ಲಹರಿ

ಇಂದು ಬಾನಿಗೆಲ್ಲ ಹಬ್ಬ

Fireworks During Night Time

ಚಂದ್ರಪ್ರಭ ಬಿ.

ಇಂದು ಬಾನಿಗೆಲ್ಲ ಹಬ್ಬ


ಕಳೆದ ದಶಕದ ಸಿನಿಮಾ ಹಾಡೊಂದರ ಈ ಸಾಲು ಮುಂದುವರಿದಂತೆ ಗಾಳಿ ಗಂಧ, ಭೂಮಿ, ಪುಷ್ಪ ಕುಲ, ಸುಮ್ಮನಿರದ ಮನಸು, ಓಡುತಿರುವ ವಯಸು, ಉಸಿರಿಗೆ ಉಕ್ಕುವ ಎದೆ,ಮರಳು..ಕಡಲು..ಅಪ್ಪುವಲೆ – ಎಲ್ಲಕ್ಕೂ ಇಂದು ಹಬ್ಬ ಎಂದು ಬಣ್ಣಿಸುತ್ತದೆ. ತನ್ನ fast beat (ದೃತ್ ಲಯ) ನಿಂದಾಗಿ ಇಡೀ ಗೀತೆಯೇ ಕಿವಿಗೆ ಹಬ್ಬವಾಗುವ ವಿಶಿಷ್ಟ ಹಾಡು ಇದು. ಒಂದರ್ಥಲ್ಲಿ ಹೀಗೆ ಮನಸ್ಸು ಖುಷಿಯಿಂದ ಕುಪ್ಪಳಿಸಿ ತನ್ನಷ್ಟಕ್ಕೆ ತಾನೇ ಸಾಲೊಂದನ್ನು ಗುನುಗತೊಡಗುವ ಗಳಿಗೆಯೇ ಅವರವರ ಪಾಲಿನ ಹಬ್ಬ. ಇನ್ನು ಕಾಲಕಾಲಕ್ಕೆ ಆಗಮಿಸುವ ಹಬ್ಬಗಳದೂ ಒಂದು ಸೊಬಗು, ಸೊಗಸು. ಬಹುತ್ವ ಪ್ರಧಾನವಾಗಿರುವ ಭಾರತದ ನೆಲದಲ್ಲಿ ಹೆಜ್ಜೆ ಹೆಜ್ಜೆಗೆ ಭಾಷೆ, ವೇಷ, ಉಡುಪು,ಆಹಾರ – ಪದ್ಧತಿ ಇತ್ಯಾದಿ ಎಲ್ಲದರಲ್ಲಿ ಅಭೂತಪೂರ್ವ ಬದಲಾವಣೆ ಕಂಡು ಬರುತ್ತದೆ. ಅಂತೆಯೇ ಈ ನೆಲದ ಮಕ್ಕಳು ಆಚರಿಸುವ ಹಬ್ಬಗಳಲ್ಲೂ ವೈವಿಧ್ಯತೆಯದೇ ಕಾರುಬಾರು.
ಬಹುತೇಕ ಹಬ್ಬಗಳು ಋತುಮಾನಕ್ಕೆ ಅನುಗುಣವಾಗಿ ಬರುವಂಥವುಗಳಾಗಿವೆ. ಬಿರು ಬಿಸಿಲ ಬೇಸಗೆ ಕರಗಿ ಮೋಡ ಮಳೆಯಾಗುವ ಹೊತ್ತಲ್ಲಿ ಆಗಮಿಸುವುದು ಶ್ರಾವಣ. ಅಂಬಿಕಾತನಯದತ್ತರ “ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ ಬಂತು ಕಾಡಿಗೆ…” ಗೀತೆಯನ್ನು ಕೇಳತೊಡಗಿದರೆ ಮುಗಿಲ ಸೆರೆಯಿಂದ ಮುಕ್ತವಾದ ಮಳೆ ಧಾರೆ ಧಾರೆಯಾಗಿ ಇಳೆಯನ್ನೆಲ್ಲ ತೋಯಿಸುತ್ತಿರುವಂತೆ ಭಾಸವಾಗುತ್ತದೆ. ವೈಶಾಖದ ಧಗೆಯಲ್ಲಿ ಬಿರುಕು ಬಿಟ್ಟ ಭುವಿ ವರ್ಷ ಧಾರೆಗೆ ಮೈತೆರೆದು ಬೆಟ್ಟ, ಬಯಲು,ನದಿ,ಕಣಿವೆ,ಗಿಡ ಮರ, ಪ್ರಾಣಿ ಪಕ್ಷಿ – ಎಲ್ಲವೆಂದರೆ ಎಲ್ಲರಿಗೂ ತೊಯ್ದು ತೊಪ್ಪೆಯಾಗುವ ಸಂಭ್ರಮ. ಹದಗೊಳಿಸಿದ ತನ್ನ ಭೂಮಿಯನ್ನು ಉತ್ತಿ ಬಿತ್ತಲು ಅಣಿಯಾಗುವ ರೈತ ಬಂಧು. ಸಾಲು ಸಾಲಾಗಿ ಬರುವ ಹಬ್ಬಗಳನ್ನು ಆಚರಿಸುವ ಸಡಗರದಲ್ಲಿ ಅವ್ವಂದಿರು.. ಗುಡಿ ಗುಂಡಾರಗಳಲ್ಲಿ ವಿಶೇಷ ಪೂಜೆ, ಅಲಂಕಾರ, ತೇರೆಳೆವ ಸಂಭ್ರಮ. ನಾಡಿಗೆ ದೊಡ್ಡದೆಂಬ ಹೆಗ್ಗಳಿಕೆಯ ನಾಗರ ಪಂಚಮಿ. ಜೀಕುವ ಜೋಕಾಲಿ, ಬಗೆ ಬಗೆಯ ಉಂಡಿ ತಂಬಿಟ್ಟು, ಹೋಳಿಗೆ. ಪಂಚಮಿಯನ್ನು ಹಿಂಬಾಲಿಸಿ ಬರುವ ಗಣೇಶ ಚತುರ್ಥಿ. ಅಬಾಲ ವೃದ್ಧರಾದಿ ಎಲ್ಲರಿಗೂ ಬೆನಕನನ್ನು ಅತಿಥಿಯಾಗಿ ಕರೆತಂದು ಕೂಡ್ರಿಸುವ, ಪೂಜಿಸುವ, ಮರಳಿ ಮತ್ತೆ ಕಳಿಸಿಕೊಡುವ ಸಂಭ್ರಮ. ಹೋಳಿಗೆ, ಕಡುಬು, ಮೋದಕಗಳ ಜತೆಗೆ ಪಟಾಕಿ ಸುಡುವ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಆಮೋದ ಪ್ರಮೋದ. ತಕ್ಕ ಮಟ್ಟಿಗೆ ಮಳೆ ಸುರಿದಿದ್ದಾದರೆ ರೈತನ ಮೊಗದಲ್ಲೂ ಒಂದು ಹೊಸ ಕಳೆ, ಭರವಸೆ. ಕಾಳು ಕಡಿ ತಕ್ಕೊಂಡು ಗೋಧಿ, ಜೋಳ ಬಿತ್ತಲು ಕಾಯುವ ಸಮಯದಲ್ಲಿ ನವರಾತ್ರಿ ಸಡಗರ. ದೇವಿ ಆರಾಧನೆ, ಪುರಾಣ ಪುಣ್ಯ ಕಥಾ ಶ್ರವಣ..ಮಹಾನವಮಿ,
ವಿಜಯದಶಮಿ. ಗೋಧಿ ಹಚ್ಚ ಹಸಿರಿನಿಂದ ಕಂಗೊಳಿಸುವ ಹೊತ್ತಲ್ಲಿ ಸಾಲು ದೀಪಗಳ ಹೊತ್ತು ತರುವ ದೀಪಾವಳಿ. ಶ್ರಾವಣದ ಮೋಡಗಳೆಲ್ಲ ಚದುರಿ ಕಾರ್ತೀಕದ ಬೆಳಕಿನ ಗೂಡುಗಳ ಹಾವಳಿ. ಹೊಸ ಬಟ್ಟೆ ಖರೀಸುವ, ಸುಣ್ಣ ಬಣ್ಣ ಬಳಿದು ಮನೆ ಸಿಂಗರಿಸುವ, ಬಗೆ ಬಗೆ ಭಕ್ಷ್ಯ ಭೋಜ್ಯ ತಯಾರಿಸುವ, ಆ ಪೂಜೆ ಈ ಪೂಜೆ, ಅಂಗಡಿಗಳ ಹೊಸ ಖಾತೆಯ ಲೆಕ್ಕ, ಮಿತ್ರರು, ಬಂಧುಗಳನ್ನು ಭೇಟಿ ಮಾಡುವ, ಆನಂದಿಸುವ ರಸ ಗಳಿಗೆ. ಗೌರಿ ಹುಣ್ಣಿಮೆ, ಎಳ್ಳಮಾವಾಸ್ಯೆ, ಸಂಕ್ರಾಂತಿಯ ಸುಗ್ಗಿ ವೈಭವ. ‌ಚರಗ ಚೆಲ್ಲುವ ವಿಶಿಷ್ಟ ಆಚರಣೆ. ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸುವ ರೈತ ಬಂಧುಗಳ ಅಪರೂಪದ ನಡೆ. ಎಳ್ಳು ಹೋಳಿಗೆ, ಸೇಂಗಾ ಹೋಳಿಗೆ, ಸಜ್ಜಿ ರೊಟ್ಟಿ, ಕಾರೆಳ್ಳು ಚಟ್ನಿ, ತರಾವರಿ ಪಲ್ಯಗಳನ್ನು ಬುತ್ತಿ ಕಟ್ಟಿಕೊಂಡು ಬೆಳೆಯ ನಡುವೆ ಕುಳಿತು ಉಣ್ಣುವ, ತೆನೆಗಟ್ಟಿದ ಕಾಳುಗಳನ್ನು ಸುಟ್ಟು ಸಿಹಿ ತೆನೆ ಸವಿಯುವ ಅನನ್ಯ ಕಾಲ. ಪ್ರಕೃತಿಯಲ್ಲೂ ಬದುಕಿನಲ್ಲೂ ಸಂಕ್ರಮಣವನ್ನು ಅರಸುವ ಮನುಜ ಸಹಜ ಹುಡುಕಾಟ. ಹಿಂಬಾಲಿಸುವ ತೆನೆ ಕಟ್ಟುವ ಹಬ್ಬ, ಕಾಮ ದಹನದ ಹೋಳೀ ಹುಣ್ಣಿಮೆ, ಪೂಜೆ ಉಪವಾಸದ ಶಿವರಾತ್ರಿ.. ಚೈತ್ರಾಗಮನ. ಎಲೆ ಉದುರಿ ಹೊಸ ಚಿಗುರು, ಮುಗುಳು ನಗುವಾಗ ಕೋಗಿಲೆಯ ಗಾನವೂ ಮಾವಿನ ಸವಿಯೂ ಬೆರೆತು ಹಿತವಾಗುವ ಬೇಸಗೆ. ಯುಗಾದಿಯ ಸಂದರ್ಭದಲ್ಲಿ ಬಾಳ್ವೆಯಲ್ಲಿ ಸಿಹಿ ಕಹಿ ಸಮ್ಮಿಲನದ ಸಂಕೇತವಾಗಿ ಬೇವು ಬೆಲ್ಲದ ಸವಿಯುಣ್ಣುವ ಸಡಗರ.‌
ಉರುಳುತ್ತ ಉರುಳುತ್ತ ಋತು ಚಕ್ರವೊಂದು ಪೂರ್ಣಗೊಂಡು ಮತ್ತೆ ಹೊಸ ನಿರೀಕ್ಷೆಗಳೊಂದಿಗೆ ಬದುಕಿನ ಬಂಡಿ ಎಳೆವ ಜೀವಗಳು.


ಪ್ರತಿಯೊಂದು ಹಬ್ಬಕ್ಕೂ ಒಂದು ವೃತ್ತಾಂತ, ಕತೆಯ ಹಿನ್ನಲೆ, ಅಧ್ಯಾತ್ಮಿಕತೆಯ ಲೇಪನ. ಅದೆಂತೇ ಇರಲಿ. ಈ ಹಬ್ಬಗಳು ಇರಲೇಬೇಕೆ? ಕಾಸಿಗೆ ಕಾಸು ಕೂಡಿಸಿ ಸಾಲ ಮಾಡಿ ಹಬ್ಬ ಆಚರಿಸುವುದು ತರವೆ? ಇದ್ದವರದು ಒಂದು ಕತೆಯಾದರೆ ಇಲ್ಲದವರ ಪಾಡು ಏನು? ಇತ್ಯಾದಿ ಪ್ರಶ್ನೆ ಸಾಲು ಕಾಡುವುದು ನಿಜ. ಇರುವವರು ಇಲ್ಲದವರು, ಮಿತ್ರರು ಶತ್ರುಗಳು, ಬೇಕಾದವರು ಬೇಡದವರು – ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ಕೊಟ್ಟು ತೆಗೆದುಕೊಂಡು ಜೀವನ ಸಹ್ಯವಾಗುವಂತೆ ಮಾಡುವ ಅವಕಾಶ ಒದಗಿಸುವುದು ಹಬ್ಬಗಳು. ತನ್ನಂತೆ ಪರರ ಬಗೆವ ಹೃದಯಗಳಿಗೆ ಕೈಯೆತ್ತಿ ಕೊಡಲು ಹಬ್ಬದ ನೆಪ ಬೇಕಿಲ್ಲ. ಆದರೆ ಪ್ರೇರಣೆಯಿರದೇ ಹಂಚಿಕೊಳ್ಳಲು ಒಪ್ಪದ ಜೀವಗಳಿಗೆ ಹಬ್ಬಗಳೇ ಬರಬೇಕು.


ಸಾಮಾಜಿಕ, ಆರ್ಥಿಕ, ರಾಜಕೀಯ ಯಾವ ಆಯಾಮದಲ್ಲಿದ್ದರೂ ಬದುಕಿನ ಏಕತಾನತೆಯನ್ನು ನೀಗಲು ಹಬ್ಬಗಳು ಬರಬೇಕು. ಬದುಕಿಗೆ ಬಣ್ಣ ತುಂಬಿ ಬದುಕು ಹೆಚ್ಚೆಚ್ಚು ಸಹ್ಯ ಆಗುವಂತೆ ಮಾಡಲು ಹಬ್ಬಗಳು ಬೇಕು. ನಮ್ಮ ನಮ್ಮ ನಡುವಿನ ಗೋಡೆಗಳ ದಾಟಿ, ಅಹಮ್ಮಿನ ಕೋಟೆ ಒಡೆದು ಸೇತುವೆ ಕಟ್ಟಲು ಹಬ್ಬಗಳೇ ಬರಬೇಕು. ಮತ್ತೆ ಮತ್ತೆ ಬರುವ ಯುಗದ ಆದಿ ಎಲ್ಲ ಜೀವಿಗಳಿಗೂ ಚೈತನ್ಯದಾಯಿನಿ. ಹಳತನ್ನು ಕಳಚಿಕೊಂಡು ಹೊಸತಿಗೆ ತೆರೆದುಕೊಳ್ಳಲು ಹಪಾಪಿಸುವ ಜೀವಗಳ ಒಳ ತುಡಿತ. ಮತ್ತೊಂದು ಬೇಸಗೆ..ಮತ್ತೆ ಮಳೆಗಾಲ..ಉಕ್ಕುವ ನದಿ, ಕೆರೆ ತೊರೆಗಳು.. ಬರಗಾಲದ ಬವಣೆ.. ಜಲ ಪ್ರಳಯ, ಹನಿ ನೀರಿಗೆ ಹಾಹಾಕಾರ – ಎಲ್ಲವುಗಳನ್ನು ದಾಟುತ್ತ ದಾಟುತ್ತ ಮತ್ತೆ ಮತ್ತೆ ಬಂದು ಬದುಕಿಗೆ ಬಣ್ಣ ತುಂಬುವ, ಜೀವಸೆಲೆಯಾಗುವ ಹಬ್ಬಗಳದೇ ಒಂದು ಬಗೆ. ತನ್ನೊಳಗಿನ ಒಲವು ನಲಿವು, ಮಿಡಿತ ತುಡಿತಗಳಿಗೆ ಸಾಕ್ಷಿಯಾಗುವ ಜೀವ ಕಡು ತಾಪದಲ್ಲಿ ರೋಧಿಸುವಂತೆಯೇ ನಲಿವಿನಲ್ಲಿ ಹಾಡಲು ತೊಡಗುವುದು ಕೂಡ ಹಬ್ಬದ ಮಾದರಿಯೇ. ಈ ಬರಹದ ಆರಂಭದಲ್ಲಿ ನಿರೂಪಿಸಿರುವಂತೆ ಜೀವ ಕುಣಿದು ಕುಪ್ಪಳಿಸಲು ತೊಡಗಿದೆಯೆಂದರೆ ಹೃದಯದಲ್ಲಿ ನೂರು ವೀಣೆಗಳ ಸ್ವರ ಮೀಟಿದೆ ಎಂತಲೇ ಅರ್ಥ.


ನಗುವು ಸಹಜದ ಧರ್ಮ ನಗಿಸುವುದು ಪರ ಧರ್ಮ|
ನಗುವ ಕೇಳುತ ನಗುವುದತಿಶಯದ ಧರ್ಮ||
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ|
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ||


ನಕ್ಕು ಹಗುರಾಗದೇ ಸಾಗದ ಬದುಕನ್ನು ಸಹನೀಯವಾಗಿಸಿಕೊಳ್ಳಲು ಮಂದಹಾಸವನ್ನು ಧರಿಸುವುದೇ ಇರುವ ಒಂದೇ ದಾರಿ.. ಹೆಜ್ಜೆ ಹೆಜ್ಜೆಯಲ್ಲಿ ಜತೆಯಾಗುವ ಕವಿ ಸಾಲುಗಳೊಂದಿಗೆ ಸಾಗುವಾಗ ಮತ್ತೆ ಮತ್ತೆ ನೆನಪಾಗುವವು ಇಂಥವೇ ಸಾಲು..


ಜಗವೆಲ್ಲ ನಗುತಿರಲಿ
ಜಗದಳುವು ನನಗಿರಲಿ
ನಾ ನಕ್ಕು ಜಗವಳಲು ನೋಡಬಹುದೆ?
ನಾನಳಲು ಜಗವೆನ್ನನೆತ್ತಿಕೊಳದೆ? (ಈಶ್ವರ ಸಣಕಲ್)


ನಿಮ್ಮ ತುಟಿಯ ಮೇಲೊಂದು ನಗು ಮೂಡಿದ ಕ್ಷಣ ನಿಮಗೂ ಹಬ್ಬ..ನಿಮ್ಮ ಸುತ್ತಲೂ ಇರುವವರಿಗೂ ಹಬ್ಬ..

**********

Leave a Reply

Back To Top