ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ.
ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ
ಎರಡನೆ ಅದ್ಯಾಯ
ಗಜಲ್ ನಡೆದು ಬಂದ ಹಾದಿ
ಯಾವುದೇ ಒಂದು ಸಾಹಿತ್ಯದ ಪ್ರಕಾರವೇ ಆಗಲಿ ಅದರ ಗುಣ ಲಕ್ಷಣಗಳನ್ನು ಅರಿಯುವ ಮೊದಲು ಅದು ನಡೆದು ಬಂದ ಹಾದಿ, ಅರ್ಥ ಮತ್ತು ಇತಿಹಾಸವನ್ನು ತಿಳಿದುಕೊಳ್ಳಬೇಕಿರುವುದು ಅತಿ ಅಗತ್ಯವಾದ ಮೊದಲ ಸಂಗತಿಯಾಗಿದೆ.
ಗಜಲ್ ಪದದ ಅರ್ಥ
ಮೂಲತಃ ಅರಬ್ಬೀ ಶಬ್ದವಾದ ಗಜಲ್, ಆ ಭಾಷೆಯಲ್ಲಿ ಗಜಲ್ ಎಂದರೆ “ನಲ್ಲೆಯೊಂದಿಗಿನ ಸಂವಾದ”. ಆ ಸಂವಾದ ಯಾವುದೇ ತೆರನಾದರೂ ಆಗಿರಬಹುದು. ವಿಶೇಷವೆಂದರೆ ಆಗ ಗಂಡಸರು ಮಾತ್ರ ಗಜಲ್ ಬರೆಯಬೇಕಿತ್ತು. ಆದರೆ ಕಾಲಕ್ರಮೇಣ ಅಲ್ಲಲ್ಲಿ ಮಹಿಳೆಯರು ಬರೆದರೂ ಸಹ ಅದು ಗಂಡಿನ ಭಾವನೆ ಹೊಮ್ಮಿಸುವ ಕಾವ್ಯ ಧ್ವನಿ ಆಗಿರುತ್ತಿತ್ತು ಅದಕ್ಕೆ ಏನೋ ಬರೆಯುವನು ನಲ್ಲನೇ ಆದ್ದರಿಂದ ಇಲ್ಲಿ ನಲ್ಲ ಎನ್ನುವ ಪದ ಯಾವಾಗಲೂ ಮರೆಯಾಗಿ ಇರುತ್ತಿತ್ತು. ಇಲ್ಲಿ ಅತಿ ಹೆಚ್ಚು ಮಹತ್ವ ಪಡೆಯುವುದು ಅವನ ಅನುರಾಗ, ಮೋಹ, ಶೃಂಗಾರ ಪ್ರೇಮ, ವಿರಹದಂತಹ ಸಂಗತಿಗಳು.ಆದ ಕಾರಣ ಇವು ಮೋಹದ ಪದ್ಯಗಳು ಹೌದು, ಪ್ರೇಮಗೀತೆಯೂ ಹೌದು ಜೊತೆಜೊತೆಗೆ ವಿರಹದ ಹಾಡುಗಳು ಸಹ ಹೌದು
ಅದೇ ಗಜಲ್ ಎಂದರೆ ಪಾರ್ಸಿ ಭಾಷೆಯಲ್ಲಿ ಜಿಂಕೆ ಎಂದರ್ಥ. ತನ್ನದೇ ಆದ ಜಗತ್ತನ್ನು ಹೊಂದಿರುವ ಮನ ಬಂದಂತೆ ವಿಹರಿಸುವ ಯಾವುದೇ ಅಡೆತಡೆಗಳಿಲ್ಲದೆ ಎಲ್ಲೆಂದರಲ್ಲಿ ನೆಗೆಯುವ ಜಿಂಕೆಯ ಮನಸ್ಸು ಮತ್ತು ಅದು ಕೊನೆಯ ಕ್ಷಣದಲ್ಲಿ ಸಹ ಹೊರಡಿಸುವ ವಿವಿಧ ಸ್ವರಗಳ ಸಾರವೇ ಇಲ್ಲಿ ಗಜಲ್. ಇಲ್ಲಿ ಗಜಲನ್ನು ಜಿಂಕೆಗೆ ಸಮೀಕರಿಸಿ ಹಲವಾರು ವ್ಯಾಖ್ಯಾನಗಳನ್ನು ನೀಡಲಾಗುತ್ತದೆ.
ಗಜಲ್ ಎಂದರೆ ಪಾರ್ಸಿ ಭಾಷೆಯ ಇನ್ನೊಂದು ಅರ್ಥದಲ್ಲಿ ಕಸ ಗುಡಿಸುವ, ಪಾತ್ರೆ ಉಜ್ಜುವವರ ಹಾಡು! ನಮ್ಮ ಜನಪದರು ಕೆಲಸ ಮಾಡುವಾಗ ಗೀತೆ ಕಟ್ಟಿ ಹಾಡುತ್ತಿದಂತೆ ಪಾರ್ಸಿಯಲ್ಲಿ ಮನೆ ಕೆಲಸದವರು ಶ್ರೀಮಂತರ, ರಾಜರ ಮನೆಯಲ್ಲಿ ಕೆಲಸ ಮಾಡುವಾಗ ಹಾಡುತ್ತಿದ್ದ ಸಾಮಾನ್ಯ ಹಾಡುಗಳೇ ಅಲ್ಲಿಯ ಅರಸೊತ್ತಿಗೆ ತಲುಪಿ ಬೇರೊಂದು ಆಕಾರ ಪಡೆದವು ಎನ್ನುವುದು ಇದರ ಹಿಂದಿರುವ ವಿಷಯ..
ಗಜಲ್ ಬೆಳೆದ ರೀತಿ
ಅರಬ್ಬೀ ಭಾಷೆಯಲ್ಲಿ ತನ್ನ ಮೂಲವನ್ನು ಹೊಂದಿರುವ ಗಜಲನ ಉಗಮವು ಆಸ್ತಾನದ ಸಭಿಕರು ತಮ್ಮ ರಾಜನನ್ನು, ಯುದ್ದೋತ್ಸಾಹಿಗಳನ್ನು, ದಾರ್ಶನಿಕತೆಯನ್ನು ತುಂಬಿ ಹೊಗಳುತ್ತಿದ್ದ ನವರಸಗಳಿಂದಲೇ ಶೃಂಗಾರಗೊಂಡಿದ ಕಸೀದ್ ಎನ್ನುವ ಕಾವ್ಯ ಪ್ರಕಾರದಿಂದ ವಿಕಾಸಗೊಂಡಿತು ಎಂದು ತಿಳಿದು ಬರುತ್ತದೆ. ಕಸೀದನ ತಷಬೀಬ್ ಅಲ್ಲಿ ಇರುವಂತೆ ಪೀಠಿಕೆ, ದ್ವಿಪದಿ, ಶೇರ್, ಮಕ್ತಾ, ಮತ್ಲಾ, ಕಾಫಿಯಾ, ರಧೀಪ್ ಮೊದಲಾದ ಕಾವ್ಯ ಲಕ್ಷಣಗಳನ್ನು ಸಹ ಗಜಲ್ ಒಳಗೊಂಡು ಬೆಳವಣಿಗೆ ಹೊಂದಿದೆ. ಆದರೆ ತದ ನಂತರದ ಯುದ್ಧ ಮತ್ತು ಅರಬ್ಬರ ಗಂಭೀರ ನಡೆಯ ಕಾರಣ ಅರಬ್ಬೀ ಭಾಷೆಯಲ್ಲಿ ಗಜಲ್ ಸಂಕುಚಿತಗೊಂಡರೂ ಅದೇ ಕಾಲಘಟ್ಟದಲ್ಲಿ ಪಾರ್ಸಿ ಭಾಷೆಯಲ್ಲಿ ಮತ್ತಷ್ಟು ಬೆಳೆದು ಬಂತು.
ರಾಗ ತಾಳ ಲಯಬದ್ಧವಾಗಿ ಹಾಡುತ್ತಿದ್ದ ಚಾಮ್ ಎನ್ನುವ ಮತ್ತೊಂದು ಕಾವ್ಯ ಪ್ರಕಾರ ಆಗ ಇರಾನ್ ರಾಷ್ಟ್ರದಲ್ಲಿ ಅತ್ಯಂತ ಪ್ರಚಲಿತದಲ್ಲಿ ಇತ್ತು. ಸರಳವಾಗಿ ಸಹಜವಾಗಿ ಗಂಡು ಹೆಣ್ಣು ಎಂಬ ಭೇದ ಭಾವವಿಲ್ಲದೆ ಅಲ್ಲಿನ ಗ್ರಾಮೀಣ ಜನರು ಕಟ್ಟಿ ಹಾಡುತ್ತಿದ್ದ ಈ ಗೀತೆಗಳು ಬಹು ಜನಪ್ರಿಯಗೊಂಡಿದವು.
ನಿಜವಾದ ಗಜಲನ ಆರಂಭ
ಆಗ ಇರಾನ್ ಇರಾಕ್ ಮೊದಲಾದ ಅರಬ್ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಪರ್ಕವನ್ನು ಹೊಂದಿದ ಭಾರತ ಕೊಡುವ, ತಗೊಳ್ಳುವ ಪದ್ಧತಿಯಿಂದಾಗಿ ವರ್ತಕರು ಗ್ರಾಹಕರ ಸಂಬಂಧದ ಮೂಲಕ ಉರ್ದು ಭಾಷೆಗೆ ಸಹ ಗಜಲ್ ತನ್ನ ಪ್ರಭಾವವನ್ನು ಚಾಚಿಕೊಂಡಿತು. ವಿಶಿಷ್ಟ, ವಿಭಿನ್ನ ಅಂಶಗಳಿಂದಾಗಿ ಭಾರತೀಯರ ಮನಸೂರೆಗೊಂಡ ಗಜಲ್ ಉರ್ದು ಅಲ್ಲಿ ಬೆಳೆದು ಬಂದ ರೀತಿಯೇ ಅಮೋಘ. ಹಿಂದೆಂದೂ ಕಂಡಿರದ ಗಜಲ್ ತನ್ನ ನಿಜವಾದ ಆರಂಭವನ್ನು ಉರ್ದು ಭಾಷೆಯಲ್ಲಿ ಪಡೆದ ಪರಿಣಾಮ ಅದರ ಖದರೇ ಬದಲಾಗಿ ಹೋಯಿತು. ಹಂತಹಂತವಾಗಿ ಕಡಿಮೆ ಸಮಯದಲ್ಲಿಯೇ ಗಜಲ್ ತನ್ನಲ್ಲಿ ಭಾರತೀಯ ನಡೆ, ಸಂಸ್ಕೃತಿ, ರೀತಿ ನೀತಿ ಮೊದಲಾದವುಗಳನ್ನು ತುಂಬಿಕೊಂಡಿತು. ಇದಕ್ಕೆ ಜೊತೆಯಾದ ಉರ್ದು ಭಾಷೆ ತನ್ನ ಮೃದು, ಮಧುರತೆಯಿಂದಾಗಿ ಗಜಲ್ ಅತ್ಯುನ್ನತ ಮಟ್ಟ ತಲುಪಲು ಪೂರಕ ವಾತಾವರಣ ನಿರ್ಮಿಸಿತು.
ತದ ನಂತರ ಹಿಂತಿರುಗಿ ನೋಡದ ಗಜಲ್ ಶರವೇಗವನ್ನು ಪಡೆದುಕೊಂಡು ವಿಶ್ವದ ವಿವಿಧ ದೇಶಗಳಿಗೆ ತನ್ನ ಜನಪ್ರಿಯವನ್ನು ಪಸರಿಸಿತು. ಇದರಿಂದ ಆಕರ್ಷಿತರಾದ ಜನ ತಮ್ಮ ದೇಶಿಯ ಭಾಷೆಗಳಲ್ಲಿಯೇ ಗಜಲ್ ಕೃಷಿ ನಡೆಸತೊಡಗಿದರು. ಇಂಗ್ಲಿಷ್, ಪ್ರೆಂಚ್, ಸ್ಪಾನಿಷ್, ಮೊದಲಾದ ಪಾಶ್ಚಿಮಾತ್ಯ ಭಾಷೆಗಳಲ್ಲಿಯೂ ಸಹ ರಚನೆಗೊಂಡ ಗಜಲ್ ಕನ್ನಡ ಸೇರಿದಂತೆ ಮರಾಠಿ, ಹಿಂದಿ, ಭೋಜಪುರಿ, ತೆಲುಗು ಎನ್ನದೇ ಸಾಕಷ್ಟು ಭಾಷೆಗಳಲ್ಲಿ ಹೊಸ ಕಾವ್ಯ ಪ್ರಕಾರವಾಗಿ ಗಜಲ್ ಮೂಡಿ ಬಂದು ಮತ್ತಷ್ಟು ಯಶಸ್ವಿಯಾಗಿ ದಾಪುಗಾಲಿಟ್ಟಿತು.
**********
ಬಸವರಾಜ ಕಾಸೆ