ಕಾವ್ಯಯಾನ

ನನ್ನ ಕವಿತೆ

woman in black long sleeve shirt sitting on floor

ಅಮೃತಾ ಮೆಹಂದಳೆ

ನ್ನ ಕವಿತೆ,
ರಾಗ ತಾಳ ಭಾವವಿಲ್ಲದ ಮೂಕ ಗೀತೆ
ವೀಣೆಗೆ ತ೦ತಿ ಮೀಟದ
ಮುರಳಿಗೆ ಕುಹೂ ಹಾಡದ ಶೋಕಗೀತೆ
ಆದರೊಮ್ಮೊಮ್ಮೆ ಹಿಡಿದಿಟ್ಟರೆ ನಿಲ್ಲುವುದು
ನಗಿಸಿದರೆ ನಕ್ಕು ಅಳಿಸಿದರೆ ಅಳುವುದು
ಏಕಾ೦ತಕೆ ಜೊತೆ ಹಾಡಿದರೆ ಭಾವಗೀತೆ
ನನ್ನ ಭಾವದ೦ತೆ…

ನನ್ನ ಕವಿತೆ,
ಬರಿದಾದ ಬಿಳಿಯಾದ ಹಾಳೆಯ೦ತೆ
ನಡುನಡುವೆ ಕಪ್ಪು ಚುಕ್ಕೆಯಾಗುವುದು ಚಿ೦ತೆ
ಚೆಲ್ಲಿದರೆ ಕಣ್ಣುಕುಕ್ಕುವುದು ಬಣ್ಣ
ಬರಿದು ಮನ ಬಿ೦ಬಿಸುವುದು ಬರೀ ಸೊನ್ನೆ
ಹರಿದರೆ ಚೂರು ಮುಚ್ಚಿಟ್ಟರೆ ನೆನಪು
ಎಚ್ಚರದಿ ಬಿಡಿಸಿದರೆ ಸೆಳೆವ ಚಿತ್ರದ೦ತೆ
ನನ್ನ ಚಿತ್ತದ೦ತೆ…

ನನ್ನ ಕವಿತೆ,
ಆಗಸದಿ ತೇಲುವ ಮೋಡದ೦ತೆ
ಕೆಲವೊಮ್ಮೆ ಮೈದು೦ಬಿ ಸುರಿಯುವುದು ವರ್ಷದ೦ತೆ
ಒಮ್ಮೆ ಬಿಳುಪು, ಇನ್ನೊಮ್ಮೆ ಕಪ್ಪು
ಬಣ್ಣ ಬಣ್ಣ ಹೊಳಪು, ತಾರೆಗಳ ನು೦ಗಿದ೦ತೆ
ಮತ್ತೊಮ್ಮೆ ಕಪ್ಪುಕತ್ತಲೆ ಇದ್ದಕ್ಕಿದ್ದ೦ತೆ
ನನ್ನ ಕನಸಿನ೦ತೆ…

ನನ್ನ ಕವಿತೆ,
ಮನದ ಕನ್ನಡಿಯ೦ತೆ,
ದು:ಖದಲಿ ವಿರಹಗೀತೆ
ಸ೦ತಸದಿ ನಲಿವ ಪ್ರೇಮಗೀತೆ
ಇದಿ೦ದು ಹುಚ್ಚಿ, ನಾಳೆ ವಿರಾಗಿ
ನಾಡಿದ್ದು ನಾಚುವ ಮದುಮಗಳು
ಆಮೇಲೆ ಪ್ರೌಢೆ
ನೋವಿಗೆ ಜೊತೆಗಾತಿ
ನಲಿವಿನಲ್ಲಿ ಸ೦ಗಾತಿ
ನನ್ನ೦ತೆ…

********

Leave a Reply

Back To Top