ಹಾರು ಗರಿ ಬಿಚ್ಚಿ
ಡಾ.ಗೋವಿಂದ ಹೆಗಡೆ
ಏನಾದರೂ ಆಗಬೇಕು
ಬಾಂಬಿನಂತಹ ಏನೋ ಒಂದು
ಸ್ಫೋಟಿಸಿ ಹೊಗೆಯಲ್ಲಿ ಅಥವಾ
ಅಗ್ನಿಗೋಲದಲ್ಲಿ ಮರೆಯಾಗಿ
ಬೇಡ, ಚಾಚಿದ ಕಾಲಿಗೆ ಅಲ್ಲೆಲ್ಲೋ
ಮರಳಲ್ಲಿ ಓಡುವ ಇರುವೆ
ಕಚ್ಚಿ ‘ಹ್ಹಾ’ ಎಂದು
ಏನಾದರೂ ನಡೆಯಲಿ ಇಲ್ಲಿ ಈ
ನಿಷ್ಕ್ರಿಯತೆಯನ್ನು ಹೇಗೆ ಸಹಿಸುವುದು
+++
ನಿಷ್ಕ್ರಿಯತೆ ನಿರಾಕರಣೆಯೇ
ಅನುಭವವೇ ಆಭಾಸವೇ
ಅಲ್ಲೆಲ್ಲೋ ಕೋಗಿಲೆ ಕೂಗಿದೆ
ಹಕ್ಕಿ ಜೋಡಿ ಸಂಜೆ ಆಗಸವ
ಸೀಳಿ ಹಾರಿವೆ
ಎಲೆಯೊಂದು ಟಕ್ಕೆಂದು ತೊಟ್ಟು ಕಳಚಿದೆ
ತುಸು ಆಲಿಸಿದರೆ ಕೊಂಬೆಯೊಳಗೆ ಹರಿವ
ಜೀವರಸದ ಸದ್ದೂ ಕೇಳಬಹುದು
ಆದರೂ ಐಸಿಯು ನಲ್ಲಿರುವ ಬಾಲೆಯ
ಸ್ತಬ್ಧ ಕಣ್ಣುಗಳ ಶೂನ್ಯ ನೋಟ ಮಾತ್ರ…
+++
ಸೂರ್ಯ ಎಂದಿನಂತೆ ಬೆಳಗುತ್ತ
ಈ ಗಿಡ ಮರ ಎಲ್ಲ ಹಸಿರುಟ್ಟು ಬೀಗುತ್ತ
ಹೊಂಗೆ ಮತ್ತಾವುದೋ ಗಿಡ ಹೂತೇರು
ಕಟ್ಟಿ
ನಾನು ನಾಲ್ಕು ಗೋಡೆಗಳ ಒಳಗೆ
ಹರಿವ ನೀರಿಗೆ ಬಿಚ್ಚಿ ಹಾರಲಾರೆ
ಗುಡ್ಡ ಹತ್ತಲಾರೆ ಮರ ಏರಲಾರೆ
ಬಯಲಲ್ಲಿ ಕುಣಿಯಲಾರೆ
ಆಜೀವ ಶಿಕ್ಷೆಗೆ ಪಕ್ಕಾದ ಕೈದಿಯಂತೆ
ಗೋಡೆ ಬಾಗಿಲುಗಳ ನಿರುಕಿಸುತ್ತ..
+++
ಬೋಳು ರಸ್ತೆಗಳು ಹೆಜ್ಜೆ ಸದ್ದಿಗೆ
ತವಕಿಸಿರಬಹುದು ಪುಚ್ಚ ಕುಣಿಸಿ ಹಾರುವ
ಹಕ್ಕಿ ಓಡುತ್ತ ಏರುವ ನಡುವೆ ಗಕ್ಕನೆ ನಿಂತ
ಅಳಿಲಿಗೆ ಇರಬಹುದು ಅಗತ್ಯ
ನನ್ನ ನೋಟವೊಂದರ ಸಾಂಗತ್ಯ
ಮತ್ತೆ ಚಕ್ರ ತಿರುಗಿ ರಸ್ತೆ ಕಲಕಲ ಎನ್ನುವಾಗ
ಮರೆಯದೆ ಐಸಿಯು ನ ಆ ಬಾಲೆಯ
ಕೈಯಲ್ಲಿ ಕೈಯಿಡಬೇಕು
ಹೂ ರೆಪ್ಪೆಗಳ ಮೇಲೆ ಹಗೂ♪ರ
ಬೆರಳಾಡಿಸಿ ಪಿಸುಗುಡಬೇಕು
“ಏಳು ಮಗೂ, ಸರಿದಿದೆ ಮೋಡ
ಕಾದಿದೆ ಬಾನು ಹೋಗು ಹಾರು
ಗರಿ ಬಿಚ್ಚಿ…”
**********