತಂತ್ರರಾಗಿ ತಮ್ಮ ರಾಜಧಾನಿಯ ನಿರ್ಮಾಣಕ್ಕಾಗಿ ಸ್ಥಳವನ್ನು ಆಯ್ಕೆಮಾಡಿ, ಬಾಲ್ಯದಿಂದ ಶ್ರೀಕೃಷ್ಣದೇವರಾಯರ ಆಡಳಿತಾವಧಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಿರಿಯನ್ನು ಕಣ್ಣಾರೆ ಕಂಡಿದ್ದ ಕೆಂಪೇಗೌಡರಿಗೆ ತಮ್ಮ ನಾಡಿನಲ್ಲೂ ಎಲ್ಲಾ ವೈಭವಗಳನ್ನು ಮತ್ತೆ ಜಾರಿಗೆ ತರುವ ಬಯಕೆಯಿಂದಾಗಿ, ಹಲವು ಬಾರಿ ಹಂಪಿಗೆ ಭೇಟಿ ಕೊಟ್ಟು ಅಲ್ಲಿನ ವ್ಯವಸ್ಥೆಗಳೆಲ್ಲವನ್ನು ಮನದಟ್ಟು ಮಾಡಿಕೊಂಡಿದ್ದರು.ರಾಜಧಾನಿ ನಿರ್ಮಾರ್ಣಕ್ಕಾಗಿ ಅಪಾರ ಹಣದ ಅವಶ್ಯಕತೆ ಇದ್ದಿದ್ದರಿಂದಾಗಿ ಗೌಡರು ಅಗತ್ಯವಾದ ಧನ ಸಹಾಯ ಮಾಡಬೇಕೆಂದು ತಮ್ಮ ವ್ಯಾಪ್ತಿಯ ಪ್ರದೇಶದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದರು.ಇದಕ್ಕೆ ಸಾಮ್ರಾಜ್ಯದ ಜನತೆ ಸ್ವಪ್ರೇರಿತವಾಗಿ ಮುಂದೆ ಬಂದು ತಮ್ಮಿಂದಾಗಬಹುದಾದ ಸಹಾಯವನ್ನು ಮಾಡುವುದರ ಮೂಲಕ ದೊರೆಗೆ ಧೈರ್ಯ ನೀಡಿದರು.
ಕೆಂಪೇಗೌಡರ ಕನಸಿನ ರಾಜಧಾನಿ ನಿರ್ಮಾಣ ಕಾರ್ಯ ೧೫೩೭ರಲ್ಲಿ ನಾಡಿನ ಪ್ರಮುಖರ ಸಮ್ಮುಖದಲ್ಲಿ ಪ್ರಾರಂಭವಾಯಿತು. ಮೂಲತಃ ಕೃಷಿಕ ಕುಟುಂಬದಿಂದ ಬಂದವರಾದ ಕೆಂಪೇಗೌಡರು ಹೊನ್ನಾರು ಕಟ್ಟುವ ಆಚರಣೆಯಿಂದ ರಾಜಧಾನಿಯ ನಿರ್ಮಾಣ ಕಾರ್ಯ ಆರಂಭಿಸಿದರು.ಅರ್ಚಕರು ನಿರ್ಧರಿಸಿದಂತಹ ಶುಭಕಾಲದಲ್ಲಿ ಈಗಿನ ದೊಡ್ಡಪೇಟೆ ಮತ್ತು ಚಿಕ್ಕಪೇಟೆ ರಸ್ತೆಗಳು ಸಂಧಿಸುವ ಪ್ರದೇಶದಲ್ಲಿ ನಾಲ್ಕು ನೇಗಿಲಿಗೆ ಆರು ಕಟ್ಟಿ ತಯಾರಾಗಿ ನಿಂತಿದ್ದ ನಾಲ್ವರು ರೈತರನ್ನೂ ನಾಲ್ಕು ದಿಕ್ಕಿಗೆ ಸಾಗುವಂತೆ ತಿಳಿಸಿದರು. ಎತ್ತುಗಳು ನಿಂತ ಜಾಗವೇ ಎಲ್ಲೆಯೆಂದು ತಿಳಿದುಕೊಳ್ಳುವ ತೀರ್ಮಾನಕ್ಕೆ ಬರಲಾಗಿತ್ತು. ಪೂರ್ವಕ್ಕೆ ಹಲಸೂರು ಬಾಗಿಲು, ಪಶ್ಚಿಮಕ್ಕೆ ಅರಳೇ ಪೇಟೆ, ಉತ್ತರದಲ್ಲಿ ಯಲಹಂಕ ಮತ್ತು ದಕ್ಷಿಣದಲ್ಲಿ ಆನೆಕಲ್ ಬಾಗಿಲವರೆಗೆ ಈ ಎತ್ತುಗಳು ಸಾಗಿ ನಿಂತವು ಅಲ್ಲೆಲ್ಲ ಗುರುತಿಗಾಗಿ ಕಲ್ಲುಗಳನ್ನು ನೆಡಲಾಯಿತು. ಈ ಜಾಗಗಳಲ್ಲಿ ಪ್ರಮುಖ ಪ್ರವೇಶದ್ವಾರಗಳನ್ನು ನಿರ್ಮಿಸಿದರು.
ರಾಜಧಾನಿಗೆ ನವದ್ವಾರಗಳಿರಬೇಕು, ದೇವಾಲಯಗಳಲ್ಲಿ ಪ್ರತಿದಿನವೂ ಪೂಜೆಗಳು ನಡೆಯುತ್ತಿರಬೇಕು ಮತ್ತು ಒಂಬತ್ತು ಕೆರೆಗಳು ಸದಾ ಕಾಲ ನೀರಿನಿಂದ ತುಂಬಿರಬೇಕೆಂಬುದು ಗೌಡರ ಆಶಯವಾಗಿತ್ತು, ಗೌಡರ ಇಚ್ಛೆಯಂತೆ ಕೋಟೆಗೆ ನಾಲ್ಕು ಮಹಾದ್ವಾರಗಳನ್ನೂ, ಐದು ಕಿರಿ ದ್ವಾರಗಳನ್ನು ನಿರ್ಮಿಸಲಾಯಿತು. ಮತ್ತು ರಕ್ಷಣೆಗಾಗಿ ಕೆಲ ರಹಸ್ಯ ದ್ವಾರಗಳನ್ನು ನಿರ್ಮಿಸಲಾಯಿತು.
ಹೀಗೆ ಇವರ ದೂರದರ್ಶಿತ್ವ ಹಾಗೂ ದಕ್ಷ ಆಡಳಿತದಿಂದ ಬೆಂಗಳೂರನ್ನು ಸಮೃದ್ಧವಾಗಿ ಕಟ್ಟಿ ಬೆಳೆಸಿದರು. ಅತ್ಯುತ್ತಮವಾದ ಕೊಡುಗೆಯನ್ನು ನೀಡಿದರು.ಭವಿಷ್ಯದ ಆರ್ಥಿಕತೆ, ಜನರ ಅಗತ್ಯತೆ, ಆಹಾರದ ಅಭಾವ ಹಾಗೂ ನೀರಿನ ಕೊರತೆ ಉಂಟಾಗದಂತೆ ಬೆಂಗಳೂರನ್ನು ನಿರ್ಮಿಸಿದರು.
ಕೆಂಪೇಗೌಡರು ಕೃಷಿ ಮತ್ತು ಗೃಹ ಬಳಕೆಗೆ ಸಂಬಂಧಿಸಿದಂತೆ ನೀರಿನ ಪೂರೈಕೆ ವಿಷಯದಲ್ಲಿ ಆಸಕ್ತಿ ಹೊಂದಿದ್ದು, ಸುಭದ್ರವಾದ ರಾಜಧಾನಿಯ ನಿರ್ಮಾಣದ ಜೊತೆಗೆ ಬೆಂಗಳೂರು ಸೇರಿದಂತೆ ನಾಡಿನ ತುಂಬಾ ೫೦೦ ಕೆರೆ ಕಟ್ಟೆಗಳನ್ನು ನಿರ್ಮಿಸಿದರು.ನಾಡಿನ ಇತಿಹಾಸದಲ್ಲಿ ಇವರಷ್ಟು ಕೆರೆಕಟ್ಟೆ ಕಟ್ಟಿಸಿದ ಯಾವ ದೊರೆಗಳು ಇಲ್ಲ ಎಂಬ ಹೆಗ್ಗಳಿಕೆ ಇವರದ್ದಾಗಿದೆ.
ಇವುಗಳ ಜೊತೆಗೆ ನಾಡಿನಲ್ಲಿದ್ದ ದೇವಾಲಯಗಳ ಬಳಿಯಲ್ಲೆಲ್ಲ ಕಲ್ಯಾಣಿಗಳನ್ನು ನಿರ್ಮಿಸಿದ್ದರು.
ರಸ್ತೆಯ ಬದಿಗಳಲ್ಲಿ ಮರ ಗಿಡಗಳನ್ನು ನೆಡಸಿದರು.ಜೊತೆಗೆ ಹಲವಾರು ದೇವಾಲಯಗಳನ್ನು ನಿರ್ಮಿಸಿದರು.
ಕೆಂಪೇಗೌಡರ ಗೌರವಾರ್ಥವಾಗಿ ಡಿಸೆಂಬರ್ ೧೪, ೨೦೧೩ ರಂದು, ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು “ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ”ವೆಂದು ಹಾಗೂ ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣಕ್ಕೆ “ಕೆಂಪೇಗೌಡ ಬಸ್ ನಿಲ್ದಾಣ”ವೆಂದು, ಬೆಂಗಳೂರಿನ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿರುವ ಪ್ರಮುಖ “ಮೆಟ್ರೋ ನಿಲ್ದಾಣವನ್ನು ನಾಡಪ್ರಭು ಕೆಂಪೇಗೌಡ ನಿಲ್ದಾಣ”ವೆಂದು ಮರುನಾಮಕರಣ ಮಾಡಲಾಗಿದೆ.ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಕೆಂಪೇಗೌಡರ ೧೦೮ ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆಯನ್ನು ನವೆಂಬರ್ ೧೧, ೨೦೨೨ರಲ್ಲಿ ಅನಾವರಣಗೊಳಿಸಲಾಯಿತು. ಜೂನ್ ೨೭. ೨೦೧೭ ರಿಂದ, ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತ ಬಂದಿದೆ.
ಹೀಗೆ ಪ್ರತಿಯೊಬ್ಬರನ್ನು ಆಕರ್ಷಿಸುವ ರಾಜಧಾನಿ ಬೆಂಗಳೂರು ನಗರಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕ್ಕಿರಲು ಕಾರಣ ಕೆಂಪೇಗೌಡರ ನಿಷ್ಟಾವಂತ ಹಾಗು ದಕ್ಷ ಆಡಳಿತವೈಖರಿ,
ಹಾಗೆಯೇ ಅವರ ದೂರದೃಷ್ಟಿಯುಳ್ಳ ಚಿಂತನೆಗಳೆಲ್ಲವು ಅವಿಸ್ಮರಣೀಯವಾಗಿವೆ.
ಇವರೊಬ್ಬ ಸ್ಫೂರ್ತಿಯ ಚಿಲುಮೆಯಂತಿದ್ದರು.
ಇಂತಹದ್ದೊಂದು ವಿಶೇಷ ಹೆಗ್ಗಳಿಕೆಗೆ ಪಾತ್ರವಾಗಿರುವ ಕೆಂಪೇಗೌಡರ ದೂರದೃಷ್ಟಿ ಹಾಗು ವಿಚಾರಧಾರೆ ಇಂದಿಗೂ ಎಲ್ಲೆಡೆಯೂ ಕೂಡ ಆದರ್ಶನೀಯವಾಗಿದೆ…
ಅಭಿಜ್ಞಾ ಪಿ.ಎಮ್.ಗೌಡ
Wonderful