ಮೇ-ದಿನದ ವಿಶೇಷ

ಪ್ರೊ. ಸಿದ್ದು ಸಾವಳಸಂಗ

ಶ್ರಮಜೀವಿಗಳ ದಿನ

    ಪ್ರತೀ ವರ್ಷದಂತೆ ಈ ವರ್ಷವೂ ಮೇ ಒಂದು ಬಂದಿದೆ.ಅಂದು ವಿಶ್ವ ಕಾರ್ಮಿಕರ ದಿನಾಚರಣೆ.ಭಾರತದಾದ್ಯಂತ ಅಷ್ಟೇ ಏಕೆ ವಿಶ್ವದಾದ್ಯಂತ ಅಂದು ಕಾರ್ಮಿಕರ ದಿನಾಚರಣೆಯನ್ನು ಆಚರಿಸುತ್ತಾರೆ.ಕಾರ್ಮಿಕರು ಅಂದರೆ ಶ್ರಮವಹಿಸಿ ದುಡಿಯುವ ವರ್ಗ.ಅದು ಕೂಲಿ ಕಾರ್ಮಿಕರಾಗಿರಬಹುದು.ರೈತ ಕಾರ್ಮಿಕರಾಗಿರಬಹುದು.ಗಾರ್ಮೆಂಟ್ಸ್ ಕಾರ್ಮಿಕರಾಗಿರಬಹುದು.ಪ್ಯಾಕ್ಟರಿ ಕಾರ್ಮಿಕರಾಗಿರಬಹುದು.ಇನ್ನೂ ಅನೇಕ ದುಡಿಯುವ ವರ್ಗಗಳಿವೆ.ಅವರೆಲ್ಲರೂ ಕಾರ್ಮಿಕರೆ.
     ಈ ದಿನದ ಹಿನ್ನೆಲೆಯನ್ನು ನೋಡಿದರೆ ಚಿಕಾಗೋದ ಹೇ ಮಾರ್ಕೆಟ್ ಎಂಬಲ್ಲಿ 1986 ರ ಮೇ 4 ರಂದು ಕಾರ್ಮಿಕರ ಮೇಲೆ ಧಮನಕಾರಿ ಘಟನೆ ನಡೆಯಿತು.ಕಾರ್ಮಿಕರ ದಿನಾಚರಣೆಗೆ ಇದು ಹಿನ್ನೆಲೆ.ರಾಬೆರ್ಟ್ ಓವೆನ್ ಎಂಬವರು ಮೇ ಒಂದರಂದು ವಿಶ್ವ ಕಾರ್ಮಿಕ ದಿನಾಚರಣೆ ಮಾಡಲು ಸೂಚಿಸಿದರು.ಅಂದಿನಿಂದ ಇಂದಿನವರೆಗೂ ಈ ದಿನವನ್ನು ಆಚರಿಸಲಾಗುತ್ತದೆ.ಈ ದಿನವನ್ನು “ವರ್ಕರ್ಸ್ ಡೇ” , “ಲೇಬರ್ ಡೇ” ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.ಅಂದು ಸಾರ್ವತ್ರಿಕ ರಜಾ ದಿನವೆಂದು ಘೋಷಿಸಲಾಗಿದೆ.
     ಭಾರತದಲ್ಲಿ 1927 ರಿಂದಲೂ ಪ್ರತೀ ವರ್ಷವೂ ಕಾರ್ಮಿಕರು ಈ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದಾರೆ.1927  ರಲ್ಲಿ ಮುಂಬಯಿಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು.1969 ರಲ್ಲಿ ಎಲ್ಲ ಕಾರ್ಮಿಕ ಸಂಘಗಳು ಒಟ್ಟಾಗಿ ತಮ್ಮ ಹಕ್ಕುಗಳನ್ನು ಸಾಧಿಸಲು ಪಾರ್ಲಿಮೆಂಟ್ ಭವನದ ಬಳಿಗೆ  ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದವು.
     ದೇಶ ಕಟ್ಟವಲ್ಲಿ ಕಾರ್ಮಿಕರ ಪಾತ್ರ ಹಿರಿದು.ಈ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.ಈ ಶ್ರಮ ಜೀವಿಗಳನ್ನು ಗುರುತಿಸಿ,ಅವರನ್ನು ಗೌರವಿಸುವುದು ಈ ದಿನದ ವಿಶೇಷವಾಗಿದೆ.
     ಕಾರ್ಮಿಕರ ಜೀವನ ನಾವು ತಿಳಿದಂತೆ ಸುಖವಾಗಿರುವುದಿಲ್ಲ.ಅವರು ಒಂದು ದಿನಕ್ಕೆ 10 ರಿಂದ 12 ಗಂಟೆ ಕಠಿಣ ಶ್ರಮವಹಿಸಿ ದುಡಿಯುತ್ತಾರೆ.ಹಗಲಿನಂತೆ ರಾತ್ರಿಯೂ ಸಹ ದುಡಿಯುತ್ತಾರೆ.ರಾತ್ರಿ ದುಡಿಯುವವರು ಕಣ್ಣಿಗೆ ಎಣ್ಣೆ ಹಾಕಿಕೊಂಡು ಅತೀ ಜಾಗರೂಕತೆಯಿಂದ ದುಡಿಯಬೇಕು.ಶ್ರಮಕ್ಕೆ ತಕ್ಕಂತೆ ಪ್ರತಿಫಲವಿಲ್ಲ.ಅವರ ವೇತನ ಬಹಳ ಕಡಿಮೆ.ಆ ಕಡಿಮೆ ವೇತನದಲ್ಲಿಯೇ ಅವರು ಕುಟುಂಬವನ್ನು ನಿರ್ವಹಿಸಬೇಕು.ಇಷ್ಟೆಲ್ಲಾ ಸಮಸ್ಯೆಗಳ ಮಧ್ಯ ಅವರು ಹೋರಾಟದ ಬದುಕನ್ನು ಸಾಗಿಸಬೇಕಾಗಿದೆ.
     ಕಾರ್ಮಿಕರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿ ಅವರ ಜೀವನವನ್ನು ಉತ್ತಮ ಪಡಿಸಬಹುದು.ಮೊದಲು ಎಲ್ಲರೂ ಅವರಿಗೆ ಗೌರವ ಕೊಡಬೇಕು.ಅವರ ಕುಟುಂಬದವರು ವಸತಿ ಇರಲು ಉಚಿತ  ಮನೆಯ ವ್ಯವಸ್ಥೆ ಮಾಡಬೇಕು.ವೈದ್ಯಕೀಯ ಸೌಲಭ್ಯಗಳು ಉಚಿತವಾಗಿ ದೊರಕಬೇಕು.ಕಾರ್ಮಿಕ ಮಕ್ಕ ಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು.
ಒಟ್ಟಾರೆಯಾಗಿ ಕಾರ್ಮಿಕರು ನೆಮ್ಮದಿಯಿಂದ ಬದುಕಿದರೆ ಈ ದೇಶ ನೆಮ್ಮದಿಯಿಂದ ಇರುತ್ತದೆ.
ಎಲ್ಲ ಕಾರ್ಮಿಕರಿಗೂ ಒಳ್ಳೆಯದಾಗಲಿ ಎಂದು ಹೇಳುತ್ತ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.


   ಪ್ರೊ. ಸಿದ್ದು ಸಾವಳಸಂಗ,ತಾಜಪುರ

Leave a Reply

Back To Top