ಪ್ರೀತಿಯ ಸಾವು-ಜಯಂತಿ ಸುನಿಲ್

ಕಾವ್ಯ ಸಂಗಾತಿ

ಪ್ರೀತಿಯ ಸಾವು

ಜಯಂತಿ ಸುನಿಲ್

ಈ ಬಾರಿಯೂ ತಿರುವುಗಳ ಕೊನೆಯಲ್ಲಿ ಪವಾಡ ಸಂಭವಿಸಲೇ ಇಲ್ಲಾ..
ಪ್ರೇಮಿಗಳಲ್ಲಿರಬೇಕಾದ ರೂಹು ಕಾಣಲಿಲ್ಲ
ಮೈ ಬೆವರಿನ ಘಮಲು ಮೂಗಿಗೆ ಬಡಿಯಲಿಲ್ಲಾ..
ಬಹುಶಃ ಇಲ್ಲಿ ಪ್ರೀತಿಯ ಸಾವಾಗಿರಬಹುದು..!!

ಅಲ್ಲಿ ಮಸೀದಿಯ ಕಮಾನಿನ ಗೋರಿಗಳ ಮೇಲೆ ಹೊದಿಸಿದ ಕಫಾನ್ಗೆ ಮೆತ್ತಿದ ಅತ್ತರಿನ ಪರಿಮಳ ಗೋರಿಯೋಳಗೆ ಇಳಿದಿರಬಹುದು…
ಭಾವೋದ್ವೇಗಗಳನ್ನು ಗೋರಿಯೊಳಗೆ ಬಂಧಿಸಿಡಲು ಸಾಧ್ಯವೇ..?

ಪ್ರೀತಿ ಮುಗಿದು ಹೋಗುವ ವಯಸ್ಸು ಯಾರಿಗೂ ಇಲ್ಲಾ
ಪ್ರೀತಿಗೆ ಸಾವೇ ಇಲ್ಲಾ ಎಂದು ನೀವು ಹೇಳಬಹುದು..
ಆದರಿಲ್ಲಿ ಪ್ರೀತಿಯ ಸಾವಾಗಿದೆ..

ಒಬ್ಬರನ್ನೊಬ್ಬರು ಅರಿಯದ ಮುಗಿದ ನಿರೀಕ್ಷೆಗಳು..
ಚದುರಿದ ಭರವಸೆಗಳು ನಿನ್ನೆ ನಡೆದ ಮೂರು ಸುತ್ತಿನ ಮಾತುಕತೆಯಲ್ಲೇ ಮುಕ್ತಾಯವಾದವಂತೆ..
ಇಂದು ಇಲ್ಲಿ ಪ್ರೀತಿಯ ಸಾವಾಗಿದೆ..

ಪ್ರೀತಿಯೆಂಬ ಸಾವಿಗೆ ಕ್ಷಮಾಪಣೆ ಅನ್ನೋ ಕಫಾನ್ ಹೊದಿಸಿ ಗೋರಿಗೆ ಇಳಿಯಬೇಕಾದ ದೇಹಕ್ಕೆ ಅತ್ತರಿನ ಘಮಲಿಟ್ಟ ಮೂರ್ಖನು ಅವನು..
ಆತ್ಮ ಅಮರವೆಂದು ಅವನಿಗೆ ತಿಳಿದಿಲ್ಲ..

ಅವನು ಸತ್ತ ದೇಹಕ್ಕೆ ಸಂತಾಪ ಸೂಚಿಸುವ ವೇಳೆಗೆ ಗೋರಿಗಳು ಮಾತನಾಡುತ್ತವೆ,ಅಳುತ್ತವೆ,ಹಾಡುತ್ತವೆ,ತಾಕುತ್ತವೆ,ತಡವುತ್ತವೆ,ದಾಟುತ್ತವೆ,ದಿಗಿಲ್ಲನೆ ಎದ್ದು ಕುಣಿಯುತ್ತವೆ,ಸಂಭಾಷಿಸುತ್ತವೆ ಮತ್ತೆ ಮೌನ ಧರಿಸುತ್ತವೆ
ಬಹುಶಃ ಪ್ರೇಮಿಗಳಿರಬೇಕು
ಅಲ್ಲಿಯೂ ಪ್ರೀತಿಯ ಸಾವಾಗಿರಬಹುದು..

ಅವನ ಸಂತಾಪ ತಾಕಿ ಗುಲ್ಮೊಹರ ಹೂವಿನ ತೊಟ್ಟು ಕಳಚಿ ಬೀಳುವ ಸದ್ದು..
ಸುತ್ತಲೂ ಕಣ್ಣಾಡಿಸುತ್ತಾನೆ
ಎತ್ತ ತಿರುಗಿದರೂ ಗೋರಿಗಳು
ದ್ರೋಹ,ಮೋಸದಿ ಸತ್ತ ಗೋರಿಗಳೇ…
ಗೋರಿಗಳ ಮೇಲೊಂದು ಒಕ್ಕಣಿಕೆ ಇಡಬೇಕಿತ್ತು..
ಯಾವ ಪಾಪಿಯ ಜೀವವೋ ತಿಳಿಯುತ್ತಿತ್ತು..

ಗೋರಿಗಳ ಕಥೆ ಕೇಳುವ ಆಸಕ್ತಿ ಅವನಿಗೆಲ್ಲಿ ಬರಬೇಕು?
ಈಗೇನಿದ್ದರೂ ಶಿಥಿಲವಾದ ಜೀವದ ಮುಂದೆ ಮೂಕರೋಧನ..
ಸತ್ತ ಮೇಲಾದರೂ ಸುಮ್ಮನಿರಬಾರದೇ?
ಅದೆಲ್ಲಿ ಸಾಧ್ಯ?
ಅವರಿಬ್ಬರೂ ಪ್ರೇಮಿಗಳಾಗಿದ್ದವರು
ಈ ದಿನವಷ್ಟೇ ಪ್ರೀತಿಯ ಸಾವಾಗಿದೆ…

ಎಷ್ಟು ಹೊತ್ತು ಅವನು ಅಲ್ಲಿರಲು ಸಾಧ್ಯ?
ಗೋರಿಯ ಮೇಲೊಂದು ಹೂವನ್ನಿಟ್ಟು ಹೊರಡಲು ಅಣಿವಾಗುತ್ತಾನೆ..
“ಮುಂದಿನ ಜನ್ಮದಲ್ಲಾದರೂ ನೀ ನಮ್ಮ ಪ್ರೀತಿಯ ಚರಿತ್ರೆ ಕಟ್ಟುವ ಷಹಜಹಾನ್ ಆಗುವೆಯಾ,”? ಗೋರಿಯೊಳಗಿಂದ ಕೇಳಿಬಂದ ಸದ್ದಿಗೆ ಅವನೆದೆ ಕದಲಿದ ಭಾವ..

ಮತ್ತೆ ಗುಲ್ಮೊಹರ ಹೂ ತೊಟ್ಟು ಕಳಚಿ ಅವನಿಗೆ ವಿದಾಯ ಹೇಳುತ್ತದೆ…
ಸುತ್ತಲಿನ ಗೋರಿಗಳು ಮತ್ತಷ್ಟು ಮೌನ ಧರಿಸುತ್ತವೆ..!!


5 thoughts on “ಪ್ರೀತಿಯ ಸಾವು-ಜಯಂತಿ ಸುನಿಲ್

    1. ವಿರಹಾ!… ನೂರು ನೂರು ತರಹ
      ವಿರಹಾ!… ಪ್ರೇಮ ಕಾವ್ಯದ ಕಹಿ ಬರಹ..

Leave a Reply

Back To Top