ಅಂಕಣ

ನೋಟ!

ಕಮಲಾ ಹೆಮ್ಮಿಗೆ

ಮೂರು ಬೆಟ್ಟದ ತಪ್ಪಲ ಮದ್ಯದಲ್ಲಿ

ಆಡುವ ಹಿಡಿದು ಮೇಯಿಸುತ್ತಿರಲಾಗಿ

ಅಡ್ಡ ಬೆಟ್ಟದಲ್ಲಿ ದೊಡ್ಡ ಹುಲಿ ಹುಟ್ಟಿ ಹಾಯಿತ್ತು ಹಸುವ

ಉದ್ದಿಹ ಬೆಟ್ಟದಲ್ಲಿ ಭದ್ರ ಗಜ ಬಂದು ಎಸೆದಿತ್ತು ಎತ್ತ

ಮಧ್ಯದ ಬೆಟ್ಟದಲ್ಲಿತೋಳ ಕೋದಿತ್ತು  ಕರುವಿನ ಕರುಳ ಕಿತ್ತು

ಹುಲಿ,ಗಜ,ತೋಳನ ಉಡ ನುಂಗಿದ್ದ ಕಂಡೆ

ಗೋಪತಿನಾಥ ವಿಶ್ವೇಶ್ವರ ಲಿಂಗವನರಿಯಲಾಗಿ……

     ಹನ್ನೆರಡನೆಯ ಶತಮಾನದ ತಳಮಟ್ಟದಿಂದ ಬಂದು ಜ್ಞಾನ ಪ್ರಸಾರ ಮಾಡಿದ  ಅಂಬಿಗರ ಚೌಡಯ್ಯ,ನುಲಿಯ ಚಂದಯ್ಯ,ಹೆಂಡದ ಮಾರಯ್ಯ, ಉರಿಲಿಂಗ ಪೆದ್ದಿ,ಕದಿರ  ರೇಮವ್ವೆ, ಕಾಳವ್ವೆ ಮುಂತಾದವರ ಗುಂಪಿನಲ್ಲಿ ಎದ್ದು ಕಾಣುವ ಹೆಸರು. ಈ ವಚನಕತೃ,ತುರುಗಾಹಿ ರಾಮಣ್ಣನವರದು ಒಂದರ್ಥದಲ್ಲಿ ಶರಣಚಳುವಳಿಯ ಮೊದಲ ದಲಿತ ಚಳುವಳಿಯೇ ಆಗಿದೆ ಎಂಬ ಡಾ.ಅರವಿಂದ ಮಾಲಗತ್ತಿಯವರ ಮಾತು ಅರ್ಥಪೂರ್ಣವಾಗಿದೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಸಕಲ ಜಾತಿಯವರೂ ಇದ್ದರು. ತಂತಮ್ಮ ಕಾಯಕ ಮಾಡುತ್ತಲೇಅನುಭಾವಿಗಳೂ ಆಗಿದ್ದುದು ವಿಶೇಷ.

ಈ ವಚನದತಿರುಳು:

ಕುರುಬ ರಾಮಣ್ಣ  ಎಂದಿನಂತೆ ಕುರಿಮಂದೆಯಲ್ಲಿದ್ದಾನೆ. ಮೂರು ಬೆಟ್ಟದ ತಪ್ಪಲು ಅವನಿರುವ ಸ್ಥಾನ.ಹಸು,ಎತ್ತು, ಕರುಗಳೂ ಹಸಿರ ಮೇಯುತ್ತಿವೆ ಒಂದು ಗುಡ್ಡದಿಂದ ನೆಗೆದ ಹುಲಿ ಹಸುವನ್ನು ತಿಂದು ಬಿಡುತ್ತದೆ.ಇನ್ನೊಂದು ಗುಡ್ಡದಿಂದಿಳಿದು ಬಂದ ಆನೆ ಎತ್ತನ್ನು ಎತ್ತಿಬಿಸಾಕುತ್ತದೆ.ನಡುವಿನ ಬೆಟ್ಟದ ತೋಳ ಕರುವಿನ ಕರುಳು ಹಿಡಿದು ಎತ್ತಿಒಯ್ದು ಬಿಡುತ್ತದೆ.

ಇಂತಹ ದಾರುಣ, ಭೀಷಣ ಚಿತ್ರಕಂಡ ಕುರಿಗಾಹಿ ತನ್ನನ್ನು ಸಂತೈಸಿಕೊಳ್ಳುತ್ತಾನೆ: ಗೋಪತಿನಾಥನ ವಿಶ್ವೇಶ್ವರಲಿಂಗ ಅರಿವುಂಟಾದಾಗ,ಹುಲಿ, ಆನೆ. ತೋಳಗಳನ್ನುಅರಿವೆಂಬ ಉಡವು ನುಂಗುತ್ತದೆ.

ಮೇಲಿನ ಶಬ್ದ ಚಿತ್ರವನ್ನುಬಿಡಿಸಿದರೆ-ತನುವು ಹುಲಿ,ಮನ ಸಾಧುಹಸು,ಮದಗಜ ಅಹಂನ ಸಂಕೇತ. ಎತ್ತಿನಂತ ದುರ್ಬಲ ಪ್ರಾಣಿಯನ್ನು ಸುಖಾಸುಮ್ಮನೆ ಎತ್ತಿಎಸೆಯುತ್ತದೆ.ನಮ್ಮಲ್ಲೇ ಇರುವ ಲೋಭವು, ನಮ್ಮಲ್ಲೇ ಇರುವ ಮುಗ್ದತೆಯ ಮೇಲೆ ದಾಳಿ ಮಾಡವುದು, ತೋಳಕರುವಿನ ದೃಶ್ಯವನ್ನು ಸಂಕೇತಿಸುತ್ತದೆ.

 ಜ್ಞಾನದ ಸಂಕೇತವಾದ ‘ಉಡ’ವು ಮೇಲೆ ಹೇಳಿದ ಎಲ್ಲಪ್ರಾಣಿಗಳನ್ನೂ ನಿಯಂತ್ರಿಸುತ್ತದೆ.. ಕ್ರೋಧ,ಮದ, ಲೋಭ ಈ ಮೂರೂ ಅವಗುಣಗಳ್ನು ಜ್ಞಾನಿ ಮಾಡುವುದು ಅನುಭಾವದಿಂದ ಎಂಬುದು ಸರಳವಾದ ಈ ವಚನದ ಅರ್ಥ! ಇವೆಲ್ಲ ಮನದ ಕಾಳಿಕೆಗಳು.

‘ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ’ ಎಂದುಬಸವಣ್ಣನವರು     ಆರ್ತರಾಗಿಪ್ರಾರ್ಥಿಸಿದ್ದನ್ನು ಇಲ್ಲಿ ನೆನೆಯಬಹುದು. ಮಾನವ ಮನಸ್ಸು   ‘ಅರಿಷಡ್ವರ್ಗ’ ಗಳಿಂದತುಂಬಿ ತುಳುಕುತ್ತಿರುತ್ತದೆ.(ಕಾಮ,ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ)

ಅರಿವಿನ ಶಸ್ತ್ರದಿಂದ,ಅವನ್ನು ಹೆರೆದು ಹಾಕಬೇಕು.ಧ್ಯಾನದಿಂದ ಅದನ್ನು ಸಾದಿಸಬಹುದು ಎಂಬುದು ಶರಣರ  ಇಂಗಿತ. ಇವೆಲ್ಲ ಸೆರಗಿನ ಕೆಂಡದಂತೆ-ನಮ್ಮಲ್ಲಿದ್ದು ನಮ್ಮನ್ನೇ ಸುಡುವಂತಹವು.ಋಜು ಮಾರ್ಗದಲ್ಲಿ ನಡೆವುದೊಂದೆ ಇದಕ್ಕೆ ಮದ್ದು. ಪಾಪವೆಸಗಿದರೂ ಪಶ್ಚಾತ್ತಾಪದ ಬೆಂಕಿಯಿಂದ ಅದನ್ನು ಸುಡಬಹುದು.ಕುರುಬ ವೃತ್ತಿಯ ತುರುಗಾಹಿ ರಾಮಣ್ನ ಕಂಡುಕೊಂಡ ಸತ್ಯವಿದು..

ಹನ್ನೆರಡನೆಯ ಶತಮಾನ, ಕನ್ನಡದ ‘ಕ್ರಾಂತಿಯುಗ’ ವೇ ಸರಿ. ಅಲ್ಲಮಪ್ರಭು, ಬಸವೇಶ್ವರರ ದಿವ್ಯ ಮಾರ್ಗದರ್ಶನದಲ್ಲಿ ಲೌಕಿಕವನ್ನು ಬಿಡದೆ, ಅಲೌಕಿಕದೊಟ್ಟಿಗೆ ಅನುಸಂಧಾನ  ಮಾಡಿದ ಶರಣರ  ಒಳಹೊರಗಿಲ್ಲದ ಬದುಕು, ವಿಸ್ಮಯ ಹುಟ್ಟಿಸುವಂತದ್ದು!

ಓರ್ವ ಕುರಿಗಾಹಿಯ ಎದೆಯಲ್ಲಿ ಅರಿವಿನಬೆಳಕು ಕಂಡು, ಅದನ್ನಾತ,ತನಗೆ ಪರಿಚಿತವಾದ, ಆವರಣವನ್ನುಬಳಸಿಕೊಂಡು, ವಚನ ಕಟ್ಟಬೆಕೆಂದರೆ ಅದಕ್ಕೆಷ್ಟು ಸಾಧನೆ ಬೇಕು!

ಅವನು, ಕಾಯದ ವೃತ್ತಿಯನ್ನುತಾತ್ವಿಕನೆಲೆಯಲ್ಲಿ ನೋಡಿದ್ದಾನೆ.ಬೆಡಗಿನ ಮಾತುಗಳಲ್ಲಿ ‘ನೀತಿ’ ಯನ್ನು ಹೇಳಿದ್ದಾನೆ.ಇದನ್ನಾತ ಜಪತಪ ಮಾಡದೆ ತನ್ನ ದೈನಂದಿನ ಕಾಯಕದಿಂದಲೇ ನಿರೂಪಿಸಿ ಉತ್ತಮ ಸಂದೇಶ ನೀಡಿರುವುದು ಮಹತ್ವದ ಸಂಗತಿ.

ಡಾ.ಕಮಲಾ ಹೆಮ್ಮಿಗೆ                                                                              

ಲೇಖಕರ ಪರಿಚಯ:

ಕಮಲಾ ಹೆಮ್ಮಿಗೆಯವರು ಆಕಾಶವಾಣಿ, ದೂರದರ್ಶನದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.ಕನ್ನಡ ಸಾಹಿತ್ಯದ ಬಹುತೇಕೆ ಎಲ್ಲ ಪ್ರಭೇದಗಳಲ್ಲಿಯೂ ಕೈಯಾಡಿಸಿರುವ ಇವರು ಜನಪದ,ಅನುವಾದ,ವಿಮರ್ಶೆ,ಕಾವ್ಯ,ಕಥೆ ಕಾದಂಬರಿಗಳನ್ನು ರಚಿಸಿದ್ದಾರೆ.ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆಅನೇಕ  ಮನ್ನಣೆಗಳಿಗೆ ಬಾಜನರಾಗಿದ್ದಾರೆ.ಸವದತ್ತಿ ಎಲ್ಲಮ್ಮ ಹಾಗು ದೇವದಾಸಿಯರ ಕುರಿತಾದ ಸಂಶೋದನೆಗೆ ಪಿ.ಹೆಚ್.ಡಿ. ಪಡೆದಿದ್ದಾರೆ.ಸದ್ಯ ಕೇರಳದ ತಿರುವನಂತಪುರದಲ್ಲಿ ನೆಲೆಸಿದ್ದಾರೆ.

Leave a Reply

Back To Top