ಬಕಾಡೆ ಪಂಪಾಪತಿ ಅವರ ಕವಿತೆ-ಬಡವನ ಬವಣೆ

ಕೂಲಿ ಕುಂಬಳಿಯವನು ನಾನು
ನನಗಾಗಿ ಮೀಸಲಿಲ್ಲ ಏನೇನು
ನನ್ನ ಬವಣೆಗಳು ಜಗವು ಅರಿತಿತೇನು
ಬಯಲು ಬದುಕನ್ನು ಯಾರಿಗೇಳಿದರೇನು

ಕಾಯಕವೇ ಕೈಲಾಸವೆಂದು
ಶ್ರಮವಹಿಸಿ ದುಡಿದೆನು ಬೆಂದು
ಕಾಯಕವೇ ನನ್ನದಾಯಿತು ಎಂದೆಂದು
ಕೈಲಾಸ ಸಿಗಲಿಲ್ಲ ನನಗೆಂದು

ಕೈ ಕೆಸರಾದರೆ ಬಾಯಿ ಮೊಸರು
ಚೋಮ, ಕರಿಯ, ಕಾಳ, ನಾಗ, ಬೆಳ್ಳಿ
ಮತ್ತು  ನಮ್ಮವ್ವ ಸಾಕವ್ವ  ಗಂಗವ್ವ
ಚೆಲ್ಲಿದರು ಮೊಸರಿಗಾಗಿ ಉಸಿರು.

ಧಣಿಯ ಹೊಲದಲಿ ದುಡಿದೆವೆ ದಣಿದು ಆಳಾಗಿ
ಮಾಲಿಕನ ಬಲಕಾಗಿ ಶ್ರಮಿಸಿದೆವು ಮಾಲಿಯಾಗಿ
ಬಗಲಲಿ ಬಟ್ಟೆಯಿಟ್ಟು ಹೊರಟೆವು ಕೈ ಖಾಲಿಯಾಗಿ
ತಮ್ಮಂತೆ ಕಾಣಲಿಲ್ಲ  ಎಂದೂ ಮನುಜರಾಗಿ

ಬೆವರು ಹರಿಸಿ ರಕ್ತ ಸುರಿಸಿದೆವು
ನಾಡು ನುಡಿಯ ಶ್ರೀರಕ್ಷೆಗಾಗಿ
ನಮ್ಮ ಹೆಸರ ಯೋಜನೆಗಳು  ನಮಗಿಲ್ಲವಾಗಿ
ಸೇರಿದವು ಸಿರಿವಂತರ ಭಾಗ್ಯವಾಗಿ.


One thought on “ಬಕಾಡೆ ಪಂಪಾಪತಿ ಅವರ ಕವಿತೆ-ಬಡವನ ಬವಣೆ

Leave a Reply

Back To Top