ಡಾ. ಚನ್ನಮ್ಮ ಎನ್. ಅಲ್ಬಾ ವಿಶೇಷ ಲೇಖನ

ಲೇಖನ ಸಂಗಾತಿ

ಡಾ. ಚನ್ನಮ್ಮ ಎನ್. ಅಲ್ಬಾ

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ

ಕಲಬುರಗಿ : ಯತ್ರನಾರೆಸ್ತು ಪೂಜ್ಯಂತೆ ರಮಂತೆ ತತ್ರದೇವತಾ (ಎಲ್ಲಿ ಮಹಿಳೆಯರು ನೆಲೆಸಿರುತ್ತಾರೆ, ಅಲ್ಲಿ ದೇವತೆಗಳು ನೆಲೆಸಿರುತ್ತಾರೆ) ಪ್ರತಿಯೊಬ್ಬ ಯಶಸ್ವಿ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಹಾಗೂ ಅವಳು ವಿಭಿನ್ನ ಪಾತ್ರಗಳನ್ನು ತಾಳುತ್ತಾಳೆ. ಜನ್ಮ ನೀಡಿ ಕೈ ಹಿಡಿದು ನಡೆಸುವವಳು ತಾಯಿ, ಮಗುವಾಗಿ ಆಟವಾಡುವಾಗ ಜೋಪಾನ ಮಾಡುತ್ತಾ ನಮ್ಮೊಂದಿಗೆ ಆಟವಾಡುವವಳು ಅಕ್ಕ, ನಮಗೆ ಶಾಲೆಯಲ್ಲಿ ಪಾಠ ಹೇಳಿಕೊಡುವವಳು ಶಿಕ್ಷಕಿ, ನಮ್ಮನ್ನು ಪ್ರೀತಿ ಮಾಡುತ್ತಾ ನಮ್ಮ ಬೇಕು, ಬೇಡಗಳನ್ನು ನೋಡಿಕೊಳ್ಳುವಳು ಧರ್ಮಪತ್ನಿ, ನಮಗೆ ಕಷ್ಟವೆಂದಾಗ ಕಣ್ಣೀರು ಹಾಕುವವಳು ಮಗಳು, ಸತ್ತಾಗ ಮಲಗಲು ಜಾಗ ಕೊಡುವವಳು ಭೂಮಿತಾಯಿ ಹಾಗಾಗಿ ಪ್ರತಿಯೊಬ್ಬ ಮಹಿಳೆಯನ್ನು ಗೌರವಿಸಿ, ಒಂದು ವೇಳೆ ನೀವು ಮಹಿಳೆಯಾಗಿದ್ದಲ್ಲಿ ಹೆಣ್ಣಾಗಿ ಜನಿಸಿದ್ದಕ್ಕೆ ಹೆಮ್ಮೆ ಪಡಿ.

ಸಾಧನೆಗೆ ಸ್ಫೂರ್ತಿ, ಬದುಕಿಗೆ ದಾರಿ, ಕುಟುಂಬದ ಶಕ್ತಿ, ಬದುಕಿನಲ್ಲೂ ಪ್ರಮುಖ ಸ್ಥಾನ ಪಡೆದವಳು ಮಹಿಳೆ. ಈ ಸ್ತ್ರೀ ಅಥವಾ ಮಹಿಳೆ ಇಲ್ಲದೆ ಬದುಕೆ ಇಲ್ಲ. ವಿಶ್ವ ಮಹಿಳಾ ದಿನಾಚರಣೆಯನ್ನು ಪ್ರತಿವರ್ಷ ಮಾರ್ಚ್ ೮ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ. ಅವರ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಅವರಿಗೆ ಮೀಸಲಿರಿಸಲಾಗಿದೆ.

ಹೆಣ್ಣು ಎಂಬುದು ಒಂದು ಶಕ್ತಿ

ಹೆಣ್ಣು ಎಂಬುದು ಒಂದು ಶಕ್ತಿ, ಹೆಣ್ಣು ಇಲ್ಲದೆ ಈ ಜಗವೇ ಇಲ್ಲ ಹೆಣ್ಣು ಸಂಸಾರದ ಕಣ್ಣು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ತೊಟ್ಟಿಲು ತೂಗುವ ಕೈ ಜಗವೇ ತೂಗಬಲ್ಲದು ಹೀಗೆ ತಮ್ಮ ದಣಿವರಿಯದ ಕೆಲಸ, ನಿಸ್ವಾರ್ಥ ಪ್ರೀತಿ, ಕಾಳಜಿಯ ಕಾರಣದಿಂದ ಎಲ್ಲರ ಬದುಕಿಗೂ ಸ್ಪೂರ್ತಿಯಾದ ಮಹಿಳೆಯರಿಗೆ ಧನ್ಯವಾದ ಹೇಳುವ ದಿನವೇ ಮಾರ್ಚ್ 8. ಈ ದಿನವನ್ನು ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ.

ಒಂದು ವಿಶೇಷ ದಿನ

ಅಂತರಾಷ್ಟ್ರೀಯ ಮಹಿಳೆಯರ ದಿನವನ್ನು ಮೊದಲ ಬಾರಿಗೆ ಕೂಲಿ ಚಳವಳಿಯ ಮೂಲಕ ಉತ್ತರ ಅಮೇರಿಕ ಮತ್ತು ಯುರೋಪ ದೇಶಗಳಲ್ಲಿ ಹೊರಹೊಮ್ಮಿತು. ಮಹಿಳಾ ದಿನಾಚರಣೆ ಮೂಲಕ ಲಿಂಗಸಮಾನತೆ ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂಬ ಅಂಶವನ್ನು ಬಲವಾಗಿ ಹೇಳಲು ಈ ದಿನ ಒಂದು ದೊಡ್ಡ ವೇದಿಕೆಯಾಗಿರುತ್ತದೆ. ಅಲ್ಲದೆ ದೇಶಕ್ಕೆ, ಪ್ರಪಂಚಕ್ಕೆ ಮಹಿಳಾ ಸಾಧಕರ ಕೊಡುಗೆಗಳನ್ನು ನೆನೆದು ಸಾರುವ ದಿನವಿದು. 1975ರ ಮಾರ್ಚ್ 8ರ ಅಂತರಾಷ್ಟ್ರೀಯ ದಿನದಿಂದ ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನು ಆಚರಿಸಲು ಆರಂಭಿಸಿದವು. ಪ್ರಪಂಚದಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನ ಒಂದು ವಿಶೇಷ ದಿನ. ಜಾಗತಿಕವಾಗಿ ಆಚರಿಸುವ ದಿನವಾಗಿದ್ದು, ಮಹಿಳೆ ಕುಟುಂಬದ ಆಧಾರ ಸ್ತಂಭವಾಗಿ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ, ವಿಜ್ಞಾನ, ಕ್ರೀಡಾ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ನೆನೆಯುವ ದಿನವಾಗಿದೆ.

ಒಂದು ದಿನಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ

ಒಂದು ಕುಟುಂಬದ ಸೌರಕ್ಷಣೆ, ಸಲಹುವ ಸಾಮರ್ಥ್ಯ ಗಂಡಿಗಿಂತ ಹೆಚ್ಚಿನದಾಗಿ ಇರುವುದೇ ಮಹಿಳೆಗೆ. ಮಹಿಳಾ ದಿನವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಪ್ರತಿದಿನವೂ ಮಹಿಳಾ ದಿನವೇ. ಎಲ್ಲರ ಬದುಕಿನಲ್ಲ್ಲೂ ತೋರುವ ಅಕ್ಕರೆ, ನಿಭಾಯಿಸುವ ಜವಾಬ್ದಾರಿ, ಕುಟುಂಬಕ್ಕಾಗಿ ವಹಿಸುವ ಶ್ರಮ ಪ್ರತಿಯೊಬ್ಬರಿಗೂ ಗೊತ್ತಿದೆ. ಹೀಗಾಗಿ ಮಹೀಳೆಯರಿಗೆ ಧನ್ಯವಾದ ಹೇಳಿ. ಅದು ಎಲ್ಲರ ಕರ್ತವ್ಯ ಕೂಡ ಹೌದು.

ಮಹಿಳೆಯರ ಹಕ್ಕುಗಳು ಪರಿಚಯಿಸುವುದಾಗಿದೆ

ಮಹಿಳಾ ದಿನಾಚರಣೆಯ ಉದ್ದೇಶ ವಿಶ್ವ ವ್ಯಾಪಿ ಮಹಿಳೆ ಮತ್ತು ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಹಕ್ಕುಗಳು ಮತ್ತು ಸೌಲಭ್ಯಗಳ ಬಗ್ಗೆ ಪರಿಚಯಿಸುವುದಾಗಿದೆ. 1909ರ ಫೆಬ್ರವರಿ 28ರಂದು ಅಮೇರಿಕಾದ ಸಮಾಜವಾದಿ ಪಕ್ಷವು ನ್ಯೂಯಾರ್ಕನಲ್ಲಿ ಮಹಿಳಾ ಸಮಾವೇಶದಲ್ಲಿ ಕೈಗೊಂಡ ನಿರ್ಣಯದಂತೆ ಪ್ರತಿವರ್ಷ ಮಹಿಳಾ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ಮೊದಲ ವರ್ಷದ ಮಹಿಳಾದಿನಾಚರಣೆಯನ್ನು ಸೋವಿಯತ್ ರಷ್ಯಾದ ಪೆಟ್ರೋ ಗಾರ್ಡ್ನಲ್ಲಿ 1917ರ ಮಾರ್ಚ್ 8ರಂದು ಆಚರಿಸಲಾಯಿತು.

ಮಹಿಳಾ ದಿನ ಆಚರಿಸುವ ನಿರ್ಣಯ

ವಿಶ್ವಸಂಸ್ಥೆಯು 1975 ರ ಜೂನ 19ರಿಂದ ಜುಲೈ 3ರ ಮೆಕ್ಸಿಕೋದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಪ್ರತಿ ವರ್ಷ ಮಾರ್ಚ್ 8ರಂದು ಮಹಿಳಾ ದಿನಾಚರಣೆ ಆಚರಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಹೀಗಾಗಿ 1975ನ್ನು ಅಂತರಾಷ್ಟ್ರೀಯ ಮಹಿಳಾ ವರ್ಷ ಎಂದು ಗುರುತಿಸಲಾಗಿದೆ. ಮಹಿಳಾ ಸಬಲೀಕರಣವು ರಾಷ್ಟ್ರೀಯ ನೀತಿಯನ್ನು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ 2001ನ್ನು ರಾಷ್ಟ್ರೀಯ ಮಹಿಳಾ ಸಬಲೀಕರಣ ವರ್ಷವನ್ನಾಗಿ ಘೋಷಣೆ ಮಾಡಿತು.

ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಹಿಳಾ ಆಚರಣೆಗಳು:

ಅಂತರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನ ಎಂದು ವಿಶ್ವಸಂಸ್ಥೆಯು 2008 ಅಕ್ಟೋಬರ್ 15 ರಿಂದ ಆಚರಿಸಲಾಗುತ್ತಿದೆ.

ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವೆಂದು ಅಕ್ಟೋಬರ್ 11-2012ರಲ್ಲಿ ಪ್ರಥಮ ಬಾರಿಗೆ ಆಚರಿಸಲಾಯಿತು.

1966ರ ಜನವರಿ 24ರಂದು ಇಂದಿರಾ ಗಾಂಧಿಯವರು ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಅವರ ನೆನಪಿಗಾಗಿ ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಗುವಿನ ದಿನವಾಗಿ ಆಚರಿಸಲಾಗುತ್ತದೆ.

ಭಾರತದ ಮಹಿಳಾ ಸಾಧಕೀಯರು:

ದೆಹಲಿ ಸುಲ್ತಾನರ ಗುಲಾಮಿ ಮನೆತನಕ್ಕೆ ಸೇರಿದ ಮೊದಲ ಮತ್ತು ಏಕೈಕ ಮಹಿಳಾ ಆಡಳಿತಗಾರ್ತಿಯಾದ ರಜಿಯಾ ಸುಲ್ತಾನ (1236-1240), ಬ್ರಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲದ ನೀತಿಯ ವಿರುದ್ಧ ಹೋರಾಡಿದ ಹೋರಾಟಗಾರ್ತಿ ಕಿತ್ತೂರಾಣಿ ಚೆನ್ನಮ್ಮ, ‘ಅಪಾಯಕಾರಿ ದಂಗೆಕೋರ ನಾಯಕಿ’ ಎಂದು ಪ್ರಖ್ಯಾತಳಾದ ಝಾನ್ಸಿರಾಣಿ ಲಕ್ಷ್ಮೀಬಾಯಿ, ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಪ್ರಪ್ರಥಮ ಮಹಿಳೆ ಹಾಗೂ ಕರ್ನಾಟಕದ ಮೊದಲ ಮತ್ತು ಏಕೈಕ ಮಹಿಳಾ ರಾಜಪಾಲರಾದ ವಿ.ಎಸ್.ರಮಾದೇವಿ, ಸುಪ್ರೀಂಕೋರ್ಟಿನ ಮೊಟ್ಟ ಮೊದಲ ನ್ಯಾಯಾಧೀಶೆ ಫಾತಿಮಾ ಬೀಬಿ, ಭಾರತೀಯ ಸ್ಟೇಟ್ ಬ್ಯಾಂಕಿನ ಮೊಟ್ಟ ಮೊದಲ ಮುಖ್ಯಸ್ಥರಾದ ಅರುಂಧತಿ ಭಟ್ಟಾಚಾರ್ಯ, ಪ್ರಪ್ರಥಮ ಬಾರಿಗೆ ಹೆಣ್ಣು ಮಕ್ಕಳಿಗಾಗಿ 1848ರಲ್ಲಿ ಶಾಲೆಯನ್ನು ತೆರೆದು ಶಿಕ್ಷಣ ನೀಡಿದ ‘ಶಿಕ್ಷಣದ ಅವ್ವ’ ಸಾವಿತ್ರಿಬಾಯಿ ಪುಲೆ, ಭಾರತದ ಮೊಟ್ಟಮೊದಲ ಹೈಕೋರ್ಟ್ ಮಹಿಳಾ ನ್ಯಾಯಮೂರ್ತಿ ಅನ್ನಾ ಚಾಂಡಿ, ಮೌಂಟ್ ಎವರೆಸ್ಟನ್ನು 1984ರಲ್ಲಿ ಏರಿದ ಭಾರತದ ಮೊದಲ ಮಹಿಳೆ ಬಚೇಂದ್ರಿ ಪಾಲ್, ಮೊಟ್ಟ ಮೊದಲ ಸಭಾಪತಿ ಮೀರಾಕುಮಾರಿ, ಜ್ಞಾನಪೀಠ ಪ್ರಶಸ್ತಿ ಪಡೆದ ಮೊಟ್ಟಮೊದಲ ಮಹಿಳೆ ಆಶಾ ಪೂರ್ಣದೇವಿ, ಅಂತರಾಷ್ಟ್ರೀಯ ಹಣಕಾಸು ನಿಧಿಯ ಆರ್ಥಿಕ ಸಲಹೆಗಾರ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಗೀತಾ ಗೋಪಿನಾಥ್, I.P.S ಸೇವೆಗೆ ಸೇರಿದ ಮೊದಲ ಮಹಿಳೆ ಕಿರಣ್‌ಬೇಡಿ, ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ ಮೊದಲ ಮಹಿಳೆ ವಿಜಯಲಕ್ಷ್ಮೀ ಪಂಡಿತ್, ಭಾರತದ 12ನೇ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದ ಮೊದಲ ಮಹಿಳೆ ಹಾಗೂ ಸುಖೋಯ್ ಯುದ್ಧ ವಿಮಾನವನ್ನು ಏರಿದ ಮೊದಲ ಮಹಿಳೆ ಎಂದು ಪ್ರಖ್ಯಾತಳಾದ ಪ್ರತಿಭಾದೇವಿ ಸಿಂಗ್ ಪಾಟೀಲ್ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಹೆಣ್ಣುಮಗಳು ಸಾಧಿಸಿದ್ದಾಳೆ ಹಾಗೂ ಸಾಧಿಸುತ್ತಿದ್ದಾಳೆ ಎಂದು ಹೇಳಲು ನನಗೆ ತುಂಬಾ ಹೆಮ್ಮೆ ಅನಿಸುತ್ತದೆ ಎಲ್ಲರಿಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.


ಡಾ. ಚನ್ನಮ್ಮ ಎನ್. ಅಲ್ಬಾ

Leave a Reply

Back To Top