ರಮೇಶ್ ಬನ್ನಿಕೊಪ್ಪರವರ ಕವಿತೆ/ಮನುಷ್ಯ ಹೆಜ್ಜೆಯ ಗುರುತುಗಳು

ಕಾವ್ಯಸಂಗಾತಿ

ಮನುಷ್ಯ ಹೆಜ್ಜೆಯ ಗುರುತುಗಳು

ರಮೇಶ್ ಬನ್ನಿಕೊಪ್ಪ

ಮುರಿದ ಕೈ ಮಂದೆ ಮಾಡಿ
ಕೈ ಮುಗಿದ ಮನವೊಂದು
ಕಣ್ಣೀರು ತುಂಬಿ ಆರ್ಥನಾದಗೈದಿದೆ
ಕರುಳ ಬಳ್ಳಿಯ
ಕಣ್ಣೀರ ಕೋಡಿಯ ಮೇಲೆ

ಇಟ್ಟ ಹೆಜ್ಜೆಯ ಗುರುತುಗಳು ಮಾಸುವ ಮುನ್ನವೇ
ಸುಕ್ಕು ಸುಕ್ಕಾದ ಚರ್ಮ ಜೋತುಬಿದ್ದು
ಆಕಾಶಕ್ಕೆ ಕೈಯೊಡ್ಡಿ ನಿಂತಿದೆ

ನೊಂದ ಆಲದ ಮರದ ಬೇರುಗಳು

ಯಾಕೋ..

ಭೀಕ್ಷೆ ಬೇಡವ ಬಾಯಿ
ಮೂಕವಾಗಿದೆ

ತಂದೆ ತಾಯಿಗಳ ಹೊರದಬ್ಬಿದ ನಾಡಿನಲ್ಲಿ..
ಮಮಕಾರದ್ದೇ…ಮಾತು !!

ಮದರ್ ತೆರೇಸಾ ಪೋಟೋ
ಹಾಗೇ ನಕ್ಕಿತು.

ಗಿಜಿಗುಡುವ ಬಸ್ಟ್ಯಾಂಡಿನಲ್ಲಿ
ಯುವತಿಯೊಬ್ಬಳು ಬಗಲಲ್ಲಿ
ಕೂಸು ಎತ್ತಿಕೊಂಡು
ಕೈ ಮುಗಿದು ಬೇಡುತಿದ್ದಳು

ಅಮ್ಮಾ…ಅಮ್ಮಾ…
ಅದೇ ಧ್ವನಿ, ಅದೇ ಆರ್ಥನಾದ…!!

ನಾಟಕದ ಪಾತ್ರಕ್ಕೆ ತಕ್ಕಂತೆ
ಒನಪು ಒಯ್ಯಾರದ ತಳುಕು

“ಕೂಸು ಅಳುತಿದೆ ಹಾಲುಣಿಸುವಳೆಂಬ”
ಕರುಣೆಯ ಮಾತು.. ಜನರಿಂದ

ಕ್ಷಣ ಹೊತ್ತು..

ಯಾರೋ ಅಜಾನುಬಾಹು ವ್ಯಕ್ತಿ ಬಂದ..
ಬಿರುಸಾಗಿ ಕೈ ಎಳೆದು
ದುಡ್ಡು ಕಸಿದುಕೊಂಡು

ಕಿವಿಯೊಳಗೇನೋ ಹೇಳಿ ಓಡಿದ…

ನಂಬಲಾಗುತ್ತಿಲ್ಲ..
ಯಾವುದು ಸತ್ಯ.. ಯಾವುದು ಸುಳ್ಳು..?

ಮತ್ತೆ ಮತ್ತೆ
ಕೇಳಿತು ಮನುಷ್ಯ ಪ್ರೀತಿಯ ಹೆಜ್ಜೆಯ ಗುರುತುಗಳು

ಆಚೆ ಕಣ್ಣಾಡಿಸಿದೆ..

ಕಾರಿನಿಂದ ಇಳಿದ ವ್ಯಕ್ತಿ
ದೇವಸ್ಥಾನದ ಎದುರು
ಕೈಯೊಡ್ಡಿ ಬೇಡುತ್ತಿದ್ದ

ಬುರ್ಕಾ ಧರಿಸಿದಾಕೆ
ಮಸೀದಿಯ ಹೊರಗೆ ಕೈಯೊಡ್ಡಿ ನಿಂತಿದ್ದಳು

ಊರೊಳಗಿದ್ದ ಚರ್ಚಿನ ಫಾದರ್ ಕೂಡ ಕೈಯೊಡ್ಡಿ
ಯೇಸು ಪ್ರಭುವಿಗೆ
ಪ್ರಾರ್ಥನೆ ಸಲ್ಲಿಸುತ್ತಿದ್ದ…

ಹೌದು…!

ನಾವೂ ಒಂದು ರೀತಿಯ
ಭೀಕ್ಷುಕರೇ…

ಗುರುತಿಸಬೇಕಷ್ಟೇ..

ಮನುಷ್ಯ ಪ್ರೀತಿಯ
ಹೆಜ್ಜೆ ಗುರುತುಗಳ


4 thoughts on “ರಮೇಶ್ ಬನ್ನಿಕೊಪ್ಪರವರ ಕವಿತೆ/ಮನುಷ್ಯ ಹೆಜ್ಜೆಯ ಗುರುತುಗಳು

    1. ತುಂಬಾ ಚೆನ್ನಾಗಿದೆ ತಂದೆ ತಾಯಿಗಳ ಹೊರದಬ್ಬಿ ದ ನಾಡಲ್ಲಿ ಮಮಕಾರ ಧ ಮಾತು.

  1. ಈ ಕವನ ಓದಿದಾಗ ಮಾತು ಮೌನಕ್ಕೆ ಶರಣಾಯ್ತು.

    ಮೌನದಲ್ಲಿ ಯೊಚನೆಗಳು ನನ್ನ ಮನವನ್ನೆ ಬೆಳಕಿಗಾಗಿ ಯಾಚಿಸುತ್ತಿವೆ.

Leave a Reply

Back To Top