ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ 

ಕುಟುಂಬದ ನಿಜವಾದ ಅರ್ಥವೇ ಒಲವು…

ಅವಳ ಮುಂಗೋಪಕ್ಕೆ ತುತ್ತಾದ ಅವನು ಸದಾ ಏನನ್ನೋ ಚಿಂತಿಸುತ್ತಾ, ಮನೆಯಿಂದ ಬಿರಬಿರನೇ ಹೊರಗಡೆ ನಡೆದುಬಿಡುತ್ತಾನೆ.

 ಇವಳು ಅವನ ಮಾತಿಗೆ ಎದುರು ವಾದಿಸುತ್ತಲೇ ವಾದ ಪ್ರತಿವಾದವು ಜಗಳಕ್ಕೆ ತಿರುಗಿ, ಒಬ್ಬರಿಗೊಬ್ಬರು ಮಕ್ಕಳೆದುರೇ ಕಾದಾಡುತ್ತಾರೆ.

 “ಪ್ಲೀಸ್ ಅಪ್ಪಾ, ಅಮ್ಮ, ಸುಮ್ನಿರಿ..” ಎನ್ನುವ ಮಕ್ಕಳ ಗೋಗೇರತದ ವಿನಂತಿ…

ಇಂತಹ ಮೇಲಿನ ಸನ್ನಿವೇಶಗಳನ್ನು ಸಾಮಾನ್ಯವಾಗಿ ನಾವು  ನಗರ ಪ್ರದೇಶದ ವಿಭಕ್ತ ಕುಟುಂಬಗಳಲ್ಲಿ ಅದರಲ್ಲೂ ಉದ್ಯೋಗನಿರತ ದಂಪತಿಗಳ ಸಂಸಾರದಲ್ಲಿ ಕಾಣ ಸಿಗುವುದು ಸಾಮಾನ್ಯವಾಗಿದೆ.

 ವಾರ ಪೂರ್ತಿ ಮುಂಜಾನೆಯಿಂದ ಸಂಜೆಯವರೆಗೂ ಸದಾ ಕೆಲಸ ಎಂದರೆ..! ಕುಟುಂಬಕ್ಕಾಗಿ ಸಮಯ ಕಳೆಯುವಾಗಾದರೂ ಯಾವಾಗ..? ಉದ್ಯೋಗಕ್ಕೆ ಹೋಗುವ ಅವಸರದಲ್ಲಿ ಬೆಳಿಗ್ಗೆ ಮಡದಿ ಒಂದು ಕೆಲಸ ಮಾಡಿದರೆ,  ಗಂಡ ಮತ್ತೊಂದು ಕೆಲಸ ಮಾಡಲೇಬೇಕು. ಇಲ್ಲದೇ ಹೋದರೆ ಹೆಚ್ಚುವರಿಯಾಗಿ ಕೆಲಸ ಮಾಡುವ ಆಳುಗಳನ್ನು ನೇಮಿಸಿಕೊಂಡರೆ ಆರ್ಥಿಕ ಹೊರೆಯಾಗುತ್ತದೆ. ಓದುವ ಮಕ್ಕಳು, ಅವರ ಫೀಸು, ಪಠ್ಯಪುಸ್ತಕ, ಪಠ್ಯೇತರ ಚಟುವಟಿಕೆಗಳಿಗೆ ಕಟ್ಟುವ ಫೀಜು ಶಾಲಾ ಫೀಜಿಗಿಂತಲೂ ಹೆಚ್ಚಾಗಿರುವ ಈ ದುಬಾರಿ ಕಾಲದಲ್ಲಿ… ಬರುವ ವೇತನದಲ್ಲಿಯೇ ಎಲ್ಲವನ್ನು ಸಂಭಾಳಿಸಿಕೊಂಡು ಹೋಗಬೇಕು.

 ಭವಿಷ್ಯದ ದೃಷ್ಟಿಯಿಂದ ಅಲ್ಪಸ್ವಲ್ಪ ಕೂಡಿಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇಂದಿನ ಆಧುನಿಕ ಕುಟುಂಬಗಳು ಒತ್ತಡದಲ್ಲಿ ಸಿಲುಕಿ ಒದ್ದಾಡುತ್ತವೆ.

ಹಾಗಾಗಿ, ಮೇಲಿನ ಘಟನೆಗಳು ಜರುಗಲು ಕಚೇರಿಯ ಕೆಲಸಗಳ ಜೊತೆ ಜೊತೆಗೆ ಆರ್ಥಿಕತೆಯನ್ನು ನಿಭಾಯಿಸಬೇಕಾದ ಒತ್ತಡವು ಕಾರಣವಾಗಿರುತ್ತದೆ. ಮಕ್ಕಳೊಡನೆ, ಮಡದಿಯೊಡನೆ ಕನಿಷ್ಠ ಪಕ್ಷ ದಿನದ ಎರಡು ಮೂರು ತಾಸು ಆದರೂ ಅವರ ಜೊತೆಗೆ ನಗು ನಗುತ್ತಾ ಮಾತನಾಡಬೇಕು. ಅವರ ಅಭಿಪ್ರಾಯಗಳನ್ನು ಆಲಿಸಬೇಕು.  ಹಾಸ್ಯ ನಗು ಸಂತೋಷದಿಂದ ಸಮಯ ಕಳೆದರೆ ಮಾತ್ರ ಸಹಜವಾಗಿ ಕುಟುಂಬದಲ್ಲಿ ಸಾಮರಸ್ಯ ಮೂಡಲು ಸಾಧ್ಯ.  ಇಲ್ಲದೆ ಹೋದರೆ ಅದರ ಕೆಟ್ಟ ಪರಿಣಾಮ ಬದುಕಿನ ದಾಂಪತ್ಯದಲ್ಲಿಯೂ ಬಿರುಕು ಮೂಡಲು ಕಾರಣವಾಗುತ್ತದೆ.

 ಇತ್ತೀಚಿನ ವರದಿಯ ಪ್ರಕಾರ ಶೇಕಡ ಹತ್ತರಷ್ಟು ನಗರ ಪ್ರದೇಶದ ಕುಟುಂಬಗಳು ವಿಘಟನೆಯತ್ತ ಸಾಗಿರುವುದನ್ನು ನಾವು ಕೇಳುತ್ತೇವೆ. ಮದುವೆಯಾದ ಐದಾರು ತಿಂಗಳು ಸಹಜವಾಗಿ ಎಲ್ಲಾ ಸಮಸ್ಯೆಗಳಿಗೂ ಹೊಂದಾಣಿಕೊಂಡು ಹೋಗುವ ಕುಟುಂಬವು ವರ್ಷ ಇಲ್ಲವೇ ಎರಡು ವರ್ಷ ಕಳೆದೊಡನೆ ಮಕ್ಕಳ ಪಾಲನೆ, ಕಚೇರಿ ಕೆಲಸದ ಒತ್ತಡ,  ಆರ್ಥಿಕ ಪರಿಸ್ಥಿತಿ ಇವೆಲ್ಲವನ್ನು ಸಂಭಾಳಿಸುವ ಒತ್ತಡದಲ್ಲಿ ಸಿಲುಕಿ “ತಮ್ಮ ತಮ್ಮ ಅಭಿಪ್ರಾಯಗಳೇ ಮುಖ್ಯ” ಎಂದು ವಾದಿಸುತ್ತಾರೆ. ನಂತರ ಕುಟುಂಬದಲ್ಲಿ ಸಾಮರಸ್ಯ ಕದಡುತ್ತಾ ಹೋಗುತ್ತದೆ.  ಅಕ್ಕ ಪಕ್ಕದ ನೆರೆಹೊರೆಯವರು ಇವರ ಸಮಸ್ಯೆಯನ್ನು ಆಲಿಸುವ ಗೋಜಿಗಂತೂ ಹೋಗುವುದಿಲ್ಲ. ಅದು ಅವರಿಗೆ ಬೇಕಾಗಿರುವುದಿರಲ್ಲ. ಅವರಿಗೆ ಅವರದೇ ಆದ ಸಮಸ್ಯೆಗಳಿರುತ್ತವೆ. ಇದು ನಗರ ಪ್ರದೇಶದ ಸಮಸ್ಯೆಗಳಾದರೆ‌.

 ಇನ್ನೂ…

 ಗ್ರಾಮೀಣ ಭಾಗದಲ್ಲಿ ಬೇರೆ ರೀತಿಯ ಸಮಸ್ಯೆಗಳಿರುತ್ತವೆ. ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ವಿಭಕ್ತ ಕುಟುಂಬಗಳು ಅಸ್ತಿತ್ವಕ್ಕೆ ಬಂದಿರುವುದನ್ನು ನಾವು ಕಾಣುತ್ತೇವೆ. ವಿಭಕ್ತ ಕುಟುಂಬದಲ್ಲಿದ್ದಾಗ ಕೃಷಿ ಮತ್ತು ಕೃಷಿಯ ತರ ಚಟುವಟಿಕೆಗಳಲ್ಲಿ ತೊಡಗಿರುವ ದಂಪತಿಗಳು ತಮ್ಮ ಕೆಲಸಗಳನ್ನು ಮುಗಿಸಿ, ಮನೆ ಕೆಲಸಗಳನ್ನು ಮಾಡುವಾಗ ಒತ್ತಡಕ್ಕೆ ಸಿಲುಕುವುದು ಸಹಜ.

 ಆದರೆ…

 ಅವಿಭಕ್ತ ಕುಟುಂಬದಲ್ಲಿ ಹೊಲ ಮನೆಗಳಲ್ಲಿ ಕೆಲಸ ಮಾಡಿ ಬಂದಾಗ  ಕುಟುಂಬದ ಇತರ ಸದಸ್ಯರು ಮಕ್ಕಳನ್ನು ಸಂಭಾಳಿಸುವುದು, ಅಡುಗೆ ಮಾಡುವುದು, ಮನೆಗೆಲಸ ಮುಂತಾದ ಎಲ್ಲಾ ಕೆಲಸಗಳನ್ನು ಸದಸ್ಯರು ಹಂಚಿಕೊಂಡು ಮಾಡುವುದರಿಂದ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಮನೆಯ ಯಜಮಾನನು ಎಲ್ಲಾ ಕೆಲಸವನ್ನು ಎಲ್ಲರಿಗೂ ಸಮಾನವಾಗಿ ಹಂಚಿ ಅವರ ಕುಟುಂಬದ ಒತ್ತಡವನ್ನು ಕಡಿಮೆಗೊಳಿಸುತ್ತಾನೆ.

ನಗರೀಕರಣ ಮತ್ತು ಯಾಂತ್ರಿಕೀಕರಣಗೊಂಡ ಇವತ್ತಿನ ದಿನಮಾನಗಳಲ್ಲಿ ಅವಿಭಕ್ತ ಕುಟುಂಬಗಳು ನಾಶವಾಗಿ ವಿಭಕ್ತ ಕುಟುಂಬದ ವಿಜೃಂಭಣೆಯಲ್ಲಿವೆ. ಈ ರೀತಿ ಇರುವಾಗ ಕೇವಲ ಸ್ವಾತಂತ್ರ್ಯ, ವೈಯಕ್ತಿಕ ಅಭಿಪ್ರಾಯಕ್ಕೆ ಮನ್ನಣೆ ಇರುತ್ತದೆ, “ನಮ್ಮಿಷ್ಟದಂತೆ ನಾವು ಜೀವಿಸಬೇಕು” ಎನ್ನುವ ಏಕೈಕ ಕಾರಣಕ್ಕಾಗಿ ಅವಿಭಕ್ತ ಕುಟುಂಬದಿಂದ ಹೊರಗೆ ಬಂದ ಎಷ್ಟೋ ದಂಪತಿಗಳು ಇವತ್ತು ಒತ್ತಡಕ್ಕೆ ಬಿದ್ದು ತಮ್ಮ ಸಂಸಾರದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ.

 ಸಂಸಾರವೆಂದರೆ.. ಎಲ್ಲಾ ಸಾರವನ್ನು ಸಹಜವಾಗಿ ಅನುಭವಿಸುವುದು ಎಂದರ್ಥ. ಸುಖವಿರಲಿ, ದುಃಖವಿರಲಿ ಸಮಾನವಾಗಿ ಸ್ವೀಕರಿಸುವುದು. ಸಂಸಾರದಲ್ಲಿ ಸಾರ ಇಲ್ಲದೆ ಹೋದರೆ ನಿಸ್ಸಾರವಾಗುತ್ತದೆ.

 ಸಂಸಾರದಲ್ಲಿ ಜಗಳ, ಮುನಿಸು, ಕೋಪ, ಪ್ರೀತಿ, ಆಸೆ, ಭಿನ್ನಾಭಿಪ್ರಾಯಗಳು, ತ್ಯಾಗ, ವಾತ್ಸಲ್ಯ, ಮಮತೆ ಇವೆಲ್ಲವೂ ಇದ್ದಾಗ ಮಾತ್ರ ಸಂಸಾರ ಸಾರ್ಥಕ ಪಡೆದುಕೊಳ್ಳುತ್ತದೆ. ಪ್ರತಿಯೊಬ್ಬ ಸದಸ್ಯರ ಸ್ವಾರ್ಥವನ್ನು ನಾವು ಮನ್ನಿಸಬೇಕು..! ಸ್ವೀಕರಿಸಬೇಕು..!! ಅವರಿಗಾಗಿ ಇನ್ನೊಬ್ಬ ಸದಸ್ಯ ತ್ಯಾಗ ಮಾಡಲೇಬೇಕು..!  ಆಗ ಪ್ರೀತಿ ಹುಟ್ಟುತ್ತದೆ. ವಾತ್ಸಲ್ಯ ಬೆಳೆಯುತ್ತವೆ. ನನ್ನ ಮಕ್ಕಳು, ನನ್ನ ಸೊಸೆಯಂದಿರರು, ನನ್ನ ಗಂಡ, ಮೈದುನ… ಇವರೆಲ್ಲರೂ ನನ್ನ ಕುಟುಂಬದವರು ಎನ್ನುವ ವಿಶಾಲವಾದ ಮನೋಭಾವ ಆಗ ಮೂಡುತ್ತದೆ.
ಇಲ್ಲದೆ ಹೋದರೆ.. ಇನ್ನೊಬ್ಬರ ಅಭಿಪ್ರಾಯವನ್ನು ಗೌರವಿಸದೆ ಪ್ರತಿಯೊಂದುರಲ್ಲಿಯೂ ಕೆಟ್ಟದ್ದನ್ನು ಹುಡುಕುತ್ತಾ ಸ್ವಾರ್ಥವನ್ನೇ ಪ್ರಶ್ನಿಸುತ್ತಾ ಕುಳಿತರೆ ಸಂಸಾರದಲ್ಲಿ ಸಹಜವಾಗಿ ಬಿರುಕು ಉಂಟಾಗುತ್ತದೆ. ಅಂತಹ ಕುಟುಂಬಗಳು ಒಂದುಗೂಡಿರಲು ಸಾಧ್ಯವಾಗುವುದಿಲ್ಲ. ಮತ್ತೆ ಮತ್ತೆ ಕುಟುಂಬಗಳು ವಿಘಟನೆಯತ್ತ ಸಾಗುತ್ತವೆ.

 ಗಂಡನಾದವನು ಇಡೀ ಮನೆತನದ ಜವಾಬ್ದಾರಿಯನ್ನು ಹೊತ್ತು ಪ್ರತಿಯೊಬ್ಬ ಸದಸ್ಯರ ಅಭಿಪ್ರಾಯವನ್ನು ಗೌರವಿಸಬೇಕು. ಹೆಂಡತಿಯಾದವಳು ಕುಟುಂಬದ ಸದಸ್ಯರ ಒಳಿತನ್ನು ಬಯಸಬೇಕು. ಮಕ್ಕಳ ಲಾಲನೆ ಪಾಲನೆ ಮಾವ ಅತ್ತೆ ಹಿರಿಯ ಜೀವಿಗಳ ಪೋಷಣೆ ಮಾಡಬೇಕು. ತನ್ನ ವಾರಗಿತ್ತಿಯರ ಅಭಿಪ್ರಾಯಕ್ಕೂ ಮನ್ನಣೆ ಕೊಡಬೇಕು. ಮಕ್ಕಳು ಕೂಡ ಅಷ್ಟೇ ಅವರ ಕರ್ತವ್ಯವನ್ನು ಮರೆಯಬಾರದು. ಹಿರಿಯರು ಸೂಚಿಸುವ ಅಭಿಪ್ರಾಯವನ್ನು ಗೌರವಿಸಬೇಕು. ಅವರು ಪಾಲಿಸುವ ನೀತಿ ನಿಯಮಗಳನ್ನು, ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆಗ ಸಂಸಾರ ಸುಂದರವಾದ ಆನಂದ ಸಾಗರವಾಗುತ್ತದೆ.

 ಹಾಗಾಗಿ..

 ಬೇಂದ್ರೆಯವರು ಕುಟುಂಬವನ್ನು ಕುರಿತು ಸಾಕಷ್ಟು ‘ಸಖೀಗೀತ’ ಪುಸ್ತಕದಲ್ಲಿ ಬರೆದಿದ್ದಾರೆ.  ಅವರ ಕಾವ್ಯದ ಸಾಲುಗಳು ಸಂಸಾರದ ಹಿರಿಮೆಯನ್ನು ಹೆಚ್ಚಿಸಿವೆ.  ನಿಜವಾದ ದಂಪತಿಗಳಾದವರು ಆಡಂಬರಕ್ಕೆ, ಶ್ರೀಮಂತಿಕೆಗೆ ಮನಸೋಲದೆ ಪ್ರೀತಿಯನ್ನು ಹುಡುಕಬೇಕಾಗಿದೆ.

“ನಾನು ಬಡವ
ನೀನು ಬಡವಿ
ಒಲವೇ ನಮ್ಮ ಬದುಕು ಬಳಸಿಕೊಂಡೆವದನು  ನಾವು ಅದಕ್ಕೊ ಇದಕ್ಕೊ…ಎಲ್ಲದಕ್ಕೂ..
ಎನ್ನುತ್ತಾರೆ ವರಕವಿ ಬೇಂದ್ರೆಯವರು.

 ಹಾಗೆಯೇ ಬದುಕನ್ನು ಕುರಿತು ಬೇಂದ್ರೆಯವರು,

“ಸರಸವೇ ಜನನ ವಿರಸವೇ ಮರಣ ಸಮರಸವೇ ಜೀವನ..” ಎಂದು ಜೀವನ ದಾರ್ಶನಿಕತೆಯನ್ನು ನಮ್ಮೆದುರು ತೆರೆದಿದ್ದಾರೆ. ಹಿರಿಯರ ಈ ಮಾತುಗಳು ಇಂದಿನ ಕೌಟುಂಬಿಕ ಸದಸ್ಯರು ಅರ್ಥ ಮಾಡಿಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ.

 “ಕುಟುಂಬದ ಒಳಿತೇ ನಮ್ಮ ಒಳಿತು” ಎಂದು ಬದುಕಬೇಕಾಗಿದೆ. ಪ್ರತಿಯೊಬ್ಬ ಸದಸ್ಯರು ಸ್ವಾರ್ಥವನ್ನು ಅತಿರೇಕಕ್ಕೆ ತೆಗೆದುಕೊಂಡು ಹೋಗದೆ,  ತ್ಯಾಗವೂ ಕೂಡ ಮಾಡಬೇಕಾದ ಅನಿವಾರ್ಯತೆಯನ್ನು ಅವರು ಒಪ್ಪಿಕೊಂಡಾಗ ಮಾತ್ರ ಕುಟುಂಬದ ವ್ಯವಸ್ಥೆ ಉಳಿಯಲು ಸಾಧ್ಯವಾಗುತ್ತದೆ.

 ಇಲ್ಲದೆ ಹೋದರೆ..

 ವಿದೇಶದಲ್ಲಿರುವ ಸಂಬಂಧ ರಹಿತ ಸಂಸಾರ, ಬಾಂಧವ್ಯರಹಿತ ಬದುಕು,  ಲಿವಿಂಗ್ ಟುಗೆದರ್ ನಂತಹ ಸಂಬಂಧಗಳು ಬಂದು ಬಾಂಧವ್ಯವಿರದ ವ್ಯವಸ್ಥೆಗಳು ಅಸ್ತಿತ್ವಕ್ಕೆ ಬಂದು ಬಿಡುತ್ತವೆ. ಅಲ್ಲದೇ ಕೌಟುಂಬಿಕ ಹಿರಿತನವನ್ನು ಹಾಳು ಮಾಡಿಬಿಡುತ್ತವೆ. ಕುಟುಂಬದ ಒಲವನ್ನು ನಾವು ಸದಾ ಬಯಸಬೇಕು. ಒಲವೆಂದರೆ ಕುಟುಂಬ : ಕುಟುಂಬವೆಂದರೆ ಒಲವು.   ನಮ್ಮ ಹಿರಿಯರ ಬದುಕು ನಮಗೆ ಆದರ್ಶವಾದಾಗ ಮಾತ್ರ ನಮ್ಮ ಬದುಕು ಕೂಡ ನಮ್ಮ ಕಿರಿಯರಿಗೆ ಆದರ್ಶವಾಗಬಲ್ಲದು. ಅಂತಹ ಆದರ್ಶ ಬದುಕು ಸಾಧ್ಯವಾದಷ್ಟು ಕಟ್ಟಿಕೊಳ್ಳೋಣ ಕೌಟುಂಬಿಕ ಹಿರಿತನವನ್ನು ನಾವು ಜಗತ್ತಿಗೆ ತೋರಿಸೋಣ.


 ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ

ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ

ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ
 ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ

Leave a Reply

Back To Top