ಅಡಿಗರ ಸಾಕ್ಷಿ ಪತ್ರಿಕೆ 37ನೇ ಸಂಚಿಕೆಯ ಮರುಓದು- ಭಾರತಿ ಅಶೋಕ್

ವಿಶೇಷ ಲೇಖನ

ಈಚಿನ ಕನ್ನಡ ಕವಿತೆಗಳ ಕುರಿತ

ಸಾಕ್ಷಿ ೩೭ನೇ ಸಂಚಿಕೆ

(ಹೇಮಂತ)ಯ ಮರು ಓದು”

ಮೊದಲ ಭಾಗ-

ಈಚಿನ ಕನ್ನಡ ಕವಿತೆಗಳ ಕುರಿತ ಸಾಕ್ಷಿ ೩೭ನೇ ಸಂಚಿಕೆ(ಹೇಮಂತ)ಯ ಮರು ಓದು”

“ಸಾಕ್ಷಿ” ಇದೊಂದು ತ್ರೈಮಾಸಿಕ ಪತ್ರಿಕೆ. ಎಂ ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದಲ್ಲಿ ೧೯೬೮ ರಲ್ಲಿ ಪ್ರಾರಂಭವಾಯಿತು. ಮುಖ್ಯ ಸಂಪಾದಕರು ಅಡಿಗರೇ ಆದರೂ ೩೭ನೇ ಸಂಚಿಕೆಯ ಸಂಪಾದಕತ್ವವನ್ನು ಅತಿಥಿ ಸಂಪಾದಕರಾಗಿ “ಮಾಧವ ಕುಲಕರ್ಣಿ” ಯವರು ವಹಿಸಿಕೊಂಡಿದ್ದರು. ”ಸಾಕ್ಷಿ” ಇದೊಂದು ಪ್ರಬುದ್ಧ ಮನಸ್ಸುಗಳ ಪ್ರಬುದ್ಧ ಚಿಂತನೆಗಳನ್ನು ಹೊತ್ತು ಪ್ರಕಟಗೊಅಳ್ಳುತ್ತಿದ್ದ ಪತ್ರಿಕೆ. ಅದರ ಪ್ರಬುದ್ಧತೆಯನ್ನು ಸಾರುವಂತೆ ಮುಖಪುಟದಲ್ಲೇ “ಸಾಕ್ಷಿ ಪ್ರೌಢ ಅನುಭವಗಳಿಗೆ, ವಿಚಾರಗಳಿಗೆ ಮೀಸಲಾದ ಪತ್ರಿಕೆ” ಎಂದು ಮುದ್ರಿಸಿಕೊಂಡೆ ಪ್ರಕಟಗೊಳ್ಳುತ್ತಿತ್ತು. ಹಾಗೆ ನೋಡಿದರೆ ನಿಜವಾಗಿಯೂ ಇದು ಅಂತಹ ಅನುಭವಗಳಿಗೆ ಹೇಳಿ ಮಾಡಿಸಿದಂತಹದ್ದೇ ಅಗಿತ್ತು. ಋತುಗಳ ಹೆಸರನ್ನು ಹೊತ್ತು ವರ್ಷಕ್ಕೆ ನಾಲ್ಕು ಸಂಚಿಕೆಗಳು, ಹೇಮಂತ, ವಸಂತ, ವರ್ಷ, ಶರತ್ ಎಂದು ಪ್ರಕಟವಾಗುತ್ತಿದ್ದವು. ನಾನೀಗ ಮರು ಓದಿಗೆ ಆಯ್ಕೆ ಮಾಡಿಕೊಂಡಿರುವ ಸಂಚಿಕೆ ೩೭ನೇ ಹೇಮಂತ ಸಂಚಿಕೆ. ಪ್ರಕಟಿತ ದಿನಾಂಕ,೩೦/೧೨/೧೯೭೭(೧೯೭೮)
ತನ್ನತನದ ಅರಿವು ಮನುಷ್ಯತ್ವದ ವಿಶೇಷ ಲಕ್ಷಣ. ಅವನ ಬೆಳವಣಿಗೆಯ ಮಟ್ಟ ಯಾವುದೇ ಇದ್ದರೂ, ಅವನಿಗೆ ತಾನು ಮಾಡುತ್ತಿರುವ ಕೆಲಸ ಮತ್ತು ಅದರ ಅರಿವು ಇದ್ದೇ ಇರುತ್ತದೆ. ಮನಸ್ಸಿನ ಒಂದು ಭಾಗ ತಾನು ಮಾಡುತ್ತಿರುವ ಕೆಲಸವನ್ನು ಅಥವಾ ಕ್ರಿಯೆಯನ್ನು ನೋಡಿ ಅಳೆದು ತೂಗಿ ದೇಹದ ಪ್ರತಿಯೊಂದು ಕ್ರಿಯೆಯ ಬೆನ್ನು ಹತ್ತಿದ ಹಾಗೆ ಸಾಕ್ಷಿಯು ಅವನ ಅಂತರಂಗವನ್ನು ಪ್ರವೇಶಿಸುತ್ತದೆ. ಅಂದರೆ, ಈ ಆತ್ಮಸಾಕ್ಷಿಯಿಂದ ಅವನಿಗೆ ಬಿಡುಗಡೆಯಿಲ್ಲ, ಮತ್ತು ಎಂದೂ ಅದನ್ನು ನಿಶ್ಯೇಷಗೊಳಿಸಲು ಸಾಧ್ಯವಿಲ್ಲ. ಬದಲಾಗಿ ಅದನ್ನು ಹತ್ತಿಕ್ಕಬಹುದು. ಮಾನವನ ವಿಲಕ್ಷಣವಾದ ಈ ಸಾಕ್ಷಿಪ್ರಜ್ಞೆಯ ಬೆಳವಣಿಗೆಯೇ ಮನುಷ್ಯನ ನಿಜವಾದ ಬೆಳವಣಿಗೆ ಎಂದು ಹೇಳಬಹುದು. ಇದು (ಸಾಕ್ಷಿಪ್ರಜ್ಞೆ )ಮನುಷ್ಯನ ಲಕ್ಷಣವೇ ಆದರೂ ಅದು ಪ್ರತಿಯೊಬ್ಬರಲ್ಲಿಯೂ ಸಾಮಾನ ಪ್ರಮಾಣದಲ್ಲಿರಲಾರದು. ಸರಿಯಾದ ಶಿಕ್ಷಣ, ಅಧ್ಯಯನ, ಪರಿಶ್ರಮದ ಫಲದಿಂದಾಗಿ ಸಾಮರ್ಥ್ಯಕ್ಕೆ ತಕ್ಕಂತೆ ಇರುತ್ತದೆ. ಆಪ್ರಭುದ್ಧ ಮನಸ್ಸಿನಲ್ಲಿ ಸಂಪೂರ್ಣ ತೆರೆಯದೆ ಒಳಗಿನದನ್ನು ಅಸ್ಪಷ್ಟವಾಗಿ ನೋಡಿ ಸರಿಯಾದ ತಿರ್ಮಾನಕ್ಕೆ ಬರಲು ಸಮರ್ಥವಾಗಿರುವುದಿಲ್ಲ. ಒಳಗಿನ ಮನಸ್ಸಿನ ಅಲೆಗಳನ್ನು, ಸುಳಿಗಳನ್ನು, ಅರಿತು ಅದಕ್ಕೆ ಚೇತನ ತುಂಬುವಂತೆ ಮಾಡುವುದು ಶಿಕ್ಷಣದ ಮೊದಲ ಕೆಲಸವಾಗಿದೆ. ಗಮನಿಸಿ, ವಿವೇಚಿಸಿದ ಆಚಾರ, ವಿಚಾರಗಳು ತರತಮ ಜ್ಞಾನವನ್ನು ಸರಿ ತಪ್ಪುಗಳೆಂದು, ನ್ಯಾಯನ್ಯಾವೆಂದು,ತೀರ್ಮಾನಿಸುವ ಶಕ್ತಿ ಅದಕ್ಕೆ ಬರುವಂತೆ ಮಾಡುವುದು ಎರಡನೇ ಕೆಲಸ. ಈ ಎರಡೂ ಕೆಲಸಗಳೂ ಎಲ್ಲಿ ನಡೆದಲ್ಲಿ ಮನುಷ್ಯತ್ವದ ವಿಕಸನ ಸಾಧ್ಯ. ವಿಕಸಿತಗೊಂಡ ಸದ್ವಿವೇಕಕ್ಕೆ ಮಂಕು ಬಡಿಯುವುದು ಆಹಂನಿಂದ ಕೂಡಿದ ಸಾರ್ಥ, ಮೋಹ, ರಾಗ, ದ್ವೇಷಗಳು ಅಂಟಿಕೊಂಡಾಗ.
ಸಾಕ್ಷಿ ಪತ್ರಿಕೆಯು ನನ್ನ ಓದಿಗೆ, ನನ್ನ ಗ್ರಹಿಕೆಗೆ ದಕ್ಕಿದ್ದನ್ನು ಸಾದ್ಯವಾದಷ್ಟು ಮಟ್ಟಿಗೆ ಬರವಣಿಗೆಗೆ ಇಳಿಸಿದ್ದೇನೆ. ಹಾಗೆ ನೋಡಿದರೆ, ಕವಿತೆಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟದ ಕೆಲಸವೇ ಸರಿ. ಏಕೆಂದರೆ, ಇಲ್ಲಿನ ಕವಿತೆಗಳು ನೇರವಾಗಿ ಏನನ್ನು ಹೇಳದೇ, ಪ್ರತಿಮೆಗಳ ಮೂಲಕ ಹೇಳುತ್ತವೆ. ಅಂತಹ ಪ್ರತಿಮೆಗಳು ದ್ವನಿಸುವ ಅರ್ಥವನ್ನು ಸರಿಯಾಗಿ ಗ್ರಹಿಸುವಲ್ಲಿ ನಾನು ಕೆಲವೊಮ್ಮೆ ಸೋತಿರಬಹುದು. ನಾನು ನನ್ನ ಜ್ಞಾನದ ಒಳಗಣ್ಣಿಗೆ ಸ್ಪುರಿಸಿದ್ದನ್ನು ಹೇಳಿದ್ದೇನೆ. ಸಹೃದಯಿ ಓದುಗರು ಅದನ್ನು ಮನ್ನಿಸುತ್ತೀರಿ ಎಂಬ ವಿನಮ್ರ ನಂಬಿಕೆ ನನ್ನದು.

ನವ್ಯದ ಧೋರಣೆಗಳು

       ಪ್ರಗತಿಶೀಲರ ಜನಪ್ರಿಯತೆಗೆ ವಿರುದ್ಧವಾಗಿ ಕಲೆ ಶ್ರೇಷ್ಟತೆ ಮುಖ್ಯ  ಜನಪ್ರಿಯತೆ ಅಲ್ಲ ಎನ್ನುವ ತತ್ವದಡಿ ನವ್ಯ ಸಾಹಿತ್ಯ ಕುಡಿಯೊಡೆಯಿತು. ಕಾವ್ಯ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗಬೇಕಿಲ್ಲ, ಮುಖ್ಯವಾಗಿ ಸಂಸ್ಕಾರ ಬೇಕು ಎನ್ನುವುದು ಆ ಕಾಲದ  ಸಾಹಿತಿಗಳ ದೋರಣೆ.  ಹೆಚ್ಚಾಗಿ ಸಾಹಿತ್ಯದಲ್ಲಿ ತೊಡಗಿಕೊಂಡವರು ಇಂಗ್ಲೀಷ್ ಕಲಿತ ಅದ್ಯಾಪಕ ವರ್ಗವಾಗಿತ್ತು. ಅದು ಯುರೋಪ್ ಮತ್ತು ಅಮೇರಿಕ ಮಾಡ್ರನಿಸ್ಟ್ ವಿಮರ್ಶಕರ ಧೋರಣೆಗಳನ್ನು ತಮ್ಮದಾಗಿಸಿಕೊಂಡಿದ್ದರು. ಪ್ರಗತಿಶೀಲ ಮತ್ತು ನವೋದಯದವರ  ಸಾಹಿತ್ಯ ವಿಡಂಬನೆಯನ್ನು ಸ್ಥಾಯಿಯಾಗಿಸಿಕೊಂಡು ಹುಟ್ಟಿದ್ದು  ನವ್ಯಸಾಹಿತ್ಯ. ಗೋಕಾಕರ ತಾಂತ್ರಿಕ ನಾವಿನ್ಯತೆ ಮತ್ತು ಅಡಿಗರ ವಸ್ತುವಿಷಯದಲ್ಲಿ ನಾವಿನ್ಯತೆ ತಂದು ಚಳುವಳಿ ಮುನ್ನಡೆಸಿದರು. ವಿ ಕೃ ಗೋಕಾಕರು ಬೇಂದ್ರೆ, ಮಧುರ ಚನ್ನರಂತೆ ಅರವಿಂದರ ಪ್ರಭಾವಕ್ಕೆ ಒಳಗಾದರೂ ಜಾನಪದದ ಪ್ರಭಾವಕ್ಕೆ ಒಳಗಾಗದೇ ತಮ್ಮ ಛಾಪಿನ ಹೋರಾಟಕ್ಕೆ ತೊಡಗಿದರು. ೧೯೫೦ರಲ್ಲಿ ನವ್ಯದ ಘೋಷಣೆ ಮುಂಬೈಯಲ್ಲಿ ಆಯಿತು. ಸ್ವತಂತ್ರ್ಯ ಬಂದನಂತರ ಮತ್ತು ಪೂರ್ವದಲ್ಲಿದ್ದ ಕನಸುಗಾರಿಕೆ, ಆದರ್ಶ ಮಾಯವಾಗಿ ವಾಸ್ತವದ ಸಮಸ್ಯೆಗಳು ಎದುರಾದವು. ಜೀವನವನ್ನು ರಮ್ಯವಾಗಿ ಪರಿಬಾವಿಸುವುದನ್ನು ಬಿಟ್ಟು  ವ್ಯಂಗ್ಯ ವಿಡಂಬನಾತ್ಮಕವಾಗಿ ಚಿತ್ರಿಸುವುದನ್ನು ನವ್ಯದವರು ಅನುಸರಿಸಿದರು. ನವ್ಯ ಮತ್ತು ನವೋದಯದಲ್ಲಿದ್ದ ಸಾಮ್ಯತೆಯೆಂದರೆ, ಇಬ್ಬರು ವ್ಯಕ್ತಿ ಕೇಂದ್ರಿತ, ಆತ್ಮಕೇಂದ್ರಿತ ನೆಲೆಯಿಂದ ಸಮಾಜವನ್ನು ನೋಡಿದ್ದು.  ಸಾಹಿತ್ಯ ವಾಚ್ಯವಾಗುವ ಬದಲು ಸೂಚ್ಯವಾಗಬೇಕು. ಹೇಳುವುದನ್ನು ಪ್ರತಿಮೆ, ಸಂಕೇತಗಳ ಮೂಲಕ ಹೇಳಬೇಕು. ವಾಸ್ತವ ಸಂಕೀರ್ಣವಾಗಿರುವಂತೆ ವಾಸ್ತವದ  ಗ್ರಹಿಕೆಯಾದ ಸಾಹಿತ್ಯವು ಆ ಅನುಭವವನ್ನು ಸಮಗ್ರವಾಗಿ ಹಿಡಿದಿಡಲು ಸಂಕೀರ್ಣವಾಗಲೇಬೇಕೆಂಬ ನಿಲುವು, ಇದು ತನ್ನ ನಿಲುವಿನ ಪರಿಣಾಮವಾದ ಸಂಕೀರ್ಣತೆಯಿಂದಾಗಿ ಅದನ್ನು ಅರ್ಥೈಸುವ ವಿಮರ್ಶನ ಪಡೆಯನ್ನು ಕಾವ್ಯ ಪ್ರಕಾರದಲ್ಲಿ ಗದ್ಯ, ಕಾದಂಬರಿಗಳಿಗೆ ಇದು ಅನ್ವಯವಾಗುವುದಿಲ್ಲಿ. ನವ್ಯ ಸಾಹಿತ್ಯವನ್ನು ಅರ್ಥೈಸಲು ಒಂದು ದೊಡ್ಡ ವಿಮರ್ಶಕರ ದಂಡೇ  ಕನ್ನಡದಲ್ಲಿ ಸಿದ್ಧವಾಯಿತು. ನವ್ಯ ಸಾಹಿತ್ಯವನ್ನು ವಿರೋದಿಸುವವರೇ ತಮ್ಮ ತತ್ವದಲ್ಲಿ ಎಲ್ಲೋ ಆಳದಲ್ಲಿ ಅದೇ(ನವ್ಯದ) ತತ್ವವನ್ನು ಅಳವಡಿಸಿಕೊಂಡಿದ್ದಾರೆ ಎನ್ನಿಸುತ್ತದೆ. ಟಿ ಎಸ್ ಇಲಿಯಟ್, ಕಾಫ್ಕ, ಕಾಮು, ಸಾತ್ರೆ ಇವರ ಸಾಹಿತ್ಯಿಕ ಪ್ರಭಾವಕ್ಕೆ  ಒಳಗಾಗಿ ಅಸ್ತಿತ್ವವಾದವು ಇಲ್ಲಿನ ಮಣ್ಣಿಗೆ ಬಂದು  ಇಲ್ಲಿನ ಮಣ್ಣಿನ ವಾಸನೆ ಪಡೆಯಿತು

     “ಒಳ್ಳೆ ಕೆಟ್ಟುದರ ಅನುಭವಗಳೊಂದಿಗೆ ಒಂದು ತುಂಬು ಜೀವನವನ್ನು ಹುಡುಕುವಂತೆ” ಬೇಂದ್ರೆಯವರ ಕಾವ್ಯದ  ಪ್ರವಾಹದಲ್ಲಿ ಒಳ್ಳೆಯ ಮತ್ತು ಸಾಮಾನ್ಯ ಎಂದುಕೋಡರೂ, ಸಮಗ್ರ ಸಾಹಿತ್ಯವನ್ನು ಅವಲೋಕಿಸಿದಾಗ  ಅದೆಲ್ಲವೂ ಮೌಲ್ಯಯುತ ಎನ್ನಿಸದೇ ಇರಲಾರದು. “ಜೀವನ” ಎಂದಾಗ ಬೇಕಾದ,  ಬೇಡವಾದ  ಎಲ್ಲ ಅನುಭವಗಳ ಮೂಟೆ ಬದುಕಿಗೆ ಒಂದು ಉತ್ತಮ ತಾತ್ವಿಕತೆ ನೀಡುವಂತೆ ಇಲ್ಲಿಯೂ ಯಾವುದೇ ಒಂದು ವ್ಯಾಖ್ಯೆಯು ಅದನ್ನು ಬಂಧಿಸುವುದಿಲ್ಲ.  ಅಂತಹ  ಪ್ರಯತ್ನವೆಲ್ಲ  ವ್ಯರ್ಥವಾಗಿಬಿಡಬಹುದು. ಅಂತಹ ವ್ಯಾಖ್ಯೆಗಳು ಯಾವುದೋ ಒಂದು ಶಾಸ್ತ್ರಕ್ಕೆ  ಸಲ್ಲಬಹುದಾದರೂ  ಬೇಂದ್ರೆಯವರಂತಹ ಶಬ್ಧಗಾರುಡಿಗರಿಗೆ ಅದು  ಪೂರ್ವ ನಿರ್ಧರಿತವಾದ ಕುಂಚಿಗೆಯನ್ನು ಹೊಲಿದು ಕಾವ್ಯದ ತಲೆಗೆ ಕಟ್ಟಿದಂತೆಯೇ  ಜೀವಂತ ರಸಿಕತೆಯ ಬೇಂದ್ರೆ ಕಾವ್ಯಕ್ಕೆ ಅವು ಸೋಲದೇ ಇರಲಾರವು. ಹಾಗೆ ಸೋಲಲೇಬೇಕು. ಬೇಂದ್ರೆಯವರ ಕಾವ್ಯದ ಮುಖ್ಯ ಲಕ್ಷಣ ಅದರ ನಾದಲೀಲೆ. ನಾದದ ಕಾದಂಬಿನಿಯಿಂದ ಅರ್ಥಕ್ಕೆ  ಮಹತ್ವ ಅಥವಾ ಗಮನ  ಕೊಡದೇ ಶಬ್ಧಪ್ರಯೋಗದ ಆರೋಪ  ಇದ್ದರೂ, ಕಾವ್ಯದ ಕ್ಲಿಷ್ಟತೆ ಮತ್ತು  ಶಬ್ಧಗಳ ಪ್ರಯೋಗ ಅವರ ಸಂಸ್ಕಾರ ಬಂಧಗಳು. ಉತ್ತಮ ಶಿಕ್ಷಣದಿಂದ ಹಳೆಯ ಬಂಧ ತೊರೆದು ಹೊಸ ಸಂಬಂಧಗಳು ತೆರೆದುಕೊಳ್ಳಬೇಕು. ರಸಾನುಭೂತಿ ಸಹಜಕ್ರಿಯೆ ಎನ್ನುವ ನಾದಬ್ರಹ್ಮನ ಪ್ರತಿಕ್ರಿಯೆ.”ತಿರುಳು ತಿಳಿಯಬೇಕು ಜೇನ್ನೊಣ ಹೂವಿನ ರಸ ಮುತ್ತಿದಾಂಗ”…. ಎನ್ನುವ ಕವಿತೆಯ  ಸಾಲುಗಳು ಅದನ್ನೇ ಹೇಳುತ್ತವೆ ಎಂಬುದನ್ನು ಲೇಖಕರಾದ ವಿ ಎ ದಿವಾಣಜಿ(ಕುಸುಮಾಕರ್ ದೇವರಗೆಣ್ಣೂರ) ಅವರು ತಮ್ಮ ಲೇಖನ(ಬೇಂದ್ರೆ ಕಾವ್ಯ-ಒಂದು ಚಿಂತನ) ದಲ್ಲಿ ಗುರುತಿಸಿದ್ದಾರೆ.

       ಬೇಂದ್ರೆಯವರು ಶಬ್ಧ ಗಾರುಡಿಗ ಮಾತ್ರವಲ್ಲದೇ ಸಂಖ್ಯಾಗಾರುಡಿಗರೂ ಹೌದು. ಸಂಖ್ಯಾಶಾಸ್ತ್ರದ ಜ್ಞಾನ ಅವರಲ್ಲಿ ಅಪಾರವಿದ್ದುದರಿಂದಲೇ ಅವರ ಕಾವ್ಯದಲ್ಲಿ  ಸಂಖ್ಯಾವಿಲಾಸವನ್ನು ಅರಿಯದೇ ಹೋದರೆ ಅಪೂರ್ವ ಲೋಕದ ಅನುಭವವನ್ನು ಕಳೆದುಕೊಂಡಂತೆಯೇ. ಅವರ ಕಾವ್ಯ ಮೌಖಿಕವಾಗಿ ಶಬ್ಧದ ಏರಿಳಿತಗಳಿಂದ ಓದಿ ರಸಾನುಭವದ ಚತುರ್ಮುಖ ಸಿದ್ಧಿಯನ್ನು ಪಡೆಯುವಂತದ್ದು. ಅವರದ್ದು ಜಾನಪದ ಕಾವ್ಯಶೈಲಿ, ಶಬ್ಧಕೋಶದ ಸಹಾಯವಿಲ್ಲದೇ ಅವರ ಕಾವ್ಯದಲ್ಲಿ ಈಜಾಡಬಹುದು. ಪರಂಪರೆಯ ಅನುಭವದ ಸಾರದೊಂದಿಗೆ ಹರ್ಷಸೃಷ್ಟಿಗೆ ಕಾರಣವಾಗುವ ಕಾವ್ಯದ ಓದಿಗೆ ವಿಸ್ತಾರವಾದ  ಹಿನ್ನಲೆಯ ಅಗತ್ಯವೇನಿಲ್ಲ. ಆದರೆ “ನಾನು ಮತ್ತು ಅದು”  ಎನ್ನುವ ಸಂಬಂಧಕ್ಕೆ ನಿಲುಕುವಂಥದ್ದಲ್ಲ! ಬದಲಾಗಿ” ನಾನು ಮತ್ತು ನೀನು” ಎನ್ನುವ ಅನುಬಂಧಕ್ಕೆ  ಅನುಭವಗಮ್ಯವಾದದ್ದು.

          ಕಾವ್ಯವನ್ನು ಕುರಿತ ಜ್ಞಾನ  ಕಾವ್ಯಾಸ್ವಾದನೆಯಾಗಲಾರದು, ಅದೊಂದು ಅನುಭವ. ಹೀಗಿದ್ದಾಗಲೂ ಅವರ ಕಾವ್ಯ ಸಹೃದಯನಿಂದೇಕೆ ದೂರವಾಗಿತ್ತದೆ ಎಂದರೆ….ರಸಿಕರು ಅವರ ಕಾವ್ಯದಲ್ಲಿ ಕಲೆ ಮತ್ತು ತಾಂತ್ರಿಕತೆ ಅರಸುತ್ತಾರೆ. ಅಲ್ಲಿ ಕಲೆ ಮತ್ತು ತಂತ್ರವಿಲ್ಲ ಎಂದಲ್ಲ, ತಂತ್ರ ಕಲೆಯನ್ನು ಸಾಧಿಸಿ ವೇದಕ್ಕು ಹಿರಿದು ವಚನಕ್ಕು ಕಿರಿದು ಎನ್ನುವ ನುಡಿಗಟ್ಟು ಒಪ್ಪಬಹುದು. ಅವರ ಕಾವ್ಯ ಓದುವುದೆಂದರೆ ಅವರ ಜೊತೆ ಸಂವಾದ ಮಾಡಿದಂತೆ. ಅದರ ಒಳದನಿಯನ್ನು ಒಳಗಿವಿ ಕೇಳಿದರೆ ಸಾಕು. ಕಾವ್ಯ ಎರಡು ಆಯಾಮಗಳಲ್ಲಿ “ವಾಚ್ಯ ಮತ್ತು ವ್ಯಂಗ್ಯ” ಇದರಲ್ಲಿ ವಾಚ್ಯ ವಿಶ್ಲೇಷಣೆಗೆ ಸಿಕ್ಕು  ಅದು ಸ್ಪಷ್ಟವಾಗಿದ್ದು ಅರ್ಥ ಗಮ್ಯವಾದದ್ದು. ಆದರೆ ವ್ಯಂಗ್ಯ ವಿಶ್ಲೇಷಣೆಗೆ ಎಟುಕದು ವಾಚ್ಯ ಗೌಣ ವ್ಯಂಗ್ಯ ಮುಖ್ಯ.

     ಅವರ ಕಾವ್ಯ ಬತ್ತಳಿಕೆಯಲ್ಲಿ ಭೋಗಯೋಗ ಸಮನ್ವಯದ ಕವಿತೆಗಳೂ ಇವೆ. ಅರವಿಂದ ಯೋಗಿ ಮಾರ್ಗಿಗಳಾಗಿದ್ದರೂ  ಅರವಿಂದರ ತತ್ವ ಪ್ರಸಾರಕರಾಗಿರಲಿಲ್ಲ. ಯಾವುದೇ ಒಂದು ಪಂಥಕ್ಕೆ ಸೇರಿದವರಾಗಿರಲಿಲ್ಲ ಅರವಿಂದರ ಕವಿತೆಗಳು ಬೇಂದ್ರೆಯವರ ಅನುವಾದದಲ್ಲಿ ಮರುಹುಟ್ಟು ಪಡೆದಿವೆ.  

       ಕಾವ್ಯವಾಚನವನ್ನು ಕುರಿತು ಹೇಳುವುದಾದರೆ, ಕಾವ್ಯೇತರ ಕೃತಿಗಳ ಅಭ್ಯಾಸಕ್ಕೂ ಕಾವ್ಯದ ಅಭ್ಯಾಸಕ್ಕು ಅಂತರವಿದೆ. ಪಠ್ಯವನ್ನು ಶಬ್ಧದ ಮೂಲಕ ತಿಳಿದುಕೊಳ್ಳುವುದು ದ್ಯೇಯವಾದರೆ, ಕಾವ್ಯದ ಓದು ಕಾವ್ಯದ ಪುನರ್ ನಿರ್ಮಾಣದ ಹಂತದವರೆಗೂ ಮುಂದುವರಿಯುತ್ತದೆ. ಅವರ ಕಾವ್ಯ ಶೈಲಿಯಲ್ಲಿ ವೈವಿದ್ಯವಿದೆ ಕೆಲವೆಡೆ ದೀಪ್ತ, ಕೆಲವೆಡೆ ಸ್ಪೂರ್ತವಾಗಿವೆ. ಇಂಥ ಕಾವ್ಯಶೈಲಿ ಇದ್ದಲ್ಲೆಲ್ಲಾ ಕಾವ್ಯದ ಶಕ್ತಿ ಹೆಚ್ಚಾಗಿರುತ್ತದೆ. ಅಭಿವ್ಯಕ್ತಿಗೆ ತಕ್ಕ ಎಂದರೆ,  ಕೊಟ್ಟಷ್ಟು ಕೆಲಸ ಮಾಡಿ ವಿರಮಿಸುವ ಉಚಿತ  ಶೈಲಿಯೂ ಇದೆ. ತೀವ್ರ ಶೈಲಿಯ ಸೊಗಸು ಅದರ ಸಂಕೀರ್ಣತೆಯಲ್ಲಿ ಮಿಡಿಯುತ್ತಿರುತ್ತದೆ. ನಿಸರ್ಗ ಅವರ ಪ್ರೇರಣ ಶಕ್ತಿಗಳಲ್ಲಿ ಒಂದು. ಅದರೆಡೆ ನೋಡುವ ಅವರಿಗೆ ಈ ಪ್ರೇರಣೆ ರೋಮ್ಯಾಂಟಿಕ್ ನಿಂದ ಬಂದುದಾದರೂ ಆದು ಅನುಕರಣವಲ್ಲ. ಅವರ ನಿಸರ್ಗ ಪ್ರೇಮ ಕೃತಕವಲ್ಲ. ಭಾವವಿವಷತೆಯ ದೌರ್ಬಲ್ಯ ಅವರಲ್ಲಿಲ್ಲ. ಕಾವ್ಯದಲ್ಲಿ ಏನನ್ನು ಅರಗಿಸಿಕೊಳ್ಳಬಹುದಿತ್ತೋ ಅದನ್ನೆಲ್ಲಾ ಅರಗಿಸಿಕೊಂಡವರು. ಅವರಿಗೆ ಅರಿವಿತ್ತು.  ಜಗತ್ತನ್ನು ಪಲ್ಲಟಿಸುವ ಶಕ್ತಿಗಳನ್ನು ಆಲಕ್ಷಿಸುವ ಕವಿ ಕತ್ತಲ ಮೂಲೆಯಲ್ಲಿ ತನ್ನಷ್ಟಕ್ಕೆ ತಾನು ಹುಡುಕುತ್ತ ಕೂಡಬೇಕೆಂದು. ಯಾವಾಗಲೂ ನಮ್ಮ ಅರಿವಿನ ಆಳ ನಮಗೆ  ಗೊತ್ತಿರುವುದಿಲ್ಲ. ಅದನ್ನು ನಾವು ಬೇದಿಸುವ ಅರಿವು ಇರುವುದಿಲ್ಲ.  ನಾವು ನಮ್ಮಿಂದ ಹಾಗೂ ಲೋಕದಿಂದ ಹೊರಹೋಗಿ ನಮ್ಮ ಸುಖ ದುಃಖಗಳನ್ನು ಮರೆಯುತ್ತೇವೆ  ಕ್ಷಣಕಾಲ. ಆದರೆ ನಿಜವಾದ ಕಲೆ,  ನಮ್ಮನ್ನು ಹಾಗೆ ಮಾಡಗೊಡುವುದಿಲ್ಲ. ನಮ್ಮ ಆಳವನ್ನು ತೆರೆದು ತೋರುವುದರೊಂದಿಗೆ ನಮ್ಮ ಹೊಣೆಯನ್ನು ನಮಗೆ ತೋರುತ್ತದೆ. ಕಾವ್ಯದಲ್ಲಿ ವ್ಯಕ್ತಿಯ ಅಭಿವ್ಯಕ್ತಿ ಆಗಬೇಕೆ? ಎಂದರೆ,  ಅದು ಇಂದು ಸ್ವೀಕೃತವಲ್ಲ. ಕಾವ್ಯ ಜ್ಞಾತದಿಂದ ಅಜ್ಞಾತ ಜಗತ್ತಿಗೆ ಕರೆದೊಯ್ಯಬೇಕು. ಸಮಾಜದ ಆಸೆ ಆಕಾಂಕ್ಷೆಗಳನ್ನು ಪ್ರಕಟಿಸುವುದರ ಜೊತೆಗೆ ಸಮಾಜದ ಸುಪ್ತ ಚಿತ್ತದಲ್ಲಿಯ ಆಸೆ ಆಕಾಂಕ್ಷೆಗಳನ್ನ ಅಭಿವ್ಯಕ್ತಿಸಬೇಕು.

( ನಾಳೆ ಮುಂದುವರೆಯುವುದು)


ಭಾರತಿ ಅಶೋಕ್.

One thought on “ಅಡಿಗರ ಸಾಕ್ಷಿ ಪತ್ರಿಕೆ 37ನೇ ಸಂಚಿಕೆಯ ಮರುಓದು- ಭಾರತಿ ಅಶೋಕ್

Leave a Reply

Back To Top