ಲಕ್ಷ್ಮೀದೇವಿ ಕಮ್ಮಾರ-ಕಥೆ-ಕಲಾವಿದ

ಕಥಾ ಸಂಗಾತಿ

ಕಲಾವಿದ

ಲಕ್ಷ್ಮಿದೇವಿ ಕಮ್ಮಾರ


ಫೋನ್ ರಿಂಗ್ ಆಗುತ್ತಿದ್ದಂತೆಯೇ ರಿಸೀವ್ ಮಾಡದೆ ದುರುಗುಟ್ಟಿ ನೋಡುತ್ತಿರುವ ಹೆಂಡತಿ ಕಣ್ತಪ್ಪಿಸಿ ಹೊರಗೆ ಬಂದು “ಹಲೋ” ಎಂದರು. ಆ ಕಡೆಯಿಂದ “ನಮಸ್ತೆ ಸರ್, ಕಾರ್ಯಕ್ರಮಕ್ಕೆ ಎಲ್ಲಾ ರೆಡಿ ಆಗಿದೆ . ಹತ್ತು ಗಂಟೆಗೆ ನಿಮ್ಮನ್ನು ಕರೆಯಲು ಬರ್ತೀವಿ ರೆಡಿಯಾಗಿರಿ ಸರ್” ಎಂದು ವಿನಯದಿಂದ ಚಿತ್ತರಾಶಿ ಮಾಸ್ತರರ ಶಿಷ್ಯ ಫೋನ್ ಮಾಡಿ ತಿಳಿಸಿದ.
ಚಿತ್ತರಾಶಿಯವರಿಗೆ ಅವರ ಹೆಂಡತಿಯನ್ನು ಎದುರಿಸುವುದೇ ದೊಡ್ಡ ಸವಾಲಾಗಿದೆ. “ ಮೊದಲೆಲ್ಲಾ ನನ್ನ ಹುಚ್ಚಾಟವನ್ನು ಹೇಗೋ ಸಹಿಸಿಕೊಳ್ಳುತ್ತಿದ್ದಳು ಆದರೆ ಇತ್ತೀಚಿನ ಒಂದೆರಡು ವರ್ಷಗಳಲ್ಲಿ ರಣಚಂಡಿ ಆಗಿದ್ದಾಳೆ. ಅವಳದೇನು ತಪ್ಪಿಲ್ಲ ಬಿಡು.ಮದುವೆ ವಯಸ್ಸಿಗೆ ಬಂದಿರುವ ಮಗಳನ್ನು ,ಎಸ್ಸೆಸ್ಸೆಲ್ಸಿ ಮುಗಿಸಿ ಮುಂದಿನ ಶಿಕ್ಷಣಕ್ಕೆ ಹಾತೊರೆಯುತ್ತಿರುವ ಮಗನ ಕಡೆ ಲಕ್ಷ್ಯ ವಹಿಸಿದ ನನ್ನ ಹೊಣೆ ಗೇಡಿತನಕೆ ಬೇಸತ್ತ ಅವಳು ಹೀಗಾಗಿದ್ದಾಳೆಂದು ನನ್ನ ಮನಸ್ಸು ಸದಾ ಹೇಳುತ್ತೆ. ಆದರೆ ಕಾಲ ಪ್ರವಾಹದಲ್ಲಿ ಕೊಚ್ಚಿ ಹೋಗುವ ನನ್ನ ಕಲಾ ದೌರ್ಬಲ್ಯವನ್ನು ಗೆಲ್ಲಲಾಗುತ್ತಿಲ್ಲ” ಎಂದು ವಿಷಾದಪಟ್ಟರು ಚಿತ್ತ ರಾಶಿಯವರು.
ಒಳಗೆ ಹೋದ ತಕ್ಷಣ ಹೆಂಡತಿಯ ತೀಕ್ಷ್ಣವಾದ ಮಾತಿನ ಬಾಣಗಳು ಬಡಿಯುತ್ತಿದ್ದರೂ ಉಡಾಫೆಯ ಕವಚ ಧರಿಸಿ ತಮ್ಮಷ್ಟಕ್ಕೆ ತಾವು ಇದ್ದುದ್ದರಲ್ಲೇ ಉತ್ತಮವಾದ ನಿನ್ನೆ ರಾತ್ರಿ ಇಸ್ತ್ರಿ ಮಾಡಿಕೊಂಡಿದ್ದ ಪ್ಯಾಂಟು ಶರ್ಟ್ ಅನ್ನು ಧರಿಸಿ ಕಾರ್ಯಕ್ರಮಕ್ಕೆ ಹೋಗಲು ತಯಾರಿ ನಡೆಸಿದ್ದರು. ಅಷ್ಟರಲ್ಲೇ ಅವರ ಶಿಷ್ಯ ಬಂದಿದ್ದನ್ನು ಕಂಡು ಚಿತ್ತ ರಾಶಿಯವರ ಪತ್ನಿ ತಿರುಮಲಾ ಅಡುಗೆ ಮನೆಯೊಳಗೆ ಹೋದಳು. ಅವರಿಗೆ ಗೊತ್ತು ತಮ್ಮ ಪತ್ನಿ ಮನೆಯೊಳಗೆ ಎಷ್ಟೇ ಕೂಗಾಡಲಿ ಬಯ್ಯಲಿ ಹೊರಗಿನವರು ಬಂದಾಗ ಗೌರವದಿಂದ ನಡೆದುಕೊಳ್ಳುವ ಅವಳ ಸಂಸ್ಕಾರ, ದೊಡ್ಡ ಗುಣದಿಂದ ಬಂದವರ ಮುಂದೆ ತಮ್ಮ ಮರ್ಯಾದೆಗೆ ಕೇಡಿಲ್ಲ ಎಂದು. ಅವರು ಬಂದು ಕರೆದಾಗ ತಡೆಯುವ ಧೈರ್ಯವನ್ನು ಮಾಡುವುದಿಲ್ಲವೆಂದು ತಿಳಿದೇ ಸುಮ್ಮನಿದ್ದು ನಂತರ ತಮ್ಮ ಶಿಷ್ಯನೊಂದಿಗೆ ಕಾರಿನಲ್ಲಿ ಕಾರ್ಯಕ್ರಮಕ್ಕೆ ಬಂದರು.
ಬಿ. ಬಿ. ಎಂ ಹಾಲಿನಲ್ಲಿ ಕಿಕ್ಕಿರಿದು ಜನ ಸೇರಿದ್ದರು ಅದರಲ್ಲಿ ಅರ್ಧದಷ್ಟು ಚಿತ್ತ ರಾಶಿಯವರ ಶಿಷ್ಯರೇ!.. ಅದರಲ್ಲಿ ಕೆಲವರು ತಮ್ಮ ಗುರುಗಳಿಗೆ ಸನ್ಮಾನ ಮಾಡಿ ಕೃತಜ್ಞತೆ ಅರ್ಪಿಸಲು ಹಾತೊರೆಯುತ್ತಿದ್ದರೆ,ಇನ್ನೂ ಕೆಲವರು ಅವರ ಸನ್ಮಾನವನ್ನು ಕಣ್ತುಂಬ ನೋಡಿ ಆನಂದ ಪಡಲು ಕಾಯುತ್ತಿದ್ದರು.
ಚಿದಾನಂದ ಚಿತ್ತರಾಶಿಯವರು ಕಲೆ-ಸಾಹಿತ್ಯಕ್ಕಾಗಿ ಮಾಡಿದ ಸೇವೆಯನ್ನು ಗುರುತಿಸಿ ಕರ್ನಾಟಕ ಘನ ಸರಕಾರವು ಅವರಿಗೆ “ಕಲಾಭೂಷಣ” ಪ್ರಶಸ್ತಿ ನೀಡಿ ಗೌರವಿಸಿತ್ತು. ಅದನ್ನು ಸಂಭ್ರಮಿಸಲು ಅವರ ಶಿಷ್ಯರು, ಅಭಿಮಾನಿಗಳು, ಊರ ಮುಖಂಡರು ವಿವಿಧ ಸಂಘಗಳು ಸೇರಿ ಬಿ.ಬಿ.ಎಂ ಹಾಲ್ ನಲ್ಲಿ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದರು.
ವೇದಿಕೆ ಮೇಲೆ ಕುಳಿತಿದ್ದ ಚಿತ್ತರಾಶಿ ಮಾಸ್ತರರ ಮುಖದಲ್ಲಿ ಮನೆಯಿಂದ ಬರುವಾಗ ಇದ್ದ ಉತ್ಸಾಹ ಸಂಭ್ರಮ ಕಾಣದೆ ಮ್ಲಾನವದನರಾದರು .ಈಗ ಅವರಿಗೆ ತಿಳಿಯಾದ ಸರೋವರದ ತಳದಲ್ಲಿ ವಸ್ತುಗಳು ಕಾಣುವಂತೆ ವೇದಿಕೆಯ ಮೇಲೆ ನಿರಾಳತೆಯಿಂದ ಕುಳಿತ ಸಮಯದಲ್ಲೇ ಬರುವಾಗ ಅವರ ಹೆಂಡತಿ ಆಡಿದ ಮಾತುಗಳು ನೆನಪಾದವು.ಈಗ ಅವರಿಗೆ ಕಲಾವಿದ ಒಂದು ಕ್ಷಣ ಮರೆಯಾಗಿ ತಂದೆಯ ಜವಾಬ್ದಾರಿ ಮನವನಾವರಿಸಿತು. ಆ ಕ್ಷಣ ಅವರು “ಸಭಿಕರು ಏನಾರ ಅಂದುಕೊಳ್ಳಲಿ, ನಾನು ಇವತ್ತು ಎಲ್ಲರ ಈ ಮಾತು ಹೇಳಲೇ ಬೇಕು” ಎಂದುಕೊಂಡವರಿಗೆ ಶಿಷ್ಯರು, ಹಿರಿಯ- ಕಿರಿಯ ಸಾಹಿತಿಗಳು ಸಂಘ ಸಂಸ್ಥೆಗಳ ಮುಖಂಡರು ಬಂದು ಅಭಿನಂದಿಸುವುದು, ಹಸ್ತಲಾಘವ ಮಾಡುವುದು ಕೆಲವರು ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದು ಕಂಡು “ನಾನು ಹೇಳಬೇಕೆಂದು ನಿಶ್ಚಯಿಸಿದ್ದನ್ನು ಹೇಳಿವಿನೋ ಇಲ್ಲವೋ” ಎನ್ನುವ ಹಗ್ಗಜಗ್ಗಾಟ ಅವರ ಮನದ ಕೊಳದಲ್ಲಿ ಗೂಡಗನೆಬ್ಬಿಸಿತ್ತು. ಗಾಳಿಪಟ ಹಾರಿಸುವುದನ್ನು ಕಲಿಯಲು ಪ್ರಾರಂಭಿಸಿದ ಬಾಲಕನ ಗಾಳಿಪಟ ಒಮ್ಮೆ ಮೇಲೆರಿದಂತೆಯೇ ಸುಯ್ಯನೆ ಕೆಳಕ್ಕೆ ಬೀಳುವಂತೆ ಹೊಯ್ದಾಡಲಾರಾಂಭಿಸಿತು ಅವರ ಮನದ ನಿರ್ಧಾರ.
ಮನೆಯಿಂದ ಬರುವಾಗ ನಡೆದ ಮಾತಿನ ಚಕಮಕಿ ಬೇಡ-ಬೇಡವೆಂದರೂ ಒತ್ತಾಯಪೂರ್ವಕವಾಗಿ ನೆನಪಿಗೆ ಬರಲಾರಂಭಿಸಿತು.ಚಟುವಟಿಕೆಯಿಂದ ಇದ್ದಾಗ ಯಾವುದೂ ಕಾಡುವುದಿಲ್ಲ ಆದರೆ ಸುಮ್ಮನೆ ಕುಳಿತರೆ ಸಾಕು ಕಹಿ ಮಾತುಗಳು ಘಟನೆಗಳು ಅಲೆಗಳಂತೆ ಬಂದು ಅಪ್ಪಳಿಸುವವು. “ ಅಪ್ಪ ನನ್ನ ಕಾಲೇಜು ಫೀ ಕಟ್ತಿಯೋ ಇಲ್ಲ ಕಲಿಯುವುದು ಬಿಟ್ಟಬಿಡಲೋ” ಎಂದು ಮಗ ಅನ್ನುವಷ್ಟರಲ್ಲೇ ಅವರ ಹೆಂಡತಿ ತಿರುಮಲಾ “ಇವರಿಗೆ ಹೆಂಡತಿ ಮಕ್ಕಳೊಂದು ಕೇಡು ನಮ್ಮನ್ನು ಸಾಕಾಕಾಗಲ್ಲಂದರೆ ಯಾಕೆ ಮದುವೆ ಮಾಡಿಕೊಳ್ಳಬೇಕು ಸುಮ್ಮನೆ ತಮ್ಮ ಪಾಡಿಗೆ ತಾವು ನಾಟಕ ಗೋಷ್ಟಿ ಸಭೆ ಸಮಾರಂಭ ಅಂತ ಇದ್ದು ಬಿಡಬೇಕಿಲ್ಲ, ಮದುವೆ ವಯಸ್ಸಿಗೆ ಬಂದ ಮಗಳು ಅದಾಳ. ಅವಳ ಮದುವೆ ಯೋಚನೇನು ಇಲ್ಲ. ನಿನ್ನನ್ನು ಸುಮ್ಮನೆ ಸರಕಾರಿ ಕಾಲೇಜಿಗೆ ಹಾಕೊದು ಬಿಟ್ಟು, ‘ನನ್ನ ಮುಖ ನೋಡಿ ಚಲೋ ಕಾಲೇಜಿನವರು ಪ್ರವೇಶ ಕೊಟ್ಟಾರ’ ಅನ್ನೋ ಬಡಾಯಿ ಕೊಚ್ಚಿಕೊಳ್ಳುದೇ ಬಂತು.ನಿನ್ನ ಪರ್ಸಂಟೇಜ್ ನೋಡಿ ತಮ್ಮ ಪರಿಚಯದವರ ಅನ್ನೋದಕ್ಕ ಎರಡು ಲಕ್ಷ ಇದ್ದ ಫೀ ನ ಒಂದು ಲಕ್ಷಕ್ಕೆ ಒಪ್ಪಿಕೊಂಡರ. ಅಷ್ಟರ ಕೊಟ್ಟು ಓದ್ಸಾಕೂ ತಯಾರಿಲ್ಲ ನಿಮ್ಮಪ್ಪ. ಇದನ್ನ ತಿಳ್ಕೊಳ್ರಿ ನಿಮ್ಮ ಪಾಂಡಿತ್ಯ, ಹಾರ ತುರಾಯಿಯಿಂದ ನಮ್ಮ ಹೊಟ್ಟೆ ತುಂಬಲ್ಲ. ದುಡಿದಿದ್ದನ್ನು ತಂದುಹಾಕಿದರೆ, ಸ್ವಲ್ಪ ಕೂಡಿಡೋದನ್ನು ಕಲಿತಿದ್ದರೆ ಇವತ್ತು ನನ್ನ ಬಂಗಾರದಂತ ಮಗ ಒದ್ದಾಡು ಪ್ರಸಂಗ ಬರ್ತಿದ್ದಿಲ್ಲ” ಎಂದು ಹತಾಶೆಯಿಂದ ಕೆಂಗಣ್ಣಿನಿಂದ ಸುಡುವಂತೆ ನೋಡಿ ಕಣ್ಣೀರು ಹರಿಸಿದ್ದ ಮಡದಿ ಮುಖ ಕಣ್ಣಿಗೆ ಕಟ್ಟಿದಂತಿದೆ . ಆ ಘಟನೆಯಿಂದ ಹೊರಬರಲಾಗದಂತಾಗಿತ್ತು ಚಿತ್ತರಾಶಿ ಮಾಸ್ತರಿಗೆ. “ ಇಲ್ಲಿ ನೋಡಿದರೆ ಹೀರೋನಂತೆ ಸಮಾರಂಭದ ಕೇಂದ್ರ ಬಿಂದುವಾಗಿ ಮಿಂಚುತ್ತಿದ್ದೇನೆ. ಆದರೆ ಮನೆಯಲ್ಲಿ ಹೆಂಡತಿ ಮಕ್ಕಳಿಗೆ ವಿಲನ್ ಆಗಿದ್ದೇನೆ”.ಎನಿಸಿತು ಅವರಿಗೆ.
ಒಮ್ಮೆ ಹಿಂದೆ ಆದ ಘಟನೆ ನೆನಪಿಸಿಕೊಂಡರೆ ಸಾಕು ಸಾಲು ಸಾಲು ನೆನಪುಗಳು ಇರುವೆ ಸಾಲಿನಂತೆ ಮುಗಿಬೀಳುತ್ತವೆ. ಮನಸ್ಸನ್ನು ಆ ಕಡೆ ಹರಿಸಿದರೆ ಮುಗಿಯಿತು ಅದರ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಎಲ್ಲಿಗೋ ತಲುಪಿಸಿಬಿಡುತ್ತವೆ ಈ ಹಾಳು ಆಲೋಚನೆಗಳು.
ಚಿತ್ತರಾಶಿ ಮಾಸ್ತರಿಗೂ ಹಾಗೆ ಆಯಿತು. ಅವರಿಗೆ ಅವರ ಅಪ್ಪನ ಮಾತು ನೆನಪಾತು. “ ಲೇ ಮಗನೆ ಹೀಗೆ ನಾಟಕ, ಸಮಾರಂಭ ಅಂತ ತಿರುಗೋದು ಬಿಟ್ಟು ಬುದ್ಧಿವಂತ ಅದಿ, ಸರಿಯಾಗಿ ಓದಿ ಒಂದು ಸರಕಾರಿ ನೌಕರಿ ಹಿಡಿ. ಆಮೇಲೆ ಏನಾದರೂ ಮಾಡ್ಕೊಂಡು ಹೋಗು .ಇಲ್ಲದಿದ್ದರೆ ನಾನು ದುಡಿದು ಮಾಡಿಟ್ಟ ಆಸ್ತಿನೂ ಹಾಳು ಮಾಡಿ ಮಣ್ಣ ತಿನ್ನಬೇಕಾದೀತು ತಿಳ್ಕೊ” ಎಂದು ಎಚ್ಚರಿಸಿದ್ದು ನೆನಪಾಯ್ತು. ಜೊತೆಗೆ ತಮ್ಮ ಗತಕಾಲದ ದಿನಗಳು ನೆನಪಾದವು. ಅಪ್ಪನ ಒತ್ತಾಯಕ್ಕೊ , ಓದುವ ತುಡಿತಕ್ಕೊ ಬಿ.ಎ ಮುಗಿಸಿದೆ. ಆದರೆ ಮನದ ಹಂಬಲದಿಂದಾಗಿ ನಾಟಕ ತಂಡ ಮಾಡಿಕೊಂಡು ಯಶಸ್ವಿ ಪ್ರದರ್ಶನ ಕೊಡಲಾರಂಭಿಸಿದೆ. ಅದರಿಂದ ಬಂದ ದುಡ್ಡನ್ನು ಮತ್ತೊಂದು ನಾಟಕಕ್ಕೂ, ಕವಿಗೋಷ್ಠಿಗೂ, ಬರಹಕ್ಕು ಖರ್ಚು ಮಾಡುತ್ತಿದ್ದೆ. ಆಸಕ್ತಿ ಇರುವವರನ್ನು ಗುರುತಿಸಿ ಫೋನ್ ಮಾಡಿ ಕರೆಸಿ ಕವಿಗೋಷ್ಠಿಯಲ್ಲೂ, ನಾಟಕದಲ್ಲೂ ಭಾಗವಹಿಸಲು ಪ್ರೇರೇಪಿಸುತ್ತಿದ್ದೆ. ಕಲಿಯಲು ಬಯಸುವವರಿಗೆ ಹೇಳಿಕೊಡುತ್ತಿದ್ದೆ.ನಮ್ಮ ಭಾಗದಲ್ಲಿ ಶ್ರೇಷ್ಠ ನಾಟಕಕಾರ, ಸಾಹಿತಿ ಎಂಬ ಹೆಸರನ್ನು ಗಳಿಸಿದೆ. ಆದರೆ ಜೀವನ ನಡೆಸಲು ನಿರ್ದಿಷ್ಟ ಉದ್ಯೋಗ ಇರಲಿಲ್ಲ ಆ ಕಡೆ ಲಕ್ಷವನ್ನು ವಹಿಸಲಿಲ್ಲ.
“ಇವನನ್ನು ಹೀಗೆ ಬಿಟ್ಟರೆ, ಹಾಳಾಗಿ ಹೋಗ್ತಾನೆ. ಮನೆನೋ ಮಾರ್ತಾನೆ. ಇವರನಿಗೊಂದು ಮದುವೆ ಮಾಡಿದರೆ ಸರಿ ಹೋಗ್ತಾನೆ”. ಎಂದು ಎಲ್ಲ ತಾಯಂದಿರಂತೆ ನಮ್ಮವ್ವನೊ ಹೇಳಿದ ಸಲಹೆಯಂತೆ ತಿರುಮಲಾ ನನ್ನು ತಂದು ಕಟ್ಟಿದರು. ಅವರಿವರ ಕೈಕಾಲು ಹಿಡಿದು ಹೆತ್ತ ತಪ್ಪಿಗೆ ಅಪ್ಪ ಊರಿನ ಅನುದಾನಿತ ಶಾಲೆಯೊಂದರಲ್ಲಿ ಗುಮಾಸ್ತನ ಕೆಲಸ ಕೊಡಿಸಿದ್ದ. ಮದುವೆಯಾದ ಹೊಸತರಲ್ಲಿ ನಾನು ಹೆಂಡತಿ ಮೋಹದಲ್ಲಿ ಒಂದೆರಡು ವರ್ಷ ನಾಟಕ, ಗೋಷ್ಠಿ ಕಡಿಮೆ ಮಾಡಿದ್ದೆ. ಮಕ್ಕಳಾದ ಮೇಲೆ ಆಕೆ ಮಕ್ಕಳ ಕಡೆ ಗಮನ ಹರಿಸಲು ಆರಂಭಿಸಿದರೆ, ನಾನು ಮತ್ತೆ ನಾಟಕ, ಕಥೆ, ಕವನ ಬರೆಯೋದು, ನಾಟಕ ಮಾಡಿಸೋದು ಮುಂದುವರಿಸಿದೆ. ಕಲಿತ ಚಾಳಿ ಕಲ್ಲುಹಾಕಿದರು ಹೋಗಲ್ವಂತೆ. ನಾನೂ ಹಾಗೇ ನಡ್ಕೊಂಡೆ ಬರುವ ಸಂಬಳ, ಹೊಲದ ಬೆಳೆ ಎಲ್ಲವೂ ನನ್ನ ಈ ಹುಚ್ಚುಗೆ ಸಾಲದಾಯಿತು. ಬರುಬರುತ್ತಾ ಅಪ್ಪ ಅಮ್ಮನ ಜೊತೆ ಹೆಂಡತಿ ಬೈಗುಳ, ತಿರಸ್ಕಾರದ ಮಾತಿಗೆ ಒಗ್ಗಿ ಕೊಂಡಿದ್ದೆ. ಆದರೆ ನನ್ನಂತೆ ಮಕ್ಕಳಾಗಬಾರದು ಎಂದು ತಿರುಮಲಾ ಮಕ್ಕಳನ್ನು ಎಚ್ಚರಿಕೆಯಿಂದ ಓದಿನತ್ತ ಲಕ್ಷ ವಹಿಸುವಂತೆ ಮಾಡಿದ್ದಳು. ಮಕ್ಕಳು ಓದಿನಲ್ಲಿ ಜಾಣರಾದರು’.
ಒಮ್ಮೆಲೆ ಸಮಾರಂಭದಲ್ಲಿ ಗದ್ದಲ ಪ್ರಾರಂಭವಾಯಿತು. ನೆನಪಿನ ಸುರುಳಿಯಲ್ಲಿ ಕಳೆದುಹೋಗಿದ್ದ ಚಿತ್ತರಾಶಿಯವರಿಗೆ ವಾಸ್ತವಕ್ಕೆ ಮರಳುತ್ತಾ “ನಾನೇನಾದರೂ ತಪ್ಪೆಸಿಗಿದೆನೆ. ಪ್ರಾರ್ಥನೆ, ಸ್ವಾಗತ, ಪ್ರಾಸ್ತಾವಿಕ ನುಡಿಯಂತವು ಯಾಂತ್ರಿಕವಾಗಿ ನಡೆಯುತ್ತಿರುವಾಗ ನಾನು ಈ ಯೋಚನೆಯಲ್ಲಿ ಬಿದ್ದು ನನ್ನ ಭಾಷಣದ ಸರದಿ ಬಂದರೂ ಮೈಮೆರೆತು ಕುಳಿತಿದ್ದೇನೆ?” ಎನ್ನುವ ಯೋಚನೆಗಳು ಸರಸರನೆ ಹಾದು ಹೋದವು ಚಿತ್ತರಾಶಿಯವರಿಗೆ. “ಏನಾಯ್ತು” ಎಂದು ಗಾಬರಿಯಿಂದಲೇ ಪಕ್ಕದಲ್ಲಿದ್ದವರನ್ನು ವಿಚಾರಿಸಿದರು.ಅವರು “ಅಲ್ಲಿ ನೋಡಿ” ಎಂದು ವೇದಿಕೆಯತ್ತ ಬರುತ್ತಿರುವ ಸುರದ್ರೂಪಿಯತ್ತ ಬೆರಳುಮಾಡಿ ತೋರಿಸಿದರು. ಅವನ ಇಕ್ಕೆಲಗಳಲ್ಲಿ ಜನ ಬಂದು ಕೈ ಕುಲುಕುವುದು, ಫೋನ್ನಲ್ಲಿ ಸೆಲ್ಫಿ ತೆಗೆದುಕೊಳ್ಳುವುದು, ಮುಗೆ ಬಿದ್ದು ಫೋಟೋ ತೆಗೆಯುವುದು ನಡೆದು ಸಮಾರಂಭ ಕ್ಷಣಕಾಲ ಅಸ್ತವ್ಯಸ್ತವಾಯಿತು. ನಂತರ ಕಾರ್ಯಕರ್ತರು ಜನರನ್ನು ದೂರ ಸರಿಸಿ ಆ ವ್ಯಕ್ತಿಯನ್ನು ವೇದಿಕೆ ಮೇಲೆ ಕರೆತಂದರು. ಬಂದ ವ್ಯಕ್ತಿ ಸೀದಾ ಬಂದವನೇ ಚಿತ್ತರಾಶಿಯವರ ಕಾಲಿಗೆರಗಿ “ಹೇಗಿದ್ದೀರಿ ಸರ್” ಎಂದಾಗಲೇ ಅವನ ಧ್ವನಿ ಗುರುತು ಹಿಡಿದು ಅವನು ತಮ್ಮ ನೆಚ್ಚಿನ ಶಿಷ್ಯ ಪ್ರಕಾಶ್, ಈಗ ಕಿರುತೆರೆಯಲ್ಲಿ ಮಿಂಚುತ್ತಿರುವ ಜನಪ್ರಿಯ ನಾಯಕ ನಟ ಎಂಬುದು ಗೊತ್ತಾಯಿತು. ಅವನು ಬಹಳ ಬೆಳೆದಿದ್ದು ಸಿನಿಮಾದಲ್ಲೂ ನಟಿಸುತ್ತಿರುವುದು ಸುದ್ದಿ ಇತ್ತು. ಸಾಕಷ್ಟು ಮಂದಿ ಶಿಷ್ಯರ ಬಳಗ ಹೊಂದಿದ್ದ ಚಿತ್ತರಾಶಿ ಮಾಸ್ತರಿಗೆ ದೊಡ್ಡ ಮಟ್ಟದ ಹೆಸರುತಂದು ಕೊಟ್ಟವನು ಇವನೇ. ಬಹಳ ವರ್ಷದ ನಂತರ ನೋಡಿದ್ದರಿಂದ ಮತ್ತು ಅವನ ಹೇರ್ ಸ್ಟೈಲ್ ಬದಲಾಗಿದ್ದರಿಂದ ಗುರುತಿಸಲು ಕಷ್ಟವಾಯ್ತು ಮಾಸ್ತರರಿಗೆ.
ಪ್ರಕಾಶ ತುಂಬ ಉತ್ಸಾಹದ, ಮಹತ್ವಾಕಾಂಕ್ಷಿಯ ಹುಡುಗನಾಗಿದ್ದ. ಅವನ ಪ್ರತಿಭೆ ಗುರುತಿಸಿ ಪೋಷಿಸಿ ಬೆಳೆಸಿದ್ದರು ಚಿತ್ತರಾಶಿ ಮಾಸ್ತರ. ಅವರ ಮಾರ್ಗದರ್ಶನದಲ್ಲಿ ಸಂಪೂರ್ಣವಾಗಿ ನಟನೆಯಲ್ಲಿ ತೊಡಗಿಸಿಕೊಂಡು ಪರಿಪೂರ್ಣತೆ ಹೊಂದಿ ಸೀದಾ ಬೆಂಗಳೂರಿಗೆ ಜಿಗಿದಿದ್ದ. ಅಲ್ಲಿ ಹೇಗೋ ಕಷ್ಟಪಟ್ಟು ನಿರ್ದೇಶಕರನ್ನು ಹಿಡಿದು ಮೊದಮೊದಲು ಸೀರಿಯಲ್ನಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ. ಅವನ ಶ್ರಮ, ನಟನಾ ಚಾತುರ್ಯ, ಮತ್ತು ಅವನ ಸುಂದರ ರೂಪ ಅವನನ್ನು ಇಂದು ಈ ಮಟ್ಟಿಗೆ ಬೆಳೆಸಿತ್ತು.
ಹಾಗಾಗಿಯೇ ಇಂದು ತನ್ನನ್ನು ಕಲಿಸಿ ಬೆಳೆಸಿ ಪ್ರೋತ್ಸಾಹಿಸಿದ ಗುರುಗಳ ಸನ್ಮಾನದ ಸುದ್ದಿಯನ್ನು ತನ್ನ ಗೆಳೆಯರಿಂದ ತಿಳಿದು ಬೆಂಗಳೂರಿಂದ ಓಡೋಡಿ ಬಂದಿದ್ದ. ಈ ಗುರು-ಶಿಷ್ಯರ ಸಮಾಗಮದಿಂದ ವೇದಿಕೆಗೆ, ಸಮಾರಂಭಕ್ಕೆ ಒಂದು ಹೊಸ ಕಳೆ ಬಂತು. ಗುರು -ಶಿಷ್ಯರು ಪರಸ್ಪರ ಸಮಾಲೋಚನೆ ಮಾಡಿಕೊಂಡರು.
ನಿರೂಪಕ ಹೇಳುತ್ತಿದ್ದ, “ಈಗ ಚಿತ್ತರಾಶಿ ಮಾಸ್ತರರಿಗೆ ಸನ್ಮಾನ.ನಂತರ ಅವರ ಒಂದಿಬ್ಬರು ಶಿಷ್ಯರಿಂದ ಅನಿಸಿಕೆ. ನಂತರ ನೀವು ಕಾಯುತ್ತಿರುವ ವಿಶೇಷ ಸನ್ಮಾನಿತ ಚಿತ್ತರಾಶಿಯವರಿಂದ ಭಾಷಣ” . ಅಷ್ಟರಲ್ಲೇ ವೇದಿಕೆಯ ಮುಂದಿನ ಸ್ಥಾನದಲ್ಲಿ ಕುಳಿತಿದ್ದ ಚಿತ್ತರಾಶಿಯವರ ಕುಟುಂಬ ಕಾಣಿಸಿತು.ಅಲ್ಲದೆ ಅವರ ಪತ್ನಿಯನ್ನು ಆಯೋಜಕರು ಒತ್ತಾಯ ಮಾಡಿ ಕರೆತರುವುದು ಕಾಣಿಸಿತು. “ ಯಾವಾಗ ಬಂದರೂ ಇವರು. ನನ್ನೊಂದಿಗೆ ಬರಲು ಒಪ್ಪದೇ ಜಗಳ ಮಾಡಿ ಈಗ ನೋಡಿದರೆ ಬಂದುಕುಳಿತಿದ್ದಾರೆ. ಬಹಳ ಹೊತ್ತಾಯಿತೋ ಏನೋ?.ನಾನು ಪ್ರಕಾಶನೊಂದಿಗೆ ಮಾತಾಡುವದರಲ್ಲಿ ಗಮನಿಸಲೇ ಇಲ್ಲ”. ಎಂದು ಮನಸ್ಸಿದ್ದಲ್ಲಿ ಮಾತಾಡಿಕೊಂಡರು ಚಿತ್ತರಾಶಿಯವರು. ಚಿತ್ತರಾಶಿಯವರೊಂದಿಗೆ ಅವರ ಪತ್ನಿಯನ್ನು ಒತ್ತಾಯದಿಂದ ಕೂರಿಸಿ ಸನ್ಮಾನ ಮಾಡಲಾರಂಭಿಸಿದರು . ಶಾಲಿನ ಮೇಲೆ ಶಾಲು, ಹಾರದ ಮೇಲೆ ಹಾರ ಹಾಕಿಸಿಕೊಂಡು ದಂಪತಿಗಳ ಕುತ್ತಿಗೆ ನೋವಾಯಿತು. ಕಾಲಿಗೆ ಬೀಳುವವರು, ಕೈಕುಲುಕುವವರು ಸನ್ಮಾನ ಮಾಡುವುದನ್ನು ನೋಡಿ ತಿರುಮಲಾ ದಂಗಾಗಿ ಹೋದಳು. ಚಿತ್ತರಾಶಿಯವರಿಗೆ ಸಾರ್ಥಕತೆಯ ಆನಂದಭಾಷ್ಪ ಸುರಿಯಲಾರಂಭಿಸಿತು.
ನಂತರ ಮೊದಲೇ ನಿಗದಿ ಪಡಿಸಿದಂತೆ ಒಳ್ಳೆಯ ವಾಗ್ಮಿ, ಸಾಹಿತಿಗಳೆನಿಸಿಕೊಂಡಿದ್ದ ಅವರ ಇಬ್ಬರ ಶಿಷ್ಯರು ಗುರುಗಳ ಗುಣಗಾನ ಮಾಡ ತೊಡಗಿದರು. ಗುರುಗಳು ತಮ್ಮ ಕಲೆ ಗುರುತಿಸಿ ನಮಗೆ ಫೋನ್ ಮಾಡಿ ಒತ್ತಾಯದಿಂದ ಕರೆಸಿಕೊಂಡು ತಾವು ಏರ್ಪಡಿಸುವ ಗೋಷ್ಠಿಗಳಲ್ಲಿ ಕವನ ವಚನ ಮಾಡಿಸುತ್ತಿದ್ದರು. ನಮ್ಮ ತಪ್ಪನ್ನು ತಿದ್ದುತಿದ್ದರು. ನಮ್ಮ ಸಾಹಿತ್ಯ ಚೆನ್ನಾಗಿದ್ದರೆ ಶಭಾಷ್ ಗಿರಿ ಕೊಡುತ್ತಿದ್ದರು.ಪತ್ರಿಕೆಗಳಲ್ಲಿ ಪ್ರಕಟಿಸಲು ಅನುಕೂಲ ಮಾಡಿಕೊಟ್ಟರು. ನಮ್ಮನ್ನು ಬೆಳೆಸಿದರು, ಸಮಾರಂಭದಲ್ಲಿ ನಮ್ಮ ಸಣ್ಣಪುಟ್ಟ ಸಾಧನೆಗೂ ಹೊಗಳಿ ಸನ್ಮಾನಿಸುತ್ತಿದ್ದರು. ಯಾವ ಜಾತಿ ಧರ್ಮ ಲಿಂಗ ನೋಡದೆ ಕಲೆಗೆ ಭೇದವಿಲ್ಲ, ಇರಬಾರದೆಂದು ಪದೇಪದೆ ಹೇಳುತ್ತಿದ್ದರು. ಎಲ್ಲರನ್ನೂ ಸಮಾನವಾಗಿ ಕಂಡು ಪ್ರೀತಿ ತೋರಿಸುವ ಇಂತಹ ಗುರುಗಳಿಂದ ಇಂದು ನಾವು ಒಳ್ಳೆಯ ಸಾಹಿತಿಗಳೆಂದು ನಾಲ್ಕು ಜನರ ಮಧ್ಯೆ ಗುರುತಿಸಿಕೊಂಡಿದ್ದೇವೆ. ಹೆಸರು, ಹಣ ಮಾಡಿದ್ದೇವೆ. ಎನ್ನುತ ಗುರುಗಳ ಹಿರಿಮೆಯನ್ನು ಮನಸಾರೆ ಹೊಗಳಿ ತಮ್ಮ ಕೃತಜ್ಞತೆ ತೋರಿಸಿದ್ದರು. ನಂತರದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ ಕಿರುಪರದೆಯ ನಾಯಕ ನಟ ಪ್ರಕಾಶ್ ಮಾತನಾಡಲು ಪ್ರಾರಂಭಿಸಿದ . “ಇಂದು ನಾನು ಇಷ್ಟರ ಮಟ್ಟಿಗೆ ಬೆಳೆಯಲು ಕಾರಣ ಈ ಗುರುಗಳೆ.ನನ್ನ ಪ್ರತಿಭೆ ಗುರುತಿಸಿ ತಮ್ಮ ನಾಟಕದಲ್ಲಿ ಪಾತ್ರ ಕೊಟ್ಟರು. ನಮ್ಮ ತಂದ-ತಾಯಿಯನ್ನು ಒಪ್ಪಿಸಿ ಬೆಂಗಳೂರಿಗೆ ನಟಿಸಲು ಕಳಿಸಿದರು. ಬೆಂಗಳೂರಲ್ಲೂ ತಮ್ಮ ಪರಿಚಯಾದವರೆಗೆ ಹೇಳಿ ಉಳಿಯಲು ಅವಕಾಶ ಮಾಡಿ ಕೊಟ್ಟರು. ಅವರಿಗೆ ನಾನು ಒಬ್ಬ ಉತ್ತಮ ನಟ ಆಗಬೇಕೆಂಬ ಹಂಬಲ ಇತ್ತು. ಅವರ ಆಶೀರ್ವಾದ, ಪ್ರೋತ್ಸಾಹದಿಂದ ನಾನಿಂದು ಟಿ.ವಿ ಧಾರಾವಾಹಿಗಳಲ್ಲಿ ಜನಪ್ರಿಯ ನಾಯಕ ನಟನಾಗಿದ್ದೇನೆ. ಅಲ್ಲದೆ ಸಿನಿಮಾದಲ್ಲೂ ಆಫರ್ ಬಂದಿವೆ. ಒಂದು ಸಿನಿಮಾ ಪೂರ್ಣಗೊಳ್ಳುತ್ತಿದ್ದು ಶೀಘ್ರದಲ್ಲೇ ಬಿಡುಗಡೆಗೊಳ್ಳುತ್ತಿರುವುದು. ನನ್ನ ಸಿನಿಮಾ ನೋಡಿ ಪ್ರೋತ್ಸಾಹಿಸಿ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಸದಾ ಇರಲಿ” ಎಂದು ಚತುರ ನಟನಾಗಿ ಬೆಳೆದಿದ್ದ ಪ್ರಕಾಶ್ ತನ್ನ ಮಾತನ್ನು ಮುಗಿಸಿದ.
ಇದನ್ನೆಲ್ಲ ನೋಡಿ ಚಿತ್ತ ರಾಶಿಯವರು. “ ತನ್ನನ್ನು ತನ್ನ ಶಿಷ್ಯರು ಯಾವ ಸ್ಥಾನದಲ್ಲಿ ಇರಿಸಿದ್ದಾರೆ. ಇಂತಹ ಸೌಭಾಗ್ಯ ಎಲ್ಲರಿಗೂ ಸಿಗುವುದೆ?. ನನ್ನ ಜನ್ಮ ಸಾರ್ಥಕವಾಯಿತು. ದುಡ್ಡನ್ನು ಯಾರು ಬೇಕಾದರೂ, ಹೇಗೆ ಬೇಕಾದರೂ ಗಳಿಸಬಹುದು. ಆದರೆ ಜನರ ಪ್ರೀತಿ, ಗೌರವ, ಅಭಿಮಾನ ಸಂಪಾದಿಸುವುದು ಸುಲಭವೇ? ದುಡ್ಡು ಗಳಿಸಿದರೆ ನನ್ನ ಕುಟುಂಬ, ನಾನು ಈ ಜನ್ಮಕಷ್ಟೆ ಶ್ರೀಮಂತರು. ಆದರೆ ನನ್ನ ಶಿಷ್ಯರು, ಅಭಿಮಾನಿಗಳು ತೋರುವ ಈ ಪ್ರೀತಿ ಗೌರವ, ಅಭಿಮಾನ ನಾನು ಸತ್ತ ಮೇಲೂ ಕುಟಂಬದಲ್ಲಷ್ಟೇ ಅಲ್ಲ ಎಲ್ಲರ ಹೃದಯದಲ್ಲೂ ಅಜರಾಮರವಾಗಿರುತ್ತದೆ. ನನ್ನ ಶಿಷ್ಯರು, ನನ್ನ ಕೃತಿಗಳು, ನಾಟಕ ನನ್ನ ಸೇವೆ ಶಾಶ್ವತವಾಗಿ (ಚಿರಾಸ್ಥಾಯೀಯಾಗಿ) ದಾರಿದೀಪವಾಗಿ ಇತರರನ್ನು ಮುನ್ನಡೆಸುತ್ತವೆ”. ಎಂದು ಯೋಚಿಸಿದ ಚಿತ್ತರಾಶಿ ಮಾಸ್ತರರು, ಮೊದಲು ಹೇಳಬೇಕೆಂದು ನಿರ್ಧರಿಸಿದ್ದ ಭಾಷಣದ ರೂಪವೇ ಬದಲಾಯಿತು !. ಅವರು ಮೊದಲು ಹೇಳಬೇಕೆಂದು ನಿರ್ಧರಿಸಿದ್ದು ಬಹಳನೆ ಮುಖ್ಯವಾದುದಾಗಿತ್ತು .ಆ ವಿಚಾರಗಳು ಒಳಗಿನಿಂದ ಅವರನ್ನು ನಮ್ಮ ಬಗ್ಗೆ ಹೇಳು ಎಂದು ತಿವಿಯುತ್ತಿದ್ದವು. ಒಂದು ಅದ್ಧೂರಿಯಾಗಿ ಸನ್ಮಾನ ಸಮಾರಂಭ ಮಾಡುವ ಬದಲು ಅದೇ ದುಡ್ಡನ್ನು ಬಡ, ಹಣದ ಅಗತ್ಯತೆ ಇರುವ ಕಲಾವಿದರಿಗೆ ನೀಡಬೇಕೆಂಬುದು. ತನ್ನಂತೆ ಅನೇಕ ಕಲಾವಿದರು ಕೌಟುಂಬಿಕ ಸಮಸ್ಯೆ, ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅಂಥವರಿಗೆ ಈ ಹಣದ ಸಹಾಯದಿಂದ ಅವರ ಪರಿಸ್ಥಿತಿ ಸುಧಾರಿಸುವುದು ಎಂಬುದು ಒಂದು ವಿಚಾರವಾದರೆ,ಮತ್ತೊಂದು ಮುಖ್ಯ ವಿಚಾರವೆಂದರೆ ಕಲಾವಿದರು ಕಲೆಯ ಹುಚ್ಚು ಹಿಡಿಸಿಕೊಂಡು ಓದು, ಉದ್ದೇಶವನ್ನು ಅಲಕ್ಷಿಸಿ, ತಮ್ಮನ್ನು ನಂಬಿದ ಕುಟುಂಬ ಬೀದಿಗೆ ತಂದು ನಿಲ್ಲಿಸಬಾರದು. ಜೀವನದಲ್ಲಿ ಮೊದಲು ಆರ್ಥಿಕವಾಗಿ ಸ್ವಾವಲಂಬಿಯಾಗಿ ಸ್ಥೀರತೆ ಕಾಯ್ದುಕೊಂಡ ಮೇಲೆ ಕಲೆಯನ್ನು ಪೋಷಿಸಿ ಬೆಳೆಸಬೇಕು. ಮನೆಗೆ ಮಾರಿ ಊರಿಗೆ ಉಪಕಾರಿ ಆಗದೆ, ಮನೆ ಗೆದ್ದು, ಮಾರು ಗೆಲ್ಲಬೇಕು. ನನ್ನಂತೆ ತಂದೆ ತಾಯಿ ಮಾಡಿದ ಆಸ್ತಿಯನ್ನು, ದುಡಿದದ್ದನ್ನು ಕಲೆಗೆ ಹಾಕಿ ಬರಿಗೈ ದಾಸಯ್ಯ ರಾಗಬೇಡಿ. ಇದರಿಂದ ಕುಟುಂಬದಲ್ಲಿ ತಿರಸ್ಕಾರಕ್ಕೆ ಒಳಗಾಗಿ ಹೆಂಡತಿ, ಮಕ್ಕಳಿಗೆ, ಪಾಲಕರಿಗೆ ಖಳ ನಾಯಕರಾಗುವಿರಿ”. ಎಂದು ಕಲಾವಿದರಿಗೆ ಬುದ್ಧಿಮಾತು ಹೇಳಬೇಕೆಂದಿದ್ದ ಚಿತ್ತರಾಶಿ ಮಾಸ್ತರರಿಗೆ ತನ್ನ ಶಿಷ್ಯರು, ಸಂಘಸಂಸ್ಥೆಗಳು, ಅಭಿಮಾನಿಗಳ ಅಭಿಮಾನದ ಹೊಳೆಯಲ್ಲಿ ತೇಲಿದ ಮೇಲೆ ಅವರ ಚಿಂತನೆ ಲಹರಿಯ ಕವಲೊಡೆಯಿತು.
ಏಕೋ ಏನೋ ಅವರ ಕಣ್ಮುಂದೆ ಅಶ್ರುಧಾರೆ ಹರಿಯಲಾರಂಭಿಸಿತು…. ಅದು ಅವರ ಈ ಸಂದಿಗ್ಧ ಪರಿಸ್ಥಿತಿಗಾಗಿಯೇ ಅಥವಾ ಸಮಾರಂಭದಲ್ಲಿ ತೋರಿದ ಅಭೂತಪೂರ್ವ ಗೌರವಕ್ಕಾಗಿಯೇ ತಿಳಿಯಲಿಲ್ಲ. “ನಾನು ಹಾಗೆ ಹೇಳಿದರೆ ನನ್ನ ಶಿಷ್ಯಂದಿರು, ಅಭಿಮಾನಿಗಳು ತಪ್ಪು ತಿಳಿದಾರು. ಕಾರ್ಯಕ್ರಮ ಮಾಡದೇ ದುಡ್ಡು ಕೊಡಿ ಎನ್ನುವುದು ಭಿಕ್ಷೆ ಬೇಡಿದಂತಗುವುದು. ಸ್ವಾರ್ಥ ಆಗುವುದು. ಕಲೆ ಎನ್ನುವುದು ಒಂದು ತಪಸ್ಸು .ಕಲಾತಪಸ್ವಿ ಯಾರ ಹಂಗಿನಲ್ಲೂ ಇರಬಾರದು, ಇರುವುದಿಲ್ಲ ಕೂಡ. ಅವನು ಸ್ವತಂತ್ರ ಹಕ್ಕಿ. ಅವನಿಗೆ ಸಂಸಾರ, ಹಣ, ಅಂತಸ್ತಿನ ಪರವೇ ಇರುವುದಿಲ್ಲ. ಅವನಿಗೆ ತನ್ನ ಕಲೆಯ ಸರ್ವಸ್ವ. ಪರಿಸ್ಥಿತಿ ಹೇಗೆ ಬಂದರೂ ತಾನೇ ಎದುರಿಸಬೇಕು” ಎಂದೆನಿಸಿತು ಚಿತ್ತರಾಶಿ ಮಾಸ್ತರಿಗೆ.ತಾವೇ ರಚಿಸಿದ ಕವನವೊಂದಕ್ಕೆ ಶ್ರುತಿ ಹಚ್ಚಿ ಶುಶ್ರಾವ್ಯವಾಗಿ ಶಿಷ್ಯನೊಬ್ಬ ಹಾಡುತ್ತಿರುವಾಗ ಇಷ್ಟೊಂದು ಮನದ ವಿಪ್ಲವಗಳು ಹಾದುಹೋದವು.
ಅಷ್ಟರಲ್ಲೇ ನಿರೂಪಕ “ಈಗ ನೀವು ಕಾಯುತ್ತಿರುವ ನಮ್ಮೆಲ್ಲರ ಅಚ್ಚುಮೆಚ್ಚಿನ ಸನ್ಮಾನಿತ ಗುರುಗಳಿಂದ ಭಾಷಣ” ಎಂದ .ಒಂದು ದೀರ್ಘ ಉಸಿರು ತೆಗೆದುಕೊಂಡು ಚಿತ್ತರಾಶಿ ಮಾಸ್ತರ, ಇಷ್ಟೊಂದು ಸಂಭ್ರಮದಿಂದ ವೈಭವದಿಂದ ತಮ್ಮನ್ನು ಸನ್ಮಾನಿಸಿದ ಎಲ್ಲರಿಗೂ ಮೋದಲು ಕೃತಜ್ಞತೆಗಳನ್ನು ಹೇಳಿ, ಕಲೆಯ ಮಹತ್ವ ಸಾರಿದರು. “ಕಲೆಯಿಂದ ಸಾಧಕನಿಗೆ ಸಿಗುವ ತೃಪ್ತಿಯೇ ಅಮೂಲ್ಯ ಆಸ್ತಿ . ಕಲೆಯನ್ನು ಉಳಿಸಿ ಬೆಳೆಸಿರಿ. ಇನ್ನೊಬ್ಬರ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿರಿ.ಕನ್ನಡ ನಾಡಿನ ಹಿರಿಮೆ ಅಗಾಧವಾದದ್ದು. ನಮ್ಮ ಸಾಹಿತ್ಯ ಪರಂಪರೆ, ಸಂಸ್ಕೃತಿ ಅದ್ಭುತವಾದುದು. ನಮ್ಮ ಕನ್ನಡ ಸಾಹಿತ್ಯ, ಕಲೆಯ ತೇರನ್ನು ಎಲ್ಲರೂ ಸೇರಿ ಎಳೆಯುತ್ತ ಸಾಗಬೇಕು. ಇದು ಎಲ್ಲೂ ನಿಲ್ಲಬಾರದು” ಎಂದಿದ್ದಲ್ಲದೆ ಕಲಾವಿದ ಸ್ವಾವಲಂಬಿಗಳಾಗಿ ಬದುಕಬೇಕು. ಕಲೆ ಬೆನ್ನುಹತ್ತಿ ಉದ್ಯೋಗ (ದುಡಿಮೆ) ಮರೆಯಬೇಡಿ, ಎನ್ನುವುದನ್ನು ಹೇಳಲು ಮರೆಯಲಿಲ್ಲ. ಇಷ್ಟು ಹೇಳಿ ಮಾತು ಮುಗಿಸಿದರು ಚಿತ್ತಾರಾಶಿ ಮಾಸ್ತರ.ಅಷ್ಟರಲ್ಲಿ ಕಾರ್ಯಕ್ರಮ ಅಂತಿಮ ಹಂತಕ್ಕೆ ಬಂತು. ಆಗ ಪಕ್ಕದಲ್ಲೇ ಕೂತಿದ್ದ ಪ್ರಕಾಶ್ ದಿಗ್ಗನೆ ಎದ್ದು ನಿಂತು ಒಂದು ನಿಮಿಷ ವಂದನಾರ್ಪಣೆ ಮಾಡುವ ಮುನ್ನ ಗುರುಗಳಿಗೆ ಒಂದು ಉಡುಗೊರೆ ಕೊಡುವೆ. ನಾನು ಬರುವ ಅವಸರದಲ್ಲಿ ಸನ್ಮಾನಕ್ಕೆ ಶಾಲು ಹಾರ ತರೋದೆ ಮರೆತು ಬಿಟ್ಟೆ. ಹಾಗಾಗಿ ಈ ಕಿರು ಕಾಣಿಕೆಯನ್ನು ಗುರುಗಳು ದಯವಿಟ್ಟು ಸ್ವೀಕರಿಸಬೇಕು” ಎಂದು ಒಂದು ಗಿಫ್ಟ್ ಪ್ಯಾಕನ್ನು ಬೇಡಬೇಡವೆಂದರೂ ಒತ್ತಾಯಪೂರ್ವಕವಾಗಿ ನೀಡಿದ. ತಮ್ಮ ಅತ್ಯಂತ ಪ್ರೀತಿಯ ಶಿಷ್ಯ ಅಭಿಮಾನ, ಪ್ರೀತಿ ಪೂರ್ವಕವಾಗಿ ಕೊಟ್ಟ ಉಡುಗೊರೆಯನ್ನು ಬೇಡವೆನ್ನುವುದು ತರವಲ್ಲವೆಂದು ಸ್ವೀಕರಿಸಿದರು.
ಕಾರ್ಯಕ್ರಮ ಮುಗಿಸಿ ಮನೆಗೆ ಬಂದ ಚಿತ್ತರಾಶಿ ಮಾಸ್ತರ ಸಂತೃಪ್ತಿ, ಸಮಾಧಾನದಿಂದ ತಮ್ಮ ಕಟ್ಟಿಗೆ ಕುರ್ಚಿಯಲ್ಲಿ ಬೆನ್ನು ಆನಿಸಿ ಕುಳಿತರು. ಅಷ್ಟರಲ್ಲಿ ಕುತೂಹಲ ತಾಳದೆ ಅವರ ಮಗ ಶಿಷ್ಯ ಪ್ರಕಾಶ್ ಕೊಟ್ಟ ಗಿಫ್ಟ್ ಪ್ಯಾಕ್ ಅನ್ನು ಬಿಚ್ಚಿದ. ಅಬ್ಬಾ..! ಅದರಲ್ಲಿ ಸಾವಿರ ರೂಪಾಯಿಯ ನೋಟುಗಳು!.. ಹೌಹಾರಿ “ಅಮ್ಮ ನೋಡು ಎಷ್ಟೊಂದು ದುಡ್ಡು!” ಎಂದ. ಎಲ್ಲರಿಗೂ ಆಶ್ಚರ್ಯ ಅವರ ಹೆಂಡತಿ ಎಣಿಸಿ ನೋಡಿದರೆ ಬರೋಬ್ಬರಿ ಒಂದು ಲಕ್ಷ ರೂಪಾಯಿ .ಪ್ರಕಾಶ್ ಗುರುಗಳ ಪರಿಸ್ಥಿತಿಯನ್ನು ತನ್ನ ಸ್ನೇಹಿತರಿಂದ ತಿಳಿದು ಈ ರೀತಿ ಕೊಟ್ಟಿದ್ದ. ಸ್ವಾಭಿಮಾನಿಯಾದ ಚಿತ್ತರಾಶಿ ಮಾಸ್ತರ ದುಡ್ಡನ್ನು ನೇರವಾಗಿ ಕೊಟ್ಟರೆ ಖಂಡಿತ ಸ್ವೀಕರಿಸುವುದಿಲ್ಲವೆಂದು ಹೀಗೆ ಮಾಡದ್ಧ. ಹೆಂಡತಿ, ಮಕ್ಕಳಿಗಂತೂ ತಮ್ಮ ಸದ್ಯದ ಸಮಸ್ಯೆ ಬಗೆಹರಿಯಿತೆಂದು ಆನಂದ ಸಂಭ್ರಮ, ಮನೆಮಾಡಿತು.ಮನಸಾರಿ ಪ್ರಕಾಶನನ್ನು ಹೊಗಳಿದರು “ದೇವರೇ ಅವನನ್ನು ಸದಾ ಸುಖವಾಗಿಡಪ್ಪ” ಎಂದು ಹಾರೈಸಿದರು. ಚಿತ್ತರಾಶಿಯವರಿಗೆ ದುಡ್ಡನ್ನು ಹಿಂದಿರುಗಿಸಿ ಬಿಡಬೇಕೆಂದರೆ “ನಿಮ್ಮ ಮಗ ಕೊಟ್ಟರೆ ಸ್ವೀಕರಿಸದೆ ಇರುತ್ತಿದ್ದೀರಾ” ಎಂಬ ಅವನ ಮಾತು ನೆನಪಾಗಿ ನಿಟ್ಟುಸಿರು ಬಿಟ್ಟರು.ಏನೂ ಮಾತನಾಡದೆ ಸುಮ್ಮನೆ ಕುಳಿತವರಿಗೆ ಕೃಷ್ಣ ಸುಧಾಮರು ನೆನಪಾದರು. ಅವರಿಗೆ ತಮ್ಮ ಶಿಷ್ಯ ಬೇಡದೆ ಕೊಡುವ ಕೃಷ್ಣ ದೇವರು… ಅನಿಸಿದಿರಲಿಲ್ಲ.


3 thoughts on “ಲಕ್ಷ್ಮೀದೇವಿ ಕಮ್ಮಾರ-ಕಥೆ-ಕಲಾವಿದ

  1. ಕಥೆ ಬಹಳ ಉತ್ತಮವಾಗಿ ಮೂಡಿ ಬಂದಿದೆ. ಹಣಕ್ಕಿಂತ ಕಲೆ ದೊಡ್ಡದು ಎಂದು ಕಥೆಯ ಸಾರಾಂಶ. ಚೆನ್ನಾಗಿದೆ. ಅಭಿನಂದನೆಗಳು ಮೇಡಂ

  2. ಕಲಾರಾಧಕ ಚಿತ್ತರಾಶಿಯವರ ಮನದ ತುಮುಲ ಕಥೆಯಲ್ಲಿ ಅದ್ಬುತವಾಗಿ ಬಿಂಬಿತವಾಗಿದೆ. ಉತ್ತಮ ನೀತಿ ಬೋಧಕ ಕಥೆ.

  3. ಕಲಾರಾಧಕರ ಜೀವನವೆ ಹೀಗೆ ! ಬಳ್ಳಾರಿ ಕೊಂಡಾಚಾರ್ಯರ ಜೀವನ ನೆನಪಿಗೆ ಬಂದು ಹೋಯ್ತು ! ಕಲಾವಿದರನ್ನು ಕಲಾಸಕ್ತರೇ ಕಾಪಾಡಬೇಕು ಅಷ್ಟೆ !

Leave a Reply

Back To Top