ಡಾ. ಯು. ಆರ್. ರಾವ್ ಮಾರ್ಚ್ ೧೦ – ಜನ್ಮದಿನ
ಭಾರತದ ಹಿರಿಮೆಯನ್ನು ಬಾನೆತ್ತರಕ್ಕೇರಿಸಿದ ಡಾ. ಯು. ಆರ್. ರಾವ್
ಬಹುಕಾಲ ಬಾಹ್ಯಾಕಾಶ ಉಪಗ್ರಹಗಳ ಉಡಾವಣೆಯಲ್ಲಿ ಪರರಾಷ್ಟ್ರಗಳನ್ನೇ ಅವಲಂಬಿಸಿದ್ದ ಭಾರತಕ್ಕೆ ಈ ಕ್ಷೇತ್ರದಲ್ಲಿ ಸ್ವಂತಿಕೆಯನ್ನು ತಂದುಕೊಟ್ಟ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಡಾ. ಯು. ಆರ್. ರಾವ್ ಹೆಸರು ಪ್ರಮುಖವಾದುದು.
ಉಡುಪಿ ರಾಮಚಂದ್ರ ರಾವ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ( ಈಗ ಉಡುಪಿಯೇ ಪ್ರತ್ಯೇಕ ಜಿಲ್ಲೆ) ಉಡುಪಿ ಹತ್ತಿರದ ಅದಮಾರುವಿನಲ್ಲಿ ೧೯೩೨ ಮಾರ್ಚ್ ೧೦ ರಂದು ಲಕ್ಷ್ಮೀನಾರಾಯಣ ಆಚಾರ್ಯ – ಕೃಷ್ಣವೇಣಿ ಅವರ ಮಗನಾಗಿ ಜನಿಸಿ ಮದ್ರಾಸ ವಿವಿಯಲ್ಲಿ ಬಿ. ಎಸ್.ಸಿ, ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂ. ಎಸ್.ಸಿ, ಗುಜರಾತ ವಿವಿಯಲ್ಲಿ ಪಿಎಚ್ಡಿ ಮುಗಿಸಿ ಅಂತರಿಕ್ಷ ವಿಜ್ಞಾನ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಗೈದರು.
ಲಖನೌ ಅಂಬೇಡ್ಕರ್ ವಿಶ್ವವಿದ್ಯಾಲಯದ ಚಾನ್ಸೆಲರ್ , ರಿಸರ್ವ್ ಬ್ಯಾಂಕ್ ನಿರ್ದೇಶಕ ಮಂಡಳಿ ಸದಸ್ಯರಾಗಿ,ಟೆಕ್ಸಾಸ್ ವಿವಿ . ಯಲ್ಲಿ ಅಸಿ. ಪ್ರೊಫೆಸರ್, ಎಂ. ಐ. ಟಿ. ಫ್ಯಾಕಲ್ಟಿ ಮೆಂಬರ್ , ಅಹ್ಮದಾಬಾದ ಫಿಜಿಕಲ್ ರೀಸರ್ಚ್ ಲ್ಯಾಬೋರೇಟರಿಯಲ್ಲಿ ಪ್ರೊಫೆಸರ್, ಐಐಎಸ್.ಟಿ ಚಾನ್ಸೆಲರ್ ಹೀಗೆ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ ಅವರು ಭಾರತ ಸರಕಾರದ ಅಂತರಿಕ್ಷ ಉಪಗ್ರಹಗಳ ಉಡಾವಣೆಯ ಕ್ಷೇತ್ರದಲ್ಲಿ ಸೆಟಲೈಟ್ ಟೆಕ್ನಾಲಜಿ ಸ್ಥಾಪನೆಯ ಹೊಣೆ ಹೊತ್ತು ೧೯೭೫ ರಲ್ಲಿ ಭಾರತದ ಮೊದಲ ಉಪಗ್ರಹ ” ಆರ್ಯಭಟ” ದ ಯಶಸ್ವಿ ಉಡಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ವಿಕ್ರಮ್ ಸಾರಾಭಾಯಿ ಅವರ ಮಾರ್ಗದರ್ಶನದಲ್ಲಿ ಭಾರತದ ಅಭಿವೃದ್ಧಿ ಗೆ ಪೂರಕವಾದ ವೀಕ್ಷಣಾ ಸೆಟಲೈಟ್ ಗಳನ್ನು ಅಂತರಿಕ್ಷಕ್ಕೆ ಕಳಿಸುವ ಕಾರ್ಯ ನಡೆಸಿದರು. ಹಿಂದೆ ನಮ್ಮ ಅಂತರಿಕ್ಷಯಾನಕ್ಕೆ ಬೇರೆ ದೇಶಗಳನ್ನೇ ಅವಲಂಬಿಸಬೇಕಿತ್ತು. ಅದನ್ನು ತಪ್ಪಿಸಿ ಭಾರತದಲ್ಲೇ ಲಾಂಚ್ ವ್ಹೆಯಿಕಲ್ ಸ್ವಾವಲಂಬನಕ್ಕೆ ಹಾದಿಮಾಡಿಕೊಟ್ಟರು. ಐ. ಆರ್.ಎಸ್.-೧/ ಎ, ೧/ ಬಿ,ಭಾಸ್ಕರ, ಆ್ಯಪಲ್, ರೋಹಿಣಿ, ಇನ್ಸಾಟ್ ೧/೨, ಮೊದಲಾದ ೧೮ ಕ್ಕೂ ಹೆಚ್ಚು ಅಂತರಿಕ್ಷ ನೌಕೆಗಳ ಉಡಾವಣೆಗಳಲ್ಲಿ ಪಾಲುದಾರರಾಗಿ ” ಭಾರತದ ಸೆಟಲೌಟ್ ಮ್ಯಾನ್” ಎಂಬ ಪ್ರಶಂಸೆಗೆ ಪಾತ್ರರಾದರು. ವಿಶ್ವಸಂಸ್ಥೆಯಿಂದಲೂ ಗೌರವಕ್ಕೆ ಪಾತ್ರರಾದ ರಾವ್ ಅವರ ಅಪೂರ್ವ ಸಾಧನೆಗಾಗಿ ಪದ್ಮ ಭೂಷಣ, ಪದ್ಮವಿಭೂಷಣ, ಸಾರಾಭಾಯಿ ಪ್ರಶಸ್ತಿ, ಭಟ್ನಾಗರ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಮೊದಲಾದ ಗೌರವಗಳನ್ನು ಪಡೆದರು. ವಾಶಿಂಗ್ಟನ್ ನ “ಸೆಟಲೈಟ್ ಹಾಲ್ ಆಫ್ ಫೇಮ್” ನಲ್ಲಿ ಸ್ಥಾನ ಪಡೆದ ಪ್ರಪ್ರಥಮ ಭಾರತೀಯ ವಿಜ್ಞಾನಿಯೆನಿಸಿದರು. (೨೦೧೩). ರಶ್ಯಾ, ಅಮೆರಿಕಾ ಮೊದಲಾದ ದೇಶಗಳು ಸಹ ಅವರನ್ನು ಗೌರವಿಸಿವೆ.
ಬಾಹ್ಯಾಕಾಶ ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತದ ಹೆಸರನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಡಾ. ಯು. ಆರ್. ರಾವ್ ಅವರು ೨೦೧೭ ಜುಲೈ ೨೪ ರಂದು ನಿಧನರಾದರು.
————————————-
– ಎಲ್. ಎಸ್. ಶಾಸ್ತ್ರಿ