ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ ಅವರ ಲೇಖನಿಯಿಂದ

ಮಹೇಶ್ ಅವರ ಗಜಲ್ ಗಳಲ್ಲಿ ಸಾಮಾಜಿಕ ಚಿಂತನೆ

ಎಲ್ಲರಿಗೂ ನಮಸ್ಕಾರಗಳು..
‘ಗಜಲ್’ ಎನ್ನುವ ಶಬ್ದ ಕಿವಿಗೆ ಬೀಳುತ್ತಲೇ ಹೃದಯದ ಬಡಿತ ಜೋರಾಗುತ್ತದೆ. ಅಂಥಹ ಶಕ್ತಿ ಗಜಲ್ ಗೆ ಇದೆ. ಅಂತೆಯೇ ಪ್ರತಿ ಗುರುವಾರ ಒಬ್ಬೊಬ್ಬ ಶಾಯರ್ ಅವರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬರುತ್ತಿರುವೆ. ವ್ಯಕ್ತಿ ಪರಿಚಯದೊಂದಿಗೆ ಗಜಲ್ ಲೋಕದಲ್ಲಿ ವಿಹರಿಸುತಿದ್ದರೆ ನನಗೆ ಈ ಸಂಸಾರದ ಅರಿವೆ ಇರುವುದಿಲ್ಲ.‌ ಬನ್ನಿ, ಗಜಲ್ ಪ್ರೇಮಿಗಳೇ; ನಿಮಗೂ ಇದೆ ಅನುಭವ ಆಗುತ್ತದೆ ಎಂದು ಪ್ರಾಮಿಸ್ ಮಾಡುವೆ..!

ದಿನನಿತ್ಯ ಭೇಟಿಯಾದಾಗಲೂ ಯುಗಯುಗಗಳು ಕಳೆದಂತೆ ಅನ್ನಿಸಿತಿತ್ತು
ಪ್ರೀತಿಯಲ್ಲಿ ಸಮಯದ ಅರಿವು ಇರುವುದೇ ಇಲ್ಲ”
-ಅಹಮದ್ ಮುಸ್ತಾಕ್

 ಇಂದು 'ಪರಸ್ಪರ' ಎಂಬ ಶಬ್ದವು ಹೆಚ್ಚು ಪ್ರಚಲಿತದಲ್ಲಿದೆ.‌ ಗೌರವಿಸುವ, ಅರ್ಥೈಸುವ, ಪ್ರೀತಿಸುವ ಬದಲು ತೆಗಳುವ, ತುಳಿಯುವ, ಆಪಾದಿಸುವ ನೆಲೆಯಲ್ಲಿಯೇ ಜೀವಂತವಾಗಿದೆ. ಈ ವಿಕೃತಿಯ ಜೀವಂತಿಕೆಯಲ್ಲಿ ಸಾತ್ವಿಕ ಮೌಲ್ಯಗಳ ಮಾರಣಹೋಮ ನಿರಂತರವಾಗಿ ನಡೆದಿದೆ. ಈ ದಿಸೆಯಲ್ಲಿ ನಾವು ಪರಿವರ್ತನೆಯ ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕಿದೆ ಮತ್ತು ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾಗಬೇಕಿದೆ. ನಾವು ಕಾರ್ಯ ನಿರ್ವಹಿಸುವ ಸ್ಥಳದ ಸಂಸ್ಕೃತಿ, ಸಂಸ್ಥೆಯ ಮೌಲ್ಯಗಳು, ರೂಢಿಗಳು ಮತ್ತು ಅಭ್ಯಾಸಗಳು ನಮ್ಮ ಸಂತೋಷ ಮತ್ತು ಯಶಸ್ಸಿನ ಮೇಲೆ ಭಾರಿ ಪ್ರಭಾವವನ್ನು ಹೊಂದಿರುತ್ತವೆ ಎಂಬುದು ನಾವು ಆಯ್ಕೆ ಮಾಡಿಕೊಳ್ಳುವ ಕೆಲಸ, ಸ್ಥಳದ ಮಹತ್ವವನ್ನು ಸಾರುತ್ತದೆ. ನಾವು ಯಾವತ್ತೂ ಜನರನ್ನು ಮೆಚ್ಚಿಸಲು ಕೆಲಸಗಳನ್ನು ಮಾಡಬೇಕಾಗಿಲ್ಲ. ನಾವು ಇಷ್ಟಪಡುವದನ್ನು ಮಾತ್ರ ಮಾಡಬೇಕಿದೆ. ಏಕೆಂದರೆ ನಾವು ಇಷ್ಟಪಡುವದನ್ನು ನಮ್ಮವರು ಪ್ರೀತಿಸುತ್ತಾರೆ. ನಮ್ಮ ಮೌಲ್ಯಗಳು ನಮಗೆ ಸ್ಪಷ್ಟವಾದಾಗ, ಇಂಥಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭವಾಗುತ್ತದೆ. ತನ್ನ ತತ್ವಗಳಿಗಿಂತ ತನ್ನ ಸವಲತ್ತುಗಳನ್ನು ಗೌರವಿಸುವ ಜನರು ಶೀಘ್ರದಲ್ಲೇ ಎರಡನ್ನೂ ಕಳೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವುಗಳನ್ನು ಜೀವಂತವಾಗಿ ಇರಿಸಿಕೊಳ್ಳಬೇಕಿದೆ. ಜನರನ್ನು, ಸಮಾಜವನ್ನು ಬೆಸೆಯುವ ಸಾಹಿತ್ಯ ಮೌಲ್ಯಗಳ ಲಾಲನೆ, ಪಾಲನೆಯಲ್ಲಿ ಬಹುಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ. ಸಾಹಿತ್ಯದ ಭಾಗವೇ ಆದ ಗಜಲ್ ಬದುಕುವ ಕಲೆಯನ್ನು ಸಾರುತ್ತದೆ. ಇಂಥಹ ಅನುಪಮ ಕಾವ್ಯ ಪ್ರಕಾರವಾದ ಗಜಲ್ ಇಂದು ಕನ್ನಡ ಸಾರಸ್ವತ ಲೋಕದ ಟ್ರೆಂಡಿಂಗ್ ಆಗಿದೆ, ಆಗುತ್ತಿದೆ.‌ ಅಸಂಖ್ಯಾತ ಬರಹಗಾರರು ಗಜಲ್ ಕೃಷಿಯಲ್ಲಿ ನಿರತರಾಗಿದ್ದಾರೆ. ಅವರಲ್ಲಿ ಶ್ರೀ ಮಹೇಶ ಬಿ. ಕವಲ್ದಾರ್ ಅವರೂ ಒಬ್ಬರು.‌ 

  ಕುಮಾರ ಮಹೇಶ ಬಿ ಕವಲ್ದಾರ್ ಯಾದಗಿರಿ ಜಿಲ್ಲಾ ಕೇಂದ್ರದಿಂದ ೧೦ ಕಿ.ಮೀ ಅಂತರದಲ್ಲಿರುವ 'ಹತ್ತಿಕುಣಿ' ಎಂಬ ಗ್ರಾಮದಲ್ಲಿ ಶ್ರೀ ಬಸವರಾಜ ಹಾಗೂ ಶ್ರೀಮತಿ ದೇವಮ್ಮ ದಂಪತಿಗಳ ಮಗನಾಗಿ ೧೯೯೯ ರ ಜೂನ್ ತಿಂಗಳ ಮೊದಲ ದಿನ, ಅಂದರೆ ೦೧ರಂದು ಜನಿಸಿದರು. ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ವ್ಯಾಸಂಗವನ್ನು ತಮ್ಮ ಹುಟ್ಟೂರಿನಲ್ಲಿಯೆ ಪೂರೈಸಿ, ಪದವಿಯನ್ನು ಕಲಬುರಗಿಯ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದಲ್ಲಿ ಮುಗಿಸಿದ್ದಾರೆ. ಪತ್ರಿಕೋದ್ಯಮ ಕುರಿತು ತೀವ್ರ ಆಸಕ್ತಿಯನ್ನು ಹೊಂದಿದ್ದ ಇವರು ಬೆಂಗಳೂರಿನ 'ಬದುಕು ಕಮ್ಯುನಿಟಿ ಕಾಲೇಜು' ಎಂಬಲ್ಲಿ ಪತ್ರಿಕೋದ್ಯಮದ 'ಸ್ನಾತಕೋತ್ತರ ಡಿಪ್ಲೊಮಾ'ವನ್ನು ಅಭ್ಯಾಸಿಸಿ ತೇರ್ಗಡೆ ಹೊಂದಿದ್ದಾರೆ. ಪ್ರಸ್ತುತವಾಗಿ 'ಈ ದಿನ ಡಾಟ್ ಕಾಮ್' ನ್ಯೂಸ್ ವೆಬ್ ಸೈಟಲ್ಲಿ ಪೋಲಿಟಿಕಲ್ ರಿಪೋರ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

  ವಿದ್ಯಾರ್ಥಿ ದೆಸೆಯಿಂದಲೇ ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಬೆಳೆದಿರುವ ಮಹೇಶ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಗೀಳನ್ನು ಹಚ್ಚಿಕೊಂಡು ಕಾವ್ಯ, ಹೈಕು, ತಂಕಾ, ಲೇಖನ, ಗಜಲ್.. ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡುತ್ತ ಬಂದಿದ್ದಾರೆ. ಪದವಿ ಓದುತ್ತಿರುವಾಗಲೆ "ಮಲ್ಲಿಗೆ ಮೊಗ್ಗು" ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ 'ಕಿರಿಯ ವಯಸ್ಸಿನಲ್ಲಿ ಗಜಲ್ ಸಂಕಲನವನ್ನು ಪ್ರಕಟಿಸಿದ ಮೊದಲಿಗ' ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಶ್ರೀಯುತರ ಹಲವಾರು ಸಾಹಿತ್ಯ ಪ್ರಕಾರಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.‌ ಇವರು ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ, ಹಲವು ಸನ್ಮಾನ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. 

  ಪ್ರೀತಿ ಮತ್ತು ಭೀತಿ ಈ ದುನಿಯಾವನ್ನು ಆಳುತ್ತಿರುವ ಪ್ರಬಲ ಸಂವೇದನೆಗಳು‌. ಪ್ರೀತಿ ಅಜೀರ್ಣವಾದಾಗ ಭೀತಿ ರೂಪ ಪಡೆಯುತ್ತದೆ. ಈ ನೆಲೆಯಲ್ಲಿ ಮನುಕುಲದ ಹೆಜ್ಜೆ ಗುರುತುಗಳನ್ನು ಗಜಲ್ ಪರಂಪರೆಯು ಕಾಪಿಟ್ಟುಕೊಂಡು ಬಂದಿದೆ. ವೈವಿಧ್ಯತೆಗೆ ಕಾಮನಬಿಲ್ಲನ್ನು ನೋಡುವ ನಾವುಗಳು ನಮ್ಮನ್ನೇ ಮರೆಯುತ್ತೇವೆ. ಮನುಷ್ಯನ ಭಾವನೆಗಳು ಯಾವ ವೈವಿಧ್ಯತೆಗೂ ಕಡಿಮೆಯೇನಿಲ್ಲ. ಇಂಥಹ ಮನುಷ್ಯನೇ ಗಜಲ್ ನ ಅಶಅರ್ ನಲ್ಲಿ ರೂಪ ಪಡೆದಿರುವಾಗ ಗಜಲ್ ಲೋಕ ಅಸಂಖ್ಯಾತ ಸಂವೇದನೆಗಳ ಆಗಸವಾಗಿದೆ. ಈ ನೆಲೆಯಲ್ಲಿ ಗಜಲ್ ಗೋ ಮಹೇಶ ಅವರ ಗಜಲ್ ಗಳನ್ನು ಗಮನಿಸಿದಾಗ ಮನಸ್ಸಿನ ಆಂತರಿಕ ತುಡಿತ, ಜೀವನದ ಅಸ್ಥಿರತೆ, ಬಾಳಿನ ಸೈದ್ಧಾಂತಿಕ-ತಾತ್ವಿಕ ಚಿಂತನೆ, ಸಾಮಾಜಿಕ ನೆಲೆಯಲ್ಲಿ ವೈಚಾರಿಕತೆ, ದೇವರು-ಧರ್ಮದ ಕುರಿತು ವಿಡಂಬನೆ, ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ಕೌಟುಂಬಿಕ-ದಾಂಪತ್ಯ ಜೀವನ... ಇವುಗಳೊಂದಿಗೆ ಗಜಲ್ ನ ಸಿಗ್ನಿಚರ್ ವಿಷಯಗಳಾದ ಮಧುಶಾಲೆ, ಮದಿರೆಯ ಘಮಲು ಹಾಗೂ ಒಲವಿನ ಕದ ತೆರೆದಾಗ ಪ್ರೀತಿ, ಪ್ರೇಮ, ಪ್ರಣಯ, ವಿರಹ, ನಿರೀಕ್ಷೆ, ಭಗ್ನ ಪ್ರೇಮ, ಕನವರಿಕೆ.. ಮುಂತಾದವುಗಳು ಕಂಡು ಬರುತ್ತವೆ. 

ಮಧುಶಾಲೆಗಳು ಬಾರುಗಳಾದಾಗ ಚರ್ಚೆಗಳಿಗೆಲ್ಲಿ ಜಾಗ
ಮದಿರೆಯು ಕಲಬೆರಿಕೆಯಾದಾಗ ವಿಚಾರಗಳಿಗೆಲ್ಲಿ ಜಾಗ

ಎಂಬ ಈ ಷೇರ್ ಮಧುಶಾಲೆಯ ಮೂಲವನ್ನು ಹುಡುಕುವಂತೆ ಪ್ರೇರೆಪಿಸುತ್ತದೆ!! ಉರ್ದು ಸಾಹಿತ್ಯದ ಪರಂಪರೆಯನ್ನೊಮ್ಮೆ ಗ್ರಹಿಸಿದಾಗ ‘ಮಧುಶಾಲೆ’, ‘ಸಾಕಿ’ ಗೆ ತಮ್ಮದೇ ಆದ ವೈಶಿಷ್ಟ್ಯತೆಗಳಿರುವುದು ಮನದಟ್ಟಾಗುತ್ತದೆ. ಮೈಖಾನದ ಸಂಪ್ರದಾಯ ಪರ್ಷಿಯನ್ ಸಾಹಿತ್ಯದಿಂದ ಬಂದಿದೆ. ‘ಮೈಖಾನ’ ಎಂದರೆ ಮದ್ಯ ಮಾರುವ ಅಂಗಡಿ ಎಂಬುದು ಸಾಮಾನ್ಯ ತಿಳಿವಳಿಕೆ. ಆದರೆ ಇದಕ್ಕೆ ‘ಗಜಲ್ ಗುಲ್ಮೋಹರ್’ ನಲ್ಲಿ ವಿಶಿಷ್ಟವಾದ ಅರ್ಥವಿದೆ. ಅಂದು ಗಜಲ್ ಗೋ ರವರು ಮೈಖಾನದಲ್ಲಿ ಕುಳಿತು ಮದಿರೆಯನ್ನು ಸೇವಿಸುತಿದ್ದರು; ಸರದಿಯಂತೆ ‘ಸಾಕಿ’ ಮದ್ಯವನ್ನು ಗಜಲ್ ಕಾರರಿಗೆ ನೀಡುತಿದ್ದನು/ ನೀಡುತಿದ್ದಳು.‌ ‘ಮಧುಶಾಲೆ’ ಎಂದು ಕರೆಯಲ್ಪಡುವ ಇದಕ್ಕೆ ತನ್ನದೆ ಆದ ಒಂದು ಶಿಷ್ಟಾಚಾರವಿದೆ. ಕುಡಿದವರು ಅಲ್ಲಿ ಅಮಲಿನಲ್ಲಿ ಬಡಬಡಿಸಬಾರದು, ಪ್ರಜ್ಞೆಯನ್ನು ಕಳೆದುಕೊಳ್ಳಬಾರದು. ಇದು ಕೇವಲ ಮಧುಶಾಲೆಯಾಗಿರಲಿಲ್ಲ. ಗಜಲ್ ಬರಹಗಾರರು ಮಧುಪಾನ ಮಾಡುತ್ತ ಮಾತನಾಡುತ್ತಿದ್ದರು, ಸಂಭಾಷಿಸುತ್ತಿದ್ದರು. ಅದೊಂದು ಚಿಂತನಕೂಟವಾಗಿತ್ತು. ದರ್ಶನದ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತಿತ್ತು.

   ಪ್ರತಿಯೊಂದು ಸಾಹಿತ್ಯವು ತಾನು ಇದ್ದ ಸಮಾಜದ ನೋವು, ನಲಿವು, ಮೌಢ್ಯತೆ, ವೈಚಾರಿಕತೆ, ಅರಾಜಕತೆ, ಜಾತಿ, ಮತ, ಪಂಥ, ರಾಜಕೀಯ... ಮುಂತಾದವುಗಳ ಬೇರುಗಳನ್ನು ಗುರುತಿಸುತ್ತ ಸಾಗುತ್ತದೆ. ಅದರ ಸಾಧಕ-ಬಾಧಕಗಳ ಕುರಿತು ಚರ್ಚಿಸುತ್ತದೆ. ಈ ಕೆಳಗಿನ ಷೇರ್ ಸಾಮಾಜಿಕ ವ್ಯವಸ್ಥೆಯ ವಿವಿಧ ಆಯಾಮಗಳಿಗೆ ದರ್ಪಣವನ್ನು ಹಿಡಿಯುವ ಕೆಲಸ ಮಾಡುತಿದೆ. 

“ಎಲ್ಲರ ರಕ್ತವು ಕೆಂಪಗಿದೆ ಕೇಸರಿ ಹಸಿರುಗಳೊಂದಿಗೆ ಅದು ಬೆರೆತಿಲ್ಲ
ಬಣ್ಣದ ಜಂಡ-ಅಜೆಂಡಗಳಿಗಾಗಿ ಕೇಕೆ ಹಾಕಿ ನೆತ್ತರು ಹರಿಸುವಿರಿ ಏತಕೆ”

ಸಮಾಜದ ರೀತಿ ನೀತಿಗಳು ಎರಡು ಅಲಗಿನ ಗರಗಸದಂತೆ!! ಗೋಸುಂಬೆಯನ್ನೂ ನಾಚಿಸುವ ಬಣ್ಣದ ಚಿಟ್ಟೆ!! ಇಲ್ಲಿ ಗಜಲ್ ಗೋ ಜಾತಿ, ಧರ್ಮಗಳು ಹೇಗೆ ರಾಜಕೀಯದ ದಾಳವಾಗಿ ಮನುಕುಲದ ನೆಮ್ಮದಿಗೆ ಕೊಳ್ಳೆ ಇಡುತ್ತಿವೆ ಎಂಬುದರ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

  ಬರವಣಿಗೆಯ ನಾಗಾಲೋಟದಲ್ಲಿಂದು ಗಜಲ್ ಹೆಚ್ಚು ಸದ್ದು ಮಾಡುತ್ತಿದೆ. ಪ್ರತಿ ಬರಹಗಾರರ ಲೇಖನಿ ಗಜಲ್ ಕನ್ಯೆಯ ಚಿತ್ರವನ್ನು ಬಿಡಿಸುತ್ತದೆ. ಸುಖನವರ್ ಕುಮಾರ ಮಹೇಶ ಕವಲ್ದಾರ್ ಅವರಿಂದ ಗಜಲ್ ಲೋಕವು ಮತ್ತಷ್ಟು ಮೊಗೆದಷ್ಟೂ ಶ್ರೀಮಂತವಾಗಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ. 

ಯುದ್ಧವೇ ಒಂದು ಸಮಸ್ಯೆಯಾಗಿದೆ
ಯುದ್ಧವೇನು ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲದು”
-ಸಾಹಿರ್ ಲುಧಿಯಾನವಿ

ಮನುಷ್ಯನ ಮನಸು ಹಲವು ಏರಿಳಿತಗಳ ಝರಿ. ಶಾಂತಿ, ನೆಮ್ಮದಿ ನಮ್ಮನ್ನು ಆವರಿಸಬೇಕಾದರೆ ಗಜಲ್ ನ ಪಾತ್ರ ಅನನ್ಯ. ಇಂಥಹ ಗಜಲ್ ನಾಕದಲ್ಲಿ ಅಲೆದಾಡುತ್ತಿರಬೇಕಾದರೆ ದಿನದ ೨೪ ಗಂಟೆಗಳೂ ಕಡಿಮೆ ಅನಿಸುತ್ತವೆ. ಒಲ್ಲದ ಮನಸ್ಸಿನಿಂದಲೇ ಕಾಲದ ಮುಂದೆ ಮಂಡಿಯೂರಿರುವೆ.. ಅನಿವಾರ್ಯವಾಗಿ ಇಂದು ಇಲ್ಲಿಂದ ನಿರ್ಗಮಿಸಲೆಬೇಕಿದೆ, ಮುಂದಿನ ಗುರುವಾರ‌ ಮತ್ತೇ ಬರುವೆ..ಹೋಗಿ ಬರಲೆ….!!

ಧನ್ಯವಾದಗಳು.


ರತ್ನರಾಯಮಲ್ಲ

Leave a Reply

Back To Top