ಕಾವ್ಯ ಸಂಗಾತಿ
ಶೀಲಾ ಭಂಡಾರ್ಕರ್
ನೀನಾ…? ನಾನಾ…?
ನೀನು ಮರೆತಿರಬಹುದು
ನಾನೂ ಮರೆಯುತಿದ್ದೇನೆ.
ಬರೆಯಲು ಶಬ್ದಗಳು ಸಿಕ್ಕಿದ್ದವು
ಅವಕ್ಕೆ ಅರ್ಥಗಳೂ ಇದ್ದವು.
ಅವಸರದಲ್ಲಿ
ಅರೆ ಬೆಂದು..
ಅಭಿಶಾಪಕ್ಕೆ ಸಿಲುಕಿ
ಬರೆಯುವುದೇನೆಂದು
ಆಮೇಲೆ ಬರೆದೇವೆನೆಂದು..
ನೀನು ಮರೆತೆ,
ನಾನೂ ಮರೆತಿದ್ದೇನೆ.
ಸಾಗುತಿದ್ದ ಹಾದಿಯಲ್ಲಿ
ಏಳುತ್ತಾ ಬೀಳುತ್ತಾ..
ಹುಡುಕಬೇಕಿದ್ದ ಗುರಿಯನ್ನೇ ಮರೆತು,
ನಮಗಾಗಿಯೇ?
ರೀತಿ-ರಿವಾಜುಗಳಿಗಾಗಿಯೇ?
ಯಾತಕ್ಕಾಗಿ ನಡೆಯುತಿದ್ದೇವೆಂಬುದನ್ನು
ನಾನು ಮರೆತಿದ್ದೆ. ನಿನಗೂ ಮರೆತಿತ್ತು.
ಇಬ್ಬರೂ ಕೂಡಿ ತೂಫಾನನ್ನೇ
ಕರೆದರೂ.. ದಡದಂಚಿನಲ್ಲಿ
ಬಿದ್ದಿದ್ದ ನಾವೆಯನ್ನು
ಬಿಟ್ಟೋಡಿದೆವೇಕೆಂಬುದು
ನನಗೀಗ ಮರೆತಿದೆ.
ನಿನಗೂ ಮರೆತಿರಬೇಕು.
ಏಳೇಳು ಜನ್ಮದಲ್ಲೂ,
ಕನಸುಗಳ ತೊಟ್ಟಿಲ ಕಟ್ಟಿ
ತೂಗುತ್ತಾ ಉಸಿರುಗಳನ್ನೇ ಎಣಿಸುತ್ತಾ
ಬದುಕುವೆವೆಂದುಕೊಂಡಿದ್ದು..
ಎಣಿಕೆಯನ್ನೇ ಮರೆತು ಓಡಿದ್ದು…
ನೀನಾ ? ನಾನಾ ?
ಚೆಂದಿದೆ ಕವಿತೆ