ಕಾವ್ಯಸಂಗಾತಿ
ಕವಿತೆಗೊಂದು ಹೆಸರು
ಶ್ವೇತಾ.ಎಂ.ಯು.
ಕವಿತೆಗೆ ಹೆಸರಿಡುವಾಗ
ಅನ್ನಕ್ಕೂ ಹೆಸರಿಟ್ಟಿದ್ದೆ
ಅನ್ನದ ತುತ್ತಿಗೂ ಕವಿತೆಯ ಮತ್ತಿಗೂ ಭೇದವಿಲ್ಲ ಏನಿತು
ಅನ್ನ ಪ್ರಾಣವಾಗುವ ಹಾಗೆ
ಕವಿತೆ ಜೀವವಾಗುತಲಿದೆ
ಮನದ ಪಾತ್ರೆಯಲ್ಲಿ ಬೆಂದು…
ಒಲೆಯ ಮೇಲಿಂದ ಬೆಂದ ಹಿಟ್ಟನ್ನು ಕೆಳಗಿಳಿಸಿ,
ಗಂಟು ಕಟ್ಟದ ಹಾಗೆ ನಾದಬೇಕು
ಅದರೋಳಿ ಕೈಗಳು
ಕರಗತವಾಗ ಬೇಕು
ಹಿಟ್ಟು ಪ್ರಾಣದಾಯವಾಗಿಸುವ0ತೆ
ವಹಿಸುವ ಎಚ್ಚರ
ಪದಗಳ ಪೋಣಿಸಿ ಬರೆಯುವ
ಈ ಕವಿತೆಗೂ ಬೇಕು….
ಸಾಲು ಸಾಲುಗಳ ಬರೆದು
ಬರೆದುದ್ದನ್ನು ಹದವಾಗಿ ಭಾವಸಂಪದಗೊಳಿಸಿ
ನಾದಕೆ ಬೆಸುಗೆಗೊಳಿಸಿ
ಸಹೃದಯರಿಗೆ ಪಾಕಗೊಂಡ ಸಿಹಿಯಂತೆ
ಕವಿತೆ ಅರಳಬೇಕು
ಅನುಭವದ ಆಳದಲಿ
ಮಿಂದ ಸಾಲುಗಳು
ಘಮ-ಘಮಿಸಿ,ನಳ-ನಳಿಸಿ,
ಮುತ್ತಿನಾರದ ಹಾಗೆ ಕಂಗೊಳಿಸ ಬೇಕು….
ಬೇಯಿಸಿದರೆ ಅನ್ನ
ಕಾಯಿಸಿದರೆ ಕವಿತೆ
ಪ್ರಾಣದಾಯಕವಾದ ಈ ಎರಡು
ತನು-ಮನವನು ಸಂತೈಸುವ ಹಾಗೆ
ಬೇಯಬೇಕು…..
————————————–
ಶ್ವೇತಾ.ಎಂ.ಯು.