ಅರುಣಾ ಶ್ರೀನಿವಾಸ ಕಥೆ-ಬಂಧಿ

ಕಥಾ ಸಂಗಾತಿ

ಬಂಧಿ

ಅರುಣಾ ಶ್ರೀನಿವಾಸ

ಒಂದರೆ ಕ್ಷಣ ನನಗೆ ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ.ಮತ್ತೆ ಮತ್ತೆ ಕಣ್ಣುಜ್ಜಿ ಕನ್ನಡಕ ಸರಿಪಡಿಸಿಕೊಂಡು ನೋಡಿದೆ. ಹೌದು, ಅವಳೇ ಸಂಶಯವಿಲ್ಲ.ರೈಲಿನಲ್ಲಿ ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತು, ಕಪ್ಪು ಕನ್ನಡಕ ಧರಿಸಿದ ಕಣ್ಣುಗಳಿಂದ ಹೊರಗಿನ ನಿಸರ್ಗವನ್ನು ನೋಡುತ್ತಿದ್ದಳು. ಅವಳದೇ ಲೋಕದಲ್ಲಿ ಮೈಮರೆತು ಹೋಗಿದ್ದಳು. ಮೊದಲು ಹೇಗಿದ್ದಳೋ ಬಹುಶಃ ನೋಡಲಿಕ್ಕೆ ಈಗಲೂ ಹಾಗೆಯೇ ಇದ್ದಳು. ಬಹಳ ವ್ಯತ್ಯಾಸ ಕಾಣಲಿಲ್ಲ ನನಗೆ.


           ಹಾಂ...ಅಂದ ಹಾಗೆ ಅವಳು ಯಾರೆಂಬ ಪ್ರಶ್ನೆ ನಿಮಗೆ ಬಂದಿರಬೇಕು. ಅದು ಸಹಜವೇ...ಹೇಳುತ್ತೇನೆ ಕೇಳಿ. ಅವಳೆಂದರೆ ನನ್ನ ನೆನಪಿನಾಳದಲ್ಲಿ ತನ್ನ ಬೇರನ್ನು ಭದ್ರವಾಗಿ ಊರಿ ಹೋದವಳು. ನನ್ನೆದೆಯ ಗುಡಿಯಲ್ಲಿ ಮೊದಲ ಪ್ರೇಮ ದೀಪ ಹಚ್ಚಿದವಳು. ಪ್ರೀತಿಯೆಂದರೆ ಬರೆಯ ಮೋಜು ಮಸ್ತಿಯಲ್ಲ ಎಂದು ತೋರಿಸಿಕೊಟ್ಟವಳು. ಓದಿನಲ್ಲೂ ಜಾಣೆ. ನನ್ನ ಜೀವಕ್ಕೆ ಜೀವವಾದವಳು,ಭಾವಕ್ಕೆ ಭಾವವಾದವಳು, ಕವನವಾದವಳು, ಕಥೆಯಾದವಳು, ನನಸಾದವಳು,ಮತ್ತೆ ಕನಸಾಗಿ ಕಾಡಿದವಳು.
             ಅವಳ ಹೆಸರು ಕಾವೇರಿ. ನಾನೂ ಅವಳು ಪದವಿ ತರಗತಿಯಲ್ಲಿ ಸಹಪಾಠಿಗಳು. ಅವಳು ಮೊದಲ ಬೆಂಚಿನ ಹುಡುಗಿ. ಅಧ್ಯಾಪಕರ ನೆಚ್ಚಿನ ಶಿಷ್ಯೆ.

ಮಿತಭಾಷಿ. ಸಾಹಿತ್ಯವೆಂದರೆ ಅವಳ ಜೀವಾಳ.ಬಹುಶಃ ಉಳಿದ ವಿದ್ಯಾರ್ಥಿಗಳ ಪಾಲಿಗೆ ಅವಳೊಬ್ಬಳು ಗಾಂಧಿ. ಈ ಬಗ್ಗೆ ಅವಳಿಗೇನೂ ಬೇಸರವಿರಲಿಲ್ಲ. ತನ್ನ ಇಷ್ಟಾನಿಷ್ಟಗಳನ್ನು, ತನ್ನ ವ್ಯಕ್ತಿತ್ವಗಳನ್ನು ಬೇರೆಯವರಿಗಾಗಿ ಬಲಿಗೊಡದ ಆದರ್ಶ ಹುಡುಗಿ. ನಾನೇನು ಅವಳಷ್ಟು ಮಿತ ಭಾಷಿಯಲ್ಲದಿದ್ದರೂ ನಾನೂ ಒಬ್ಬ ಸಾಹಿತ್ಯ ಪ್ರೇಮಿ. ಬರಹ ನನ್ನ ಅತ್ಯುತ್ತಮ ಅಭಿರುಚಿ. ಬಹುಶಃ ಇದೇ ನಮ್ಮಿಬ್ಬರನ್ನು ಮತ್ತಷ್ಟು…ಇನ್ನಷ್ಟು ..ಒಂದುಗೂಡಿಸಿದುದು. ಬಿಟ್ಟಿರಲಾರದ ಭಾವದೆಡೆಗೆ ಸೆಳೆದುದು. ಬಹುಶಃ ನಮ್ಮೊಳಗೆ ಹುಟ್ಟಿಕೊಂಡ ಪ್ರೇಮ ಇದೇ ದಿನವೆಂದು ಹೇಳುವಂತಿಲ್ಲ. ಅರಿಯದೆಯೇ ನಮ್ಮೊಳಗಿನ ಬಂಧನ ಗಾಢವಾಗಿ ಹೋಗಿತ್ತು.
ಅವಳೊಂದು ದಿನ ಕಾಲೇಜಿಗೆ ಬರಲಿಲ್ಲವೆಂದರೆ ದಿನದೂಡುವುದೂ ಕಷ್ಟವೆಂಬಂತಾಗಿತ್ತು ನನ್ನ ಪರಿಸ್ಥಿತಿ.ಅವಳೂ ಅಷ್ಟೇ , ನಾನೊಂದು ದಿನ ರಜೆ ಮಾಡಿದೆನೆಂದಾದರೆ “ಯಾಕೋ ಗೂಬೆ, ನಿನ್ನೆ ಬಂದಿಲ್ಲ ?”ಎಂದು ಮೂರು ದಿನ ಮಾತು ಬಿಟ್ಟು ಮುನಿಸಿ ಕೂರುವವಳು. ಅವಳೊಂದು ಮುನಿಸಿಗೆ ನನ್ನೊಳಗೆಲ್ಲ ಹಿಂಡಿ ಹಿಪ್ಪೆಯಾಗಿ ಜೀವನವೇ ನಶ್ವರವೆನ್ನಿಸುವ ಭಾವ.ಹೀಗೆ ಕಾವೇರಿ ನನ್ನುಸಿರಲ್ಲಿ ಉಸಿರಾಗಿ ಬೆರೆತಿದ್ದಳು.
ಹಾಗೆಂದು ನಾವು ಉಳಿದ ಪ್ರೇಮಿಗಳಂತೆ ಪಾರ್ಕು, ಸಿನೆಮಾ ಎಂದೆಲ್ಲ ಸುತ್ತಿದ್ದಿಲ್ಲ. ದಿನಗಟ್ಟಲೇ ಮರದಡಿ ಕೂತು ಹರಟಿದ್ದಿಲ್ಲ. ಬಹುಶಃ ಕಾವೇರಿ ಅಂತಹುದಕ್ಕೆಲ್ಲ ಆಸ್ಪದ ಕೊಟ್ಟವಳೂ ಅಲ್ಲ. “ಬದುಕಿನಲ್ಲಿ ನಾನು ಸಾಧನೆ ಮಾಡ್ಬೇಕು ಕಣೋ. ಇನ್ನೂ ಎತ್ತರಕ್ಕೆ ಏರ್ಬೇಕು” ಎಂದು ಬಡತನ ಸಹಜವಾಗಿಯೇ ನೀಡಿದ್ದ ಮಹತ್ವಾಕಾಂಕ್ಷೆಯನ್ನು ಮತ್ತಷ್ಟು ಧೃಡ ಮಾಡಿಕೊಳ್ಳುವವಳು. ನಾನು ಪದವಿಯಲ್ಲಿ ಅಂತಿಮ ಹಂತದಲ್ಲಿ ಅತ್ಯುತ್ತಮ ಶ್ರೇಣಿಯನ್ನು ಅವಳ ಜೊತೆ ಹಂಚಿಕೊಂಡಾಗ ಕಣ್ಣಂಚಿನಲ್ಲಿ ನೀರು ತುಂಬಿ ಕುಣಿದು ಕುಪ್ಪಳಿಸಿದವಳು ನನ್ನ ಕಾವೇರಿ. ಹೀಗೆ ನನ್ನ ಬದುಕಿಗೆ, ಸಾಧನೆಗೆ, ಅರ್ಥಕೊಟ್ಟವಳು ನನ್ನ ನರನಾಡಿಗಳಲ್ಲೆಲ್ಲ ಪ್ರವಹಿಸುತ್ತಿದ್ದಳು. ಒಮ್ಮೊಮ್ಮೆ ನೋವಿನ ಒಗಟುಗಳಿಂದ “ನಿನ್ನ ಬಿಟ್ಟು ನನ್ನ ಬದುಕೇ ಇಲ್ಲ ಕಣೋ” ಎಂದು ಭುಜಕ್ಕೊರಗಿ ಉಸುರುತ್ತಿದ್ದವಳು. “ಹೆದರಬೇಡ…ನನ್ನುಸಿರು ಇರುವವರೆಗೆ ನಿನ್ನ ಜೊತೆ ನಾನಿರುತ್ತೀನಿ” ಎಂಬ ನನ್ನ ಭರವಸೆಯ ಮಾತುಗಳಿಗೆ ಕರಗಿ ಮುಗಳ್ನಕ್ಕವಳು.
ನೀವೇನೇ ಅನ್ನಿ …ಲೋಕವೇನೇ ಅನ್ನಲಿ …ನನ್ನದು ಮತ್ತು ಕಾವೇರಿಯದು ಆದ್ಭುತವಾದ ಪ್ರೇಮ ಬಂಧನ. ಆಕರ್ಷಣೆಯನ್ನೂ ಮೀರಿ ಪ್ರೌಢತ್ವದತ್ತ ಮುಖಮಾಡಿದ್ದ ಅಚಲ ಪ್ರೇಮ.
ಮುಂದೆ ನಾವಿಬ್ಬರೂ ಉನ್ನತ ವಿದ್ಯಾಭ್ಯಾಸದಲ್ಲಿ ಆಸಕ್ತಿಯ ವಿಷಯವಾದ ಮನೋವಿಜ್ಞಾನವನ್ನೇ ಆಯ್ಕೆ ಮಾಡಿಕೊಂಡೆವು. ಮನೋವೈದ್ಯೆಯಾಗುವ ಹೆಬ್ಬಯಕೆ ಅವಳದು. ನನಗೋ ಅವಳನ್ನು ಬಿಟ್ಟಿರಲಾರದ ಭಾವ. ಅಂತೂ ಇಬ್ಬರೂ ಮತ್ತೆ ಮತ್ತೆ ಒಂದೇ ಕಾಲೇಜುಗಳ, ಒಂದೇ ತರಗತಿಗಳಲ್ಲಿ ವಿದ್ಯೆಯೆಂಬ ಜ್ಞಾನವನ್ನು ತಲೆಗೇರಿಸಿಕೊಳ್ಳುತ್ತಾ, ಪ್ರೀತಿಯೆಂಬ ಹಗ್ಗವನ್ನು ಜೊತೆಯಲ್ಲಿಯೇ ಹೆಣೆಯುತ್ತಾ ಹೋದೆವು. ವಯಸ್ಸು ಬೆಳೆದಂತೆಲ್ಲಾ ಪ್ರೀತಿ ಗಟ್ಟಿಯಾಗುತ್ತಾ ಬಂತು . ಪ್ರೌಢಿಮೆಯೆಡೆಗೆ ಸಾಗಿತು.
ಮುಂದೆ…ಹೌದು…ಇನ್ನು ಮುಂದೆ ನಡೆಯುವ ವಿಷಯಗಳನ್ನು ಹೇಳಲು ಬಹಳ ಕಷ್ಟವಾಗುತ್ತಿದೆ. ಆದರೂ…ಹೇಳಲೇ ಬೇಕು ನಾನು…‌ ನೀವು ಕೇಳಲೇ ಬೇಕು. ಬದುಕಿನ ಕಟು ವಾಸ್ತವಗಳು ಬದುಕನ್ನು ಆಹುತಿ ಮಾಡಿಕೊಳ್ಳುವ ಬಗೆಯನ್ನು ನೀವು ಅರಿತುಕೊಳ್ಳಲೇ ಬೇಕಲ್ಲವಾ…? ನಾನು ಮೌನವಾಗಿ ಅನುಭವಿಸಿದ್ದು…ದಾರಿ ಕಾಣದೆ ಪರಿತಪಿಸಿದ್ದು…ಎಲ್ಲವೂ ನಿಮ್ಮೆದೆಯ ಮಿಡಿತಗಳೊಡನೆ ಕರಗ ಬೇಕಲ್ಲವಾ …ಹೇಳುತ್ತೇನೆ ಕೇಳಿ….
ಕಲಿಕೆ ಎಂಬ ಘಟ್ಟ ಮುಗಿಸಿದ ಮೇಲೆ, ವೃತ್ತಿಪರವಾಗಿ ಯೋಚಿಸುವ ಅನಿವಾರ್ಯತೆ. ಮೊದಲು ನಾವು ಪ್ರೈವೇಟ್ ಹಾಸ್ಪಿಟಲ್ಗಳಲ್ಲಿ ಕೆಲಸಕ್ಕೆ ಸೇರಿಕೊಂಡೆವು. ನಮ್ಮದೇ ಒಂದು ಕ್ಲಿನಿಕ್ ನಡೆಸುವ ಆಸೆ ಹೃದಯದ ತುಂಬಾ ತುಂಬಿಕೊಂಡಿತ್ತು. ನಮ್ಮದೇ ಪುಟ್ಟ ಸಂಸಾರ..ಪುಟ್ಟ ಗೂಡಿನಲ್ಲಿ ಸುಖವಾಗಿ ಬದುಕುವ ಕನಸು ಎದೆ ತುಂಬ ತುಂಬಿಕೊಂಡಿದ್ದು ನನಗೆ ಮಾತ್ರವಲ್ಲ..ಅವಳಿಗೂ…
ವಯಸ್ಸಿಗೆ ಬಂದ ಮಗಳನ್ನು ಮದುವೆ ಮಾಡಿ ಕೊಡುವ ಚಿಂತೆ ಯಾವ ಅಪ್ಪ ಅಮ್ಮನಿಗೆ ಇರುವುದಿಲ್ಲ..?” ಕಲಿಯೋದು ಕಲಿಯೋದು ಅಂತ ಎಷ್ಟು ..? ವಯಸ್ಸು ಸುಮ್ಮನೆ ಕೂರುವುದೇನು? ಒಳ್ಳೆ ಸಂಬಂಧ ಬಂದರೆ ಮದುವೆಗೆ ಒಪ್ಕೊಂಡು ಬಿಡು.” ಎಂದು ಕಾವೇರಿಗೆ ಆಗಲೇ ಮನೆಯಿಂದ ಒತ್ತಡ ಶುರುವಾಗಿತ್ತು. “ಏನ್ಮಾಡೋದು ವಿನೋದ್?” ಅಂತ ನನ್ನೊಡನೆ ಭಯ ವ್ಯಾಕುಲದಿಂದ ಕೇಳಿದ್ದಳು. “ನಾನೇ ನಿಮ್ಮ ಅಪ್ಪ ಅಮ್ಮನಲ್ಲಿ ಮಾತನಾಡ್ತೀನಿ. ನಮ್ಮನೇಯವರನ್ನೂ ಒಪ್ಪಿಸ್ತೀನಿ. ಮದುವೆ ಆಗೋಣ..ದೇವರ ಮೇಲೆ ಭಾರ ಹಾಕು” ಅಂತ ಅವಳನ್ನು ಸಮಾಧಾನಿಸಿದೆ. ಕಾವೇರಿ ಹೌಹಾರಿದಳು. “ಬೇಡ …ನಾನೇ ಹೇಳ್ತೀನಿ…ಸಮಯ ನೋಡಿ” ಅಂದಳು.
ಹೌದು…ಹೇಳದೆ ಕೇಳದೆ ಹುಟ್ಟಿಕೊಂಡ ಪ್ರೀತಿಗೆ ಜಾತಿಯೆಂಬುದು ಅಡ್ಡಿಯಾಗಿತ್ತು. ಅವಳೋ ಶುದ್ಧ ಸಸ್ಯಾಹಾರಿ. ನಾನೋ ಮಾಂಸಾಹಾರಿ. ಅವಳ ಬದುಕಿನ ಶೈಲಿಗೆ ನಾನ್ಯಾವತ್ತೂ ಅಡ್ಡಿಪಡಿಸಲಾರೆ ಎಂಬುದು ಕಾವೇರಿಗೆ ಖಚಿತವಾಗಿ ತಿಳಿದ ಸತ್ಯವಾಗಿತ್ತು. ಅವಳ ನಂಬಿಕೆ ಆಚಾರ ವಿಚಾರಗಳಿಗೆ ಅಡ್ಡಿಯಾಗದಂತೆ ಬದುಕುವ ಭರವಸೆ ಅವಳಿಗೆ ನೀಡಿದ್ದೆ ನಾನು. ಆದರೇನು…”ಬಡತನದಲ್ಲೆ ಕಷ್ಟ ಪಟ್ಟು ವಿದ್ಯೆ ಕಲಿಸಿದ್ದೇನೆ. ಸಮಾಜದಲ್ಲಿ ಗೌರವದಿಂದ ಬದುಕುತ್ತಿದ್ದೇನೆ. ನಿನ್ನ ನಂತರ ತಂಗಿಯೂ ಇದ್ದಾಳೆ. ಅವಳ ಭವಿಷ್ಯ ನೋಡು. ಇಲ್ಲವಾದರೆ ನಾನೂ..ನಿನ್ನ ಅಮ್ಮನೂ…ತಂಗಿಯೂ ವಿಷ ಕುಡೀಬೇಕಾಗುತ್ತೆ ..ಅಂತ ಖಡಾಖಂಡಿತವಾಗಿ ಹೇಳಿಬಿಟ್ಟರು ಕಾವೇರಿಯೊಡನೆ ಅವಳಪ್ಪ. ಸಮಾಜದಲ್ಲಿ ಮರ್ಯಾದೆಯಿಂದ …ಒಬ್ಬರಿಂದ ಹೇಳಿಸಿಕೊಳ್ಳದೆ ಬದುಕುವುದು ಅವರಿಗೆ ಬೇಕಿತ್ತು.ಕಾವೇರಿ ಮರುಮಾತನಾಡಲಿಲ್ಲ.
ತಾನು ಪ್ರೀತಿ ಮಾಡಿದ ತಪ್ಪಿಗೆ ನನ್ನೆದುರು ಅತ್ತಳು. ನನ್ನೆದೆಗೆ ಬಡಿದು ಈಗ ಏನ್ಮಾಡೋದು…ಉತ್ತರ ಹೇಳೋ….ಎಂದು ಗೋಳಾಡಿದಳು. “ಬಾ ಓಡಿ ಹೋಗೋಣ “ಅಂದೆ…ಯಾಕೆಂದರೆ…ನನಗೂ ಕಾವೇರಿಯನ್ನು ಮರೆಯುವುದು ಅಷ್ಟು ಸುಲಭವಾಗಿರಲಿಲ್ಲ. ಅವಳಿಗಾಗಿ ಯಾವ ಪರಿಸ್ಥಿತಿಯನ್ನು ಎದುರಿಸಲೂ ಸಿದ್ಧನಿದ್ದೆ ನಾನು.
ಆದರೆ ಕಾವೇರಿ ನನ್ನೊಡನೆ ಬರಲು ಒಪ್ಪಲಿಲ್ಲ. ಹೆತ್ತು ಹೊತ್ತು ಸಲಹಿದ ಅಪ್ಪ ಅಮ್ಮನ ಮಾತನ್ನು ಅವಳಿಗೆ ತಳ್ಳಿ ಹಾಕಲಾಗಲಿಲ್ಲ. ತನ್ನಿಂದಾಗಿ ಅವರು ಸಮಾಜದಲ್ಲಿ ತಲೆ ತಗ್ಗಿಸುವುದು ಅವಳಿಗೆ ಬೇಡವಾಗಿತ್ತು. ಈ ಜನ್ಮದಲ್ಲಿ ನನ್ನ ಮತ್ತು ಅವಳ ಮದುವೆ ಸಾಧ್ಯವಿಲ್ಲವೆಂಬ ಕಠೋರ ಸತ್ಯವನ್ನು ಅರಗಿಸಿಕೊಳ್ಳ ಲಾಗಲಿಲ್ಲ. ಬಾ ಎಲ್ಲಾದರೂ ವಿಷ ಕುಡಿದು ಸಾಯೋಣ ಅಂದಳು. ಯಾಕೆಂದರೆ ಅವಳಿಗೆ ನಾನಿಲ್ಲದ ಬದುಕನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯವಾಗಿತ್ತು.
ಆದರೆ ನಾವಿಬ್ಬರೂ ಸಾಯಲಿಲ್ಲ. ಅವಳು ಅವಳಪ್ಪನ ಆಸೆಯಂತೆ ದೂರದ ಬೊಂಬಾಯಿಯಲ್ಲಿ ಇದ್ದ ಅಗರ್ಭ ಶ್ರೀಮಂತ ವರನ ಕೈ ಹಿಡಿಯಲು ಒಪ್ಪಿಗೆ ಕೊಟ್ಟಳು. ನನಗೋ ಭೂಮಿಯೇ ಕುಸಿದು ಹೋದ ಭಾಸ. ಅವಳಿಲ್ಲದ ಬದುಕಿನ ಊಹನೆಯೇ ನನಗೆ ಕಷ್ಟವಾಯ್ತು. ಜೊತೆಗೆ ಏನೇ ಆದರೂ ಸಾಯೋದಿಲ್ಲ ಎಂಬ ಮಾತು ಕೊಡು ಎಂದಳು. ನೀನೂ ಕೂಡಾ ಬೇರೆ ಮದುವೆಯಾಗಬೇಕು ಎಂದು ಮಾತು ತೆಗೆದುಕೊಂಡಳು. ಅವಳು ನನ್ನ ಅಗಲುವಿಕೆಯನ್ನು ಹೇಗೆ ಸಹಿಸಿಕೊಂಡಳೋ ದೇವರೇ ಬಲ್ಲ. ನಾ ಬೇರೊಬ್ಬರ ಜೊತೆ ಮದ್ವೆ ಆಗೋದನ್ನ ನೀ ನೋಡಬ್ಯಾಡ ಎಂದು ಮದುವೆಗೂ ಕರೆಯುವ ಧೈರ್ಯ ಮಾಡಲಿಲ್ಲ. ನಾ ಹೋಗುವ ಧೈರ್ಯವೂ ಮಾಡಲಿಲ್ಲ. ನನ್ನೆದೆಯ ತುಣುಕೊಂದು ನನ್ನಿಂದ ತುಂಡಾಗಿ ಬಿಟ್ಟಿತು. ನೋವು ತಡೆಯಲಾಗಲಿಲ್ಲ ಅಷ್ಟೇ. ಇನ್ನೇನೂ ಜಾಸ್ತಿ ನಾ ಹೇಳಲಾರೆ.
___
ಇದೆಲ್ಲ ಕಳೆದು ವರುಷಗಳು ಹತ್ತು. ಮತ್ತೆ ನಾನೆಂದೂ ಕಾವೇರಿಯನ್ನು ನೋಡಲೂ ಇಲ್ಲ, ಅವಳ ಬಗ್ಗೆ ಯಾವ ವಿಷಯವೂ ನನ್ನ ಕಿವಿಗೆ ಬೀಳಲಿಲ್ಲ. ಹಾಗಂತ ನನಗೆ ಕಾವೇರಿಯನ್ನು ಸಂಪೂರ್ಣವಾಗಿ ಮರೆಯಲು ಸಾಧ್ಯವಾಗಲೂ ಇಲ್ಲ. ಹಾಗೆಂದೇ ನನ್ನ ಒಬ್ಬಳೇ ಮಗಳಿಗೆ ಅವಳ ಹೆಸರನ್ನೇ ಇಟ್ಟುಬಿಟ್ಟೆ. ನಾನು ನಡೆಸುತ್ತಿದ್ದ ಕ್ಲಿನಿಕ್ ಗೂ ಅದೇ ಹೆಸರು ಯಾವ ಗೊಂದಲಗಳಿಲ್ಲದೆ ಸ್ಥಿರವಾಗಿ ಬಿಟ್ಟಿತ್ತು. ಅಂತೂ ನನ್ನ ಹೃದಯದಲ್ಲಿ ಪಡಿಯಚ್ಚಿನಂತಿದ್ದ ಹೆಸರನ್ನು ನನ್ನ ಸುತ್ತಲೆಲ್ಲ ತುಂಬಿ ತುಳುಕುವಂತೆ
ಮಾಡಿದ್ದೆ. ನಾನಿದ್ದ ಊರನ್ನು ತೊರೆದು ಬೆಂಗಳೂರಿನಲ್ಲಿ ನೆಲೆಸಿದ್ದೆ.
ಅದೇನೇ ಆದರೂ ನಾನು ಈಗ ಕಾವೇರಿಯನ್ನು ನೋಡಿದ್ದು ನಿಜ. ಅವಳು ರೈಲಿನಿಂದ ಹೊರಗೆ ನೋಡುತ್ತಿದ್ದಳು. ನನ್ನನ್ನು ನೋಡಲಿಲ್ಲ. ನನಗೆ ಒಮ್ಮೆಗೇ ಬಹಳ ಗೊಂದಲವಾಯಿತು. ಅವಳನ್ನು ಮಾತನಾಡಿಸುವುದಾ ಬೇಡವಾ ಎಂದು. ಅವಳು ಈಗ ನನ್ನ ಕಾವೇರಿಯಲ್ಲ, ಕಟು ವಾಸ್ತವವಾಗಿತ್ತು. ಮನಸ್ಸಿನ ಭಾವನೆಗಳು ಅಲ್ಲೋಲಕಲ್ಲೋಲವಾಗಿದ್ದವು. ಸುಮ್ಮನೆ ಕುಳಿತು ಬಿಟ್ಟೆ. ಸ್ವಲ್ಪ ಸಮಯದ ನಂತರ ಅವಳೇ ನನ್ನನ್ನು ನೋಡಿದಳು. ಮುಗುಳ್ನಕ್ಕಳು. ಕಲ್ಮಶವಿಲ್ಲದ ನಗು ಅದು. ಪ್ರತಿಯಾಗಿ ನಾನೂ ಮುಗುಳ್ನಕ್ಕೆ. ಕೈ ಮುಗಿದಳು. ನಾನೂ ಕೂಡಾ ಅಭಿವಂದಿಸಿದೆ. ಎಷ್ಟೊಂದು ಆತ್ಮೀಯರಾಗಿದ್ದೆವು. ಈಗ ಅಷ್ಟೊಂದು ಅಪರಿಚಿತರಾಗಿ ಬಿಟ್ಟಿವಾ ಅನ್ನಿಸಿತ್ತು. ಮುಂದಿನ ನಿಲ್ದಾಣದಲ್ಲಿ ಅವಳ ಎದುರಿನ ಮತ್ತು ಬಳಿಯ ಸೀಟಿನ ಜನರೆಲ್ಲರೂ ಇಳಿದರು. ಅವಳ ಎದುರಿಗೆ ಹೋಗಿ ಕುಳಿತೆ. ಮಾತನಾಡೋಣವೆನ್ನಿಸಿ. “ಹೇಗಿದ್ದೀಯಾ ಕಾವೇರಿ?” ಎಂದು ಕೇಳಿದೆ. ಉತ್ತರಿಸಲಿಲ್ಲ, “ನೀನು?” ಎಂದಷ್ಟೇ ಕೇಳಿದಳು. “ಚೆನ್ನಾಗಿದ್ದೀನಿ” ಅಂದೆ. ಬಹುಶಃ ನಾನೂ ಕೂಡಾ ಅವಳಿಂದ ಉತ್ತರ ನಿರೀಕ್ಷಿಸಲಿಲ್ಲ. ಚೆನ್ನಾಗಿರದೆ ಇನ್ನು ಹೇಗಿರುತ್ತಾಳೆ,ಅಷ್ಟು ಶ್ರೀಮಂತಿಕೆಯ ಗಂಡ ಸಿಕ್ಕಿದ ಮೇಲೆ. ಅವಳು ಧರಿಸಿರುವ ಉಡುಪೇ ಒಂದರ್ಥದಲ್ಲಿ ಅವಳ ಶ್ರೀಮಂತಿಕೆಯನ್ನು ಮೌನವಾಗಿಯೇ ಹೇಳಿದ್ದವು.
“ಎಷ್ಟು ಮಕ್ಕಳು?” ಅಂದಳು. “ಒಬ್ಬಳೇ ಮಗಳು 5ನೇ ಕ್ಲಾಸು” ಅಂದೆ.”ನಿನಗೆ?” ಅಂದೆ. “ಒಬ್ಬ ಮಗ. 6ನೇ ಕ್ಲಾಸು” ಅಂದಳು. ಮುಂದೆ ಏನು ಮಾತನ್ನಾಡಲೂ ತೋಚಲಿಲ್ಲ ಇಬ್ಬರಿಗೂ. ಹೇಗೆ ಮಾತು ಮುಂದುವರಿಸುವುದೆಂಬ ಗೊಂದಲದಲ್ಲಿರುವಾಗಲೇ ಅವಳ ಮೊಬೈಲು ರಿಂಗಣಿಸಿತು. ಮೊಬೈಲಿನಲ್ಲಿ ಮಾತನ್ನಾಡುತ್ತಲೇ ಯಾಕೋ ಅವಳು ಗೊಂದಲದಲ್ಲಿರುವಂತೆ ಅನ್ನಿಸಿತು. ಮುಖ ಯಾಕೋ ದುಗುಡದಿಂದ ಕೂಡಿದೆ ಅನ್ನಿಸಿತು. ಒಂದೈದು ನಿಮಿಷದ ನಂತರ ಮೊಬೈಲು ಬ್ಯಾಗಿನೊಳಗೆ ಹೋಯಿತು. “ಊರಿನತ್ತ ಹೊರಟ್ಯಾ?” ಎಂಬ ಪ್ರಶ್ನೆಗೆ “ಹೂಂ” ಎಂದಳು. “ಯಾಕೋ ಬೇಸರದಲ್ಲಿದ್ದಿ ? ತೊಂದರೆ ಇಲ್ಲಾಂದ್ರೆ ಹಂಚಿಕೊಂಡು ಬಿಡು. ಮನಸ್ಸು ಹಗುರಾಗುತ್ತೆ” ಅಂದೆ. ನಕ್ಕಳು. “ಹೇಳಿಕೊಳ್ಳಬಹುದಾ ನಿನ್ನೊಡನೆ?” ಅಂದಳು.

“ಯಾಕಿಲ್ಲ? ನಾ ಏನೂ ಬದಲಾಗಿಲ್ಲ. ಅಹಂಕಾರ, ದರ್ಪ ಮೂಡಿಕೊಂಡಿಲ್ಲ” ಅಂದೆ. ಅದೊಂದು ದೊಡ್ಡ ಕತೆ ಎಂದು ತನ್ನ ಬದುಕಿನ ಕತೆಯನ್ನೇ ಬಿಚ್ಚಿಟ್ಟಳು.

             ಹೌದು ಓದುಗರೇ, ಕಾವೇರಿಯ ಮದುವೆಯ ನಂತರದ ಕತೆ ನನ್ನ ಕಿವಿಗೆ ಬಹಳ ಕಹಿಯೆನ್ನಿಸಿತು. ಹೃದಯ ಹಿಂಡಿದಂತಾಯ್ತು. ಕಾವೇರಿ ಶ್ರೀಮಂತ ಹುಡುಗನ ಜೊತೆಯೇನೋ ಮದುವೆ ಆಗಿದ್ದಳು. ಆದರೆ, ಅತ್ತೆ ಎನ್ನಿಸಿಕೊಂಡವಳು 

ಬಡವರ ಹುಡುಗಿಯೆಂದು ಅಡಿಗಡಿಗೆ ಹೀಯಾಳಿಸುತ್ತಿದ್ದರು. ತಾಯಿ ಜೊತೆ ಮಗನೂ ಸೇರಿಕೊಂಡಿದ್ದನು. ಅವಳ ಪರಿಸ್ಥಿತಿ ವಿದ್ಯೆ ಇದ್ದೂ ಕೆಲಸಕ್ಕೆ ಹೋಗುವಂತಿರಲಿಲ್ಲ. ಮನೆಯೊಳಗೆ ಮನೆಯ ಸದಸ್ಯೆ ಅನ್ನೋದಕ್ಕಿಂತ ಆಳಾಗಿ ಇದ್ದಳು ಎನ್ನಬಹುದು. ಮಾತು ಮಾತಿಗೆ ಇರಿತ, ಗಂಡನ ಹೊಡೆತ, ಇವೆಲ್ಲವುಗಳಿಂದಲೂ ಬಸವಳಿದು ಹೋಗಿದ್ದಳು. ಇಷ್ಟು ಸಾಲದೆಂಬಂತೆ ಎಲ್ಲೋ ಅವಳು ಗಂಡನ ಜೊತೆ ಪ್ರಯಾಣಿಸುತ್ತಿದ್ದಾಗ ಅವಳು ಕುಳಿತಿದ್ದ ಕಾರು ಟ್ರಕ್ ಒಂದಕ್ಕೆ ಗುದ್ದಿತು. ಅವಳ ಗಂಡ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾದನು. ಅವಳು ಮಾತ್ರ ತನ್ನ ಕಾಲುಗಳ ಸ್ವಾದೀನವನ್ನೆ ಕಳೆದುಕೊಂಡು ಬಿಟ್ಟಳು. ಮುಂದೆಂದೂ ನಡೆದಾಡಲು ಸಾಧ್ಯವಿಲ್ಲದ ಸ್ಥಿತಿ ತಲುಪಿದ್ದಳು. ಇಂತಹ ಕಾವೇರಿಯನ್ನು ಅಷ್ಟೊಂದು ಭಾವರಹಿತ ಮನಸ್ಥಿತಿಯ ಜನ ಹೇಗೆ ಸ್ವೀಕರಿಸಿಯಾರು? ಕಾವೇರಿಯನ್ನು ಕೇವಲ ತಮ್ಮ ಅನುಕೂಲತೆ ಮತ್ತು ದೈಹಿಕ ತೃಪ್ತಿಗೆಂದು ಅವಳ ಗಂಡ ಉಪಯೋಗಿಸಿ ಕೊಂಡನೇ ಹೊರತು, ಎಂದೂ ನನ್ನ ಕಾವೆರಿಯನ್ನು ಒಂದು ಭಾವನೆಗಳಿರುವ ಸಂಗಾತಿಯಾಗಿ ಕಾಣಲಿಲ್ಲ.
ಕಾವೇರಿಗೆ ಆ ಮನೆಯಲ್ಲಿ ಜಾಗ ಇಲ್ಲವಾಯಿತು. ಗಂಡನೆನ್ನಿಸಿಕೊಂಡವನು ಎದುರೆದುರಿಗೆ ಬೇರೆ ಹೆಣ್ಣುಗಳ ಸಹವಾಸಕ್ಕೆ ತೊಡಗಿದ.
ಅತ್ತೆ ಎನ್ನಿಸಿಕೊಂಡವಳು ತನ್ನ ಮಗನಿಗೆ ಇನ್ನಿಲ್ಲದ ಬೆಂಬಲ ನೀಡ ತೊಡಗಿದಳು. “ಮನೆಯೊಳಗಿನ ಹೆಣ್ಣು ಸರಿ ಇಲ್ಲದಿದ್ದರೆ ಗಂಡಸರೇನು ಮಾಡಬೇಕು? ಎಷ್ಟುaà ದಿನವೆಂದು ನನ್ನ ಮಗ ಶಿಕ್ಷೆ ಅನುಭವಿಸ ಬೇಕು?” ಎಂದು ಮರು ಮದುವೆಯ ಯೋಚನೆ ಮಾಡಿಯೇ ಬಿಟ್ಟರು ಅವಳತ್ತೆ. ಕಾವೇರಿಯ ತಂದೆ ಅಳಿಯನ ಕಾಲಿಗೆ ಬಿದ್ದು ಅಂಗಲಾಚಿಕೊಂಡರು. ಆದರೂ ಗಂಡು ಹೃದಯ ಕರಗಲಿಲ್ಲ. ಇದುವರೆಗೂ ಎಲ್ಲವನ್ನೂ ಸಹಿಸಿಕೊಂಡಿದ್ದ ಕಾವೇರಿಗೆ ಈಗ ಮಾತ್ರ ಸಹಿಸಲಾಗಲಿಲ್ಲ. “ಅಪ್ಪಾ…ನೀನು ಮರ್ಯಾದೆ, ಗೌರವ ಅಂತ ಅಂಜುತ್ತಿದ್ದುದಕ್ಕೆ ಇದುವರೆಗೂ…ಎಲ್ಲಾ ಸಹಿಸಿಕೊಂಡು ಸುಮ್ಮನಿದ್ದೆ..ಇಂಥ ಮಾನವೀಯತೆ ಎಂದರೇನೇಂದೆ ಅರಿಯದವರಲ್ಲಿ, ಅಂಗಲಾಚುತ್ತೀಯಲ್ಲ..ಬಾ ಹೋಗೋಣ ಮನೆಗೆ” ಎಂದು ಅಪ್ಪನ ಜೊತೆಯಲ್ಲಿ ಪುಟ್ಟ ಮಗನೊಡನೆ ಹೊರಗೆ ನಡೆದೇ ಬಿಟ್ಟಳು..ಕಾವೇರಿ. ಮಗಳಿಗಾದ ಅನ್ಯಾಯಕ್ಕೆ…ಊರಮಂದಿಯ ಊಹಾಪೋಹ, ಮರ್ಯಾದೆಗೆ ಅಂಜಿ ಕಾವೇರಿಯ ತಂದೆ ಆತ್ಮಹತ್ಯೆ ಮಾಡಿಕೊಂಡರು. ಕಾವೇರಿ ತಾಯಿಯ ಜೊತೆ ಒಂಟಿಯಾದಳು. ಮತ್ತಷ್ಟು ಕುಸಿದು ಹೋದಳು. ಅವಳ ಮುಂದಿನ ಭವಿಷ್ಯ ಕತ್ತಲಾಗಿತ್ತು.
ಹೌದು ಓದುಗರೇ ನನ್ನ ಕಾವೇರಿ ಇಂತಹ ಸ್ಥಿತಿಯಲ್ಲಿ ನನಗೆ ಪತ್ತೆಯಾದಳು. ಅವಳ ಕಹಿವಾಸ್ತವ ನನ್ನೆದೆಯನ್ನು ಮುಳ್ಳಿನಿಂದ ಇರಿದ ಅನುಭವವನ್ನು ನೀಡಿತ್ತು. ಎದೆಯಲ್ಲಿ ಒತ್ತರಿಸಿಟ್ಟಿದ್ದ ಮಾತನ್ನು ಕೇಳಿಯೇ ಬಿಟ್ಟೆ,
“ನಿನ್ನಪ್ಪ ಸಮಾಜ, ಮರ್ಯಾದೆ ಎಂದು ಅಂಜಿ, ನನ್ನಿಂದ ದೂರ ಮಾಡಿ
ದರಲ್ಲಾ….ನಿನ್ನ ಸ್ಥಿತಿ ಏನಾಯ್ತು?” ಕಾವೇರಿ ಮಾತನ್ನಾಡಲಿಲ್ಲ. ಹನಿ ಕಣ್ಣೀರು ಕೆಳಗುರುಳಿತು. ಅವಳ ಕಂಬನಿಯನ್ನು ನಾನೇ ಒರೆಸಿದೆ. ಯಾವುದೋ ನಿಲ್ದಾಣದಲ್ಲಿ icecream ಮಾರಿಕೊಂಡು ಬರುತ್ತಿದ್ದ. ಎರಡು ತೆಗೆದುಕೊಂಡೆ.
“ತಗೋ… ಹಳೆಯ ದಿನಗಳ ನೆನಪಿಗಾಗಿ…..ಒಂದಿಷ್ಟು ಕ್ಷಣವಾದರೂ ಎಲ್ಲವನ್ನೂ ಮರೆಯೋಣ..ಖುಶಿಯಾಗಿರೋಣ….”ಎಂದೆ. ಮೌನದಲ್ಲೇ….ಐಸ್ ಕ್ರೀಮ್ ಚಪ್ಪರಿಸಿದೆವು. ಹಳೆಯ ದಿನಗಳ ಸೊಗಡಿಗೆ ಕಾವೇರಿ ಬಹುಶಃ ಮತ್ತೊಮ್ಮೆ ನನ್ನಂತೆಯೇ ಮರಳಿದ್ದಿರಲೂ ಬಹುದು….ಮುಖದ ಮೇಲೊಂದು ಮುಗುಳ್ನಗೆ ಅವಳಿಗರಿವಿಲ್ಲದಂತೆಯೇ ಮೂಡಿ ಮಾಯವಾಗಿ ಹೋಗಿತ್ತು.
ಆವರಿಸಿದ ಮೌನವನ್ನು ಮುರಿದು ಕೇಳಿದೆ,”ನಿನ್ನ ಮುಂದಿನ ನಿರ್ಧಾರ ಏನು?” ಅವಳಲ್ಲಿ ಬರೀ ಪ್ರಶ್ನೆಗಳೇ ತುಂಬಿ ಕೊಂಡಿದ್ದವು. ಉತ್ತರವಿಲ್ಲದೆ ಮೌನವಾಗಿದ್ದಳು. “ಕಾಲ ಮಿಂಚಿಲ್ಲ ಕಾವೇರಿ….ನನಗೆ ನಿನ್ನ ಸ್ಥಾನದಲ್ಲಿ ಯಾರನ್ನೂ ಕಲ್ಪಿಸಲು ಅಸಾಧ್ಯವಾಗಿತ್ತು….ನಾನು ಮದುವೆಯಾಗಿಲ್ಲ ಎಂದೆ…”.
ಕಾವೇರಿಯ ಮನದೊಳಗೆ ಬರೀ ಗೊಂದಲಗಳೇ ತುಂಬಿ ಹೋದವು. “ಮತ್ತೆ ಮಗಳು?” ಎಂದಳು. ” ಹೌದು….ಮಗಳು.. ಅವಳು…ಅನಾಥೆ….ದತ್ತು ತೆಗೆದುಕೊಂಡೆ…..ನಾನಿಟ್ಟ ಹೆಸರು ಕಾವೇರಿ…..”
“ನಿನಗಾಗಿ ಹಂಬಲಿಸಿದ ನಾನೊಬ್ಬ ಹುಚ್ಚು ಪ್ರೇಮಿ…. ಬಾ…ನನ್ನ ಕಾವೇರಿ ಕ್ಲಿನಿಕ್ ನಲ್ಲಿ ನಿನಗಾಗಿ ಕಾದಿರಿಸಿದ ಕನಸುಗಳು ಹಾಗೆಯೇ ಇವೆ… ನಿನ್ನ ಮಗನಿಗೂ….ನಾ ಒಳ್ಳೆಯ ತಂದೆಯಾಗುವೆ…..ಇನ್ನೂ ಸಮಾಜದ ಬಗ್ಗೆ ಭಯವೇ?” ಎಂದೆ.
ಅವಳಲ್ಲಿ ಉತ್ತರವಿರಲಿಲ್ಲ…ಆದರೆ…ಅವಳ ಕಣ್ಣುಗಳಲ್ಲಿ ಬದುಕುವ ಆಸೆ ಮತ್ತೊಮ್ಮೆ ಭುಗಿಲೆದ್ದಿತ್ತು. ಮುಖದಲ್ಲಿ ಮುಗುಳ್ನಗೆಯಿತ್ತು.
ಇಳಿಯುವ ನಿಲ್ದಾಣ ಬಂದಿತ್ತು….ಕಾಲಿನ ಸ್ವಾಧೀನವಿಲ್ಲದ ಅವಳು ಯಾರಿಗೋ ಕಾಯಲಿಲ್ಲ….ನನ್ನ ಭುಜದ ಮೇಲೆ ಕೈ ಇರಿಸಿದಳು…..ನಾ ಆಸರೆಯಾದೆ… ಎಲ್ಲಾ ಬಂಧನಗಳನ್ನೂ ಬದಿಗೊತ್ತಿ ಮತ್ತೆ ನನ್ನ ಪ್ರೇಮದಲ್ಲಿ ಬಂಧಿಯಾಗಿದ್ದಳು.

ಮನದೊಳಗೆ ಮಾತ್ರ ಬಾಲಿಶವಾದ ಪ್ರಶ್ನೆ ಮಂಡಿಗೆ ಮೆಲ್ಲುತ್ತಿತ್ತು.” ನನ್ನ ಮಗಳು ಕಾವೇರಿಯನ್ನು ಇನ್ನು ಯಾವ ಹೊಸ ಹೆಸರಿಡಿದು..ಕರೆಯಲಿ ಎಂದು.


Leave a Reply

Back To Top