ಅನ್ನಪೂರ್ಣ ಹಿರೇಮಠ ಲೇಖನ-

ವಿಶೇಷ ಲೇಖನ

ಅನ್ನಪೂರ್ಣ ಹಿರೇಮಠ

ಇಂದಿನ ವ್ಯವಸ್ಥೆಗೊಂದು ಗುದ್ದು

ನಾವೆಲ್ಲರೂ 21ನೇ ಶತಮಾನದಲ್ಲಿ ಹತ್ತು ಹಲವು ಬದಲಾವಣೆಗಳನ್ನು ,ವಿಚಿತ್ರ ನಡವಳಿಕೆಗಳನ್ನು ,ವ್ಯವಸ್ಥೆಯ ವಿರುದ್ಧದ ಓಟಗಳನ್ನು ,ಮಾಡಬಾರದ್ದನ್ನು ಒತ್ತುಕೊಟ್ಟು ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಎಲ್ಲೆಲ್ಲೂ ,ಎಲ್ಲ ರಂಗಗಳಲ್ಲಿಯೂ ದುರವ್ಯವಸ್ಥೆ ಹಾಸುಹೊಕ್ಕಾಗಿರುವ ಸುದ್ದಿ ಹೊಸದೇನಲ್ಲ.
ಇವುಗಳಿಗೆಲ್ಲಾ ಸ್ಪೂರ್ತಿ ಎನ್ನುವಂತಿರುವ ತಾಂತ್ರಿಕತೆಯ ಅತಿಯಾದ ಬಳಕೆ. ಕಾರಣವೇ “ಕಂಪ್ಯೂಟರ್ ಯುಗ” ಎಂದು ಕರೆಯುತ್ತಿರುವುದು. ಎಲ್ಲರ ಮೇಲೂ ಪ್ರಭಾವ ಬೀರುತ್ತಿರುವುದು ಸಂಪರ್ಕ ಮಾಧ್ಯಮಗಳು ಎನ್ನುವುದರಲ್ಲಿ ಎರಡು ಮಾತಿಲ್ಲ.

    ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಂದೆ ಮಕ್ಕಳು ಶಾಲಾ ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿಗಳು ಊರು, ಮನೆ, ತಾಯಿ,ತಂದೆ, ವ್ಯವಸ್ಥೆಯ ನಡೆಯ ಮೇಲೆ ಪ್ರಭಾವ ಬೀರುವಂತ ಚಲನಚಿತ್ರವೊಂದು ಮನಮುಟ್ಟಿರುವುದು ಸಂತಸ ತಂದಿದೆ. ಎಷ್ಟು ವರ್ಷಗಳ ನಂತರ ಇಂತಹದೊಂದು ಸಮಾಜಕ್ಕೆ ಮಾದರಿಯಾಗುವಂತಹ ಚಲನಚಿತ್ರ ,ಇಂದಿನ ವ್ಯವಸ್ಥೆಯನ್ನು ಬದಲಾಯಿಸಿ ಸರಿದಾರಿಗೆ ತರುವ ಪ್ರಯತ್ನಕ್ಕೆ ಹಿಡಿದ ಕೈಗನ್ನಡಿ.
ಅದೇ ನಮ್ಮ ಕನ್ನಡ ಸಿನಿಮಾ “ಯುವರತ್ನ “ಎನ್ನುವ “ಪುನೀತ್ ರಾಜಕುಮಾರ್” ನಟಿಸಿದ ಅತ್ಯುತ್ತಮ ಚಿತ್ರಗಳೊಂದು ಎನಿಸಿತು. ಚಲನಚಿತ್ರ ಎಂದಾಕ್ಷಣ ಮನರಂಜನೆಯತ್ತ ಎಲ್ಲರ ಚಿತ್ತ .ಮನರಂಜನೆಯೊಂದಿಗೆ ಸಮಾಜದ ಲೋಪದೋಷಗಳನ್ನು ಎತ್ತಿ ಹಿಡಿದು ಅದನ್ನು ಹೋಗಲಾಡಿಸುವ ಸಲಹೆಗಳು ಇರಲೇಬೇಕು. ಅಂತಹ ಚಲನಚಿತ್ರಗಳನ್ನು ನಾವು ಕಂಡಿದ್ದು 1960ರಿಂದ 1980ರ ದಶಕಗಳವರೆಗೆ, ಇತ್ತೀಚೆಗೆ ಸಿನಿಮಾ ಎಂದರೆ ಹೊಡೆದಾಟ, ಮಚ್ಚು, ಲಾಂಗು, ಲವ್ವು ಬಿಟ್ಟರೆ ವಿಚಿತ್ರ ಹಾಸ್ಯ ಇಷ್ಟೇ ನೋಡಬೇಕು.

    ಇಂತಹ ಸಂದರ್ಭದಲ್ಲಿ ಉತ್ತಮ ಸಿನಿಮಾಗಳು ಬರುವುದೇ ಕಷ್ಟ, ಆದರೆ “ಯುವರತ್ನ” ಯುವಕರಿಗೊಂದು ಮಾದರಿ ಚಲನಚಿತ್ರ ಎನ್ನುವುದರಲ್ಲಿ ತಪ್ಪಿಲ್ಲ .ಪ್ರತಿಯೊಬ್ಬ ಯುವಕರು ,ಪಾಲಕರು, ಶಿಕ್ಷಕರು, ಆಡಳಿತಮಂಡಳಿಯವರು ,ನೋಡಲೇಬೇಕಾದಂತಹ ಚಲನಚಿತ್ರವಿದು.

ನಾವು ಚಿಕ್ಕವರಿರುವಾಗ ಕೇಳುತ್ತಿದ್ದ ಎಲ್ಲ ಗಾದೆಮಾತುಗಳು ಚಲನಚಿತ್ರದಲ್ಲಿ ಎದ್ದು ಕಾಣುತ್ತಿದ್ದವು.* ಶಕ್ತಿಗಿಂತ ಯುಕ್ತಿ ಮೇಲು, *ಗುರು ಹಿಂದೆ-ಮುಂದೆ, ತಾಳಿದವನು ಬಾಳಿಯಾನು, ಕಾಯಕವೇ ಕೈಲಾಸ ಮನುಷ್ಯನಿಗೆ ಮಾತಿನ ಪೆಟ್ಟು, ಕತ್ತೆಗೆ ಲತ್ತೆ ಪೆಟ್ಟು, #ಗುರುದೇವೋಭವ, *ಮಕ್ಕಳ ಏಳಿಗೆಯ ರುವಾರಿಗಳು ಹೆತ್ತವರು, ಮಾತು ಬೆಳ್ಳಿ ,ಮೌನ ಬಂಗಾರ, ಸರ್ವಜ್ಞನ ವಚನದ ಪ್ರಕಾರ, ಆಡದೇ ಮಾಡುವವನು ರೂಢಿಯೊಳಗುತ್ತಮನು ದುರಾಸೆಯೇ ನಾಶಕ್ಕೆ ಕಾರಣ ಅತಿಆಸೆಪಟ್ಟರೆ ವಿನಾಶ ಖಂಡಿತ ,ಹೀಗೆ ಚಲನಚಿತ್ರ ನೋಡುತ್ತಿದ್ದರೆ ಹತ್ತಾರು ಗಾದೆಗಳು ನನ್ನ ಸ್ಮೃತಿಪಟಲದಲ್ಲಿ ಹಾದುಹೋಗುತ್ತಿದ್ದವು, ನೋಡಲು ಬೇಸರವೇ ಆಗದಂತೆ ಆಗಾಗ ನಗು ಚಟಾಕಿಗಳು ಇದ್ದವು. ಶಕ್ತಿಯ ಸದುಪಯೋಗ, ವಿವೇಕಾನಂದರ ಹೇಳಿಕೆಯಂತೆ ಏನಾದರೂ ಆಗು ಮಾನವನಾಗು, ಗಟ್ಟಿಮುಟ್ಟಾದ ಕಾಯ ನಿನ್ನದಾಗಿರಲಿ ,ನಿನ್ನ ನರನಾಡಿಗಳ ಕಬ್ಬಿಣದ ಸರಳುಗಳಂತಾಗಲಿ, ಎಂಬಮಾತು, ಸತ್ಯ ಎನಿಸುತ್ತಿತ್ತು. ಯುವಕರನ್ನು ಹಾಳು ಮಾಡುತ್ತಿರುವ ಮಾದಕ ಪದಾರ್ಥಗಳು ,ಅವುಗಳಿಂದ ಆಗುವ ದುಷ್ಪರಿಣಾಮಗಳನ್ನು ಮನಮುಟ್ಟುವಂತೆ,ಅರ್ಥವಾಗುವಂತೆ ಬಿಂಬಿಸಿದ್ದಾರೆ.

   ಸಿನಿಮಾ ಮಂದಿರ ತುಂಬಾ ಯುವಕರೆ ತುಂಬಿದ್ದರು, ಸಿಳ್ಳೆ, ಕೇಕೆ, ಚಪ್ಪಾಳೆ, ತಮಗೆ ಹೊಳೆದ ಡೈಲಾಗ್ ಗಳನ್ನು ಭೀತಿಯಿಲ್ಲದೆ ಹೊರಹೊಮ್ಮಿಸುತ್ತಿದ್ದರು, ಎಲ್ಲರ ಮುಖದಲ್ಲಿ ಸಂತಸ ,ಸಂತೃಪ್ತಿ ಭಾವ ಮೂಡಿಸುವಲ್ಲಿ “ಯುವರತ್ನ* ಯಶಸ್ವಿಯಾಗಿತ್ತು. ಒಳ್ಳೆಯ ದಾರಿಯಲ್ಲಿ ನಡೆಯಲು ಹತ್ತು, ಹಲವು ಆಯಾಮಗಳಲ್ಲಿ ನಿಯಮ ತಿಳಿಸಿಕೊಡುವಲ್ಲಿ ಸಫಲವಾಗಿದೆ. ಮನೆಮಂದಿಯಲ್ಲಾ ಮುಕ್ತವಾಗಿ ಒಟ್ಟಿಗೆ ಕುಳಿತು ನೋಡಬಹುದಾದ ಚಲನಚಿತ್ರ ಎನಿಸಿತು.

  ಶಿಕ್ಷಣವೆಂದರೆ ವ್ಯಾಪಾರವಾಗಿಬಿಟ್ಟಿದೆ. ಹೆಚ್ಚು ಹಣ ಪಡೆಯುವ ಶಾಲಾಕಾಲೇಜುಗಳು ಉತ್ತಮ ಶಾಲಾಕಾಲೇಜುಗಳೆಂಬ ಭಾವ ಪಾಲಕರಲ್ಲಿ ಮೂಡಿಬಿಟ್ಟಿದೆ. ಪ್ರತಿಯೊಬ್ಬ ಪಾಲಕನಿಗೂ ಮಗ  ಡಾಕ್ಟರ್, ಇಂಜಿನಿಯರ್ ,ಐ ಎ ಎಸ್ ಅಧಿಕಾರಿ ಆಗಬೇಕೆಂಬ ಒತ್ತಾಯ ಮಕ್ಕಳ ಮೇಲೆ ಹೇರುತ್ತಿದ್ದಾರೆ. ಇಂತಹ ಪರಿಸ್ಥಿತಿಯಿಂದ ಹೊರಬರುವ ದಾರಿಗಳನ್ನು ನಿರ್ದೇಶಕ ಚಲನಚಿತ್ರದಲ್ಲಿ ಒಂದೊಂದಾಗಿ ಸುಂದರವಾಗಿ ಮನಮುಟ್ಟುವಂತೆ ಬಿಚ್ಚಿಡುತ್ತಾ ಹೋಗಿದ್ದಾನೆ.

  ಶಿಕ್ಷಕ ಹಣಕ್ಕಾಗಿ ಹೇಗೆ ಕ್ಲಾಸ್ ಗಳಲ್ಲಿ ಬೋಧನೆ ಮಾಡದೆ ಟುಶನ್ ಗಳಲ್ಲಿ ಪಾಠ ಮಾಡುವುದು . ಅದು ಕೂಡ ಹಣದ ವ್ಯಾಪಾರದಂತೆ, ಅದೇ ಉತ್ತಮ ಶಿಕ್ಷಕ ಮಕ್ಕಳ ಕಲಿಕೆಗಾಗಿ ಅವನಿದ್ದಲ್ಲಿಗೆ ವಿದ್ಯೆಯನ್ನು ಕೊಂಡೊಯ್ದು , ತಿಳಿಸುವ ರೀತಿ ಅದ್ಭುತವಾಗಿ ಮೂಡಿಬಂದಿದೆ .ಉತ್ತಮ ಶಿಕ್ಷಕ ಹೇಗಿರಬೇಕು?, ಒಬ್ಬ ಮುಖಂಡ ಹೇಗಿರಬೇಕು?, ವಿದ್ಯಾರ್ಥಿ ಹೇಗಿರಬೇಕು,? ಪಾಲಕರು ಹೇಗಿರಬೇಕು?ವಿದ್ಯಾರ್ಥಿಗಳ ಉತ್ತಮ ಶಿಕ್ಷಣಕ್ಕಾಗಿ ಅಂತಹ ಶಿಕ್ಷಣ ವ್ಯವಸ್ಥೆ ಇರಬೇಕು, ಎಂಬೆಲ್ಲ ಅಂಶಗಳನ್ನು ಚಲನಚಿತ್ರ ಬಿಂಬಿಸುತ್ತದೆ.

ಒಟ್ಟಾರೆಯಾಗಿ ಈಗಿನ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.  ಶಿಕ್ಷಣ ಹಣ, ಹುದ್ದೆಗಾಗಿ ಅಲ್ಲ, ಮೌಲ್ಯಗಳ ಅಳವಡಿಕೆ. ಶಾಲಾ-ಕಾಲೇಜುಗಳು ಶಿಕ್ಷಿತಕರನ್ನು ತಯಾರಿಸುವ ಕಾರ್ಖಾನೆಗಳಲ್ಲ ಮಾನವನನ್ನು ನಿರ್ಮಿಸುವ ಸಂಸ್ಕರಣಾ ಕುಲುಮೆಗಳು,ಎಂದು ಮಾರ್ಮಿಕವಾಗಿ ಬಿಂಬಿಸುವುದರಲ್ಲಿ ಉತ್ತಮ ಪ್ರಯತ್ನ .ಎಲ್ಲರೂ ಇಂತಹ ಚಲನಚಿತ್ರ ಮಾಡಲಿ ,ಸಮಾಜದ ದುರವಸ್ಥೆಯನ್ನು ಹೋಗಲಾಡಿಸಲು ಇಂತಹ ಚಲನಚಿತ್ರ ಎಲ್ಲರೂ ನೋಡಲಿ ಎಂಬುದು ನನ್ನ ಆಶಯ .ಚಲನಚಿತ್ರದಲ್ಲಿ ಯಾವುದೇ ಲೋಪದೋಷಗಳು ನನಗೆ ಕಾಣಿಸಲಿಲ್ಲ .ಒಬ್ಬೊಬ್ಬರು ಒಂದೊಂದು ನೀತಿಯನ್ನು ಅಳವಡಿಸಿಕೊಂಡರೆ ಸಾಕು ಸಮಾಜ ಸುಧಾರಣೆಗೆ ಅಡಿ ಇಟ್ಟಂತೆ ಎನ್ನುವುದು ಮಾತ್ರ ಸತ್ಯವಾದ ಸಂಗತಿ.


ಅನ್ನಪೂರ್ಣ ಹಿರೇಮಠ 

3 thoughts on “ಅನ್ನಪೂರ್ಣ ಹಿರೇಮಠ ಲೇಖನ-

  1. ಅತೀ ಸುಂದರವಾದ ವಿವರಣೆಯುಳ್ಳ ಲೇಖನ.ಓದಿದ ನಂತರ ಮನಸ್ಸಿಗೆ ಪರಮಾ
    ನಂದವಾಯಿತು

Leave a Reply

Back To Top