ಕಾವ್ಯ ಸಂಗಾತಿ
ನೋಟ
ವಿಮಲಾರುಣ ಪಡ್ಡಂಬೈಲು
ನಿನ್ನ ಆ ತೀಕ್ಷ್ಣ ಕಂಗಳ ನೋಟ
ಜಗದೊಳಗೆ ಬೆರೆತಿರಲು
ದಿಟ್ಟಿಸಿದೆ ಆ ನಿನ್ನ ಸೊಬಗ
ಭಾವಕೆ ನಿಲುಕದೆ ಕಂಬನಿ ಮಿಡಿದು
ಮರಳಿದೆ ಗೂಡಿಗೆ ನನ್ನಯ ಲೋಕಕೆ
ನಿನ್ನ ರೂಪದ ತಾಪಕೆ ಏರಿತು ಧಗೆ
ಕೊರಳೇರುವ ಹಿಮಮಣಿ ಮಾಲೆ
ಸೊರಗಿ ಕರಗಿ ಜಾರಿದವು
ವಜ್ರ ಹೊಳಹಿನ ನಿನ್ನ ದೇಹ
ಕನಸ ಮುದುಡಿಸಿ ನಾಚಿಸಿತು
ನಿನ್ನ ನೇರ ತಾಪಕ್ಕೆ ಬೆಚ್ಚುವೆವು ನಾವು
ದುಂಡಾದ ದೇಹ ಹೊನ್ನ ಮೆಯ್ ಬಣ್ಣ
ಆದರು ನಾವು ಸರಿವೆವು ಬಲುದೂರ
ನಿನ್ನಲ್ಲಿದ್ದ ಗೌರವವೋ ಅಂಜಿಕೆಯೊ
ತಲೆಗೆ ಹೊದಿಕೆ ಹೊದ್ದು ನಡೆವೆವು
ನಿನ್ನ ಹೊನ್ನ ಕಿರಣ ಸುಟ್ಟರು
ನಿನ್ನಪ್ಪುಗೆಯ ಬಯಸಿತು ಈ ನಿಸರ್ಗ
ನೀ ಕಾಣದಿರೆ ನಗೆ ಮರೆತು
ಮೌನವಾಗಿ ಬಿಕ್ಕಿಸುವಳು
ನೀನಾದೆ ಅವಳಿಗೆ ದಿವ್ಯ ಶಕ್ತಿಯ ಸೂತ್ರಧಾರ
ಬೆಳ್ಳಿ ಮೆಯ್ ಬಣ್ಣದ ಆ ಚೆಲುವ..!
ಸುತ್ತಲೂ ಸೈನಿಕರು ಇರುಳಿನ ರಾಜ
ಆದರೂ ಮನ ಕದಿವ ಚೋರ
ಕವಿ ಪುಂಗವರ ಸೆಳೆದು ಕವನವಾಗಿ
ರಸಿಕತನಕೆ ಮುನ್ನುಡಿ ಬರೆದವ
ಧಾತ್ರಿಯಲಿ ಹಿರಿಮೆ ಮೆರೆಸಿ
ತನ್ನ ಹಾಲ ಕಂಗಳಲ್ಲಿ ತಂಪಾಗಿಸಿ
ನಿನ್ನ ವಜ್ರ ದೇಹಕೆ ಸಡ್ದು ಹೊಡೆದ..!
ನೇಸರನೆ ನಿನ್ನ ಮನದ ಬೇನೆ
ಅರಿಯಲಾರೆ ನಾ..
ತಾಪದಲಿ ಜ್ವಲಿಸದಿರು
ಅವನ ನೋಟ ನಿನ್ನ ನೋಟ
ಸೇರಿರೆ ಸ್ವರ್ಗ ಸುಖ
ನಿನ್ನ ಸ್ಥಾನ ಧರೆಗೆ ಹಿರಿದು..
ಮುನಿಯದಿರು ನನ್ನ ಸಖ…