ಕಲ್ಲು ಕರಗಿದ ಹೊತ್ತು-ಡಾ. ಪುಷ್ಪಾವತಿ ಶಲವಡಿಮಠ

ವಿಶೇಷ ಲೇಖನ

ಡಾ. ಪುಷ್ಪಾವತಿ ಶಲವಡಿಮಠ

ಕಲ್ಲು ಕರಗಿದ ಹೊತ್ತು

[ಕಲ್ಲು ಕರಗಿದ ಹೊತ್ತು

 ಕಲ್ಲಾದೆ ಏಕೆಂದು ಬಲ್ಲೆ

ಶಿವನೆ ಕಲ್ಲಾದೆ ಏಕೆಂದು ಬಲ್ಲೆ

ಆ ಗುಟ್ಟನ್ನು ಹೇಳಲೇನು ಇಲ್ಲೇ…?

                ದೇವಸ್ಥಾನದಗರ್ಭಗುಡಿಯಲ್ಲಿ ಶಿವನು ಕಲ್ಲಾಗಿ ಕುಳಿತುಕೊಂಡಿದ್ದಕ್ಕೆ ಕವಿ ನಾನಾ ರೀತಿಯಲ್ಲಿ ಕಾರಣ ನೀಡುತ್ತಾನೆ., ಮೇಲಿನ ಕವಿತೆಯಲ್ಲಿ. ಭಲೇ ಹುಚ್ಚ ಸಿನಿಮಾದಲ್ಲಿ ನಾಯಕನಾದ ಡಾ. ರಾಜ್‌ಕುಮಾರವರ ನಟನೆಯಲ್ಲಿ ತುಂಬಾ ಮಾರ್ಮಿಕವಾಗಿ ಈ ದೃಶ್ಯ ಚಿತ್ರೀಕರಣಗೊಂಡಿದೆ. ಕಲ್ಲಾಗುವಿಕೆ ಎಂದರೆ ಒಂದು ರೀತಿಯಲ್ಲಿ ತಟಸ್ಥವಾಗುವಿಕೆ. ಜಡವಾಗುವಿಕೆ. ಚೇತನರಹಿತ ಸ್ಥಿತಿಯೇ ಅದು. ಮಾನಸಿಕವಾಗಿ ಕಲ್ಲಾಗುವಿಕೆ ಭೌತಿಕ ಶರೀರದ ಮೇಲೂ ಸಾಕಷ್ಟು ಪರಿಣಾಮ ಉಂಟು ಮಾಡುತ್ತದೆ. ದೇಹಕ್ಕೂ ಮತ್ತು ಮನಸ್ಸಿಗೂ ಅಂತಹ ಸಂಬಂಧವಿರುತ್ತದೆ. ವೈಜ್ಞಾನಿಕವಾಗಿಯೂ ಸಹ ಮನಸ್ಸಿನ ಉಲ್ಲಸಿತ ಸ್ಥಿತಿ ದೇಹದ ಚಟುವಟಿಕೆಗಳನ್ನು ಉದ್ದೀಪನಗೊಳಿಸುತ್ತದೆ. ಮನಃಶಾಸ್ತ್ರವೂ ಸಹ ಇದನ್ನೇ ಬೋಧಿಸುತ್ತದೆ. ಆಧ್ಯಾತ್ಮದಲ್ಲು ಸಹ ಯೋಗ-ಧ್ಯಾನ-ತಪಸ್ಸುಗಳು ಮನಸ್ಸಿನ ಸ್ವಸ್ಥತೆಗಾಗಿ ಮೀಸಲಿವೆ. ಮನಸ್ಸಿನ ಕೇಂದ್ರಿಕರಣದಿಂದ ದೇಹದ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬಹುದು. ಜನರಲ್ಲಿ ತುಂಬಿರುವ ಅತಿಯಾದ ಆಸೆ, ಲಂಚ ನೀಡಿ ಕಾರ್ಯಸಾಧಿಸುವ ಸಮಯ ಸಾಧಕತೆ, ಭಕ್ತಿಯೂ ಕೂಡಾ ಸ್ವಾರ್ಥದಿಂದ ಕೂಡಿರುವಾಗ ಶಿವನು ಈ ಪಾಪಿಗಳ ಕೈಗೆ ಸಿಗಬಾರದೆಂದು ಕಲ್ಲಾಗಿದ್ದಾನೆ. ಮನಸ್ಸು ಒಂದೆಡೆ, ಕಣ್ಣು ಒಂದೆಡೆ ಪೂಜೆ ಹೆಸರಿಗೆ ಮಾತ್ರ ನಡೆದಿದೆ. ಶಿವನಿಗೆ ನೈವೇದ್ಯ ನೆಪ ಮಾತ್ರ. ಭಕ್ಷಣೆ ಅವರೆದೇ. ಶಿವನೇನಾದರೂ ತಿನ್ನಲು ಬಂದರೇ ಶಿವನನ್ನೇ ಗುಡಿಯಿಂದ ಹೊರ ಹಾಕುವ ಡಾಂಭಿಕ ಜನರಿರುವಾಗ ಅವರಿಂದ ತಪ್ಪಿಸಿಕೊಳ್ಳಲು ಶಿವನು ಕಲ್ಲಾಗಿದ್ದಾನೆ. ದೇವರ ಹೆಸರಿನಲ್ಲಿ ಸುಲಿಗೆಯೇ ನಡೆದಿರುವಾಗ ಶಿವನು ನೋಡಲಾರದೇ ಕಣ್ಮುಚ್ಚಿಕೊಂಡು ಕಲ್ಲಾಗಿ ಕುಳಿತುಕೊಂಡಿದ್ದಾನೆ, ಎಂಬ ಸಾರವನ್ನು ಕವಿತೆ (ಹಾಡು) ಸಾಕ್ಷೀಕರಿಸುತ್ತಾ ಸಾಗುತ್ತದೆ.

                ರಾಮಾಯಣದಲ್ಲಿ ಗೌತಮ ಮಹರ್ಷಿಗಳ ಪತ್ನಿ ಅತಿಲೋಕ ಸುಂದರಿಯಾದ ’ಅಹಲ್ಯೆ’ ಯೂ ಕಲ್ಲಾಗುತ್ತಾಳೆ. ಅವಳು ಶಾಪದಿಂದಲೇ ಕಲ್ಲಾದಳೋ..?! ಲೋಕದ ಕಟು ನಿಂದನೆಗಳು ಅವಳನ್ನು ಕಲ್ಲಾಗಿಸಿದವೋ..?! ಒಟ್ಟಿನಲ್ಲಿ ಅಹಲ್ಯೆಯು ಕಲ್ಲಾಗುವ ಕ್ರಿಯೆಗೆ ಒಳಗಾಗುವುದು ಮನಸ್ಸಿನ ಯಾವುದೋ ಮೂಲೆಯಲ್ಲಿ ಸಣ್ಣದಾಗಿ ಕುಟುಕುತ್ತಲ್ಲೇ ಇರುತ್ತದೆ. ಲೋಕ ವ್ಯವಹಾರಗಳು ಶಿವನಂತೆ ಅಹಲ್ಯೆಯನ್ನೂ ಕಲ್ಲಾಗಿಸಿರಬಹುದೇ?! ಎಂಬ ಪ್ರಶ್ನೆ ಮೂಡುತ್ತದೆ.

                ಪುರುಷ ಪ್ರಧಾನ ವ್ಯವಸ್ಥೆ ತುಂಬಾ ಸಲೀಸಾಗಿ ಹೆಣ್ಣಿನ ಮೇಲೆ ತಪ್ಪುಗಳ ಹೊರೆಯನ್ನು ಹೊರೆಯಿಸಿ ಬಿಡುತ್ತದೆ. ಸದಾ ದ್ವಿತೀಯ ದರ್ಜೆಯ ಪ್ರಜೆಯಾಗಿಯೇ ನಡೆಸಿಕೊಂಡು ಬಂದ ಸಾಮಾಜಿಕ ವ್ಯವಸ್ಥೆ ಆ ಹೆಣ್ಣಿನಲ್ಲಿರುವ ಜೀವಂತ ಮನಸ್ಸನ್ನು ಕಲ್ಲಾಗಿಸುತ್ತಲೇ ಬಂದಿದೆ. ಆದರ್ಶತೆಯ ಕಾರಣದಿಂದ ಮರ್ಯಾದಾ ಪುರುಷ ಶ್ರೀ ರಾಮ ಮಾತೆ ಸೀತೆಯನ್ನು ಕಾಡಿಗಟ್ಟಿ ಅವಳನ್ನು ಕಲ್ಲಾಗಿಸಿದ. ಧರ್ಮದ ಹೆಸರಿನಲ್ಲಿ ಧರ್ಮರಾಯ ದ್ರೌಪದಿಯನ್ನು ಜೂಜಾಟದಲ್ಲಿ ಒತ್ತೆ ಇಟ್ಟು ಅವಳನ್ನು ಕಲ್ಲಾಗಿಸಿದ. ಪ್ರತಿಷ್ಠೆಗಾಗಿ ಯಯಾತಿ ಮಗಳಾದ ಮಾಧವಿಯನ್ನು ಕುದುರೆಯ ಬದಲಾಗಿ ’ಗಾಲವ’ ಋಷಿಗೆ ಕಾಣಿಕೆಯಾಗಿ ನೀಡಿ ಕಲ್ಲಾಗಿಸಿದ. ತುಂಬಿದ ಸಭೆಯಲ್ಲಿ ದುಷ್ಯಂತ ಮಹಾರಾಜ ಶಕುಂತಲೆಗೆ ನೀನು ನನ್ನ ಪತ್ನಿಯೇ ಅಲ್ಲವೆಂದು ಹೇಳಿಕೆ ನೀಡಿ ಕಲ್ಲಾಗಿಸಿದ. ಅರ್ಜುನ ಪತಿವ್ರತಾ ಶಿರೋಮಣಿಯಾದ ಚಿತ್ರಾಂಗದೆಯನ್ನು ಜಾರಿಣಿ ಎಂದು ಕರೆದು ಕಲ್ಲಾಗಿಸಿದ. ಪುರುಷ ಇತಿಹಾಸದಲ್ಲಿ ಹೀಗೆ ಹೆಣ್ಣನ್ನು ಕಲ್ಲಾಗಿಸುವ ಕ್ರಿಯೆ ನಿನ್ನ ಮೊನ್ನೆಯದಲ್ಲಾ.

                ಇಂದ್ರನ ಕಾಮಕ್ಕೆ ಬಲಿಯಾದ ಅಹಲ್ಯೆಯದೂ ಇದೇ ಸ್ಥಿತಿ ಕಲ್ಲಾಗುವಿಕೆಯ ಹಂತ. ಹೆಣ್ಣಿನ ಸೌಂದರ್ಯವೂ ಅವಳಿಗೆ ಮಾರಕವಾಗುವ ಸ್ಥಿತಿ ತುಂಬಾ ವಿಚಿತ್ರವಾದುದೇ ಸರಿ. ಕುರೂಪಿಯಾದ ’ಹೆಣ್ಣು’ ತಿರಸ್ಕಾರಕ್ಕೆ ಗುರಿಯಾಗಿ ಒಂದು ರೀತಿಯಲ್ಲಿ ಮಾನಸಿಕ ಹಿಂಸೆ ಅನುಭವಿಸಿದರೇ, ಸುರೂಪಿಯಾದ ಹೆಣ್ಣು ಇನ್ನೊಂದು ರೀತಿಯಲ್ಲಿ ಮಾನಸಿಕ ಹಿಂಸೆ ಅನುಭವಿಸುತ್ತಿರುತ್ತಾಳೆ. ಒಟ್ಟಿನಲ್ಲಿ ಕುರೂಪತನವು, ಸುರೂಪತನವು ಯಾವುದಾದರೂ ಹೆಣ್ಣಿನ ಪಾಲಿಗೆ ಯಾತನಮಯವಾಗಿರುತ್ತದೆ., ಎಂಬುದಕ್ಕೆ ಕಲ್ಲಾಗುವ ಅಹತ್ಯೆಯೇ ಸಾಕ್ಷಿಯಾಗುತ್ತಾಳೆ. ಕುರೂಪಿ, ಸುರೂಪಿ ಎಂಬುದಕ್ಕಿಂತ ವ್ಯಕ್ತಿತ್ವಕ್ಕೆ ಗೌರವ ಸಿಗುವ ಕಾಲ ಹೆಣ್ಣಿನ ಪಾಲಿಗೆ ಮರೀಚಿಕೆಯಂತಾಗುತ್ತಿರುವದಂತೂ ಸತ್ಯವಾದ ಸಂಗತಿ.

                ವಿಶ್ವಾಮಿತ್ರ ಮಹರ್ಷಿಗಳೊಂದಿಗೆ ರಾಮ, ಲಕ್ಷ್ಮಣರು ತಾಟಕೀಯ ಮಕ್ಕಳಾದ ಮಾರೀಚ, ಸುಬಾಹು ರಾಕ್ಷಸರ ಸಂಹಾರಕ್ಕೆಂದು ಬರುತ್ತಾರೆ. ವಿಶ್ವಾಮಿತ್ರ ಮಹರ್ಷಿಗಳು ಮಾಡುತ್ತಿರುವ ಯಾಗವನ್ನು ಈ ರಕ್ಕಸರು ಭಗ್ನಗೊಳಿಸುವರೆಂದು, ಯಾಗ ಪೂರ್ತಿಗೊಳ್ಳಬೇಕಾದರೆ ರಾಕ್ಷಸರ ಸಂಹಾರ ಅನಿವಾರ್ಯವಾಗಿತ್ತು. ಈ ಕಾರಣಕ್ಕಾಗಿ ವಿಶ್ವಾಮಿತ್ರನೊಂದಿಗೆ ಕಾಡಿಗೆ ಬಂದ ರಾಮ-ಲಕ್ಷ್ಮಣರು ಆ ರಾಕ್ಷಸರನ್ನು ವಧಿಸುತ್ತಾರೆ. ಮುಂದೆ ವಿಶ್ವಾಮಿತ್ರರ ಮಾತಿನಂತೆ ಮಿಥಿಲಾ ಪಟ್ಟಣದಲ್ಲಿ ಜನಕ ಮಹಾರಾಜನು ಮಹಾಯಜ್ಞ ಮಾಡುವ ಕಾರ್ಯದಲ್ಲಿ ಪಾಲ್ಗೋಳ್ಳಲು ಹೊರಡುತ್ತಾರೆ. ಮಿಥಿಲಾ ನಗರಕ್ಕೆ ಹೊಗುವ ಕಾಡಿನ ಮಾರ್ಗ ಮಧ್ಯದಲ್ಲಿಯೇ ಶಾಪಕ್ಕೆ ಒಳಗಾದ ಮಹಾಮೌನಿ ಅಹತ್ಯೆಯು ಶಿಲೆಯ ರೂಪದಲ್ಲಿ ಕಾಣಿಸಿಕೊಳ್ಳುವ ಪ್ರಸಂಗ ರಾಮಾಯಣದಲ್ಲಿ ಅತ್ಯಂತ ಚಿಕ್ಕ ಭಾಗವಾಗಿ ಮೈದೋರಿದೆ. ಆದರೆ ಅಹಲ್ಯೆಯ ಮೌನ ರೋಧನ ದಟ್ಟವಾಗಿ ಕಾಡುತ್ತದೆ.

                ವಾಲ್ಮೀಕಿ ರಾಮಾಯಣದ ’ಅಹಲ್ಯೆ’ಗೂ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಕಾಣಿಸಿಕೊಳ್ಳುವ ’ಅಹಲ್ಯೆ’ಗೂ ಸಾಕಷ್ಟು ವ್ಯತ್ಯಾಸವಿದೆ. ವಾಲ್ಮೀಕಿ ರಾಮಾಯಣದಲ್ಲಿ ಅಹಲ್ಯೆ, ಗೌತಮ ಋಷಿಯ ವೇಷದಲ್ಲಿ ಬಂದವನು ಇಂದ್ರದೇವನೆಂದು ಗೊತ್ತಾದರೂ ಮೌನವಾಗಿ ಅವನೊಂದಿಗೆ ರತಿಕ್ರಿಯೆಗೆ ಇಳಿಯುವ ಸಂಗತಿ ಉಲ್ಲೇಖಿತವಿದೆ. ಆದರೆ ಕುವೆಂಪು ಕಾವ್ಯದಲ್ಲಿ ಅತ್ಯಂತ ಧರ್ಮ ಸಮ್ಮತವಾದ ಘಟನೆ ಉಲ್ಲೇಖಿತವಾಗಿದೆ.

ಕಾಂತಿಯುಕ್ತವಾದ ಆಶ್ರಮದಂತೆ ಕಾಣುತ್ತ ಋಷಿಗಳಿಂದ ಶೂನ್ಯವಾದ ಈ ಸ್ಥಳ ಯಾವುದು? ಎಂದು ವಿಶ್ವಾಮಿತ್ರನನ್ನು ಶ್ರೀ ರಾಮನು ಕೇಳುವ ಪ್ರಶ್ನೆ ವಾಲ್ಮೀಕಿ ರಾಮಾಯಣದಲ್ಲಿ ತೀರಾ ಸಾಮಾನ್ಯವಾದ, ಶುಷ್ಕವಾದ ಘಟನೆಯಂತೆ ಕೇಳಿ ಬರುತ್ತದೆ. ಆದರೆ ಕುವೆಂಪುರವರು ’ಅಹಲ್ಯ ಪ್ರಸಂಗ’ಕ್ಕೆ ಅತ್ಯಂತ ಶ್ರೇಷ್ಠವಾದ ಮಾನವೀಯತೆಯ ಸ್ಪರ್ಶ ನೀಡುತ್ತಾರೆ. ಹೆಣ್ಣಿನ ಹತಾಶೆ, ನಿರಾಶೆ, ಅಸಹಾಯಕಥೆಗೆ ಕರುಣೆಯ ಹಸ್ತ ಚಾಚುತ್ತಾರೆ.

                ವಾಲ್ಮೀಕಿ ರಾಮಾಯಣದಲ್ಲಿ ದುರ್ಬುದ್ಧಿಯಿಂದ ಅಹಲ್ಯೆ ದೇವೇಂದ್ರನಲ್ಲಿ ಆಸಕ್ತಳಾಗಿ ಅವನೊಂದಿಗೆ ಕೂಡಿದಳು ಎಂಬುದು ವಿಷದಿಕೃತವಾಗಿದೆ. ಮುಂದೆ ಇದನ್ನರಿತ ಗೌತಮ ಮುನಿಗಳು ಅಹಲ್ಯೆಯನ್ನೂ, ಇಂದ್ರನನ್ನೂ ಶಪಿಸುತ್ತಾರೆ. ತಪ್ಪು-ಒಪ್ಪುಗಳಿಗಿಂತ ನೀತಿಶಾಸ್ತ್ರಗಳ ಚೌಕಟ್ಟು ಅಹಲ್ಯಯನ್ನು ಕಳಂಕಿನಿಯಾಗಿಯೇ ನಿರೂಪಿಸುತ್ತವೆ.

                ಎಲೈ ದುರ್ಬುದ್ಧಿಯುಳ್ಳವನೇ ನೀನು ನನ್ನಂತೆ ರೂಪವನ್ನು ತಾಳಿ ಮಾಡಬಾರದ ಈ ಕೆಲಸವನ್ನು ಮಾಡಿರುತ್ತೀಯೇ ಆದ್ಧರಿಂದ ನಿನ್ನ ವೃಷಣಗಳು ಇಲ್ಲದೇ ಹೋಗಲಿ ಎಂದು ಇಂದ್ರವನ್ನು ಗೌತಮ ಮುನಿಗಳು ಹೀಗೆ ಶಪಿಸುವರೆಂದು, ಅಹಲ್ಯೆಗೆ –  ನೀನು ಇಲ್ಲಿ ಅನೇಕ ಸಹಸ್ರ ವರ್ಷ ಕಾಲ ವಾಯುಭಕ್ಷಕಳಾಗಿ ಮತ್ತೆ ಯಾವ ಆಹಾರವೂ ಇಲ್ಲದೆ ಭಸ್ಮದಲ್ಲಿ (ಧೂಳಿನಲ್ಲಿ) ಮಲಗಿದ್ದು, ಎಲ್ಲ ಪ್ರಾಣಿಗಳಿಗೂ ಅದೃಶ್ಯಳಾಗಿದ್ದು ಈ ಆಶ್ರಮದಲ್ಲಿಯೇ ಇರು. ಘೋರವಾದ ಈ ವನಕ್ಕೆ ಮಹಾಪರಾಕ್ರಮಿಯೂ ದಶರಥರಾಜನ ಪುತ್ರನೂ ಆದ ರಾಮನು ಯಾವಾಗ ಬರುವನೋ ಆಗ ನೀನು ಪರಿಶುದ್ಧಳಾಗುವೆ. ಎಲೈ ದುಷ್ಟಜಾರಿಣಿಯೇ ನೀನು ಆತನನ್ನು ಸತ್ಕರಿಸಿದ ಮೇಲೆ, ಲೋಭ, ಮೋಹಗಳನ್ನು ತ್ಯಜಿಸಿ ನಿನ್ನ ಹಿಂದಿನ ರೂಪವನ್ನು ಪಡೆದು ನನ್ನ ಸಮೀಪಕ್ಕೆ ಬಂದು ಸೇರುವೆ. ಎಂದು ಗೌತಮ ಮುನಿ ಶಪಿಸುವರೆಂದು ಉಲ್ಲೇಖವಿದೆ. (ಕನ್ನಡ ವಾಲ್ಮೀಕಿ ರಾಮಾಯಣ : ಡಾ. ಸಿ.ಎನ್. ಶ್ರೀನಿವಾಸ ಅಯ್ಯಂಗಾರ್, ಪು.ಸಃ ೧೧೮-೧೧೯ ಸರ್ಗ-೪೮)

ಹೀಗೆ ಅಹಲ್ಯೆ ವಾಲ್ಮೀಕಿ ರಾಮಯಣದಲ್ಲಿ ದುರ್ಬುದ್ಧಿಯವಳು, ಕಳಂಕಿನಿ, ದುಷ್ಟಜಾರಿಣಿ ಎಂದು ತಿರಸ್ಕೃತಳಾಗಿದ್ದಾಳೆ. ಅದರೆ ರಾಮನಿಂದ ಪತಿತೆಯಾದವಳು ಪಾವನಳಾಗುತ್ತಾಳೆ ಎಂಬ ಚಿತ್ರಣವಿದೆ. ಅವಳ ದೈವಿಕ ರೂಪದ ವರ್ಣನೆಯೂ ಅಮೋಘವಾಗಿದೆ. ಬ್ರಹ್ಮನು ಬಹಳ ಕಷ್ಟಪಟ್ಟು ಸೃಷ್ಠಿಸಿದ ದೇವಲೋಕದ ಮಾಯಾ ಸ್ವರೂಪಿಣಿಯಂತೆಯೂ, ಮಂಜಿನಿಂದಲೂ, ಮೋಡಗಳಿಂದಲೂ ಆವೃತವಾದ ಪೂರ್ಣಚಂದ್ರನ ಕಾಂತಿಯಂತೆಯೂ ಹೊಗೆಯಿಂದ ಆವೃತವಾದ ಉರಿಯುವ ಅಗ್ನಿಜ್ವಾಲಯಂತೆಯೂ ನೀರಿನ ಮಧ್ಯದಲ್ಲಿ ನೋಡಲಸಾಧ್ಯವಾದ ಹೊಳೆಯುವ ಸೂರ್ಯನ ಪ್ರಭೆಯಂತೆಯೂ ಅಹಲ್ಯೆ ಇದ್ದಳು ಎಂಬ ಚಿತ್ರಣವಿದೆ.

                ರಾಮನ ಆಗಮನದವರೆಗೂ ಅಹಲ್ಯೆ ಮೂರು ಜಗತ್ತಿನ ಕಣ್ಣಿಗೂ ಅದೃಶ್ಯಳಾಗಿಯೇ ಇದ್ದಳು ಎಂಬುದು ವಾಲ್ಮೀಖಿ, ಕುವೆಂಪು ಇಬ್ಬರಲ್ಲೂ ವ್ಯಕ್ತವಾಗಿದ್ದರೂ, ದೃಷ್ಟಿಕೋನಗಳಲ್ಲಿ ವ್ಯತ್ಯಾಸವಿದೆ.

                ಅಹಲ್ಯೆಯನ್ನು ವಾಲ್ಮೀಖಿ ದುರ್ಬುದ್ಧಿಯವಳು, ದುಷ್ಟ ಜಾರಿಣಿ ಎಂದು ಸಂಬೋಧಿಸಿದರೆ, ಕುವೆಂಪುರವರು ಅಹಲ್ಯೆಯನ್ನು ’ಶಿಲಾತಪಸ್ವಿನಿ’ ಎಂದು ಸಂಬೋಧಿಸುವುದು ಅತ್ಯಂತ ಹೃದಯಸ್ಪರ್ಶಿಯಾಗುತ್ತದೆ. ತಪಸ್ವಿನಿ ಎಂಬ ಶಬ್ದವು ಅಹಲ್ಯೆಯ ಸಹನೆಯನ್ನು ಎತ್ತಿ ಹೇಳುತ್ತದೆ.

                ಅಹಲ್ಯೆಯಲ್ಲಿ ದೈವೀಗುಣವನ್ನೇ ಕಾಣುವ ಕುವೆಂಪು ಎಲ್ಲಿಯೂ ಆ ಪಾತ್ರಕ್ಕೆ ಅಪಚಾರವನ್ನು ಎಸಗಿಲ್ಲ. ಮಹಿಳೆಯನ್ನು ಗೌರವದಿಂದ ಆದರಿಸಿ ನಡೆಸಿಕೊಳ್ಳುವ ಮನಸ್ಥಿತಿ ಕುವೆಂಪು ಮಹಾಕಾವ್ಯದಲ್ಲಿ ದರ್ಶಿಸಿದಾಗ ಎಲ್ಲೋ ಒಂದೆಡೆ ನೆಮ್ಮದಿಯಾಗುತ್ತದೆ. ಇಂದ್ರನೆಂಬ ಪುರುಷ ಶ್ರೇಷ್ಠನ ವಂಚನೆಗೆ ಅಹಲ್ಯೆ ಬಲಿಯಾಗುವುದು, ಅಲ್ಲದೆ ಕಾವ್ಯದ ಉದ್ದಕ್ಕೂ ಅಹಲ್ಯೆ ಪ್ರಶ್ನಾತೀತಳಾಗಿ ಉಳಿಯುವುದು ಕಂಡುಬರುತ್ತದೆ ಇದರಿಂದ ಅವಳು ಪತಿತೆಯಾಗಿಯೇ ಕಾಣಿಸಿಕೊಳ್ಳುತ್ತಾಳೆ. ಅಹಲ್ಯೆ ವಂಚನೆಗೆ ಒಳಗಾಗುವುದು ಪುರುಷನಿಂದನೇ ಪಾವನಳಾಗುವುದು ಪುರುಷನಿಂದಲೇ ಹೀಗೆ ಒಟ್ಟಿನಲ್ಲಿ ಹೆಣ್ಣು ಪುರುಷನಿಂದಲೇ ಮುಕ್ತಿ ಯೋಗ್ಯಳು ಎಂಬುದೇ ಶಾಸನವಾಗಿದೆ. ಶಂಕಿಸಲ್ಪಡುವುದು, ಶಪಿಸಲ್ಪಡುವುದು., ಭೋಗಕ್ಕೆ ಒಳಗಾಗುವದು ಶೋಷಣೆಗೆ ಒಳಗಾಗುವುದು ಎಲ್ಲವೂ ಪುರುಷನಿಂದಲೇ ಕೊನೆಗೆ ಅವಳ ಉದ್ಧಾರ, ಮೋಕ್ಷ, ಮುಕ್ತಿಯೂ ಪುರುಷನಿಂದಲೇ ಹೀಗೆ ಇತಿಹಾಸದುದ್ದಕ್ಕೂ ಹೆಣ್ಣು ಸ್ವಂತಿಕೆ ಇಲ್ಲದೇ ಬಾಳಿದ್ದು ಮಾತ್ರ ದುರಂತ.

ಕುವೆಂಪುರವರ ಮಹಾಕಾವ್ಯದಲ್ಲಿ ಈ ಘಟನೆ ಮಾನವೀಯ ನೆಲೆಯ ಉತ್ತುಂಗದಲ್ಲಿ ವಿವೇಕಿಸಲ್ಪಟ್ಟಿದೆ. ಗೌತಮ ಮಹಾ ಮುನಿಯ ಶಾಪದಿಂದ ಶತಮಾನಗಳ ಕಾಲ ಜಡರೂಪಿನಿಂದ ನಿಷ್ಠುರ ಶಿಲಾತಪಸ್ವಿನಿಯಾಗಿ, ಕನಿಕರದ ಕಣ್ಣಿಗೆ ಹೊರೆತಾಗಿ, ಜಗತ್ತಿನ ನಿರ್ದಾಕ್ಷಿಣ್ಯ ಮರೆಯುವಿಕೆಗೆ ತುತ್ತಾಗಿ, ವಜ್ರಮೌನದ ನಿದ್ರೆಯಿಂದ ಏಳಬೇಕೆಂದು ಬಯಸುತ್ತ, ಅಹಲ್ಯೆಯು ಮಲಗಿದ್ದ ಆ ಪುಣ್ಯಕ್ಷೇತ್ರವನ್ನು… ಹೀಗೆಂದು ಕುವೆಂಪು ಉಲ್ಲೇಖಿಸುವಲ್ಲಿ ಒಂದು ಮಾನವಪರ ನೋಟ, ಸ್ಪರ್ಶ ಇದೆ. ನಿಜ ಅಹಲ್ಯೆ ಮಾಡದ ತಪ್ಪಿಗೆ ಮಹಾಮುನಿಯಿಂದ ಶಪಿಸಿಕೊಳ್ಳಲ್ಪಟ್ಟಳು, ಜಮದಗ್ನಿ ಮುನಿ ಮುನಿದು ರೇಣುಕೆಗೆ ಶಪಿಸಿದಂತೆ. ಶಾಪದಿಂದ ರೇಣುಕೆ ಕುಷ್ಠರೋಗಕ್ಕೆ ತುತ್ತಾಗುವಂತೆ ಅಹಲ್ಯೆ ಶತಮಾನಗಳ ಕಾಲ ಜಡರೂಪ ತಾಳಿದಳು. ತನ್ನೆಲ್ಲಾ ಆಸೆ-ಭಾವಗಳು-ಕನಸುಗಳನ್ನು ಸೆರಗಂಚಿನಲ್ಲಿ ಕಟ್ಟಿಕೊಂಡು ನಿಷ್ಠುರ ಶಿಲಾತಪಸ್ವಿನಿಯೇ ಆದಳು. ಜಾರಿಣಿ ಎಂದು ಪತಿಯಿಂದಲೇ ಹೀಯಾಳಿಸಲ್ಪಟ್ಟಾಗ ಜಗತ್ತಿನ ಕಣ್ಣಿಗೆ ಕನಿಕರವಿರಲು ಸಾಧ್ಯವೇ? ನಾಲಿಗೆಗೆ ಆಹಾರವಾಗದಿರಲು ಸಾಧ್ಯವಾದಿತೆ? ಹೀಗಾಗಿ ಕಣ್ಣಿಗೆ ಹೊರತಾಗಿ ಜಗತ್ತಿನ ನಿರ್ದಾಕ್ಷಿಣ್ಯ ಮರೆಯುವಿಕೆಗೆ ತುತ್ತಾಗುವ ದುರಂತ ಅವಳಿಗೆ ಒದಗುತ್ತದೆ. ಇದರಿಂದ ದೇಹ, ಮನಸ್ಸು ಕಲ್ಲಾಗಿ ವಜ್ರಮೌನ ಆವರಿಸಿಕೊಳ್ಳುತ್ತದೆ. ಇಂತಹ ಪರಿಸ್ಥಿತಿಗೆ ಒಳಗಾದ ಹೆಣ್ಣು ಮಕ್ಕಳ ಮನಸ್ಸಿಗೆ ಸ್ವಲ್ಪ ಹಿತ ತೋರುವ, ಕಾಳಜಿ ವಹಿಸುವ ಮನಸ್ಸಿನ ಅಗತ್ಯ ಇದೆ. ಸಮಾಜ್ಯದಲ್ಲಿ ಅತ್ಯಾಚಾರದಂತಹ ಅಮಾನವೀಯ ಕೃತ್ಯಕ್ಕೆ ಬಲಿಪಶುವಾಗುವ ಹೆಣ್ಣು ಮಕ್ಕಳನ್ನು ಇವತ್ತಿಗೂ ನಮ್ಮ ಭಾರತೀಯ ಸಮಾಜ ಯಾವ ದೃಷ್ಠಿಕೋನದಿಂದ ನೋಡುತ್ತಿದೆ? ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳು ಬದುಕನ್ನು ಧಿಕ್ಕರಿಸಿ ಸಾವಿಗೆ, ಅತ್ಯಹತ್ಯೆಗೆ ಶರಣಾಗುತ್ತಿರುವ ಹಿನ್ನಲೆ ಇದೆ ಇರಬಹುದು. ಪ್ರಜ್ಞಾವಂತ ಭಾರತದಲ್ಲಿ ಪ್ರಜ್ಞಾವಂತ ಮನಸ್ಸುಗಳ ಕೊರತೆ ಬಹುವಾಗಿ ಇದೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣಿನ ಕುರಿತು ತುಂಬಾ ಅವಹೇಳನಕಾರಿ ಹೇಳಿಕೆಗಳು ಪ್ರಜ್ಞಾವಂತ ವಲಯದಿಂದ ಬರುತ್ತಿರುವುದು ಮನಸ್ಸನ್ನು ವಿಚಲಿತಗೊಳಿಸುತ್ತಿದೆ. ಅತ್ಯಾಚಾರದಂತಹ ಹೀನಕೃತ್ಯ ಮಾಡುವ ಪುರುಷ ವರ್ಗಕ್ಕೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತೊ..? ಇಲ್ಲವೋ..? ಗೊತ್ತಿಲ್ಲ. ಆದರೆ ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳಂತೂ ನಿತ್ಯವೂ, ಕ್ಷಣಕ್ಷಣವೂ ಅವಮಾನದಿಂದ ತಲೆ ತಗ್ಗಿಸಿ ಶಿಕ್ಷೆಗೆ ಗುರಿಯಾಗುತ್ತಲೇ, ಬದುಕಿರುವಾಗಲೇ ಸತ್ತಂತೆ ಬದುಕುವ ಹೀನಾಯ ಸ್ಥಿತಿಗೆ ಬಂದು ಬಿಡುತ್ತಾಳೆ. ಬದುಕು ಅವಳ ಪಾಲಿಗೆ ಸಾವಿಗಿಂತಲೂ ಕ್ರೂರವಾಗಿ ಅವಳು ಆತ್ಮಹತ್ಯೆಗೆ ಒಳಗಾಗುವ ಘಟನೆ ಸಂಭವಿಸುತ್ತದೆ. ಹೀಗಾಗಿ ಇದು ಒಬ್ಬ ಅಹಲ್ಯೆಯ ಕಥೆಯಲ್ಲ ನೂರಾರು ಅಹಲ್ಯೆಯರ ಬದುಕಿನ ವ್ಯಥೆಯೂ ಹೌದು. ಕುವೆಂಪು ರಾಮಾಯಣದಲ್ಲಿ ಅಹಲ್ಯೆಯಿದ್ದ ತಾಣ ರಾಮನಿಗೆ ಕ್ಷಣಕ್ಷಣವೂ ದುಃಖವನ್ನುಂಟು ಮಾಡುತ್ತದೆ. ಕಲ್ಲು-ಕಲ್ಲುಗಳಿಂದಲೂ, ಮರ-ಮರಗಳ ಹೃದಯಗಳಿಂದಲು ಆರ್ತನಾದವು ಮೂಡಿ ಬಂದಂತೆ ರಾಮನಿಗೆ ಕೇಳಿಸುತ್ತದೆ. ಅವನ ಎದೆಯು ನಿಟ್ಟುರಿಸಿನಿಂದ ಭಾರವಾಗುತ್ತದೆ. ಶಿಲಾತಪಸ್ವಿನಿಯಾದ ಅಹಲ್ಯೆಗೆ ರಾಮನ ಚರಣ ಸ್ಪರ್ಶವಾಯಿತೋ..?! ಅವನ ಹೃದಯ ಸ್ಪರ್ಶವಾಯಿತೋ..?! ಅರಿತವರ‍್ಯಾರು? ಒಟ್ಟಿನಲ್ಲಿ ಆ ಪ್ರೇಮ ಸಾಮಿಪ್ಯಕ್ಕೆ ಕರಿಬಂಡೆಯು ಕರಗಿತು. ಪ್ರೇಮ ಮಾನವೀಯತೆಗೆ ಶಿಲೆಯೂ ಕರಗುವಂತೆ ಕರಗಿ ಶಿಲಾತಪಸ್ವಿನಿಯ ಅವಿರ್ಭಾವವಾಗುತ್ತದೆ. ದಿವ್ಯಮಾಯಾ ಶಿಲ್ಪಿಯು ಕಲ್ಪನಾ ದೇವಿಯನ್ನು ಕಲ್ಲು ಸೆರೆಯಿಂದ ಬಿಡಿಸಿ, ರಚಿಸಿದನೋ ಎನ್ನುವಂತೆ ಒಂದು ತೇಜಸ್ವಿನಿ ವಿಗ್ರಹವು ರೂಪುಗೊಂಡು,  ಶ್ರೀರಾಮನ ಅಡಿದಾವರೆಗೆ ಶಿರ ಬಾಗಿತು. ಹಾಲು ಬಿಳುಪಿನ ನಾರುಮಡಿಯನ್ನುಟ್ಟ ರಾತ್ರಿಯಂತೆ ಕಪ್ಪಾದ ಇಳಿ ಕೂದಲಿನ, ವೃತ ನಿಯಮಗಳಿಂದ ಕಂಗೋಳಿಸುವ ಮುಖದ, ಪವಿತ್ರ ಮಾಂಗಲ್ಯದಿಂದ ಶೋಭಿಸುತ್ತಿದ್ದ ಆ ಸ್ತ್ರೀಯನ್ನು ನೋಡಿ, ಹೆತ್ತ ತಾಯಿಯನ್ನು ಪುನಃ ಕಂಡಂತೆ ರಾಮನು ಭಾವನೆಗೊಂಡು, ಮಹಾಕವಿಯು ತನ್ನ ಕಾವ್ಯವನ್ನು ತಾನೇ ಗೌರವಿಸುವಂತೆ, ತನ್ನ ಪಾದಗಳಿಂದ ರೂಪಗೊಂಡ ಗೌತಮ ಸತಿಯ ಪಾದಗಳಿಗೆ ನಮಸ್ಕರಿಸಿದನು. (ಶ್ರೀ.ರಾ.ದ. ಗದ್ಯಾನುವಾದ ನಿ. ರಾಜಶೇಖರ ಪುನಃ. ೨೨, ೨೩) ಹೀಗೆ ಶ್ರೀರಾಮನಂತಹ ಪತಿತೋದ್ಧಾರಕ, ನೊಂದ ಮನಸ್ಸಿಗೆ ಸಾಂತ್ವನ ಹೇಳುವ ಸಂಸ್ಕಾರವಂತ, ತಾಯಿಯಂತೆ ಪತಿತೆಯರನ್ನು ಗೌರವಿಸುವಂತ ಹೃದಯವಂತ ಪ್ರಜ್ಞಾಸಮೂಹ ನವಭಾರತದಲ್ಲಿ ಬೇಕೆನಿಸುವುದಿಲ್ಲವೇ? ಜ್ಞಾನ-ವಿಜ್ಞಾನ-ತಂತ್ರಜ್ಞಾನದ ಪ್ರಗತಿಗಿಂತ ಹೃದಯಸಂಸ್ಕಾರದ ಪ್ರಗತಿ ಇಂದು ಅವಶ್ಯಕವಿಲ್ಲವೇ..? ಹೆಣ್ಣಿಗೆ-ಹೆಣ್ಣೆ ಶತ್ರುವಾಗುವ ಕಾಲವೂ ಮುಗಿಯಬೇಕಲ್ಲವೇ..? ಮನುಕುಲದ ಸಮಚಿತ್ತದ ಬದುಕಿಗೆ ಎಲ್ಲರೂ ಕೈ ಜೋಡಿಸಬೇಕಿದೆಯಲ್ಲವೇ..? ಕಲ್ಲು ಕರುವುವಂತೆ ಎಲ್ಲರ ಹೃದಯವೂ ಕರಗಿ ಅಹಲ್ಯೆಯ ಸಾತ್ವಿಕ ಜ್ಯೋತಿ ಬೆಳಕಾಗಬೇಕಿದೆ ಅಲ್ಲವೇ..?


ಡಾ. ಪುಷ್ಪಾವತಿ ಶಲವಡಿಮಠ

4 thoughts on “ಕಲ್ಲು ಕರಗಿದ ಹೊತ್ತು-ಡಾ. ಪುಷ್ಪಾವತಿ ಶಲವಡಿಮಠ

  1. ಮಾರ್ಮಿಕ ಲೇಖನ..ಮನತಟ್ಟುವಂಥದು…
    ಹಮೀದಾ ಬೇಗಂ.

  2. ಹೃದಯಸ್ಪರ್ಶಿ ಲೇಖನ. ಹೆಣ್ಣಿನ ಅಂತರಾಳ ಮನಮುಟ್ಟುವಂತಿದೆ.

    1. ಅಂಜಲಿ ಮೇಡಂ ನಿಮ್ಮ ಓದಿನ ಪ್ರೀತಿಗೆ ಧನ್ಯವಾದಗಳು

Leave a Reply

Back To Top