ವಿಶೇಷ ಲೇಖನ
“ಗೃಹಿಣಿ ಗೃಹ ಮುಚ್ಯತೆ”
ಅಭಿಜ್ಞಾ ಪಿ.ಎಮ್ ಗೌಡ
ಈ ಒಂದು ವಿಷಯಕ್ಕೆ ನನ್ನದೊಂದು ಬರಹ….
“ಪುರುಷನು ಯಾವಾಗಲೂ ಕುಟುಂಬವನ್ನು ರಕ್ಷಣೆ ಹಾಗು ಪೋಷಣೆಯ ಹಾದಿಯಲ್ಲಿ ನಡೆದರೆ, ಮಹಿಳೆ ಅದರ ಬೆಳವಣಿಗೆಯನ್ನು ಬಯಸುವುದರ ಮೂಲಕ ಸರ್ವಾಗೀಣ ಪ್ರಗತಿಯ ವೇಗವನ್ನು ಅಧಿಕಗೊಳಿಸುವಳು.”
‘ಗೃಹಿಣಿ ಗೃಹಲಕ್ಷ್ಮಿಯೇ ಸರಿ’ ಏಕೆಂದರೆ ಹೆಣ್ಣಿಲ್ಲದೆ ಗೃಹಕ್ಕೆಲ್ಲಿದೆ ಮೌಲ್ಯ ..? ಅವಳಲ್ಲವೇ ಅಲ್ಲಿಯ ಕಾಲ್ಯ, ಅವಳಿಲ್ಲದೆ ಬಾಳೇ ಬರಡು. ಅವಳೊಂದು ಗೃಹದೊಳಗೆ ಸದಾ ಪ್ರಜ್ವಲಿಸುವ ಪ್ರಣತಿ… ಖಂಡಿತ ಹೌದು…
ಪ್ರಣತಿ ತಾನುರಿದು ಜಗಬೆಳಗುವುದು ಅದೆಷ್ಟು ಸತ್ಯವೋ .? ಅಷ್ಟೆ ಸತ್ಯ. ‘ಹೆಣ್ಣು ಕುಟುಂಬದ ಕಣ್ಣು’ಎಂಬುದು….
ಇವಳೊಂದು ಸೂರ್ಯನಷ್ಟೆ ದೇದೀಪ್ಯಮಾನ.
ಇವಳಿಂದಲೆ ಗೃಹಕ್ಕೆ ಯಾವಾಗಲೂ ಶೋಭಾಯಮಾನ.ಇವಳಿದ್ದರೆ ಕಳೆ ಇವಳಿಲ್ಲದಿದ್ದರೆ ಬರಿ ಕಣ್ಣೀರ ಹೊಳೆ..ಯಾಕೆ ಇಷ್ಟಿಲ್ಲ ಹೇಳುತ್ತಿರುವೆ.? ಎಂದರೆ ಅನುಭವಜನ್ಯ. ನಾನು ಕೂಡ ಒಬ್ಬ ಮಗಳಾಗಿ,
ಸಹೋದರಿಯಾಗಿ ,ಸ್ನೇಹಿತೆಯಾಗಿ,ಮಡದಿಯಾಗಿ ,ಈಗ ತಾಯಿಯಾಗಿರುವೆ.ಅಬ್ಬಾ.!ಹೆಣ್ಣು ಹೊತ್ತಿರುವ ಜವಾಬ್ದಾರಿಗಳು, ಮಾಡಿರುವ ಸಾಧನೆ ತೊಡಗಿರುವ ಕೈಂಕರ್ಯಗಳು. ನಿಜ ಅವಳು ನೆಮ್ಮದಿ ಮತ್ತು ಆರೋಗ್ಯಕರ ಕುಟುಂಬವನ್ನೆ ಸದಾ ಬಯಸುವಳು.ಪುರುಷ ಮನೆಯ ಯಜಮಾನನಾಗಿದ್ದರೂ ಕೂಡ ಅವನಿಗೆ ಸಾರಥಿಯಾಗಿ ಕುಟುಂಬ ಮುನ್ನಡೆಸುವ ಚಾಕಚಕ್ಯತೆ ಇದಿಯಲ್ಲ ಅದು ಅವಳೊಳಗಿನ ನಿಸ್ವಾರ್ಥತೆಗೆ ಹಿಡಿದ ಕನ್ನಡಿಯೆಂದರೆ ತಪ್ಪಾಗಲಾರದು ನಿಜಕ್ಕೂ ಇವಳ ನಿಷ್ಕಲ್ಮಶ ಕಾರ್ಯಗಳು ಅದ್ಭುತ, ಅಮೋಘ.ಮೊದಲು ಹೆಣ್ಣು ಮಕ್ಕಳನ್ನೂ ಶಾಲೆಗೆ ಕಳಿಸಿದರೆ ಮಹಾಪಾಪವೆನ್ನುವ ಕಾಲವೊಂದಿತ್ತು ಆದರೆ ಈಗ ಕಾಲ ಬದಲಾಗಿದೆ.”ಕಾಲಾಯಾ ತಸ್ಮೈ ನಮಃ”.ಕಾಲ ಬದಲಾದಂತೆ ಪ್ರತಿಯೊಬ್ಬರ ಆಲೋಚನೆಗಳು, ಚಿಂತನೆಗಳು ಬದಲಾಗುತ್ತಿವೆ.ಮೊದಲೆಲ್ಲ ಹೆಣ್ಣು ಶಾಲೆಗೆ ಹೋಗುತ್ತಾಳೆಂದರೆ ಸಾಕು ಮೂಗು ಮುರಿಯುವಂತೆ ಮಾತಾಡುತ್ತಿದ್ದರುˌ ವಿದ್ಯಾ ಸಾಧನೆ ಮಾಡುತ್ತಾಳೆಂದರೆ ಅಷ್ಟೆ..! ಓಹೋ..! ಅದೇನು ಮಹಾ ಸಾಧನೆಯೊ.? ಎಂದು ವ್ಯಂಗ್ಯವಾಡುತ್ತಿದ್ದರು.ಅಲ್ಲಿ ಹಂಗಿಸುವಿಕೆಯ ಮಾತು ಕೇಳಿ ಬರುತ್ತಿತ್ತೆ ವಿನಃ ಪ್ರೋತ್ಸಾಹದಾಯಕ ಮಾತುಗಳು ಬರುತ್ತಿರಲಿಲ್ಲ.ಇವಳೇನಿದ್ದರು ಮನೆ ಗೆಲಸಕ್ಕಷ್ಟೇ ಸೀಮಿತಳು ಎಂದು ಹಣೆಪಟ್ಟಿ ಕಟ್ಟಿದ್ದರು. ಆದ್ರೂ ಕೂಡ ಛಲವಂತ ಹೆಣ್ಣು ಮಕ್ಕಳು ಆ ಕಾಲದಲ್ಲೂ ಕೂಡ ಸಾಧನೆ ಮಾಡಿದ ಅದೆಷ್ಟೊ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ.
ನಾವು ಹೆಣ್ಣನ್ನು ಅದೆಷ್ಟು ಹೋಲಿಕೆಗಳೊಂದಿಗೆ ಬಿಂಬಿಸುತ್ತೇವೆ. ಇದು ಎಲ್ಲರಿಗೂ ಗೊತ್ತಿರುವ ವಿಷಯಗಳೇ ಅಲ್ಲವೇ .? 'ಹೆಣ್ಣು ಜಗಬೆಳಗುವ ದೀಪ್ತಿ' ,"ಹೆಣ್ಣೊಂದು ಕಲಿತರೆ ಶಾಲೆಯನ್ನು ತೆರೆದಂತೆ" ,"ಇವಳೊಂದು ಆತ್ಮವಿಶ್ವಾಸದ ಗಣಿ" ,"ಹೆಣ್ಣಾಗಿ ಹುಟ್ಟಿರುವುದೆ ಒಂದು ಹೆಮ್ಮೆ" ,ಇಷ್ಟೆಲ್ಲ ಹೊಗಳಿಕೆಯ ಮಹಾಪೂರವೆ ಹರಿದು ಬರುತ್ತಿದ್ದರು ಇವುಗಳೆಲ್ಲವನ್ನು ತೋರಿಕೆಯ ಹಾಗು ಕೇವಲ ಹೇಳಿಕೆಗಳಾಗಿ ಮಾತ್ರ ನೋಡುತ್ತಿದ್ದೇವೆ. ಆದರೆ ಇಂದಿಗೂ ಒಂದಿಲ್ಲದೊಂದು ಕಾರಣದಿಂದಾಗಿ ಮಹಿಳೆಯು ತುಳಿತ, ಅವಮಾನಗಳಿಗೆ ಗುರಿಯಾಗುತ್ತಿರುವುದು ತೀವ್ರತರವಾದ ಮೋಸ ಎಂದರೆ ತಪ್ಪಾಗಲಾರದು.
ಪ್ರತಿಮನೆಯ ಗೃಹಲಕ್ಷ್ಮಿಯೇ ಹೆಣ್ಣು ಅಂತ ಅದೆಷ್ಟು ಸರಳವಾಗಿ ವ್ಯಾಖ್ಯಾನ ಮಾಡ್ತಾರೆ ಅಬ್ಬಾ..! ಈ ಕಿರೀಟ ಹೊತ್ತ ಹೆಣ್ಣಿಗೆ ಗೊತ್ತು. ಅದರ ಹಾಡು ಪಾಡುಗಳು. ಅವಳೊಳಗಿನ ವೇದನೆಗಳು.ಅವಳು ತನ್ನೊಳಗಿನ ನೋವು ,ದುಃಖ, ದುಮ್ಮಾನ ,ಸಂಕಟಗಳು, ಅವಮಾನಗಳನ್ನೆಲ್ಲ ಮುಚ್ಚಿಟ್ಟು ಮನೆಯ ಒಳತಿಗಾಗಿ ,ಮಕ್ಕಳ ಯೋಗಕ್ಷೇಮಕ್ಕಾಗಿ, ಗಂಡನ ಏಳ್ಗೆಗಾಗಿ ನಗುವಿನ ಮೊಗವೊತ್ತು ಪ್ರತಿದಿನ ಬಾಳ್ವೆ ಸಾಗಿಸುತ್ತಿರುವ ಅವಳ ಅಪೂರ್ವ, ಅನುಪಮ ಕೈಂಕರ್ಯ ತಥ್ಯವಾಗಲೂ ಶ್ಲಾಘನೀಯ..
ಮಗಳಾಗಿದ್ದಾಗ ಒಂಥರ ಕಷ್ಟಗಳು, ತಂದೆ ತಾಯಿಯ ಬಡತನದ ಜೀವನಕ್ಕೆ ಒಗ್ಗಿ ನಡೆಯುತ್ತಿದ್ದರು ಕೂಡ ಅವರ ಪ್ರೀತಿ ,
ಸ್ನೇಹ, ಹಾರೈಕೆಗಳು ಅನನ್ಯ.ಅಲ್ಲೊಂಥರ ಸ್ವಾತಂತ್ರ್ಯವಿತ್ತು, ಮನಸ್ಸಿಗೆ ನೆಮ್ಮದಿ ,
ಜೀವನ ಉಲ್ಲಾಸ, ಉತ್ಸಾಹಗಳೆ ಹೆಚ್ಚಾಗಿದ್ದವು..ಮದುವೆಯ ನಂತರ ಹೆಂಡತಿಯಾಗಿ ಬಂದು ಜವಾಬ್ಧಾರಿಗಳನ್ನು ಹೊತ್ತು ಗಂಡನಿಗೆ ಸಾರಥಿಯಾಗಿ ಗೃಹರಕ್ಷಕದಳದ ಎಲ್ಲಾ ಆಗು ಹೋಗುಗಳ ಹೊಣೆಯೊತ್ತಿ ಸಂಸಾರವೆಂಬ ನೊಗವನ್ನು ಸೌಖ್ಯದ ಮಾರ್ಗದಲ್ಲಿ ಎಳೆಯುವ ಪ್ರಸಂಗಳಿವೆಯಲ್ಲ ಅವುಗಳಂತು ಸೋಜಿಗವೆ ಸರಿ…
ಮುಂಜಾನೆಯಿಂದ ಮಲಗುವವರೆಗೂ ಕಾರ್ಮಿಕಳಾಗಿ ದುಡಿಯುವ ಈ ಹೆಣ್ಣು ಆತ್ಮವಿಶ್ವಾಸದ ಖನಿ ,ಏನಾದರೊಂದು ಸಾಧಿಸುವ ಛಲಗಾತಿ, ಹಸಿವನ್ನು ಮುಚ್ಚಿಟ್ಟಿ ಹೆತ್ತ ಕರುಳ ಒಡಲ ಬೇಗೆಯನ್ನು ನಂದಿಸೊ ಅದ್ಭುತ ಭಾವದೀಪ್ತಿ.ಇವಳೊಂತರ ಕ್ಷಣಕ್ಷಣವು ಉನ್ಮೀಳಿತವಾಗುತ್ತಿರುವ ಪುಷ್ಪದಂತೆ.ನರಳಿ ಹೊರಳಿದರೂ ಸಂಸಾರವೆಂಬ ದೋಣಿಯನ್ನು ಸರಿಯಾದ ಕ್ರಮದಲ್ಲಿ ಸಾಗಿಸೊ ಅದ್ವಿತೀಯ ನಾರಿ.ಹೊಂದಾಣಿಕೆ ಮಾಡಿಕೊಂಡು ಸಂಸಾರ ಸಾಗಿಸುವುದರಲ್ಲಿ ಹೆಣ್ಣು ನಿಜಕ್ಕೂ' ಕ್ಷಮಯ ಧರಿತ್ರಿ'ಯೇ ಸರಿ. ಅಷ್ಟು ತಾಳ್ಮೆ ಸಹನೆಯ ಗುಣವುಳ್ಳವಳು. ಇವಳು ಸಹನೆಯ ತೇರು , ಮನೆ ಮಂದಿಗೆಲ್ಲ ಸೂರು.ಹೊಂದಾಣಿಕೆಗು ಹೆಣ್ಣಿಗೂ ಈ ಏನೋ ಒಂಥರ ಅವಿನಾಭಾವ ಸಂಬಂಧವಿದೆ.ಯಾಕೆಂದರೆ ತಮ್ಮ, ತಮ್ಮ ಜೀವನದ ಪ್ರತಿಘಟ್ಟದಲ್ಲೂ ಹೊಂದಿಕೊಂಡು ಹೋಗುವ ಗುಣವಿರುವಿದೇ ಹೆಣ್ಣಿಗೆ ಮಾತ್ರ. ಹೆಣ್ಣು ಪ್ರತಿಭಾರಿಯೂ ಹೊಂದಾಣಿಕೆ ಮಾಡಿಕೊಳ್ಳಲೆ ಬೇಕು ಇದು ಅವಳಿಗೆ ಅನಿವಾರ್ಯವು ಹೌದು,ಈ ಗುಣದಿಂದಲೆ ಆಕೆ ಎಲ್ಲೆಡೆಯಲ್ಲೂ ಹೊಂದಿಕೊಂಡು ಹೋಗುತ್ತಿರುವಳು. ಗೃಹಿಣಿ ಪ್ರತಿ ವಿಷಯದಲ್ಲೂ ಜಾಗೃತಿ ಹಾಗೂ ಕಳಕಳಿಯನ್ನು ಎಲ್ಲಾ ಹಂತದಲ್ಲೂ ಹೊಂದಿರುವಳು.ಹೆಣ್ಣು ಕನಸುಗಾರ್ತಿಯಾಗಿ, ಕ್ರಿಯಾಶೀಲೆಯಾಗಿ ಜೀವನದ ಅದ್ವೀತಿಯ ಬಿಂದುವಾಗಿ ನಡೆಯುವುದರ ಜೊತೆಗೆ, ಬದುಕು ಮತ್ತು ಬದುಕನ್ನು ಪ್ರೀತಿಸುವ ಗುಣವನ್ನು ಹೊಂದಿರುವಳು.
ಪ್ರಾಚೀನ ಕಾಲದಲ್ಲೂ ಹೆಣ್ಣಿಗೂ ಸ್ವಾತಂತ್ರವಿತ್ತು. ಉದಾಹರಣೆಗೆ ಸ್ವಾತಂತ್ರಕ್ಕಾಗಿ ಹೋರಾಡಿದ ನಮ್ಮ ಹೆಮ್ಮೆಯ ವೀರವನಿತೆಯರು.ಕತ್ತಿ ಗುರಾಣಿ ಹಿಡಿದು ಶತ್ರುಗಳ ವಿರುದ್ಧ ವೀರಾವೇಷದಿಂದ ಹೋರಾಡಿರುವುದನ್ನು ಕೇಳಿದ್ದೀವಿ ಹಾಗೆ ಓದಿದ್ದೇವೆ.ವೇದಕಾಲದಲ್ಲೂ ಕೂಡ ಹೆಣ್ಣು, ಗಂಡಿನ ಸಮಾನತೆಯನ್ನು ಪಡೆದಿದ್ದರು ಉದಾಹರಣೆ ಮೈತ್ರೇಯಿ, ಗಾರ್ಗಿ ಇತ್ಯಾದಿ..ಈಗಲೂ ಕೂಡ ಮಹಿಳೆಯ ಸಾಧನೆ ,ಶೋಧನೆ ಎರಡೂ ಕೂಡ ಅದ್ಭುತ ,ಅಮೋಘವಾಗಿವೆ.ಗಂಡಿಗೆ ಸಮನಾಗಿ ಹಾಗೂ ಗಂಡಿಗಿಂತಲೂ ಮಿಗಿಲಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.ವೈಜ್ಞಾನಿಕತೆ, ತಾಂತ್ರಿಕತೆ, ವಿಮಾನಗಳಲ್ಲಿ,ಚಂದ್ರಯಾನ ,ಮಂಗಳಯಾನ ಇತ್ಯಾದಿ ಅತೀ ವಿಸ್ಮಯಕಾರಿ ಸಾಧನೆಗಳನ್ನು ಮಾಡಿರುವುದು ಹಾಗೆಯೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ.
ಹೆಣ್ಣು ಮನೆಯೊಳಗಿನ ಕೆಲಸ ಕಾರ್ಯಗಳಿಗೂ ಸೈ ಹೊರಗಿನ ವಹಿವಾಟುಗಳಲ್ಲಿ ಪಾಲ್ಗೊಳ್ಳುವಿಕೆಗು ಸೈ..ಮೊದಲೆಲ್ಲ ಹೆಣ್ಣು ಕೇವಲ ಮಕ್ಕಳೆರುವ ಯಂತ್ರಕ್ಕೆ ಮಾತ್ರ ಸೀಮಿತವೆನ್ನುತ್ತಿದ್ದರು.ಆದರೆ ಈಗ ಕಾಲ, ಮನುಷ್ಯ ಬದಲಾಗಿದ್ದು ಆಧುನಿಕತೆಯ ಆಡಂಬರದಿಂದಾಗಿ ಪಾಶ್ಚಮತ್ಯ ಸಂಸ್ಕೃತಿಗಳ ಪ್ರಭಾವ ಹೆಚ್ಚಾಗುತಿದೆ.ಆದರೂ ನಮ್ಮ ಹೆಣ್ಣು ಮಕ್ಕಳು ಈಗಲೂ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರದ ಬೀಜವನ್ನು ಬಿತ್ತುತಿರುವುದು ಖುಷಿಯ ವಿಷಯವಾಗಿದೆ.ಜೊತೆಗೆ ತಮ್ಮ ಮಕ್ಕಳಿಗೆ ಸಂಗೀತ, ನೃತ್ಯಗಳನ್ನು ಕಲಿಸುವ ಹೊಣೆ ಹೊತ್ತಿರುವಳು.ತೊಟ್ಟಿಲು ತೂಗುವ ಕೈ ದೇಶವನ್ನು ಆಳುತಿದೆ ಎಂದರೆ ಹೆಮ್ಮೆ ಅಲ್ವೆ..!ಪ್ರತಿಕ್ಷೇತ್ರದಲ್ಲೂ ಹೆಣ್ಣಿನ ಸಾಧನೆ ಅಗಾಧ, ಅಮೋಘ.”ಆಡು ಮುಟ್ಟದ ಸೊಪ್ಪಿಲ್ಲ ಹೆಣ್ಣು ಮಾಡಲಾಗದ ಕೆಲಸವಿಲ್ಲವೆಂಬಂತೆ”. ಹೆಣ್ಣು ಗಂಡಿಗೆ ಸಮನಾಗಿ ದುಡಿಯುತ್ತಿರುವುದು ಹೆಮ್ಮೆ ಎನಿಸಿದೆ.ಹೆಣ್ಣು ಈಗ ಧೈರ್ಯವಾಗಿ ಎಲ್ಲಾ ಕ್ಷೇತ್ರಗಳು ಮುನ್ನುಗ್ಗುತ್ತಿರುವುದು ನೋಡುತ್ತಿದ್ದರೆ ಹೆಮ್ಮೆ ಎನಿಸುತ್ತದೆ..ಹಿಂದೆ ಹೆಣ್ಣನ್ನು ಮೂಲೆಗುಂಪು ಮಾಡಿದ್ದರು ವಿಧೆವೆಯಾದರೆ ಸಾಕು ನಾಲ್ಕು ಗೋಡೆಯ ಮಧ್ಯೆ ಕೂರಿಸಿ ಬಿಳಿ ಸೀರೆಯೊಂದಿಗೆ ಕೇಶಮಂಡನೆ ಮಾಡಿಸಿ ವಿಕೃತಿ ಮೆರೆಯುತ್ತಿದ್ದ ಕಾಲವೊಂದಿತ್ತು.ಆದರೆ ಅದೆ ಹೆಣ್ಣು ಇಂದು ನಾನು ಯಾರಿಗೂ ಕೂಡ ಕಡಿಮೆಯಿಲ್ಲವೆಂದು ಎಲ್ಲ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿರುವಳು.ಒಂಟಿಯಿದ್ದರೇನು.? ವಿಧವೆಯಾಗಿದ್ದರೇನು.?ನಾನು ಅಬಲೆಯಲ್ಲ ಸಬಲೆ ಎನ್ನುವುದನ್ನು ಸಾಬೀತು ಪಡಿಸುತ್ತಿರುವಳು. ತನ್ನೆಲ್ಲ ಕೆಲಸಗಳನ್ನು ಧೈರ್ಯವಾಗಿ ಮಾಡುತ್ತ ತನ್ನ ಸಮಸ್ಯೆಗಳನ್ನು ತಾನೆ ನಿಭಾಯಿಸಿಕೊಂಡು ಹೋಗುತ್ತಿರುವಳು.
ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿರುವ ನಮ್ಮೀ ಮಹಿಳೆ ಅದೆಷ್ಟೋ ಗಂಡು ,ಹೆಣ್ಣಿಗು ಸ್ಫೂರ್ತಿಯ ಸೆಲೆಯಾಗಿಹಳು.ಹಾಗೆಯೆ ಸಮಾನ ಹಕ್ಕುಗಳನ್ನು ಪಡೆಯುತ್ತ, ನ್ಯಾಯಕ್ಕಾಗಿ ಹೋರಾಡುತ್ತಾಳೆ, ಹೀಗೆ ಲೆಕ್ಕವಿಲ್ಲದಷ್ಟು ಮಹಿಳೆಯರನ್ನು ಪ್ರೇರೇಪಿಸುತ್ತಿದ್ದಾಳೆ.
ಪ್ರತಿ ಕ್ಷೇತ್ರಗಳು ಅಂದರೆ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ಆರ್ಥಿಕ, ತಂತ್ರಜ್ಞಾನ ಈ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳ ಸಾಧನೆ ಹೇಳತೀರದು.ಯಾವುದೆ ಭೇದಭಾವವಿಲ್ಲದ ನಿಸ್ವಾರ್ಥ ಸಾಧಕಿ ಇವಳು. ಹೆಣ್ಣು ನಿಜ ಅದ್ಭುತ ಶಕ್ತಿ. ದಿಟ್ಟತನ ಸಾಧನೆ ಛಲಕ್ಕೆ ಪ್ರೇರಣೆಯೇ ಹೆಣ್ಣು.ಮನೆಯೊಡತಿಯಾಗಿ ಮನೆ ಬೆಳಗೊ ಗೃಹಿಣಿಯಾಗಿ ಇವಳ ಸಾಧನೆ ಅನನ್ಯವಾದುದು.ಇವಳಿಂದಲೆ ಗೃಹ ಇವಳೆ ಗೃಹ…
ಅಭಿಜ್ಞಾ ಪಿ.ಎಮ್ ಗೌಡ