ಕರೊನ-ನೆಗಡಿ
ಜ್ಯೋತಿ ಡಿ.ಬೊಮ್ಮಾ
ಈಗ ಎಲ್ಲರೂ ಅಸ್ಪೃಶ್ಯರೆ ,ಒಬ್ಬರಿಂದ ಒಬ್ಬರು ದೂರ ಇರುವ ಅಸಹಾಯಕತೆ ತಂದೊಡ್ಡಿದ ಆ ಒಂದು ಚಿಕ್ಕ ವೈರಾಣುವಿಗೆ ಇಡೀ ಮನುಕುಲವೇ ಅಂಜಿ ನಡುಗುತ್ತಿದೆ. ಆಪ್ತವಾಗಬೇಕಿದ್ದ ಬಾಂಧವ್ಯಗಳು ಸಂಬಂಧಗಳು ಕರಗುತ್ತಿವೆ.ದೈಹಿಕ ಅಂತರ ಮನದಂತರವನ್ನು ದೂರಗೊಳಿಸುತ್ತಿದೆ ಒಬ್ಬರನ್ನೊಬ್ಬರು ಅನುಮಾನದಿಂದ ನೋಡಿಕೊಳ್ಳುತ್ತ ,ತಮ್ಮವರೊಡನೆಯೂ ಆಗಂತುಕರಂತೆ ಬದುಕುವಂತೆ ಮಾಡಿದ ಈ ಸಂದರ್ಭ ಯಾತಾನಾಮಯವಾಗಿದೆ.
ಮನೆಯಲ್ಲಿ ಎಲ್ಲರೊಡನೆ ಬೆರೆತು ಊಟ ತಿಂಡಿ ಮಾಡುತಿದ್ದರೂ ಒಳಗೆಲ್ಲ ಎಕಾಂಗಿ ಭಾವ ,ಎನೋ ತಳಮಳ ಹೇಳಿಕೊಳ್ಳಲಾಗದ ಅಸಹಾಯಕತೆ ,ಹಿಂದೆಂದೂ ಕಾಡಿರದ ಅನಿಶ್ಚಿತತೆ ಮನ ಕೊರೆಯುವಂತೆ ಮಾಡುತ್ತಿದೆ. ಇಡೀ ದೇಶವೆ ಒಂದು ಕಾರಾಗೃಹವಾಗಿ ಎಲ್ಲರ ಸ್ವಾತಂತ್ರ್ಯ ಹರಣವಾಗಿ ಈಗ ಅಕ್ಷರಶಃ ಎಲ್ಲರೂ ಕೈದಿಗಳೆ.
ಆಪತ್ತು ತಮ್ಮ ಮೇಲೆ ಯಾವಾಗ ಎರಗುವದೋ ಎಂಬ ಭಿತಿಯಲ್ಲಿ ದಿನಗಳನ್ನು ದೂಡುತ್ತ ಮತ್ತೆ ಮೊದಲಿನಂತೆ ಬದುಕು ಬಂಡಿ ಸಾಗಿಸುವ ದಿನಗಳ ಕನಸು ಕಾಣುತ್ತ ,ಕ್ಷಣಕೊಮ್ಮೆ ಬಣ್ಣ ಬದಲಾಯಿಸುವ ಭಾವನೆಗಳೊಂದಿಗೆ ಬೆರೆಯುತ್ತ ಇನ್ನೆಷ್ಟು ದಿನ ಹೀಗೆ ಎಂದು ಉತ್ತರವಿರದ ಪ್ರಶ್ನೆಗಳನ್ನು ಒಬ್ಬರಿಗೊಬ್ಬರು ಕೇಳುತ್ತ ದಿನ ದೂಡುವಂತಾಗಿದೆ.ಹಾಗೆ ನೋಡಿದರೆ ರೋಗ ಯಾರಿಗೂ ಹೊಸದಲ್ಲ .ರೋಗ ಇರದ ಮನುಷ್ಯ ನಿರಲು ಸಾಧ್ಯವೇ ,! ಕೆಮ್ಮು ನೆಗಡಿಯಂತ ಸಾಮಾನ್ಯ ರೋಗವೆ ರೋಕ್ಷವಾಗಿ ಬೆಳೆದು ಕಂಗೆಡುವಂತಾಗಿದೆ.
ನನಗೂ ನೆಗಡಿಗೂ ಅವಿನಾಭಾವ ಸಂಬಂಧ.ವರ್ಷದ ಎಲ್ಲಾ ದಿನಗಳು ಅದು ನನಗೆ ಆಪ್ತ.ಇಷ್ಟು ವರ್ಷಗಳ ಸಂಗಾತಿಯಾದ ಅದರ ಮೇಲಿನ ಮುನಿಸು ಮಾಯವಾಗಿ ಅದರ ಉಪದ್ರವ ಸಹಿಸಿಕೊಳ್ಳುವದು ಕಲಿತಿದ್ದೆನೆ.ಹತ್ತು ಹದಿನಾರು ವಸ್ತುಗಳ ಅಲರ್ಜಿ ಇರುವ ನನ್ನ ಶರಿರಕ್ಕೆ ಆ ವಸ್ತುವಿನ ಸಂಪರ್ಕಕ್ಕೆ ಬಂದ ತಕ್ಷಣ ಸೀನುಗಳು ಜ್ಞಾಪಿಸುತ್ತವೆ .ತಕ್ಷಣವೇ ಎಚ್ಚೆತ್ತುಕೊಂಡು ಆ ವಸ್ತುವಿನಿಂದ ದೂರವಿರುತ್ತೆನೆ .ಆದರೂ ನನ್ನ ಸೀನುಗಳು ಮುನಿದು ಆ ಮುನಿಸು ಹೊರಹಾಕದೆ ಬಿಡವು . ಮೊದಮೊದಲು ನನ್ನ ಅಲರ್ಜಿ ಸೀನುಗಳನ್ನು ಗಂಭಿರವಾಗಿ ಪರಿಗಣಿಸುತ್ತಿದ್ದ ಮನೆಯವರು ಈಗೀಗ ಅದೊಂದು ಸಾಮಾನ್ಯ ಪ್ರಕ್ರಿಯೆ ಎಂಬಂತೆ ಕಾಣತೊಡಗಿದ್ದಾರೆ ಹೀಗಾಗಿ ಸೀನುಗಳು ನನ್ನ ಉಸಿರಾಟದಷ್ಟೆ ಸಾಮಾನ್ಯವಾಗಿರುವವು ನನಗೆ.
ಆದರೆ ನಮ್ಮೆಜಮಾನರು ಇದಕ್ಕೆ ತದ್ವಿರುದ್ಧ ,ಒಂದೇ ಒಂದು ಸೀನು ಬಂದರು ಆಕಾಶವೆ ತಲೆ ಮೇಲೆ ಬಿದ್ದಂತೆ ಮೈ ಮುಖಕ್ಕೆಲ್ಲ ವಿಕ್ಸ ಬಳಿದುಕೊಂಡು ಮುಸುಕೆಳೆದು ಮಲಗಿಬೀಡೋರು. ಆ ರಂಪಾಟ ಮುಲುಗಾಟ ,ಮಾತ್ರೆಗಳು ಸಿರಪ್ ಗಳು, ಬಂದ ನೆಗಡಿಯನ್ನು ಆದಷ್ಟೂ ಬೇಗ ಓಡಿಸುವ ಧಾವಂತ ಆದರೂ ಜಪ್ಪಯ್ಯ ಎಂದರೂ ಜಗ್ಗದ ನೆಗಡಿ ಬಂದು ನಾಲ್ಕೈದು ದಿನ ಇದ್ದು ಆತಿಥ್ಯ ಸ್ವೀಕರಿಸಿಯೇ ಹೊಗುವದು.ಅದು ಇರುವವರೆಗೂ ಮನೆ ಒಂದು ಜಾತ್ರಯೇ ,ಬಿಸಿ ನೀರು ಕುಡಿಯುವದು ,ವಿಕ್ಸ ಹಾಕಿ ಹಬೆ ತೆಗೆದುಕೊಂಡು ಮುಖವೆಲ್ಲ ಕೆಂಪಗೆ ಮಾಡಿಕೊಂಡು ಹೋಂಕರಿಸುತ್ತ ,ಸೂರು ಹಾರಿಹೋಗುವಂತೆ ಸೀನುತ್ತ ಪರದಾಡುವದು ನೋಡಿದರೆ ನನಗೆ ಬರುವ ಸೀನುಗಳು ನಿರುಪದ್ರವಿಗಳೊ ಅಥವಾ ನಾನೇ ಅವುಗಳಿಗೆ ಒಗ್ಗಿಕೊಂಡಿರುವೆನೊ ತಿಳಿಯದು.
ನೆಗಡಿ ಯಾವಾಗಲೂ ಆಪ್ತ ಕಾಯಿಲೆ ,ಒಬ್ಬರಿಗೆ ಬಂದರೆ ಮತ್ತೊಬ್ಬರನ್ನು ಸೆಳೆಯುತ್ತದೆ.ಕಣ್ಣು ಮೂಗಿನಲ್ಲಿ ಸುರಿಯುವ ನೀರನ್ನು ಸೊರ್ ಸಿರ್ ಎಂದೆನಿಸುತ್ತ ಕೆಂಪೇರಿದ ಮುಖವನ್ನು ನೋಡಿದವರು ಅಯ್ಯೊ ಎಂದು ಅನುಕಂಪ ತೊರಿಸಿ ನಮಗಾಗಿ ಮರಗುವರು ,ಅಂತಹ ಸಂದರ್ಭದಲ್ಲಿ ನಮ್ಮ ಕೆಲಸ ಕಾರ್ಯ ಗಳಿಗೂ ವಿನಾಯ್ತಿ ದೊರಕಿಸಿ ಕೊಡುವರು.ಎದುರಿನವರ ಪ್ರೀತಿಯ ಸ್ಪಂದನೆಗೆ ಮುದವಾದ ಮನ ನೆಗಡಿಯನ್ನು ಅಪಾಯ್ಯಮಾನವಾಗಿ ಅಪ್ಪಿಕೊಳ್ಳುವದು.
ಕೆಲವರು ನೆಗಡಿ ಬಂದರೆ ಊಟ ತಿಂಡಿ ಬಿಟ್ಟು ಮುಷ್ಕರ ಹೂಡಿದಂತೆ ಇದ್ದು ಬಿಡುವರು.ನನಗೋ ನೆಗಡಿ ಬಂದರೆ ಬೇರೆ ದಿನಗಳಿಗಿಂತ ಹೆಚ್ಚಾಗಿ ತಿನ್ನುವ ಚಪಲವಾಗುತ್ತದೆ.ನೆಗಡಿಯಿಂದ ರುಚಿ ವಾಸನೆ ಕಳೆದುಕೊಂಡ ಗ್ರಂಥಿಗಳ ಚಿಗುರುವಿಕೆಗೆ ಹೊಸ ಬಗೆಯ ಖಾದ್ಯಗಳ ಸಮಾರಾಧನೆಯಾಗಲೆಬೇಕು .ಬೇರೆಲ್ಲಾ ರೋಗಗಳಿಗೆ ಉಟದಲ್ಲಿ ಪಥ್ಯ ಅನುಸರಿಸಿದರೆ ನೆಗಡಿಗೆ ಪಥ್ಯವೆ ಇಲ್ಲ.ಬಾಯಿ ರುಚಿ ಕೆಟ್ಟಿದೆಯೆಂದು ಹೇರಳವಾಗಿ ಉಪ್ಪು ಹುಳಿ ಖಾರದ ಅಡುಗೆಗಳು ಸಿಹಿ ಪದಾರ್ಥಗಳು ಎಗ್ಗಿಲ್ಲದೆ ಸೇವಿಸುತ್ತ ಹಾಗೆ ಸೀನುತ್ತ ,ಎಲ್ಲರಿಗೂ ನೆಗಡಿಯಾಗಿದೆ ಆರಾಮಿಲ್ಲ ಎಂದು ಹೇಳುತ್ತಲೆ ನೆಗಡಿಯನ್ನು ಪ್ರೀತಿಸುವ ಪ್ರತಿಯೊಬ್ಬರು ಇಲ್ಲಿವರೆಗೆ ನೆಗಡಿ ಒಂದು ರೋಗ ಎಂದು ಪರಿಗಣಿಸಿದ್ದೆ ಇಲ್ಲ.
ಯಾವಾಗಾ ಈ ಕರೋನ ಮಾರಿ ಕಾಲಿಟ್ಟಿತ್ತೊ ನನ್ನ ಪ್ರೀತಿ ಪಾತ್ರ ನೆಗಡಿ ಎಲ್ಲರ ಕಂಗೆಣ್ಣಿಗೆ ಗುರಿಯಾಯಿತು.ಈಗ ಪ್ರತಿಯೊಬ್ಬರ ಕೆಮ್ಮು ಸೀನುಗಳು ಅನುಮಾನದಿಂದ ನೋಡುವಂತಾಗಿದೆ.ಕೆಲವೊಮ್ಮೆ ಒಗ್ಗರಣೆಯಿಂದ ಬರುವ ಸೀನುಗಳನ್ನು ಪ್ರಯತ್ನ ಪೂರ್ವ ಕವಾಗಿ ತಡೆಹಿಡಿಯುವ ಮನಸ್ಸಾಗುತ್ತಿದೆ. ಯಾರಾದರೂ ಕೇಳಿದರೆ ಅನುಮಾನ ಪಟ್ಟುಕೊಳ್ಳುವರು ಎಂಬ ಭಯದಿಂದ.
ಮೊದಲೆಲ್ಲ ನೆಗಡಿಯಾದರೆ ಮನೆಯವರ ಅನುಕಂಪಕ್ಕೆ ಪಾತ್ರಳಾಗುತಿದ್ದ ನಾನು ,ಈಗ ಒಂದೇ ಒಂದು ಸೀನಿದರು ಎದುರಿನವರ ಕಣ್ಣಲ್ಲಿ ನೂರೆಂಟು ಪ್ರಶ್ನೆಗಳು ! ಅಂತಹುದರಲ್ಲಿ ಉಪದೇಶ ಬೇರೆ ,ಜಾಸ್ತಿ ಸೀನಬೇಡ ,ಯಾರಾದರು ಅಕ್ಕ ಪಕ್ಕದವರು ಕಂಪ್ಲೆಂಟ ಮಾಡಿದರೆ ಹೋಂ ಕಾರೈಂಟೈನ ನಲ್ಲಿ ಇರಬೇಕಾಗುತ್ತೆ ಎಂಬ ಅನುಮಾನ ಬೇರೆ.ಜೀವನವೆಲ್ಲ ಮನೆಯಲ್ಲೇ ಕಳೆಯುವ ನಾವು ಗೃಹಿಣಿ ಯರಿಗೆ ಮನೆ ಎಂದೂ ಬಂಧನ ಎನಿಸಿದ್ದೆ ಇಲ್ಲ. ಈಗ ಗೃಹಬಂಧನದಲ್ಲಿರುವ ಪುರುಷರಿಗೆ ಸ್ವಲ್ಪ ವಾದರೂ ಅರ್ಥ ವಾಗಿರಬೇಕು ,ದಿನವೆಲ್ಲ ಮನೆಯಲ್ಲಿ ಏನು ಮಾಡುತ್ತಿ ಎಂಬ ಪ್ರಶ್ನೆಯ ಉತ್ತರ.
ಇಲ್ಲಿಯವರೆಗ ನೆಗಡಿ ಕೆಮ್ಮಿಗೆ ಪ್ರತ್ಯಕವಾದ ಔಷಧ ಲಭ್ಯವಿಲ್ಲ.ಅದು ಸರದಿಯಂತೆ ಬರುತ್ತದೆ ನಿರ್ಗಮಿಸುತ್ತದೆ. ಸಭೆ ಸಮಾರಂಭ ಜಾತ್ರಗಳಲ್ಲಿ ಹಿಂಡು ಹಿಂಡಾಗಿ ಓಡಾಡುತ್ತ ಒಬ್ಬರ ಬೆನ್ನಿಂದ ಒಬ್ಬರು ಸೀನುತ್ತ ಸಂಚರಿಸುವ ನಾವು ,ಮತ್ತೊಬ್ಬರು ಸಮೀಪವಾಗಿರುವಾಗಲೂ ದೂರ ನಿಂತು ಸೀನಬೇಕೆಂಬ ಕಲ್ಪನೆಯು ಇರದೆ ಆಕ್ಷಿಇ ..ಎಂದು ಸೀನಿದಾಗಲೂ ಇದೊಂದು ಸಾಮನ್ಯ ಪ್ರಕ್ರಿಯೆ ಎಂಬಂತೆ ನೋಡಿದ ನಮಗೆ ಈಗಿನ ಸಾಮಾಜಿಕ ಅಂತರ ಅರಗಿಸಿಕೊಳ್ಳಲು ಹಿಂಸೆಯಾಗುತ್ತಿದೆ.
ಅದರೂ ಈ ಮಹಾಮಾರಿಯನ್ನು ನಿರ್ಮೂಲನೆ ಮಾಡಲು ಇವುಗಳನ್ನು ಅನುಸರಿಸದೆ ಬೇರೆ ದಾರಿಯಿಲ್ಲ.
ಮತ್ತೊಬ್ಬರಿಂದ ನಮಗೆ ರೋಗ ಅಂಟಬಾರದು ಎಂದು ತಗೆದುಕೊಳ್ಳುವ ಮುಂಜಾಗ್ರತೆಯೊಂದಿಗೆ ನಮಗೆ ಬಂದಿದ್ದನ್ನು ಮತ್ತೊಬ್ಬರಿಗೆ ಹರಡದಂತೆ ಎಚ್ಚರವಹಿಸುವದು ತುಂಬಾ ಮುಖ್ಯವಾಗಿದೆ.
**********************
Janan marna AA bhagvanthan kaiyali, kirti aste nam kaiyali. Geeli kachid hannu bhall ruchi ?
ಉತ್ತಮ ಲೇಖನ ಸಕಾಲಿಕ