ಯುಗಾದಿಯ ಸೂರ್ಯಸ್ನಾನ

ಯುಗಾದಿಯ ಸೂರ್ಯಸ್ನಾನ

ಸ್ಮಿತಾ ರಾಘವೇಂದ್ರ

ಯುಗದ ಆದಿಯೂ ಪ್ರಕೃತಿಯ ಪ್ರೀತಿಯೂ

ಯುಗ ಉರುಳಿ ಯುಗ ಬರಲು ನವ ಯುಗಾದಿ
ಬಾಡುವಲ್ಲೂ ಬಿಡದೇ ಚಿಗುರುವ ಈ ಪ್ರಕೃತಿಯ ಆದಿ.
ಇಡೀ ಪ್ರಕೃತಿಯೇ ಹೊಸ ಚೈತನ್ಯವೊಂದಕ್ಕೆ ತರೆದು ಕೊಳ್ಳುವ ಕಾಲ ಮರಗಳೆಲ್ಲ ಚಿಗುರೆಲೆಯ ಹೊದ್ದು ಹೂ ಹಣ್ಣು ಗೊಂಚಲುಗಳಿಂದ ನಳ ನಳಿಸಿ ಮತ್ತೊಂದು ಸೃಷ್ಟಿಗೆ ಬೀಜಗಳ ಪಸರಿಸಿ
ತೃಪ್ತವಾಗುವ ಕಾಲ.
ಆಗೆಲ್ಲ ಯುಗಾದಿ ಬಂತೆದರೆ ಬೆಟ್ಟಗುಡ್ಡಗಳ ತಿರುಗುವದೇ ಒಂದು ಸಂಭ್ರಮ ಗೊಂಚಲು ಗೊಂಚಲಾಗಿ ಬಾಗಿ ನಿಂತ ಸಂಪಿಗೆ, ನೇರಳೆ, ಕೌಳಿ,ಬಿಕ್ಕೆ ಹಣ್ಣು, ಮುಳ್ಳೆಹಣ್ಣು,ಇನ್ನೂ ಹಲವುಜಾತಿಯ ಹಣ್ಣುಗಳ ಕಿತ್ತು ಮಡಿಲೊಳಗೆ ತುಂಬಿಕೊಂಡು ಮನಸೋ ಇಚ್ಚೆ ಸವಿಯುತ್ತಿದ್ದೆವು.ಹುಳಿ, ಸಿಹಿ, ಕಹಿ,ಅದೆಷ್ಟು ವಿಧದ ರುಚಿಗಳು.
ದೇಹಕ್ಕೂ, ಮನಸಿಗೂ, ಆರೋಗ್ಯಕ್ಕೂ, ಖುಷಿ ನೀಡುತ್ತಿತ್ತು.
ಅಯಾ ಕಾಲಕ್ಕೆ ಪ್ರಕೃತಿಯ ಮಡಿಲೊಳಗೆ ಸಿಗುವ ಹಣ್ಣನ್ನು ತಂದು ಸವಿಯದೇ ಹೋದರೆ ಅದೇನೋ ಕಳೆದುಕೊಂಡ ಭಾವ ಇಗಲೂ ಕಾಡುತ್ತದೆ.

ಹೊರಗೆ ಹೋದರೆ ಬೆಟ್ಟದ ಹಣ್ಣುಗಳ ತಿಂದರೆ ಇನ್ಪೆಕ್ಷನ್ ಆಗುತ್ತದೆ ಎನ್ನುವ ಕಾಲ ಬರತೊಡಗಿತು. ಮಾನವ ಪ್ರಕೃತಿಯ ಜೊತೆಗಿನ ಸಂಬಂಧ ನಿಧಾನವಾಗಿ ತೊರೆದು ಆಧುನಿಕತೆಯೆಡೆಗೆ ತೆರೆದುಕೊಳ್ಳತೊಡಗಿದ.
ಸಿಟಿಯಲ್ಲಿರುವ ಮಾಲ್‌ಗಳು ತುಂಬಿ ತುಳುಕಾಡುತೊಡಗಿದವು. ಎಲ್ಲೆಡೆ ರಶ್ಯೋ ರಶ್ಯು. ಹಬ್ಬದ ಆಫರ್ಸ್ ಗಳು ಎಲ್ಲರನ್ನೂ ತನ್ನತ್ತ ಸೆಳೆದು ಹಬ್ಬವೆಂದರೆ ಖರೀದಿ ಅನ್ನುವಂತಾಯಿತು.
ಈಗಿನ ಯುವಕ ಯುವತಿಯರು ರಜೆ ಇದೆ ಅಂದರೆ ಸ್ನೇಹಿತರ ಜೊತೆ ಪಾರ್ಟಿ, ಕೂಟ ಅಂತ ಮೋಜುಮಸ್ತಿಯಲ್ಲಿ ತೊಡಗುತ್ತಾರೆ.
ಮಕ್ಕಳಿಗೆಲ್ಲಿ ನಮ್ಮ ಪ್ರಕೃತಿಯ ಪರಿಚಯವಾಗಲು ಸಾಧ್ಯ.
ಬೆಳಗಾಗೆದ್ದು ಬೇವಿನ ಮರ ಹುಡಿಕಿಕೊಂಡು ಹೋಗಿ ತೆಕ್ಕೆಯತುಂಬಾ ಸೊಪ್ಪು ಕಿತ್ತು ತರುತ್ತುದ್ದ ದಿನಗಳವು.
ಅದನ್ನು ಬಚ್ಚಲುಮನೆಯ ನೀರಿನ ಹಂಡೆಗೆ ಹಾಕಿ ಚೆನ್ನಾಗಿ ಕುದಿಸುತ್ತುದ್ದರು ಅಪ್ಪ.
ಅದರ ಘಮವೇ ಇಂದಿಗೂ ಒಂತರ ಅಪ್ಯಾಯಮಾನ,ಹಬ್ಬದ ದಿನ ಆರಂಭ ವಾಗುವ ಈ ಪ್ರಕ್ರಿಯೆ ಆಗಾಗ ನಡೆಯುತ್ತಲೇ ಇತ್ತು.
ಅದರ ಸೊಪ್ಪುಗಳನ್ನು ಕುದಿಸಿ ಪ್ರತಿಯೊಬ್ಬರಿಗೂ ಒಂದೊಂದು ಲೋಟ ಕುಡಿಯಲು ನೀಡುತ್ತಿದ್ದಳು ಅಮ್ಮ.
ಕಹಿ ಎಂದು ತಕರಾರು ತೆಗೆದರೆ ಮುಗಿತು, ಮೂಗು ಹಿಡಿದು ಕುಡಿಸುತ್ತಿದ್ದಳು.ಕಹಿಯ ಒಗರನ್ನು ನೀಗಿಸಿಕೊಳ್ಳಲು ಕೈಲೊಂದು ಹುಣಸೇ ಹಣ್ಣಿನ ಚೂರು ಹಿಡಿದು ಗಟ ಗಟನೇ ಕುಡಿದು ಗಬಕ್ಕನೇ ಹುಣಸೇಹಣ್ಣು ಬಾಯಿಗೆ ಹಾಕಿಕೊಳ್ಳುತ್ತಿದ್ದೆವು.
ಪ್ರತೀ ರವಿವಾರ ಕಹಿ ಕುಡಿಯಲೇಬೇಕಾಗಿತ್ತು
ಅಂತಹ ಆರೋಗ್ಯ ಪೂರ್ಣ ನಿಯಮಗಳೆಲ್ಲ ಇಂದು ಜಿಮ್,ಆಸ್ಪತ್ರೆ,ಸೇರಿಕೊಂಡಿವೆ.
ಸಹಜವಾಗಿ ಎಟುಕುವ ಯಾವ ಸವಲತ್ತುಗಳೂ ಬೇಡ,ಅದಕ್ಕೆ ಹಣತೆತ್ತು ಆಹ್ವಾಹನೆ ಮಾಡಿದರೆನೇ ಖುಷಿ ಮತ್ತು ಅದು ಸತ್ಯ ಅನ್ನುವ ನಂಬಿಕೆ.

ವಸಂತ ಋತುವಿನ ಆಗಮನವೆಂದರೆ ಸಂಭ್ರಮ ಪಲ್ಲವಿಸುವ ಸಮಯ. ಈ ಋತುರಾಜನ ಆಗಮನದೊಂದಿಗೆ ಯುಗಾದಿ ಹಲವು ಆರೋಗ್ಯ ಸೂತ್ರಗಳನ್ನು ಹೊತ್ತು ತರುತ್ತದೆ.
ಧರ್ಮಸಿಂಧು, ಅಥರ್ವವೇದ, ಶತಪಥ ಬ್ರಾಹ್ಮಣ ಇನ್ನೂ ಮುಂತಾದ ಧಾರ್ಮಿಕ ಗ್ರಂಥಗಳಲ್ಲಿ ಯುಗಾದಿಯ ವೈಶಿಷ್ಟ್ಯದ ಉಲ್ಲೇಖವಿದೆ. ‘ಯುಗ’ ಎಂದರೆ- ನೂತನ ವರ್ಷ; ‘ಆದಿ’ ಎಂದರೆ- ಆರಂಭ. ಈ ಋತುವಿನಲ್ಲಿ ಹೊಸ ಚಿಗುರಿನ ಹಸಿರು ವಸ್ತ್ರವನ್ನುಟ್ಟು ರಾರಾಜಿಸುವ ನಿಸರ್ಗವನ್ನು ಕಂಡಾಗ, ಕೋಗಿಲೆಗಳ ಇಂಚರವನ್ನು ಆಲಿಸಿದಾಗ, ‘ಆನಂದಮಯ ಈ ಜಗ ಹೃದಯ’ ಎಂಬ ಕವಿ ವಾಣಿಯ ಸತ್ಯದ ದರ್ಶನವಾಗುತ್ತದೆ.
ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ವಸಂತ ಋತುವೆಂದರೆ ಸಂಭ್ರಮದ ಹೊನಲು.ಹಣ್ಣು ಚಿಗುರೆಲೆಗಳ ತಿಂದು ತೃಪ್ತವಾಗಿ ವಿಹರಿಸುತ್ತವೆ.
ಅದಕ್ಕಾಗಿಯೆ ಸರ್ವ ಋತುಗಳಲ್ಲಿ ವಸಂತ ಋತು ಶ್ರೇಷ್ಠ ಕೂಡ.

ಉಸ್ ಉಸ್ ಎಂದು ಎ ಸಿ ಯೊಳಗೆ ಕೂತರೂ ಬೆವರಿಳಿಸಿ ಬಾಡುತ್ತಿರುವ ಮನುಷ್ಯ,ರಣ ರಣ ಸೂರ್ಯನ ಕಿರಣಕ್ಕೂ ಸೆಡ್ಡು ಹೊಡೆದು
ಬದುಕುವ ಕಲೆಯ ತಣ್ಣಗೆ ಕಲಿಸುತ್ತಿರುತ್ತದೆ ಪ್ರಕೃತಿ.
ಆದರಿಂದು ಪ್ರಕೃತಿಗೇ ಸೆಡ್ಡು ಹೊಡೆದು ಸಾಗುತ್ತಿದ್ದಾನೆ ಮನುಜ.
ಅದರ ಪರಿಣಾಮವನ್ನೂ ಜೊತೆ ಜೊತೆಗೇ ಅನುಭವಿಸಿದರೂ ಕಿಂಚಿತ್ತೂ ಬದಲಾಗದ ಮಾನವ.
ಹೌದು,ವಿಕಾರಿ ನಾಮದ ಯುಗಾದಿ ತನ್ನ ವಿಕಾರ ರೂಪವನ್ನು ಇಡೀ ಜಗತ್ತಿಗೇ ತೋರಿಸುತ್ತಿದೆ. ಇಂದು,ಮನುಷ್ಯನ ಮಿತಿಮೀರಿದ ಆಸೆಗಳು ಮನುಜಕುಲವನ್ನೇ ನಾಶಮಾಡುತ್ತಿವೆ.
ಪ್ರತಿಯೊಂದನ್ನೂ ಸಮತೋಲನದಲ್ಲಿ ಇರಿಸಿಕೊಳ್ಳುವ ಕಲೆ ಮಾನವನಿಗಿಂತ ಪ್ರಕೃತಿಗೇ ಚೆನ್ನಾಗಿ ಗೊತ್ತಿದೆ. ಅದಕ್ಕಾಗಿಯೇ ಕಾಲ ಕಾಲಕ್ಕೆ ತನ್ನ ನಿಲುವನ್ನು ಚಾಚುತಪ್ಪದೇ ತೋರಿಸುತ್ತದೆ,ಪಾಲಿಸುತ್ತದೆ,

ಯುಗಾದಿಕೂಡ ಅಂತಹದ್ದೊಂದು ಪ್ರಕೃತಿ ಪಾಲನೆ ಮತ್ತು ನಿಲುವಿನ ಸಂಕೇತವೇ
ಹಿಂದೂ ಸಂಪ್ರದಾಯದಂತೆ
ಒಂದು ಸಂವತ್ಸರ ಕಳೆದು ಇನ್ನೊಂದು
ಸಂವತ್ಸರದ ಆರಂಭ. ಆರಂಬದಲ್ಲಿಯೇ ಪ್ರಕೃತಿ ಬೀಜೊತ್ಪತ್ತಿಯನ್ನು ಮಾಡಿ ಬರುವ ಮಳೆಗಾಲಕ್ಕೆ ಮೊಳಕೆಯೊಡೆಯಲು ತನ್ನ ಸೃಷ್ಟಿಯ ಸಮತೋಲನ ಕಾಯ್ದುಕೊಳ್ಳಲು ಸಿದ್ಧವಾಗುತ್ತದೆ.

ಅಂತೆಯೇ ಬರಲಿರುವ ಬದುಕು ಹೇಗೂ ಇರಬಹುದು ಕಹಿಯಾಗಲಿ ಸಿಹಿಯಾಗಲೀ ಎಲ್ಲದಕ್ಕೂ ಸಿದ್ದರಾಗಿ ಮುನ್ನಡೆಯಬೇಕು ಎಂದು ಹಿರಿಯರು ಬೇವು ಬೆಲ್ಲವನ್ನು ತಿನ್ನುವ ಮೂಲಕ
ಒಲವು, ನಲಿವು, ಸಹಬಾಳ್ವೆಯ,ದ್ಯೋತಕವೆಂದು ಯುಗಾದಿಯನ್ನು ಬರಮಾಡಿಕೊಳ್ಳುತ್ತಾರೆ.

ಶತಾಯು:ವಜ್ರದೇಹಾಯ ಸರ್ವಸಂಪತ್ಕರಾಯಚ|
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| ಎನ್ನುವಂತೆ–
(ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.)

ಆರೋಗ್ಯದ ದೃಷ್ಟಿಯಿಂದಲೂ ಬೇವು ದೇಹಕ್ಕೆ ಬಹಳ ಒಳ್ಳೆಯ ದಿವ್ಯ ಔಷಧ ನಮ್ಮೊಳಗಿನ ಕಲ್ಮಶಗಳನ್ನು ಹೊರದೂಡುತ್ತದೆ.
ಅಲ್ಲದೇ ಬೇಸಿಗೆ ಕಾಲಕ್ಕೆ ರೋಗ ರುಜಿನಿಗಳು ಅಧಿಕ ಮತ್ತು ಬಹಳಬೇಗ ವ್ಯಾಪಿಸುತ್ತದೆ.
ಬೇವಿನ ಎಲೆ, ಚಿಗುರು, ಹೂವು, ಕಾಯಿ, ಬೀಜ, ಎಣ್ಣೆ, ಕಾಂಡ, ತೊಗಟೆ, ಬೇವಿನ ಬೇರುಗಳೆಲ್ಲವೂ ಮದ್ದಿಗೊದಗುತ್ತವೆ. ಆದರೆ ಬಳಸಲು ವ್ಯವಧಾನ ಬೇಕು.
ಕಾಯಿಲೆ ಎಷ್ಟೆ ಗಂಭೀರವಿರಲಿ, ಯಾವ ಚಿಕಿತ್ಸೆಗೂ ಗಾಂಧೀಜಿ ಒಪ್ಪುತ್ತಿರಲಿಲ್ಲವಂತೆ. ಬೇವಿನ ಎಲೆಯ ಕಷಾಯ ಮತ್ತು ಆಡಿನ ಹಾಲು ಕುಡಿದು,ಮೈಗೆ ಆಗಾಗ ಬೇವಿನ ಎಣ್ಣೆ ಬಳಿದುಕೊಂಡು ಮರದ ಹಲಗೆಗಳ ಮೇಲೆ ಮಲಗಿ ಸೂರ್ಯಸ್ನಾನ ಮಾಡುತ್ತಿದ್ದರಂತೆ.
ನಾವಿಂದು ಶಾಸ್ತ್ರಕ್ಕೆ ಒಂದು ಎಲೆ ತಿಂದು ಹಬ್ಬದ ಆಚರಣೆಯಿಂದ ಬೀಗುತ್ತಿದ್ದೇವೆ.

ಈ ಹಬ್ಬವನ್ನು ಭಾರತ ಪರ್ವದಲ್ಲಿ ಬೇರೆ-ಬೇರೆ ಹೆಸರಿನಿಂದ, ಸಾಮಾನ್ಯವಾಗಿ ಎಲ್ಲರೂ ಆಚರಿಸುವರು. ಹಬ್ಬಗಳಲ್ಲಿ ಶ್ರೇಷ್ಠವಾದ ಪ್ರಸಿದ್ಧ ವಾದ ಯುಗಾದಿ ಹಬ್ಬ ಚ್ಯೆತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುತ್ತದೆ. ಯುಗಾದಿ ಹಬ್ಬವು ಹಿಂದುಗಳ ದೃಷ್ಟಿಯಲ್ಲಿ ವರ್ಷಾರಂಭದ ಪವಿತ್ರ ದಿನ ಕೂಡಾ.

ಒಟ್ಟಾರೆ ಯುಗಾದಿಯು ಸಾಂಪ್ರದಾಯಿಕ ಆಚರಣೆಯೊಂದಿಗೆ , ಪ್ರಕೃತಿಯೊಂದಿಗಿನ ನಮ್ಮ ಅವಿನಾಭಾವ ಸಂಬಂಧದ ಪ್ರತೀಕವೆಂದರೆ ತಪ್ಪಾಗಲಾರದು. ಅದೆಷ್ಟು ರೋಗ ನಿರೋಧಕಗಳನ್ನು ನಮಗೆ ಪ್ರಕೃತಿ ಕೊಡುಗೆಯಾಗಿ ನೀಡಿದೆ.ನಾವದನ್ನು ಗಮನಿಸುತ್ತಲೇ ಇಲ್ಲ ಹಳೆಯ ಪದ್ದತಿಗಳೆಲ್ಲ ಜೊಳ್ಳು.
ವಿಜ್ಙಾನವೇ ಹೆಚ್ಚೆಂದು ಅಹಂಕಾರದಿಂದ ಸಾಗುತ್ತಿದ್ದೇವೆ. ಆದರೆ ನೆನಪಿರಲಿ ಹಳೆಯಬೇರಿನ ಭದ್ರತೆಯೇ ಹೊಸ ಚಿಗುರಿಗೆ ನಾಂದಿ.
ಇಂದು ಜಗತ್ತೇ ಎದುರಿಸುತ್ತಿರು ಕೊರೋನಾ ಎಂವ ವೈರಾಣುವಿನ ಆಟಾಟೋಪ ನಮ್ಮ ಹಿಂದೂ ಸಂಪ್ರದಾಯ ಮಡಿ ಯೆಂಬ ಸ್ವಚ್ಚತೆ.ಅಪ್ಪುಗೆ ಗಿಂತ ನಮಸ್ಕಾರದ ಗೌರವ.
ಹಬ್ಬಗಳ ಶಿಸ್ತುಬದ್ಧ ಸಂಪ್ರದಾಯಗಳು,
ಪ್ರತೀ ಘಟ್ಟವನ್ನು ನೆನಪಿಸುತ್ತಿರುವದೇ ಇದಕ್ಕೆ ಸಾಕ್ಷಿ

ಆದರೆ ಕಳೆದ ಕಾಲ ಮತ್ತೆ ಬರಲಾರದು. ಇರುವ ಬರುವ ದಿನಗಳನ್ನು ಜಾಗರೂಕವಾಗಿ ಬದುಕುವದು ಬಹಳ ಮುಖ್ಯ
ಪ್ರತಿಯೊಂದು ಹಬ್ಬ ಹರಿದಿನಗಳಿಗೂ ಅದರದೇ ಆದ ಸಂಪ್ರದಾಯ ಶಾಸ್ತ್ರ ಆಚರಣೆಗಳು ನಮ್ಮ ಅರೋಗ್ಯ ಸ್ವಚ್ಚತೆಯೊಂದಿಗೆ ಜೋಡಣೆಯಾಗಿದೆ ಆದರೆ
ಕೇವಲ ಅದನ್ನು ಆಡಂಭರವಾಗಿಮಾತ್ರ ನಾವಿಂದು ನೋಡುತ್ತಿದ್ದೇವೆ.
ಈಗ ಸಧ್ಯದ ಪರಿಸ್ಥಿತಿಯಲ್ಲಿ ಬಂದಿರುವ ಮಹಾ ಮಾರಿ ರೋಗದ ವಿಕಾರತೆಯು ತೊರೆದು ಹೊಸ ಶಾರ್ವರಿಯ, ಶಕ್ತಿ ಯುಗ ಎಲ್ಲರ ಕಾಯಾ ವಾಚಾ ಮನಸಾ ಆರಂಭವಾಗಲಿ.

********

Leave a Reply

Back To Top