ವಿಜಯಪ್ರಕಾಶ್ ಕೆ-ಗಜಲ್

ಕಾವ್ಯ ಸಂಗಾತಿ

ಗಜಲ್

ವಿಜಯಪ್ರಕಾಶ್ ಕೆ

ಎಷ್ಟಿದ್ದರೇನು ಗಂಟಿನೊಳಗಿರುವುದೆಲ್ಲವೂ ಉಸಿರಿರುವ ತನಕ
ನಂಟಿನೊಳಗಣ ಸಿಹಿಯ ಸವಿಯುತಲಿರುವ ನಾವಿರುವ ತನಕ

ಒಟ್ಟುಗೂಡಿ ಬಾಳಿದರೆ ಸಾರ್ಥಕವಾಗುವುದು ಮನುಜನ ಜನ್ಮ
ಅಟ್ಟದ ಮೇಲೆ ನೀ ಪೇರಿಸಿಟ್ಟಿರುವುದೆಲ್ಲಾ ಚಟ್ಟ ಕಟ್ಟುವ ತನಕ

ಮೂರು ತುತ್ತಿನ ಉದರ ಪೋಷಣೆಗೆ  ಬೇಕೇ ಊರೆಲ್ಲಾ ಲೂಟಿ
ತೆತ್ತು ಗಳಿಸಿದ ಮಾನ ಸನ್ಮಾನಗಳೆಲ್ಲಾ ಕಾಂಚಾಣವಿರುವ ತನಕ

ಅರೆ ಹೊಟ್ಟೆಯಲ್ಲಿ ಅಸುವಿಡಿದು ಕೂಡಿಡಬೇಡ ನೀ ಮತಿಗೆಟ್ಟು
ಉಳಿಯುವುದೇ ಬದುಕು ಬಯಸಿ ಕಾಲನನ್ನು ಕರೆಸುವ ತನಕ

ಪಡೆದು “ವಿಜಯ” ಅಂಕೆಯಲ್ಲಿಡಬೇಕು ಚಂಚಲ ಮನಸ್ಸನ್ನು
ಜಗವ ಮರೆತು ಮೆರೆಯುವುದೆಲ್ಲಾ ನಿನ್ನ ನೀ ಅರಿಯುವ ತನಕ


Leave a Reply

Back To Top