ಗಝಲ್
ಸ್ಮಿತಾ ರಾಘವೇಂದ್ರ
ನಟನೆಯೋ ನಿಜವೋ ನಂಟನ್ನು ಹುಸಿಯಾಗಿಸಬೇಡ
ಬಳ್ಳಿಯ ಬೇರು ಚಿವುಟಿ ಚಿಗುರೆಲೆ ಹುಡುಕಬೇಡ
ತುಪ್ಪದಂಥ ಒಲವಲ್ಲಿ ಉಪ್ಪು ಬೆರೆಸುವುದು ಸುಲಭ
ಒಪ್ಪು ತಪ್ಪುಗಳ ಬರಿದೆ ಕೆದಕೆದಕಿ ಕೆಡಿಸಬೇಡ
ಹೊಟ್ಟೆಯೊಳಗಿನ ಕಿಚ್ಚು ಉರಿದು ಸುಟ್ಟಿದೆ ಸೆರಗನ್ನು
ಸಿಹಿ ಕೊಡುವ ನೆಪದಿ ಸವಿಯ ಸೂರೆ ಮಾಡಬೇಡ
ಹಸಿರೆಲೆಯಾಗೇ ಬಹುದಿನ ಇರಲಾಗದು ನಿಜ
ಹಣ್ಣಾಗುವ ಮೊದಲೇ ಹಿಸಿದು ಉದುರಿಸಬೇಡ
ಹುತ್ತವ ಬಡಿಬಡಿದು ಹಾವು ಸಾಯಿಸುವ ಭ್ರಮೆಬೇಡ
ಯಾವ ಹುತ್ತದಲಿ ಯಾವ ಹಾವೋ ಕೈಹಾಕಬೇಡ
ಎಷ್ಟು ಅರಿತರೇನು ಸೋಗಿನ ಸ್ನೇಹಗಳ “ಸ್ಮಿತ”ವೇ
ಪರಿವೆಯೇ ಇಲ್ಲದೇ ಕೈ ಕೊಡವಿ ನಡೆದಾಗ ಕೊರಗಬೇಡ
*******************************************
ಅರ್ಥಪೂರ್ಣ